Friday, 19th August 2022

ಅವ್ವ ತಂದ ಹೊಸ ಕ್ಯಾಲೆಂಡರ್‌

ಸದಾಶಿವ್‌ ಸೊರಟೂರು

ರಾತ್ರಿ ಬಿದ್ದ ಕನಸುಗಳು ಏನು ಹೇಳುತ್ತವೆ? ಹಲ್ಲಿ ನುಡಿದರೆ, ಬಿದ್ದರೆ ಏನು ಮಾಡಬೇಕು? ಅದರಲ್ಲಿ ಯಾವ ಅರ್ಥ ಇದೆ? ಅಂಗೈ ಗೆರೆಗಳು ಏನು ಹೇಳುತ್ತವೆ? ಇಂತವೇ ಸಾಕಷ್ಟು ವಿಚಾರಗಳು ಆ ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ಇರುತ್ತಿದ್ದವು. ಅವ್ವ ಕ್ಯಾಲೆಂಡರ್ ಮೇಲೆ ಹಾಲಿನ ಲೆಕ್ಕಾಚಾರ, ಕೂಲಿಗೆ ಹೋದ ದಿನಗಳ ಲೆಕ್ಕಾಚಾರ, ಸಂಕಷ್ಠಿ ಇವುಗಳನ್ನು ಗುರುತು ಮಾಡಿಸುತ್ತಿದ್ದಳು. 

ಕ್ಯಾಲೆಂಡರ್ ಅವಳಿಗೊಂದು ‘ಟು ಡು’ ಲಿಸ್ಟಿನಂತಾಗಿತ್ತು. ವರ್ಷ ಮುಗಿದ ಮೇಲೆ ಹಳೆಯ ಕ್ಯಾಲೆಂಡರ್‌ನ್ನು ಎಸೆಯುವುದಕ್ಕೆ, ನೀರಿನೊಲೆಗೆ ಹಾಕಿ ಸುಡುವುದಕ್ಕೆ ಅವ್ವ ಅವಕಾಶ ಕೊಡುತ್ತಿರಲಿಲ್ಲ. ‘ಅದನ್ನು ಹರಿಯಬಾರದು ಮಗಾ, ಸುಡಬಾರದು’ ಅಂತ್ಹೇಳಿ, ಯಾವತ್ತೋ ಒಂದು ದಿನ ಅದನ್ನು ಹೊಳೆಗೆ ಒಯ್ದು ಹಾಕಿ ಬರೋಳು.

ಡಿಸೆಂಬರ್ ತಿಂಗಳಿನ ಕೊನೆಯ ರಾತ್ರಿಯ ತಣ್ಣನೆಯ ಚಳಿಯ ನಡುವೆ ತೆವಳಿ ಬಂದ ಜನವರಿಯ ಹೊಸ್ತಿಲ ಮೇಲೆ ನಿಂತು ಆಚೆ ಇಣುಕಿ ನೋಡುವಾಗ ನನ್ನ ಬಾಲ್ಯ ನೆನಪಾಗುತ್ತದೆ. ಅವ್ವ ನೆನಪಾಗುತ್ತಾಳೆ. ಆಕೆಯ ಸಂತೆ ನೆನಪಾ ಗುತ್ತದೆ. ಪ್ರತಿ ಬುಧವಾರ ಆಕೆ ಸಂತೆಗೆ ಹೋಗುತ್ತಿದ್ದದ್ದು ನೆನಪಾಗುತ್ತದೆ. ಇಡೀ ದಿನ ಅವಳು ಸಂತೆಯಿಂದ ಬರುವು ದನ್ನೇ ನಾನು ಕಾಯುತ್ತಿದ್ದೆ. ಅವಳು ಸಂತೆಯಲ್ಲಿ ಏನೇ ಕೊಂಡರೂ, ಕೊಳ್ಳದೆ ಇದ್ದರೂ ನನಗಾಗಿ ಕಾರ-ಮಂಡಕ್ಕಿ ತಂದಿರುತ್ತಿದ್ದಳು. ಆಕೆ ಮನೆಗೆ ಬಂದು ‘ಉಸ್ಸಪ..’ ಅಂತ ಬಂದು ಕೂತಾಗ ನಾನು ಓಡಿ ಹೋಗಿ ಸಂತೆಯ ಸಂಚಿ ಹುಡುಕುತ್ತಿದ್ದೆ. ‘ನೀರ್ ತಾರ್ಲೇ ಬಾಯಿ ಒಣಗೈತಿ..’ ಅಂತ ಜೋರು ಮಾಡೋಳು. ಅವಳ ಕಡೆ ನನಗೆ ಗಮನವೇ ಇರುತ್ತಿರಲಿಲ್ಲ.

