Monday, 21st September 2020

ಒಬ್ಬ ನಿಕಟವರ್ತಿಯಾಗಿ ನಾನು ಕಂಡ ಸುಷ್ಮಾ

ಚಂದನ್‍ಮಿತ್ರ, ಪರ್ತಕರ್ತ
ನಮನ

ಸಂಸತ್ತಿನ ರಾಜ್ಯಸಭೆಗೆ ನಾಮಾಂಕಿತನಾಗಿದ್ದ ನನ್ನ ಮೊದಲ ಅವಧಿಯಲ್ಲಿ ನಾನು ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೇ ಇದ್ದರೂ ಅಂದಿನ ಬಿಜೆಪಿ ಕುರಿತು ಒಲವುಳ್ಳವನು ಎಂದು ಯಾರಿಗಾದರೂ ಗೊತ್ತಾಗುವಂತಿತ್ತು. ಅಟಲ್‍ಜೀ, ಆಡ್ವಾಣಿಜೀಯವರ ನೇತೃತ್ವದಲ್ಲಿ ಅಂದು ಇದ್ದ ಆಡಳಿತರೂಢ ಬಿಜೆಪಿಯ ಸಂಸದರ ಸಭೆಗೆ ಹಾಗೇ ಹೋಗುತ್ತಿದ್ದೆ. ಕಲಾಪದ ವೇಳೆ ನಾನು ಪ್ರತಿ ಮಂಗಳವಾರ ನಡೆಯುತ್ತಿದ್ದ ಆ ಸಭೆಗೆ ನುಗ್ಗಿ, ಅದು ಮುಗಿದ ಮೇಲೆ ಸುಷ್ಮಾರ ಬಳಿ ನಡೆದು `ನೋಡಿ, ನಾನು ಬಂದೆ!’ ಎಂದು ಉದ್ಗರಿಸಿದರೆ, ಆಕೆ ಹತ್ತಿರ ಬಂದು `ಇದು ಸರಿಯಲ್ಲ, ಯಾರಾದರೂ ದೂರಿತ್ತರೆ ರಾಜ್ಯಸಭೆ ಸದಸ್ಯತ್ವ ಕಳೆದುಕೊಳ್ಳುತ್ತೀರಿ’ ಎಂದು ಪಿಸುದನಿಯಲ್ಲಿ ಎಚ್ಚರಿಸಿದ್ದರು.
ಇದು ಸುಮಾರಾಗಿ 2005-6ರಲ್ಲಿ ನಡೆದಿದ್ದು. ಆಗಿನ್ನೂ ರಾಜ್ಯಸಭೆಗೆ 2004ರಲ್ಲಿ ನಾಮಾಂಕಿತಗೊಂಡ ನಾನು ವಾಡಿಕೆಯಂತೆ ಆರು ತಿಂಗಳ ಒಳಗೆ ಯಾವುದೇ ಪಕ್ಷ ಸೇರಿರಲಿಲ್ಲ. ನನ್ನನ್ನು ಎಚ್ಚರಿಸಿದ ಮರುಕ್ಷಣ ಮಂದಹಾಸ ಬೀರಿ, `ಯಾಕೆ ಅಷ್ಟೊಂದು ಅವಸರ ನಿಮಗೆ? ನಿಮ್ಮ ಅಭಿಪ್ರಾಯಗಳನ್ನು ನನಗಾಗಲೀ, ಆಡ್ವಾಣಿಯವರಿಗಾಗಲೀ ಯಾವಾಗ ಬೇಕಾದರೂ ಹೇಳಬಹುದು, ನಾವದನ್ನು ಗೌರವಿಸುತ್ತೇವೆ ಮತ್ತು ಮುಂದಿನ ಸಾರಿ ಪಕ್ಷದಿಂದ ರಾಜ್ಯಸಭೆಗೆ ಸ್ಪರ್ಧಿಸಲು ಖಂಡಿತ ಅವಕಾಶ ನೀಡುತ್ತೇವೆ’ ಎನ್ನುತ್ತಿದ್ದರು.
