Wednesday, 1st February 2023

ಆ ದೇಶ ಆಡುವಾ ತೈಲದಾಟವಯ್ಯಾ…

ವಿದೇಶವಾಸಿ

dhyapaa@gmail.com

ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಆರಂಭವಾಗಿ ಆರು ತಿಂಗಳಾಯಿತು. ರಷ್ಯಾದ ಕೈಯಲ್ಲಿ ಯುದ್ಧ ಗೆಲ್ಲಲು ಆಗುತ್ತಿಲ್ಲವೋ ಅಥವಾ ಯುಕ್ರೇನ್ ಬಲಶಾಲಿ ದೇಶವೋ? ಈ ಪ್ರಶ್ನೆಗೆ ಉತ್ತರ; ಎರಡೂ ಅಲ್ಲ. ಯುಕ್ರೇನ್ ಕೆಟ್ಟಿದ್ದು ಪರರನ್ನು ನಂಬಿ. ಆದರೆ ರಷ್ಯಾ ಮಾತ್ರ ಬೇಕಂತಲೇ ಯುದ್ಧವನ್ನು ಎಳೆಯುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ.

‘ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಧಮಕಿ ಕೊಟ್ಟಿದ್ದಾರೆ. ‘ಒಪೆಕ್ ದೇಶಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇವೆ’ ಎಂದು ಭೂಪಟದಲ್ಲಿರುವ ದೇಶಗಳ ದೊಡ್ಡಣ್ಣ ಎಚ್ಚರಿಕೆ ನೀಡಿದೆ. ಇದಕ್ಕೆಲ್ಲ ಕಾರಣ ಕೇವಲ ಎರಡು ಪ್ರತಿಶತಕ್ಕೂ ಕಮ್ಮಿಯಾ ಗುತ್ತಿರುವ ತೈಲ ಉತ್ಪಾದನೆ.

ಒಪೆಕ್ (Organization of the Petroleum Exporting Countries) ಮೊದಲು ಆರಂಭವಾದದ್ದು 1960 ರಲ್ಲಿ. ಆ ದಿನಗಳಲ್ಲಿ ಇರಾಕ್, ಇರಾನ್, ಸೌದಿ ಅರೇಬಿಯಾ, ಕುವೈತ್ ಮತ್ತು ವೆನಜುವೇಲ ರಾಷ್ಟ್ರಗಳು ಸೇರಿ ಮಾಡಿಕೊಂಡ ಒಕ್ಕೂಟ, 1965 ರಲ್ಲಿ ಯುರೋಪ್ ನ ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ ಒಕ್ಕೂಟದ ಕಚೇರಿಯನ್ನು ಸ್ಥಾಪಿಸಿ ಕೊಂಡಿತು. ಕಾಲಕ್ರಮೇಣ ಅಲ್ಜೀರಿಯಾ, ಯುಎಇ, ಅಂಗೋಲಾ, ಲಿಬಿಯಾ, ನೈಜೀರಿಯಾ ಇತ್ಯಾದಿ ಇನ್ನೂ ಎಂಟು ದೇಶಗಳು ಒಪೆಕ್ ಒಕ್ಕೂಟವನ್ನು ಸೇರಿಕೊಂಡವು.

ಈಗ ಒಟ್ಟೂ ಹದಿಮೂರು ದೇಶಗಳಿರುವ ಈ ಒಕ್ಕೂಟಕ್ಕೆ ಖತಾರ್, ಇಕ್ವಿಡೋರ್, ಇಂಡೋನೇಶಿಯಾದಂತಹ ದೇಶಗಳು ಒಪೆಕ್ ಸದಸ್ಯತ್ವ ಪಡೆದು, ತನ್ನದೇ ಆದ ಕಾರಣದಿಂದ ಸದಸ್ಯತ್ವವನ್ನು ತೊರೆದೂ ಹೋಗಿವೆ. ವಿಶೇಷವೆಂದರೆ, ಇಂದಿಗೂ ಒಪೆಕ್‌ನ ಪ್ರಧಾನ ಕಚೇರಿ ಇರುವುದು ತೈಲ ಉತ್ಪಾದಿಸುವ, ಒಪೆಕ್ ಒಕ್ಕೂಟದ ಸದಸ್ಯ ದೇಶವಲ್ಲದ ಆಸ್ಟ್ರಿಯಾದಲ್ಲಿಯೇ
ಅದೂ ಕೇವಲ ಹೆಸರಿಗೆ ಮಾತ್ರ !