ಅವ್ವ ಶಾಲೆ ಓದಿದವಳಲ್ಲ. ಅಪ್ಪನೂ ಕೂಡ ಓದಿಕೊಂಡಿರಲಿಲ್ಲ. ಓದಿದವರಿಗೆ ಮಾತ್ರ ಸಂಸ್ಕಾರ ಇರುತ್ತೆ ಅಂತ ಕೆಲವರು ಭಾಷಣ ಬಿಗಿಯುವವರ ಕೊರಳುಪಟ್ಟಿ ಹಿಡಿದು ಎಳೆತಂದು ಅವ್ವ ಅಪ್ಪ ಮತ್ತವರ ಚೆಂದದ ಬದುಕನ್ನು ತೋರಿಸಬೇಕು ಅನಿಸುತ್ತೆ. ಅವ್ವ ಈ ದಿನಗಳಲ್ಲಿ ಪದೇ ಪದೇ ನೆನಪಾಗುವುದು ಕ್ಯಾಲೆಂಡರ್ ವಿಷಯಕ್ಕೆ. ನಾನು ನಾಲ್ಕನೆ ತರಗತಿ ಇರುವಾಗಿ ನಿಂದಲೂ ಅದೆ ನೆನಪಿದೆ. ಅವಳಿಗೆ ತಿಂಗಳು, ವರ್ಷ, ದಿನಾಂಕ ಇವೆ ಗೊತ್ತಿಲ್ಲದ ವಿಚಾರಗಳು. ಆದ್ರೂ ನವಂಬರ್ ಕೊನೆಯ ಹೊತ್ತಿಗೆ ತನ್ನ ಸಂತೆಯ ಬ್ಯಾಗಿನಲ್ಲಿ ಒಂದು ಹೊಸ ಕ್ಯಾಲೆಂಡರ್ ಇಟ್ಟು ಕೊಂಡು ಬಂದಿರುತ್ತಿದ್ದಳು.

ಉಪ್ಪು, ತರಕಾರಿ, ಧಾನ್ಯ, ಸಕ್ಕರೆ ಟೀ ಪುಡಿಗಳ ಮಧ್ಯೆ, ಬಣ್ಣಗಳಿಲ್ಲದ ಕಪ್ಪು ಬಿಳುಪಿನ ಒಂದು ಕ್ಯಾಲೆಂಡರ್ ಸುರಳಿ ಸುತ್ತಿಕೊಂಡು ಕೂತಿರುತ್ತಿತ್ತು. ಸಂತೆಯ ಬ್ಯಾಗಿನಲ್ಲಿ ತಿನ್ನುವ ತಿಂಡಿಯೊಂದು ಎಷ್ಟು ಕಾತರ ಹುಟ್ಟಿಸಿತ್ತಿತ್ತೊ ಹಾಗೆ ಕ್ಯಾಲೆಂಡರ್ ಕೂಡ ನನ್ನ ಕಣ್ಣಲ್ಲಿ ಕುತೂಹಲವನ್ನು ಮೂಡಿ ಸಿತ್ತಿತ್ತು. ಓದು ಬರಹವೇ ಗೊತ್ತಿಲ್ಲದ ಅವ್ವ ಅದನ್ನು ಯಾಕೆ ತರುತ್ತಿದ್ದಳು ಅಂತ ಎಷ್ಟೊ ದಿನಗಳವರೆಗೆ ಗೊತ್ತೇ ಆಗಿರಲಿಲ್ಲ. ನನಗೊ ಆಗ ನಾಲ್ಕನೆಯ ತರಗತಿಯ ಅರ್ಧಂಬರ್ಧದ ಕನ್ನಡ ಓದು.

