Wednesday, 5th August 2020

ಭಯೋತ್ಪಾದನೆ ವಿರುದ್ಧ ರಾಜತಾಂತ್ರಿಕ ಸಮರ ಮುಂದುವರೆಸಿದ ಪ್ರಧಾನಿ

ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭರ್ಜರಿಯಾಗಿ ತೊಡೆ ತಟ್ಟಿಯೇ ಎರಡನೇ ಬಾರಿ ಗದ್ದುಗೆಗೆ ಏರಿದವರಂತೆ ಕಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿರೀಕ್ಷೆಯಂತೆಯೇ ಶಾಂಘಾಯ್‌ ಸಹಕಾರ ಒಕ್ಕೂಟದ ಶೃಂಗದಲ್ಲಿ(SCO) ಪಾಕ್‌ಅನ್ನು ರಾಜತಾಂತ್ರಿಕವಾಗಿ ಏಕಾಂಗಿ ಮಾಡುವ ಭಾರತದ ಇರಾದೆಯನ್ನು ಪುನರುಚ್ಛರಿಸಿದ್ದಾರೆ.

ಭಯೋತ್ಪಾದನೆಯನ್ನು ದಮನಗೈಯ್ಯಲು ಭಾರತದ ನಿಲುವು ಸುಸ್ಪಷ್ಟವಾಗಿದೆ ಎಂದ ಪ್ರಧಾನಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಆರ್ಥಿಕ ನೆರವು ನೀಡುವ ದೇಶಗಳನ್ನೂ ಜವಾಬ್ದಾರರನ್ನಾಗಿ ಮಾಡಬೇಕಿದೆ ಎಂದು ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್‌ನಲ್ಲಿ ನಡೆದ ಸಭೆಯಲ್ಲಿ ಪುನರುಚ್ಛರಿಸಿದ್ದಾರೆ.

ಪಾಕ್‌ ಪ್ರಧಾನಿಯೂ ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ SCO ಸಾರುವ ಸ್ಫೂರ್ತಿ ಹಾಗೂ ಸಿದ್ಧಾಂತಗಳನ್ನು ಉಲ್ಲೇಖಿಸಿದ ಪ್ರಧಾನಿ, “ಕಳೆದ ಅನೇಕ ದಶಕಗಳಿಂದ ಭಾರತದ ವಿರುದ್ಧದ ತನ್ನ ಸಮರದಲ್ಲಿ ಯಾವುದೋ ಒಂದು ದೇಶ ಸಕರಾರೀ ಪ್ರಾಯೋಜಿತ ಭಯೋತ್ಪಾದನೆಯನ್ನು ದೊಡ್ಡ ನೀತಿಯನ್ನಾಗಿ ಮಾಡಿಕೊಂಡಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ದೇಶವೂ ಮುಂದೆ ಬರಬೇಕಿದ್ದು, ಒಗ್ಗಟ್ಟಾಗಿ ಹೋರಾಡಿವೆ,” ಎಂದು ಹೇಳಿದ್ದಾರೆ.

ಇದೇ ಸಂದರ್ಭ, ಏಪ್ರಿಲ್‌ ೨೧ರ ಸರಣಿ ಸ್ಫೋಟಗಳಿಂದ ತತ್ತರಿಸಿದ್ದ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಚರ್ಚ್ ಒಂದಕ್ಕೆ ಭೇಟಿ ನೀಡಿದ ತಮ್ಮ ಅನುಭವದ ಕುರಿತು ಪ್ರಧಾನಿ ಉಲ್ಲೇಖ ಮಾಡಿದ್ದಾರೆ.

ಇದೇ ಸಂದರ್ಭ, ಜಾಗತಿಕ ಮಹತ್ವಾಕಾಂಕ್ಷೆಯ ಸಂಪರ್ಕ ಯೋಜನೆಗಳನ್ನು ಕೈಗೆತ್ತಿಕೊಂಡಿರವ ಭಾರತದ ನಡೆಗಳ ಕುರಿತು ಮಾತನಾಡಿದ ಪ್ರಧಾನಿ, ಇಂಥ ಯೋಜನೆಗಳು ಸಂಬಂಧಪಟ್ಟ ದೇಶಗಳ ಸಾರ್ವಭೌಮತೆಯನ್ನು ಗೌರವಿಸಿ ಪಾರದರ್ಶಕ ನಿಲುವುಗಳನ್ನು ಬೆಳೆಸಿಕೊಂಡು ಆರೋಗ್ಯಕರ ಸಹಕಾರಕ್ಕೆ ಮುಂದಾಗಬೇಕಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *