Friday, 27th May 2022

ಮುಖ್ಯಮಂತ್ರಿ ಸ್ಥಾನ ಯಾವ ಮಠದ್ದೂ ಅಲ್ಲ: ಮುರುಘಾ ಶರಣರು

ಚಿತ್ರದುರ್ಗ: ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆಯನ್ನು ಕೆಡಿಸುತ್ತದೆ. ಕಾರಣ ರಾಜಕೀಯ ಅಸ್ಥಿರತೆ. ಇದು ರಾಜಕಾರಣವನ್ನು ಅಸ್ತವ್ಯಸ್ತ ಗೊಳಿಸುತ್ತದೆ. ಇಲ್ಲಿ ಸ್ಥಿರತೆ ಬೇಕಿದೆ. ಅದು ಈಗ ಆಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮೊನ್ನೆ ಅರಮನೆ ಮೈದಾನದಲ್ಲಿ ನೂರಾರು ಸ್ವಾಮಿಗಳು ರಾಜಕೀಯ ಅಸ್ಥಿರತೆ ಸರಿಯಾಗಲೆಂದು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆವು ಎಂದರು.

ಸಿಎಂ ಬಸವರಾಜ ಬೊಮ್ಮಾಯಿಯವರು ಈಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸಿದೆ. ಸರ್ವ ಜನಾಂಗವನ್ನು ಅವರು ಸರಿದೂಗಿಸಿಕೊಂಡು ಹೋಗಲಿ. ಅವರು ಹೋರಾಟದ ಮುಖಾಂತರ ಬಂದವರು. ವೈಚಾರಿಕ ಚಿಂತನೆಯುಳ್ಳವರು. ಅವರ ತಂದೆಯ ರಾಜಕೀಯ ಜೀವನವನ್ನು ನಾವು ನೋಡಿದ್ದೇವೆ. ಅವರ ದಾರಿಯಲ್ಲಿ ಇವರು ಉತ್ತಮ ಸೇವೆ ನೀಡಲಿ ಎಂದು ಆಶಿಸುತ್ತೇವೆ ಎಂದರು.

ರಾಜಕೀಯ ಅಸ್ಥಿರತೆಯನ್ನು ಶಾಶ್ವತವಾಗಿ ನಿವಾರಿಸಲಿ. ಬಿ.ಎಸ್. ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿ ದ್ದಾರೆ. ಹಾಗಾಗಿ ಅವರು ಉತ್ತಮ ಸರ್ಕಾರ ನೀಡುತ್ತಾರೆಂದು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸ್ಥಾನ ಯಾವ ಮಠದ್ದೂ ಅಲ್ಲ: ಸಂತರ ಕರ್ತವ್ಯ ಸಂಕಟದಲ್ಲಿರುವವರಿಗೆ ಸಾಂತ್ವನ ಹೇಳುವುದು. ಮುಖ್ಯಮಂತ್ರಿ ಸ್ಥಾನ ಯಾವ ಮಠದ್ದೂ ಅಲ್ಲ. ರಾಜ್ಯದ ಪ್ರಜೆಗಳು ಆ ಸ್ಥಾನವನ್ನು ನಿರ್ಧರಿಸುತ್ತಾರೆ. ಯಡಿಯೂರಪ್ಪನವರ ನಿಕಟವರ್ತಿಗಳಾದ ಬೊಮ್ಮಾಯಿಯವರನ್ನು ಆಯ್ಕೆ ಮಾಡಿರುವುದು ಹೈಕಮಾಂಡ್‌ನ ಪ್ರಬುದ್ಧ ನಡೆಯಾಗಿದೆ ಎಂದರು.

ಯಡಿಯೂರಪ್ಪನವರು ಈ ಮೊದಲು ಅಭಿವೃದ್ಧಿಪರ ಆಡಳಿತ ನೀಡಿದ್ದರು. ಪ್ರಧಾನಮಂತ್ರಿಗಳು ಸಹ ಅವರ ಆಡಳಿತ ವೈಖರಿಯನ್ನು ಹೃದಯತುಂಬಿ ಹೊಗಳಿ ದ್ದಾರೆ. ದೊಡ್ಡಮಟ್ಟದಲ್ಲಿ ಮಠಾಧೀಶರು ಬೆಂಗಳೂರಿನಲ್ಲಿ ಸೇರಿದ್ದು ಸಹ ಹೈಕಮಾಂಡ್ ಗಮನಕ್ಕೆ ಬಂದಿರಬಹುದು. ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಾರೆಂಬ ಭರವಸೆ ನಮಗೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ತೀವ್ರಗತಿಯಲ್ಲಿ ಸಾಗಲಿ ಎಂಬುದರ ಬಗ್ಗೆ ಅವರೊಡನೆ ಚರ್ಚಿಸಲಾಗುವುದು. ನಾಳೆ ಗೋಕಾಕ್ ಸಮೀಪದ ಪ್ರವಾಹ ಸಂತ್ರಸ್ಥರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠ ಕರ‍್ಯದರ್ಶಿ ಎ.ಜೆ. ಪರಮಶಿವಯ್ಯ, ಎಸ್.ಷಡಾಕ್ಷರಯ್ಯ ಮೊದಲಾದವರಿದ್ದರು.