ಅದು ಶಾಬಾದಿಮಠದ ಪ್ರಕಾಶನದ ಕ್ಯಾಲೆಂಡರ್! ಪ್ರತಿ ವರ್ಷ ಅದನ್ನು ಕಂಡು, ಎಷ್ಟೋ ವರ್ಷಗಳ ಕಾಲ ಈ ಜಗತ್ತಿನಲ್ಲಿ ಶಾಬಾದಿಮಠ ಮಾತ್ರ ಕ್ಯಾಲೆಂಡರ್ ತಯಾರಿಸುವ ಸಂಸ್ಥೆ ಅಂತ ಭಾವಿಸಿದ್ದೆ. ಯಾಕೆಂದರೆ ಅದು ವರೆಗೂ ಬೇರೆಯ ಕ್ಯಾಲೆಂಡರ್ ನೋಡಿಯೇ ಇರಲಿಲ್ಲ. ಹೊಸ ವರ್ಷ ಆದ್ದರಿಂದ ಮೊದಲ ದಿನ ಖುಷಿಖುಷಿ ಯಾಗಿರಬೇಕು ಅನ್ನುವ ಅಘೋಷಿತ ನಿಯಮದ ಬಗ್ಗೆ ನಮಗೆ ಅಷ್ಟಾಗಿ ಆಗ ಗೊತ್ತಾಗುತ್ತಿರಲಿಲ್ಲ. ‘ಹಳೆ
ಕ್ಯಾಲೆಂಡರ್ ಮುಗಿತು ಅದ್ಕೆ ಹೊಸದನ್ನು ತೂಗಿ ಹಾಕಿದೀವಿ ’ ಅಂದುಕೊಳ್ಳುತ್ತಿದ್ದೆ. ಸುಮ್ಮನೆ ಕ್ಯಾಲೆಂಡರ್ ಹಿಡಿದು ಅಷ್ಟೊ ಇಷ್ಟೊ ಓದುತ್ತಿದ್ದೆ. ಆ ವಯಸ್ಸಿಗೆ ಕ್ಯಾಲೆಂಡರ್‌ನ್ನು ಹಿಡಿದುಕೊಂಡು ಗಂಭೀರವಾಗಿ ಓದಲು ಕೂತ ಮೊದಲ ವ್ಯಕ್ತಿ ನಾನೇ ಇರ್ಬೇಕು. ಅದರಲ್ಲಿ ಏನೆ ಇರುತ್ತಿತ್ತು!

ಅವ್ವ ಆಗಾಗ ಎದುರು ಮನೆಯ ಗಣೇಶನನ್ನು ಕರೆದು  ‘ರಾಹುಕಾಲ, ಪೂಜೆಗೆ ಒಳ್ಳೆದಿನ, ಬಿತ್ತನೆ ಮಾಡಲು ಒಳ್ಳೆದಿನ ಯಾವುದು?’ ಇಂತವೇ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಿದ್ದಳು. ಕ್ಯಾಲೆಂಡರ್ ನೋಡಿ ಗಣೇಶ ಎಲ್ಲವನ್ನೂ ಹೇಳುತ್ತಿದ್ದ. ನಾನು ಬಾಗಿ ನಿಂತು ಕ್ಯಾಲೆಂಡರ್‌ನಲ್ಲಿ ಅವನು ಏಲೆ ನೋಡ್ತಾನೆ ಅನ್ನುವುದನ್ನು ತದೇಕಚಿತ್ತದಿಂದ ಗಮನಿಸುತ್ತಾ ಇರುತ್ತಿದ್ದೆ. ಒಬ್ಬನೇ ಇzಗ ಅದೆಲ್ಲವನ್ನು ಓದುತ್ತಿದ್ದೆ.

