Wednesday, 5th October 2022

ನಾಳೆಯಿಂದ ಏ.14ರವರೆಗೆ ಮದ್ಯ ಮಾರಾಟಕ್ಕೆ ಬ್ರೇಕ್

ಬೆಂಗಳೂರು: ನಗರದ ವಿವಿಧ ದೇವಾಲಯಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆ/ರಥೋತ್ಸವದ ಪ್ರಯುಕ್ತ, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಪೂರ್ವ ವಲಯದ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಏಪ್ರಿಲ್ ಹದಿನಾಲ್ಕರ ವರೆಗೆ ಬ್ರೇಕ್ ಹಾಕಲಾಗಿದೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋದಂಡರಾಮಲಿಂಗೇಶ್ವರ ಸ್ವಾಮಿ ಮತ್ತು ವಿವಿಧ ದೇವರ ಪಲ್ಲಕ್ಕಿ ಉತ್ಸವದ ಕಾರಣಕ್ಕಾಗಿ, ಏಪ್ರಿಲ್ ಹನ್ನೆರಡು ಸಾಯಂಕಾಲ ಆರರ ವರೆಗೆ ಮದ್ಯ ಮಾರಾಟ ವಿರುವುದಿಲ್ಲ.

ಏಪ್ರಿಲ್ ಹದಿಮೂರರ ಬೆಳಗ್ಗೆ ಆರರಿಂದ ಏಪ್ರಿಲ್ ಹದಿನಾಲ್ಕು ಸಂಜೆ ಆರರವರೆಗೆ ಪೂರ್ವ ವಲಯದ ಐದು ಮತ್ತು ಉತ್ತರ ವಲಯದ ಒಂದು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಮುತ್ಯಾಲಮ್ಮ ದೇವಾಲಯದಲ್ಲಿ ರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವದ ಕಾರಣಕ್ಕಾಗಿ, ಭಾರತೀ ನಗರ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಿಕೇಶಿ ನಗರ, ಡಿ.ಜೆ.ಹಳ್ಳಿ ಮತ್ತು ಉತ್ತರ ವಿಭಾಗದ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಈ ಅವಧಿಯಲ್ಲಿ ಇರುವುದಿಲ್ಲ.

ಬಾರ್‌, ವೈನ್ ಶಾಪ್‌, ಪಬ್‌, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.