ಇದರೊಂದಿಗೆ ರಷ್ಯಾ, ಒಮಾನ್, ಸುಡಾನ್, ಮಲೇಶಿಯಾ, ಅಜರ್ಭಾಯಿಜಾನ್, ಬಹ್ರೈನ್ ನಂತಹ ಇನ್ನೂ ಹನ್ನೊಂದು ದೇಶಗಳು ಒಪೆಕ್ ನಿರೀಕ್ಷಕ ದೇಶಗಳಾಗಿ ಸೇರಿಕೊಂಡು ‘ಒಪೆಕ್ ಪ್ಲಸ್’ ಹೆಸರಿನ ಒಕ್ಕೂಟ ರಚಿಸಿಕೊಂಡಿವೆ. ಸುಮ್ಮನೆ ತಿಳಿದಿರಲಿ ಎಂದು ಹೇಳುತ್ತಿದ್ದೇನೆ, ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶ ಅಮೆರಿಕ. ಶೇಕಡಾ ಇಪ್ಪತ್ತರಷ್ಟನ್ನು ಅಮೆರಿಕ ಒಂದೇ ಉತ್ಪಾದಿಸುತ್ತದೆ. ಹನ್ನೆರಡು ಪ್ರತಿಶತ ಉತ್ಪಾದಿಸುವ ಸೌದಿ ಅರೇಬಿಯಾ ಎರಡನೆಯ ಸ್ಥಾನದಲ್ಲಿಯೂ,
ಹನ್ನೊಂದು ಪ್ರತಿಶತ ಉತ್ಪಾದಿಸುವ ರಷ್ಯಾ ಮೂರನೆಯ ಸ್ಥಾನದಲ್ಲಿಯೂ ಇವೆ.

ನಾಲ್ಕರಿಂದ ಹತ್ತರವರೆಗಿನ ಸ್ಥಾನಗಳಲ್ಲಿ ಕ್ರಮವಾಗಿ ಕೆನಡಾ, ಚೀನಾ, ಇರಾಕ್, ಯುಎಇ, ಬ್ರೆಝಿಲ್, ಇರಾನ್ ಮತ್ತು ಕುವೈತ್ ನಿಲ್ಲುತ್ತವೆ. ಇವುಗಳಲ್ಲಿ ಬಹುತೇಕ ದೇಶಗಳು ಒಪೆಕ್ ಒಕ್ಕೂಟದ ಸದಸ್ಯ ದೇಶಗಳಲ್ಲ. ಆದರೂ ಒಪೆಕ್ ಅಥವಾ ಒಪೆಕ್ ಪ್ಲಸ್ ಒಕ್ಕೂಟದ ದೇಶಗಳಿಗೆ ಅಷ್ಟೊಂದು ಮಹತ್ವ ಏಕೆ? ವಿಶ್ವದ ಒಟ್ಟೂ ತೈಲ ನಿರ್ಯಾತ ದೇಶಗಳ ಪೈಕಿ ಶೇಕಡಾ ಐವತ್ತೆರಡರಷ್ಟನ್ನು ಒಪೆಕ್ ದೇಶಗಳು ನಿರ್ವಹಿಸುತ್ತವೆ.

ಇದು ಒಂದು ಕಡೆಯಾದರೆ, ಅದಕ್ಕಿಂತಲೂ ಮಿಗಿಲಾಗಿ, ವಿಶ್ವದ ಎಂಬತ್ತು ಪ್ರತಿಶತ ಅಧಿಕೃತ ತೈಲ ನಿಕ್ಷೇಪ ಇರುವುದು ಇದೇ
ಒಪೆಕ್ ರಾಷ್ಟ್ರಗಳಲ್ಲಿ. ಒಪೆಕ್ ಪ್ಲಸ್ ಸೇರಿಕೊಂಡ ನಿರೀಕ್ಷಕ ದೇಶಗಳಲ್ಲಿ ಸುಮಾರು ಹತ್ತು ಪ್ರತಿಶತ ನಿಕ್ಷೇಪವಿದೆ. ಅಲ್ಲಿಗೆ, ನೂರಕ್ಕೆ ತೊಂಬತ್ತರಷ್ಟು ತೈಲ ಇರುವುದು ಇದೇ ಇಪ್ಪತ್ತೈದು ದೇಶಗಳಲ್ಲಿ! ಇದೇ ಅಕ್ಟೋಬರ್ ಮೊದಲವಾರ ನಡೆದ ಒಪೆಕ್
ಸಭೆಯಲ್ಲಿ ಪ್ರತಿನಿತ್ಯ ಎರಡು ಮಿಲಿಯನ್ (ಇಪ್ಪತ್ತು ಲಕ್ಷ) ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಣಯಿಸ ಲಾಯಿತು.