ಹಲ್ಲಿ ಶಕುನದ ವಿಶ್ಲೇಷಣೆ
ರಾತ್ರಿ ಬಿದ್ದ ಕನಸುಗಳು ಏನು ಹೇಳುತ್ತವೆ? ಹಲ್ಲಿ ನುಡಿದರೆ, ಬಿದ್ದರೆ ಏನು ಮಾಡಬೇಕು? ಅದರಲ್ಲಿ ಯಾವ ಅರ್ಥ ಇದೆ? ಅಂಗೈ ಗೆರೆಗಳು ಏನು ಹೇಳುತ್ತವೆ ಇಂತವೇ ಸಾಕಷ್ಟು ವಿಚಾರಗಳು ಆ ಕ್ಯಾಲೆಂಡರ್‌ನಲ್ಲಿ ಇರುತ್ತಿದ್ದವು. ಒಂದಿನ ಅವ್ವ ಗಣೇಶನನ್ನು ಕರೆಯುವಾಗ ‘ನಾನೇ ಹೇಳ್ತೀನಿ ಬಿಡವ್ವ, ಗಣೇಶಣ್ಣ ಯಾಕೆ’ ಅಂದಿದ್ದೆ. ಅವ್ವ ಆಶ್ಚರ್ಯ ಪಟ್ಟಿದ್ದಳು. ನಾನು ಹೇಳುವುದನ್ನು ಕೇಳಿಸಿಕೊಂಡಿದ್ದಳು. ನಾನು ಇಲ್ಲದೆ ಇದ್ದಾಗ ಗಣೇಶಣ್ಣನನ್ನು ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಂಡಳು ಅನಿಸುತ್ತೆ. ಯಾಕೆಂದರೆ ಅವಾಗಿಂದ ಗಣೇಶಣ್ಣನನ್ನು ಕೇಳುವುದು ಮುಗಿದು ಹೋಯಿತು. ಆಕೆ ದಿನಾಂಕ, ಅಮಾವಾಸ್ಯೆ ಹುಣ್ಣಿಮೆ, ಗ್ರಹಣ, ದೋಷ ಫಲ ಮುಂತಾದವುಗಳನ್ನು ತಿಳಿದುಕೊಳ್ಳಲು ನನ್ನನ್ನೇ ಕೇಳತೊಡಗಿದಳು.

ಓದಿದ ವಿಚಾರ ಇಟ್ಕೊಂಡು ಸ್ಕೂಲ್ ಹುಡುಗರಿಗೆ ಏನೇನೊ ಹೇಳ್ತಿದ್ದೆ. ಎಲ್ಲರೂ ಅವರ ಅಂಗೈ ತೋರಿಸಿ ‘ಭವಿಷ್ಯ ಹೇಳು’  ಅನ್ನೋರು. ಕ್ಯಾಲೆಂಡರ್‌ ನಲ್ಲಿ ಇರುವಂತೆ ಅವರಿಗೆ ಹೇಳ್ತಿದ್ದೆ. ಯಾವಾಗ ಮದುವೆ? ಎಷ್ಟು ಮಕ್ಕಳು? ಸಾಯೋದು ಯಾವಾಗ? ಹೀಗೆ ಏನೇನೊ ಹೇಳ್ತಿದ್ದೆ. ಅದು ಮೇಷ್ಟ್ರಿಗೆ ಗೊತ್ತಾಗಿ ಒಂದೆರಡು ಬಾರಿ ನನಗೆ ಏಟುಗಳು ಬಿದಿದ್ದವು.