ಮಾತಿನಂತೆ, 2010ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಾನು ಸ್ಪರ್ಧಿಸಲು ಬಹಳ ಕುಮ್ಮಕ್ಕು ನೀಡಿದರು. ಭೋಪಾಲ್ ಪಕ್ಕದ ವಿದಿಶಾನಿಂದ ಸ್ವತಃ ಅವರೇ ಲೋಕಸಭೆಗೆ ಆರಿಸಿಬಂದಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ನನ್ನ ಸಮಕಾಲೀನರಾಗಿದ್ದ ಅರುಣ್ ಜೇಟ್ಲಿ ಮೊದಲಾದಂತೆ ಅನೇಕ ಮಿತ್ರರು ನನಗೆ ಬಿಜೆಪಿಯಲ್ಲಿ ಇದ್ದರೂ ಅಕ್ಕರೆ ತೋರುವ ಸುಷ್ಮಾ ಎಲ್ಲರಿಗಿಂತ ಹತ್ತಿರದವರಾದರು.
ಕಾಲಾಂತರದಲ್ಲಿ ನಾನು ಅವರಿಗೆ ಸಲಹೆ-ಸೂಚನೆ ನೀಡುವ ಉತ್ತಮ ಸಹಾಯಕನಾದೆ. ಅವರ ಪಾಲಿನ ಪಕ್ಷದ ಕೆಲಸಗಳಲ್ಲಿ ನೆರವಾಗುತ್ತಿದ್ದೆ. ಅವರ ಅಸ್ಖಲಿತ ಹಿಂದಿ ಬಗ್ಗೆ ನನಗೆ ಬಹಳ ಅಭಿಮಾನ ಇದ್ದರೆ, ಸುಷ್ಮಾರಿಗೆ ಇಂಗ್ಲಿಷ್ ಭಾಷೆಯ ಮೇಲಿನ ನನ್ನ ಪ್ರಭುತ್ವ ಮೆಚ್ಚುಗೆಯಾಗುತ್ತಿತ್ತು. ಹಾಗಾಗಿ ಸ್ಥಳೀಯ, ಅಂತಾರಾಷ್ಟ್ರೀಯ ಎನ್ನದೆ ಅವರು ಪಾಲ್ಗೊಳ್ಳುವ ಎಲ್ಲ ಸೆಮಿನಾರ್‍ಗಳಿಗೆ ನಾನೂ ಹೋಗುತ್ತಿದ್ದೆ.
ಒಂದು ಸಾರಿ ಕೊಚ್ಚಿಯಲ್ಲಿ ನಡೆದ `ಮಾತೃತ್ವ ಮತ್ತು ಶಿಶುಕಲ್ಯಾಣ’ ದಂಥ ಸೆಮಿನಾರ್‍ಗೂ ಸುಷ್ಮಾಜೀ ನನ್ನನ್ನು ಕರೆದೊಯ್ದರು. ಈ ವಿಷಯದಲ್ಲಿ ನನಗೇನು ಜ್ಞಾನವಿದೆ ಎಂದು ನಾನು ಪ್ರತಿಭಟಿಸಿದರೂ `ಅಲ್ಲಿ ಹಿಂದಿ ಬಳಸಲಾಗುವುದಿಲ್ಲ. ಹಾಗಾಗಿ ಇಂಗ್ಲಿಷ್‍ನಲ್ಲಿ ಕೆಲ ಟಿಪ್ಪಣಿ ತಯಾರಿಸಿಕೊಡಿ’ ಎಂದು ನನಗೆ ಕೆಲಸ ಹಚ್ಚಿ ಸುಮ್ಮನಾಗಿಸಿದರು. ಆದರೆ ಸಂಜೆ ಹೋಟೆಲಿನ ತಮ್ಮ ಕೋಣೆಗೆ ಪಾಯಿಂಟ್ಸ್ ನೋಟ್ ಮಾಡಿಕೊಳ್ಳಲು ಕರೆದಾಗ ಸ್ನೇಹಿತರೊಡನೆ ಪಾನಗೋಷ್ಠಿ ನಡೆಸಿದ್ದ ನನ್ನ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ.