ಇದು ವಿಶ್ವದ ಒಟ್ಟೂ ಉತ್ಪಾದನೆಗಿಂತ ಎರಡು ಪ್ರತಿಶತಕ್ಕಿಂತಲೂ ಕಮ್ಮಿಯಾದರೂ ಅಮೆರಿಕ, ಯುಕೆ, ಭಾರತದಂತಹ ದೇಶಗಳ ಆರ್ಥಿಕತೆಯಲ್ಲಿ ಸಾಕಷ್ಟು ಏರುಪೇರು ಮಾಡುವ ಸಾಧ್ಯತೆ ಇದೆ. ಅದರಲ್ಲೂ ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿರುವ
ಅಮೆರಿಕ ಮತ್ತು ಯುಕೆಗೆ ಇದು ನುಂಗಲಾರದ ತುತ್ತಾಗಿದೆ. ಆದ್ದರಿಂದ ಪಾಶ್ಚಿಮಾತ್ಯ ದೇಶಗಳು ಒಪೆಕ್ ಮೇಲೆ ತೈಲ ಉತ್ಪಾದನೆಯಲ್ಲಿ ಕಡಿತಗೊಳಿಸದಂತೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ.

ಹಾಗಾದರೆ ಕಡಿತಗೊಳಿಸುವುದರಿಂದ ಯಾರಿಗೆ, ಏನು ಪ್ರಯೋಜನ? ಅದರ ಪರಿಣಾಮಗಳೇನು? ಸುಲಭವಾಗಿ ಒಂದೇ ಮಾತಿನಲ್ಲಿ ಹೇಳುವುದಾದರೆ, ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಸಮತೋಲನ. ಉದಾಹರಣೆಗೆ, ಒಟ್ಟೂ ನೂರು
ಬ್ಯಾರೆಲ್ ತೈಲದ ಬೇಡಿಕೆ ಇದೆ ಅಂದುಕೊಳ್ಳಿ. ಅದನ್ನು ಐದು ದೇಶಗಳು ಇಪ್ಪತ್ತರಂತೆ, ಬ್ಯಾರೆಲ್ ಒಂದಕ್ಕೆ ಐವತ್ತು
ಡಾಲರ್‌ನಂತೆ ಮಾರಾಟ ಮಾಡುತ್ತಿವೆ ಎಂದಾದರೆ, ಒಟ್ಟೂ ಐದು ಸಾವಿರ ಡಾಲರ್ ನಲ್ಲಿ, ಒಂದು ದೇಶದ ಆದಾಯ ಒಂದು
ಸಾವಿರ ಡಾಲರ್. ಒಂದೊಮ್ಮೆ, ಈ ಐದೂ ದೇಶಗಳು ಉತ್ಪಾದನೆಯಲ್ಲಿ ಹತ್ತು ಬ್ಯಾರೆಲ್‌ನಂತೆ ಕಡಿತಗೊಳಿಸಿದವು
ಅಂದುಕೊಳ್ಳಿ. ಆಗ ಅದೇ ಐದು ಸಾವಿರ ಡಾಲರ್‌ಗೆ ಬರುವುದು ಐವತ್ತು ಬ್ಯಾರೆಲ್ ಮಾತ್ರ.