ವರ್ಷ ಮುಗಿದ ಮೇಲೆ ಹಳೆಯ ಕ್ಯಾಲೆಂಡರ್‌ನ್ನು ಎಸೆಯುವುದಕ್ಕೆ, ನೀರಿನೊಲೆಗೆ ಹಾಕಿ ಸುಡುವುದಕ್ಕೆ ಅವ್ವ ಅವಕಾಶ ಕೊಡುತ್ತಿರಲಿಲ್ಲ. ‘ಅದನ್ನು ಹರಿಯಬಾರದು ಮಗಾ, ಸುಡಬಾರದು’ ಅಂತ್ಹೇಳಿ ಯಾವತ್ತೋ ಒಂದು ದಿನ ಅದನ್ನು ಹೊಳೆಗೆ ಒಯ್ದು ಹಾಕಿ ಬರೋಳು. ದಿನ ಬದಲಾದಂತೆ ಕ್ಯಾಲೆಂಡರ್‌ನ ಬಣ್ಣ ಕೂಡ ಬದಲಾಯಿತು. ನನಗೆ ಗೊತ್ತಿರುವ ಹಾಗೆ ಇಷ್ಟು ದಿನಗಳ ಕಾಲವೂ ಅವ್ವನೇ ಸಂತೆಯಿಂದ ಕ್ಯಾಲೆಂಡರ್ ತಂದಿದ್ದಾಳೆ.
ನಾನು ಓದುತ್ತಾ ಓದುತ್ತಾ ಮುಂದಿನ ತರಗತಿಗೆ ಹೋದಂತೆ ಕ್ಯಾಲೆಂಡರ್‌ನಲ್ಲಿ ಇದ್ದ ವಿಚಾರಗಳು ತೀರಾ ಜೋಕ್ ರೀತಿ ಅನಿಸಿಬಿಟ್ಟವು. ಅವ್ವ ಮಾತ್ರ ಅದನ್ನು ನಂಬಿ, ಹಾಗೆಯೇ ಉಳಿದಳು. ನಾನು ಹೊಸ ಮತ್ತು ಹಳೆಯ ಕಾಲಗಳ ಮಧ್ಯೆ ಸಿಕ್ಕಿಹಾಕುಕೊಂಡು ಒzಡಿದೆ. ಇಂತಹ ನಂಬಿಕೆಯ
ವಿಚಾರ ಗಳು ಬಂದಾಗ ದ್ವಂದ್ವಕ್ಕೆ ಬೀಳುತ್ತೇನೆ.

ಬಿಕಿನಿ ಹುಡುಗಿಯರ ಚಿತ್ರ
ಕಾಲ ಬದಲಾದಂತೆ ಕ್ಯಾಲೆಂಡರ್ ವಿಭಿನ್ನ ರೀತಿಯಲ್ಲಿ ಬದಲಾದವು. ಬಿಕಿನಿ ಹುಡುಗಿಯರಿಂದ ಹಿಡಿದು ಎಲ್‌ಐಸಿ ಏಜೆಂಟ್, ದೇವರ ಚಿತ್ರಗಳವರೆಗೂ ಇರುವ ಭಿನ್ನ-ವಿಭಿನ್ನ ಕ್ಯಾಲೆಂಡರ್ ಗಳು ಬಂದವು. ಇದುವರೆಗೂ ನಾನಂತೂ ಒಂದೇ ಒಂದು ಕ್ಯಾಲೆಂಡರ್‌ನ್ನು ಹಣಕೊಟ್ಟು ಕೊಂಡಿಲ್ಲ. ಈಗ ನಮ್ಮ ಮನೆಗೆ ಡಿಸೆಂಬರ್ ಕೊನೆಯ ವಾರಕ್ಕೆ ಇಪ್ಪತ್ತು ಮುವತ್ತು ಕ್ಯಾಲೆಂಡರ್ ಗಳು ಬಂದು ಬೀಳುತ್ತವೆ. ಗೋಡೆಯ ಕೃಪೆ ಸಿಗದೇ, ಹಾಳಾಗಿ ಹೋಗುತ್ತವೆ. ಕ್ಯಾಲೆಂಡರ್ ನೋಡಿ ಕೆಲಸ ಗುರುತು ಮಾಡುವ ಕಾಲ ಹೋಗಿ ಬಹಳ ದಿನಗಳಾಗಿವೆ. ಅವ್ವ ಕ್ಯಾಲೆಂಡರ್ ಮೇಲೆ ಹಾಲಿನ ಲೆಕ್ಕಾಚಾರ, ಕೂಲಿಗೆ ಹೋದ ದಿನಗಳ ಲೆಕ್ಕಾಚಾರ, ಸಂಕಷ್ಠಿ ಇವುಗಳನ್ನು ಗುರುತು ಮಾಡಿಸುತ್ತಿದ್ದಳು.