ಆದರೂ ಅವರ ಅಪೇಕ್ಷೆಯನ್ನು ಆಜ್ಞೆಯಂತೆ ಪರಿಗಣಿಸುವವನಾಗಿ ಅಲ್ಲಿಗೆ ಹೋಗಿ ನಡುಗುವ ಕೈಯಲ್ಲೇ ಒಂದಷ್ಟು ಬರೆದುಕೊಂಡು ಬಂದೆ. ನನ್ನ ಕೋಣೆಗೆ ಮರಳಿ ಅದೆಲ್ಲವನ್ನೂ ಲ್ಯಾಪ್‍ಟಾಪ್‍ನಲ್ಲಿ ಕುಟ್ಟಿ ಒಂದು ಟಿಪ್ಪಣಿಯನ್ನೂ ತಯಾರಿಸಿಟ್ಟೆ. ಬೆಳಗ್ಗೆ ಉಪಾಹಾರ ಸೇವಿಸುವಾಗ ಅದನ್ನವರಿಗೆ ತೋರಿಸಿದರೆ ಸುಷ್ಮಾ ಬಹಳ ಆಶ್ಚರ್ಯಪಟ್ಟರು. ಮಗಳು ಬಾನ್ಸುರಿಯೊಡನೆ, `ನೋಡು, ಚಂದನ್ ನಾನು ಹೇಳಿದ್ದಕ್ಕಿಂತ ಉತ್ತಮವಾಗಿ ಬರೆದಿದ್ದಾನೆ’ ಎಂದು ಪ್ರಶಂಸಿಸಿದರು. ಹಿಂದಿನ ದಿನ ನಾನು ಇದ್ದ ಸ್ಥಿತಿಯಲ್ಲಿ ಅಷ್ಟೆಲ್ಲ ಮಾಡಬಲ್ಲೆ ಎಂದು ಅವರು ಅಂದುಕೊಂಡಿರಲಿಲ್ಲ.
ಸಿಂಗಪುರಕ್ಕೆ ಒಮ್ಮೆ ಭೇಟಿಯಿತ್ತಾಗ ಅಲ್ಲಿನ ಪ್ರಧಾನಿಯವರೊಡನೆ ಮಾತುಕತೆ ಸಮಯದಲ್ಲಲಿ ನಾನು ಸಹ ಇರುವಂತೆ ಒತ್ತಾಯಿಸಿದರು. ಅಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳನ್ನು ನನಗೆ ವರ್ಗಾಯಿಸಿದರು. ಎಲ್ಲ ಆದ ಮೇಲೆ ಹೀಗೇಕೆ ಮಾಡಿದಿರಿ ಎಂದು ಕೇಳಿದರೆ, `ಇಲ್ಲಾಂದ್ರೆ ನೀನು ಇದನ್ನೆಲ್ಲಾ ಕಲಿತುಕೊಳ್ಳುವುದು ಹೇಗೆ? ಮುಂದೊಮ್ಮೆ ನಿನಗೆ ಅವಕಾಶ ದೊರೆತಾಗ ತಯಾರಿ ಸರಿಯಾಗಿರಬೇಕು ತಾನೇ?’ ಎಂದು ಲೋಕಾಭಿರಾಮವಾಗಿ ಹೇಳಿದರು. ಅದೇ ಮಧ್ಯಾಹ್ನ ಅವರು ಅಲ್ಲಿನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾಷಣ ಮಾಡಬೇಕಿತ್ತು. ಮೊದಲು ಒಂದೈದು ನಿಮಿಷ ಭಾರತದ ವಿದೇಶಾಂಗ ನೀತಿಯನ್ನು ಹೇಳಿ `ಈಗ ಚಂದನ್ ಮಿತ್ರ ಮಾತನಾಡುತ್ತಾರೆ’ ಎಂಧು ಘೋಷಿಸಿ ಮೈಕ್ ನನ್ನ ಕೈಗೆ ವರ್ಗಾಯಿಸಿದರು.
ತೀವ್ರತರದ ಮಧುಮೇಹಿಯಾಗಿದ್ದರಿಂದ ಊಟ-ತಿಂಡಿಯ ವಿಷಯದಲ್ಲಿ ಸಮಯಪಾಲನೆ ಅವರ ಬಹು ಮುಖ್ಯ ಕಾಳಜಿಗಳಲ್ಲಿ ಒಂದಾಗಿತ್ತು. ನನ್ನದೂ ಅದೇ ಕತೆ ಎಂದು ಗೊತ್ತಾಗುತ್ತಲೇ ಇಬ್ಬರಿಗೂ ಸಾಕಷ್ಟು ರೊಟ್ಟಿ-ಪಲ್ಯ ಡಬ್ಬಿಗಳಲ್ಲಿ ಪ್ಯಾಕ್‍ಮಾಡುವಂತೆ ಆದೇಶಿಸುತ್ತಿದ್ದರು.
