Friday, 27th May 2022

ಬೊಮ್ಮಾಯಿಯವರ ಕಾರ‍್ಯಕ್ರಮದಲ್ಲಿ ಹೈಡ್ರಾಮ…ಸಂಸದ ಡಿ.ಕೆ.ಸುರೇಶ್​ ಧರಣಿ

ರಾಮನಗರ: ಸಿಎಂ ಕಾರ್ಯಕ್ರಮದಲ್ಲಿ ಹೈಡ್ರಾಮ..ವೇದಿಕೆ ಮೇಲೆಯೇ ಸಂಸದ ಡಿ.ಕೆ.ಸುರೇಶ್​ ಧರಣಿಗೆ ಕುಳಿತ ಪ್ರಸಂಗ ಸೋಮವಾರ ನಡೆದಿದೆ.

ಜ.9ರಿಂದ ಮೇಕೆದಾಟು ಪಾದಯಾತ್ರೆ ನಡೆಸಲು ಕಾಂಗ್ರೆಸ್​ ಸಜ್ಜಾಗಿದೆ. ಈ ಹೋರಾಟಕ್ಕೂ ಮುನ್ನವೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿ ಸಲು ಮತ್ತು ಶಂಕು ಸ್ಥಾಪನೆ ಮಾಡಲು ಸಿಎಂ ಬಸವರಾಜು ಬೊಮ್ಮಾಯಿ ಅವರು ರಾಮನಗರ ಜಿಲ್ಲಾ ಪ್ರವಾಸಕ್ಕೆ ಸೋಮವಾರ ಆಗಮಿಸಿದ್ದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಸಿಎಂ ಬರುತ್ತಿದ್ದಂತೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶಿಸಿ, ಅಂಬೇಡ್ಕರ್ ಪುತ್ಥಳಿಗೆ ಸಂಸದ ಡಿ.ಕೆ.ಸುರೇಶ್ ಅವರಿಂದ ಪುಷ್ಪಾರ್ಚನೆ ಮಾಡಿಸಿಲ್ಲ ಎಂದು ಧಿಕ್ಕಾರ ಕೂಗಿದರು.

ಪೊಲೀಸರ ಮಾತಿಗೂ ದಲಿತ ಸಂಘಟನೆಗಳ ಮುಖಂಡರು ಬಗ್ಗಲಿಲ್ಲ. ವೇದಿಕೆ ಮೇಲೆಯೇ ದಲಿತ ಸಂಘಟನೆ ಮುಖಂಡ ರಾಂಪುರ ನಾಗೇಶ್ ಹೈಡ್ರಾಮ ಮಾಡಿದರು. ಕೂಡಲೇ ದಲಿತ ಸಂಘಟನೆ ಮುಖಂಡರನ್ನು ಪೋಲಿ ಸರು ವೇದಿಕೆಯಿಂದ ಹೊರ ಕರೆ ತಂದರು. ಅತ್ತ ಡಿ.ಕೆ.ಸುರೇಶ್​​, ಯಾರೂ ಕೂಡ ಸಭೆಗೆ ಅಗೌರವ ತರಬೇಡಿ. ನಿಮ್ಮ ನೋವನ್ನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಗೊಂದಲ ಸೃಷ್ಟಿ ಬೇಡ ಎಂದು ಮನವಿ ವೇದಿಕೆಯಲ್ಲೇ ನಿಂತು ಮನವಿ ಮಾಡಿದರು.

ಮಾತು ಆರಂಭಿಸಿದ ಸಚಿವ ಅಶ್ವತ್ಥ ನಾರಾಯಣ್​, ‘ಅಭಿವೃದ್ಧಿ ಯಾರೂ ಮಾಡಿಲ್ಲ. ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು. ನಾವು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾಕೆ ಕೂಗಾಡ್ತೀರಾ? ನಮಗೆ ಅಧಿಕಾರ ಬೇಕಿಲ್ಲ. ಜಿಲ್ಲೆಗೆ ವಂಚನೆ ಮಾಡುವವರು ನಾವಲ್ಲ‌. ಬೇರೆಯವರ ಆಸ್ತಿಗೆ ಕೈ ಹಾಕಿಲ್ಲ’ ಎನ್ನುತ್ತಿದ್ದಂತೆಯೇ ಗರಂ ಆದ ಸಂಸದ ಡಿ.ಕೆ.ಸುರೇಶ್​, ‘ಏನ್ ಅಭಿವೃದ್ಧಿ ಮಾಡಿದ್ದೀಯಾ?’ ಅಂತ ಜೋರಾಗಿಯೇ ಗದರಿದರು.

ಡಿ.ಕೆ‌.ಸುರೇಶ್​ಗೆ ಮಾತಿಗೆ ಸಾಥ್ ಕೊಟ್ಟ ಎಂಎಲ್‌ಸಿ ರವಿ, ಮೈಕ್ ಅನ್ನು ಎಸೆದರು. ವೇದಿಕೆಯಲ್ಲೇ ಧರಣಿಗೆ ಕುಳಿತ ಸಂಸದ ಸುರೇಶ್ ಮತ್ತು ರವಿ, ‘ಏ ಗಂಡಸ್ತತನ ತೋರಿಸಲಿ ಅವನು’ ಎಂದು ಕೂಗಾಡಿದರು.

ಗಲಾಟೆ ನಡುವೆಯೇ ಭಾಷಣ ಆರಂಭಿಸಿದ ಸಿಎಂ, ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ದಯವಿಟ್ಟು ಗಲಾಟೆ ಮಾಡಬೇಡಿ’ ಎಂದರು. ಗಲಾಟೆಯ ಪರಿಣಾಮ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾಷಣ ಒಂದೆರಡು ನಿಮಿಷಕ್ಕೆ ಸೀಮಿತವಾಯ್ತು. ಸಿಎಂ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ನರೇಂದ್ರ ಮೋದಿ ಪರ ಕಾರ್ಯಕರ್ತರು ಘೋಷಣೆ ಕೂಗುತ್ತಲೇ ಇದ್ದರು.