ಕ್ಯಾಲೆಂಡರ್ ಅವಳಿಗೊಂದು ‘ಟು ಡು’ ಲಿಸ್ಟಿನಂತಾಗಿತ್ತು. ನಾನು ನಗರ ಸೇರಿಯೇ ಇಪ್ಪತ್ತು ವರ್ಷ ಕಳೆದಾಯ್ತು. ಈ ಮನೆಯಲ್ಲಿ ಒಂದೇ ಒಂದು ಕ್ಯಾಲೆಂಡರ್‌ನ್ನೂ ನಾನು ಹಾಕಿಕೊಂಡಿಲ್ಲ. ಊರಿಗೆ ಹೋದಾಗ ಅದೇ ಹಳೆ ಮನೆಯ, ಹಳೆಯ ಗೋಡೆಯ ಮೇಲೆ ಅದೇ ಶಾಬಾದಿಮಠ ಕ್ಯಾಲೆಂಡರ್
ಬಣ್ಣದ ರೂಪದಲ್ಲಿ ನೇತಾಡುತ್ತಿರುತ್ತದೆ. ಅದನ್ನು ಎತ್ತಿಕೊಂಡು ಅದರಲ್ಲಿ ಇರೋದನ್ನು ಮತ್ತೆ ಓದುತ್ತೇನೆ. ಓದುತ್ತಾ ಓದುತ್ತಾ ಬಾಲ್ಯಕ್ಕೆ ಜಾರುತ್ತೇನೆ.. ಅದರಲ್ಲಿರುವ ವಿಚಾರಗಳನ್ನು ಮತ್ತೆ ಮತ್ತೆ ಸಾಹಿತ್ಯದಂತೆ ಓದಿಕೊಳ್ಳುತ್ತೇನೆ. ಒಂದು ವೇಳೆ ಅವ್ವ ಶಾಬಾದಿಮಠ ಬಿಟ್ಟು ಬೇರೆಯದು ತಂದು ಹಾಕಿದರೆ ನಾನು ಅವ್ವನ ಮೇಲೆ ರೇಗಿಬಿಡುತ್ತಿದ್ದೇನೊ ಏನೊ! ಆ ಕ್ಯಾಲೆಂಡರ್ ನಮಗೆ ಅಷ್ಟೊಂದು ಖುಷಿ ಕೊಡುತ್ತಿರುವಾಗ ಯಾಕಾಗಿ ಅದನ್ನು ಬದಲಿಸಬೇಕು?
ಈಗ ಮೊಬೈಲ್‌ನ ಎಲ್ಲಾ ಇದೆ.