ಸಾರ್ವಜನಿಕ ಸಭೆಗಳಲ್ಲಾಗಲೀ, ಸಂಸತ್ತಿನಲ್ಲಾಗಲೀ ಕೆಚ್ಚಿನ ಭಾಷಣ ಮಾಡುವುದರಲ್ಲಿ ಅವರ ಸಮಾನರಾರಿಲ್ಲ. ಸಾಮಾನ್ಯವಾಗಿ ಸುಷ್ಮಾಜೀ ಆಶುಭಾಷಣವನ್ನೇ ಮಾಡುತ್ತಿದ್ದುದು, ಸುಮಾರು ಒಂದು ಗಂಟೆ ಕಾಲ ಹಾಗೆ ನಿರರ್ಗಳವಾಗಿ ಮಾತನಾಡಬಲ್ಲರಾಗಿದ್ದರು. ರ್ಯಾಲಿಗಳಲ್ಲಿ ಸುಷ್ಮಾ ಭಾಗವಹಿಸಿದರೆ ಆಯೋಜಕರಿಗೆ ಇದೇ ಚಿಂತೆ. ಸುಷ್ಮಾರ ದೀರ್ಘ ಭಾಷಣ ಆದಮೇಲೆ ಸಾಮಾನ್ಯವಾಗಿ ಜನ ಜಾಗ ಖಾಲಿ ಮಾಡಿ ವೇದಿಕೆಯಲ್ಲಿದ್ದ ಇತರ ಘಟಾನುಘಟಿಗಳಿಗೆ ಪ್ರೇಕ್ಷಕರ ಕೊರತೆ ಉಂಟಾಗುತ್ತಿತ್ತು.
ಸುಷ್ಮಾ, ಹಿಂದಿ ಹಾಗೂ ಉರ್ದು ದ್ವಿಪದಿಗಳ ಭಂಡಾರವೇ ಆಗಿದ್ದರು ಮತ್ತು ಅತ್ಯಂತ ಸಮರ್ಪಕವಾಗಿ ಅವನ್ನು ಸೂಕ್ತ ಸಮಯದಲ್ಲಿ ಬಳಸಬಲ್ಲವರಾಗಿದ್ದರು. ಪುರಾಣ ಪುಣ್ಯಕತೆಗಳ ವಿಷಯವಂತೂ ಕೇಳುವುದೇ ಬೇಡ. 2ಜಿ ಹಗರಣ ವೇಳೆ ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತನಾಡಿ ಕಾಂಗ್ರೆಸ್ ಸರಕಾರದ ಬೆವರಿಳಿಸಿದ ಮೇಲೆ ಅವರು ಹೇಳಿದ ಒಂದು ದ್ವಿಪದಿ ನನಗೆ ಇನ್ನೂ ನೆನಪಿನಲ್ಲಿದೆ. ಸಭೆಯಲ್ಲಿ ಆಸೀನರಾಗಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ನೇರವಾಗಿ ನೋಡುತ್ತ, ಬಹಳ ದಿಟ್ಟವಾಗಿ ಅವರು ಅದನ್ನು ಉದ್ಧರಿಸಿದರು: `ಯೇ ಬತಾ ಕಾರ್‍ವಾನ್ ಕಿಸ್‍ನೆ ಲೂಟಾ/ಮುಝೇ ರಹ್‍ಜನೋಂಸೆ ಗಿಲಾ ನಹೀ/ತೇರೀ ರಹ್‍ಬಾರಿ ಕಾ ಸವಾಲ್ ಹೈ’. (ನಮ್ಮ ಕ್ಯಾರವಾನ್‍ಅನ್ನು ಲೂಟಿ ಮಾಡಿದ್ದು ಯಾರು ಹೇಳಿ? ಹೆದ್ದಾರಿಯ ದರೋಡೆಕೋರರ ಕುರಿತು ನನಗೆ ದೂರಿಲ್ಲ. ಆದರೆ ಅದು ನಿಮ್ಮ ನಾಯಕತ್ವದಲ್ಲಿ ನಡೆಯಿತು ಎನ್ನುವುದೇ ಪ್ರಶ್ನೆ.)
==

Leave a Reply

Your email address will not be published. Required fields are marked *