Monday, 30th January 2023

ಅ.18 ಬಗರ್ ಹುಕುಂ ಸಾಗುವಳಿದಾರರ ವಿಧಾನಸೌಧ ಚಲೋ: ನಾಗಮ್ಮ

ರಾಯಚೂರು: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಅಕ್ಟೋಬರ್ 18 ರಂದು ಹುಕಂ ಸಾಗುವಳಿದಾರರ ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನಾಗಮ್ಮ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತ ನಾಡಿ, ಗುತ್ತಿಗೆ ಆಧಾರದಲ್ಲಿ ಜಾಮೀನು ಕೊಡುವ ನೀತಿಯನ್ನು ಕೈಬಿಡಬೇಕು. ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೂಲಕ ರೈತರಿಗೆ ನೀಡಿರುವ ನೋಟಿಸ್ ಕೂಡಲೇ ಹಿಂಪಡೆಯಬೇಕು.ರಾಜ್ಯದಲ್ಲಿ ಉಂಟಾಗಿರುವ ನೈಸರ್ಗಿಕ ವಿಕೋಪ ದಿಂದುಂಟಾದ,ಹಸಿ ಬರದಿಂದ ಲಕ್ಷಾಂತರ ಹೆಕ್ಟೇರ್ ನಲ್ಲಿ ರೈತರು ಬೆಳೆದಿದ್ದ ಫಸಲು ನಾಶವಾಗಿದೆ.

ಬೆಳೆಗಾಗಿ ಮಾಡಿದ್ದ ಕೈ ಸಾಲ, ಬ್ಯಾಂಕಿನ ಸಾಲ ತೀರಿಸಲಾಗದೇ ಇನ್ನೊಂದೆಡೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಶಿಕ್ಷಣ, ಆರೋಗ್ಯ ಸಂಸಾರದ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಬಗರ್ ಹುಕುಂ ಸಾಗುವಳಿ ರೈತರ ಗೋಳು ಹೇಳತೀರದಾಗಿದೆ ಎಂದ ಅವರು, ಲಕ್ಷಾಂತರ ರೈತರ ಬದುಕಿನ ಚಿತ್ರಣವಾಗಿದೆ.

ಇನ್ನು ಯಾವುದೇ ವಿದ್ಯೆ, ಕೌಶಲ್ಯವಿಲ್ಲದೇ, ಎರಡು ಹೊತ್ತಿನ ತುತ್ತಿನ ಚೀಲಕ್ಕಾಗಿ ಸಂಸಾರದ ನೊಗ ಹೊತ್ತು ಕೃಷಿಯನ್ನೇ ಅವಲಂಬಿಸಿದ್ದಾನೆ. ಸರ್ಕಾರದ ಅನುಮತಿಯೊಂದಿಗೆ,ಲಕ್ಷಾಂತರ ರೈತರು ಇದನ್ನೇ ಜೀವನಾಧಾರವೆಂದು ನಂಬಿ ಹಲವಾರು ವರ್ಷಗಳಿಂದ ಕರ್ನಾಟಕದ ಉದ್ದಗಲಕ್ಕೂ ಸಾಗುವಳಿ ಮಾಡುತ್ತಿದ್ದಾರೆ.

ಉಪಯೋಗವಿಲ್ಲದೆ ಬೀಳು ಬಿದ್ದಿದ್ದ ಅರಣ್ಯದಂಚಿನ ಭೂಮಿ ಸೇರಿದಂತೆ ಸರ್ಕಾರೀ ಭೂಮಿಯನ್ನು ಹಗಲು ರಾತ್ರಿ ಬೆವರು ಸುರಿಸಿ,ಭೂಮಿ ಹಸನು ಮಾಡಿ, ಅದನ್ನು ಕೃಷಿಯೋಗ್ಯ ವನ್ನಾಗಿಸಿ ದೇಶದ ಆಹಾರೋತ್ಪಾದನೆಗೆ ಕಾಣಿಕೆ ನೀಡುವಲ್ಲಿ ಅವರ ಅಪಾರ ಪರಿಶ್ರಮವನ್ನು ಸರಿಸಬೇಕು. ಈ ಶ್ರಮಜೀವಿ ರೈತರಿಗೆ ಇಲ್ಲಿಯವರೆಗೆ ನಮ್ಮನ್ನಾಳಿದ ಸರ್ಕಾರಗಳು ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ವಿಫಲವಾಗಿವೆ ಎಂದು ಆರೋಪಿಸಿದರು.

ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳೂ ಬಡ ರೈತರಿಗೆ ಭೂಮಿಯ ಮೇಲಿನ ಹಕ್ಕನ್ನು ದೊರಕಿಸಿಕೊಡಲು ಯಾವ ಕಾಳಜಿ ಯನ್ನು ವಹಿಸಿಲ್ಲ.ಭೂ ಮಂಜೂರಾತಿ ಸಮಿತಿಯನ್ನು ಕೆಲವು ಜಿಲ್ಲೆಗಳಲ್ಲಿ ರಚಿಸಿ,ಕೇವಲ ಹಂಗಾಮಿ ಸ್ವಾಧೀನ ಪತ್ರ ನೀಡಿ ದ್ದಾರೆ.ಇದನ್ನು ಪಡೆದು ಸಾಗುವಳಿ ಮಾಡುತ್ತಿರುವ ರೈತರ ಎಲ್ಲಾ ಜಮೀನನ್ನು ಒಟ್ಟುಗೂಡಿಸಿ ಎಲ್ಲರಿಗೂ ಒಂದೇ ಸರ್ವೇ ನಂಬರ್ ನೀಡಿದ್ದಾರೆ.

ಹತ್ತಾರು ವರ್ಷಗಳು ಕಳೆದರೂ ಅವರ ಜಮೀನನ್ನು ನೋಡ್ ದುರಸ್ತಿ ಮಾಡಿ ಖಾಯಂ ಹಕ್ಕು ಪತ್ರ ನೀಡಿಲ್ಲ.ಅಂದಾಜಿನ ಪ್ರಕಾರ 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸರ್ಕಾರದ ಮುಂದೆ ಬಾಕಿ ಉಳಿದಿದೆ.ಇನ್ನೂ ಅರ್ಜಿ ಸಲ್ಲಿಸದೇ ಇರುವವರ ಸಂಖ್ಯೆ ಇದರ ದುಪ್ಪಟ್ಟು ಇದೆ ಎಂದು ಹೇಳಲಾಗಿದೆ.

ಇನ್ನು ಅರಣ್ಯದಂಚಿನ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಗೋಳು ಅರಣ್ಯ ರೋದನವಾಗಿದೆ.ತಮ್ಮ ಜೀವವನ್ನೇ ಪಣಕ್ಕಿಟ್ಟು ಇಡೀ ವರ್ಷ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಗಲು ರಾತ್ರಿ ಕಾವಲು ಕಾದು ಕಾಡು ಪ್ರಾಣಿಗಳಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ತಿಕ್, ಮಲ್ಲನಗೌಡ, ಜಮಾಲುದ್ದಿನ್ ಇದ್ದರು.

error: Content is protected !!