ಗೂಗಲ್ ಹೋಂ, ನಾನು ಬಾಯಲ್ಲಿ ಹೇಳಿದ್ರೆ ಸಾಕು ‘ಟು ಡಿ’ ಲಿಸ್ಟನ್ನು ರೆಡಿ ಮಾಡಿಕೊಳ್ಳುತ್ತದೆ. ಬೇಕಿದ್ದರೆ ಬೆಳಗ್ಗೆಯಿಂದ ರಾತ್ರಿಯವರೆಗೆ ನಾನು ಮಾಡಬಹುದಾದ ಕೆಲಸವನ್ನು ಅದೇ ಮಾಡಿಬಿಡುತ್ತದೆ. ಕ್ಯಾಲೆಂಡರ್ ಇಟ್ಟುಕೊಂಡು ದಿನಾಂಕ ಹುಡುಕುವವರನ್ನು ಜಗತ್ತು ಈಗ ಅಯ್ಯೋ ಪಾಪ ಅನ್ನುವಂತೆ ನೋಡೀತು!

ಈಗ ಐವತ್ತು ರೂಪಾಯಿ! 

ನಿನ್ನೆಯಷ್ಟೇ ಊರಿಗೆ ಪೋನ್ ಮಾಡಿದ್ದೆ. ಕ್ಯಾಲೆಂಡರ್ ನೆನಪಾಗಿ ಕುತೂಹಲಕ್ಕೆ ಕೇಳಿದೆ. ‘ಅಯ್ಯೊ ಏನ್ ರೇಟಪ ಈಗ. ನಾ ಅವಾಗ ಎರಡು ರೂಪಾಯಿಗೆ ತಂದಿದ್ದೀನಿ. ಈಗೇನು ಐವತ್ತು ರೂಪಾಯಿ ಕೇಳ್ತರ? ಹಣ ಜಾಸ್ತಿ ಅಂತ ಹೇಳಿ ಬಿಡೋಕೆ ಆಯ್ತದಾ? ತಂದೆ ಕಣಪ್ಪ’ ಅಂದಳು. ಕೇಳಿ ಖುಷಿಯಾಯ್ತು. ಅವ್ವಗೆ ಕ್ಯಾಲೆಂಡರ್ ಬದಲಾಗುವುದೇ ಒಂದು ವರ್ಷದ ಲೆಕ್ಕ ಅಷ್ಟೇ. ಅವ್ವನಿಗಿಂತ ಇನ್ನೂ ಹಿಂದೆ ಇರುವವರೆಗೆ ಹೊಸ ದಿನದ ಕಲ್ಪನೆಯೂ ಕೂಡ ಇರಲ್ಲವೇನೊ! ನಗರದಲ್ಲಿರುವ ನಾವು ಮತ್ತು ನಮ್ಮಂತವರು ಸಾವಿರಾರು ರೂಪಾಯಿ ಖರ್ಚು ಮಾಡಿ ರಾತ್ರಿಯೆ ಕುಡಿದು ಕುಣಿಯದಿದ್ದರೆ ಅದು ಹೊಸ ದಿನ ಅಲ್ಲವೇ ಅನ್ನುವ ಮನಸ್ಥಿತಿ.

ನೋಡಿ ಕಾಲ ಹೇಗೆ ಮತ್ತು ಎಷ್ಟೆ ಬದಲಾಗಿದೆ. ಶಾಬಾದಿಮಠ ಕ್ಯಾಲೆಂಡರ್ ಬಣ್ಣದಲ್ಲಿ ಬಂದಿದ್ದರೂ ನನ್ನ ಬಾಲ್ಯದ ಕಪ್ಪು ಬಿಳಪನ್ನು ಅಷ್ಟೇ ಜತನವಾಗಿ ಕಾಪಿಟ್ಟುಕೊಂಡು ನೆನಪಿಸುತ್ತದೆ. ಥ್ಯಾಂಕ್ಯೂ ಶಾಬಾದಿಮಠ ಮತ್ತು ನನ್ನ ಬಾಲ್ಯ..