ಅಂತಹ ಸಂದರ್ಭದಲ್ಲಿ ನೂರು ಬ್ಯಾರೆಲ್ ಬೇಕಾದರೆ ಒಟ್ಟೂ ಹತ್ತು ಸಾವಿರ ತೆರಬೇಕು. ಅಂದರೆ ಪ್ರತಿ ಬ್ಯಾರೆಲ್ ಬೆಲೆ
ನೂರು ಡಾಲರ್ ಆಯಿತು. ಅಲ್ಲಿಗೆ, ಇಪ್ಪತ್ತು ಬ್ಯಾರೆಲ್‌ಗೆ ಒಂದು ಸಾವಿರ ಗಳಿಸುತ್ತಿದ್ದ ದೇಶ ಈಗ ಎರಡು ಸಾವಿರ
ಗಳಿಸುವುದರಿಂದ ಕುಂತಲ್ಲಿಯೇ ಅಥವಾ ಕಡಿಮೆ ಕೆಲಸ ಮಾಡಿಯೂ ಆದಾಯ ದ್ವಿಗುಣವಾಯಿತಲ್ಲ! ಇಂತಹ ಸಂದರ್ಭದಲ್ಲಿ
ಒಪೆಕ್ ಒಕ್ಕೂಟದಲ್ಲಿ ಭಾಗಿಯಾಗದ ದೇಶಗಳಿಗೆ ಹೆಚ್ಚು ಉತ್ಪಾದಿಸುವ ಅವಕಾಶವಿದ್ದರೂ ಅವು ಉತ್ಪಾದಿಸುವುದಿಲ್ಲ. ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಹೆಚ್ಚಾಗಿ, ಅವು ಉತ್ಪಾದಿಸುವ ತೈಲಗಳಿಗೂ ಅದೇ ಬೆಲೆ ದೊರಕುತ್ತದೆ ಎಂದಾದರೆ ಯಾರಿಗೆ ಬೇಡ? ಇದು ಯಾವ ರೀತಿಯ ಲೆಕ್ಕಾಚಾರ ಎಂದು ಕೇಳಬೇಡಿ.

ಕೆಲವೊಮ್ಮೆ ಇದು ದಾರ್ಷ್ಟ್ಯ ಎಂದೆನಿಸಬಹುದು. ಆದರೆ, ಈ ಲೋಕದಲ್ಲಿ ವಿಮಾನದಿಂದ ಹಿಡಿದು ಮಾವಿನ ಹಣ್ಣಿನವರೆಗೂ ಇದೇ ಲೆಕ್ಕಾಚಾರ. ಈ ಜಗತ್ತು ನಡೆಯುವುದೇ ಹೀಗೆ. ಒಪೆಕ್ ಪ್ರತಿ ಸಲ ಉತ್ಪನ್ನ ಹೆಚ್ಚಿಸುವುದು ಅಥವಾ ಕಡಿತ ಗೊಳಿಸುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ತೈಲ ದರದಲ್ಲಿ ಏರಿಳಿತವಾಗುವುದಕ್ಕೆ ಇದೇ ಕಾರಣ. ಸುಮ್ಮನೆ ಇತಿಹಾಸ ಗಮನಿಸಿ. 2020 ರ ಜೂನ್-ಜುಲೈ ತಿಂಗಳಿನಲ್ಲಿ ತೈಲ ಬೆಲೆ ಅತಿ ಕಮ್ಮಿ, ಬ್ಯಾರೆಲ್ ಒಂದಕ್ಕೆ ಮೂವತ್ತು ಡಾಲರ್ ಇತ್ತು. ಅದು ಕರೋನಾ ಕಾಲ. ಆಗ ಇಡೀ ಜಗತ್ತೇ ಸ್ತಬ್ಧವಾಗಿದ್ದರಿಂದ ತೈಲಕ್ಕೂ ಹೆಚ್ಚಿನ ಬೇಡಿಕೆ ಇರಲಿಲ್ಲ.

2022 ರ ಆರಂಭದಲ್ಲಿ ಬ್ಯಾರೆಲ್ ಬೆಲೆ ಸುಮಾರು ಎಂಬತ್ತು ಡಾಲರ್ ತಲುಪಿತ್ತು. ಎಪ್ರಿಲ್ ನಲ್ಲಿ ರಷ್ಯಾ-ಯುಕ್ರೇನ್ ಯುದ್ಧ ಆರಂಭವಾಗಿ ತಾರಕ ತಲುಪುತ್ತಿದ್ದಂತೆ, ಮೇ-ಜೂನ್ ವೇಳೆಗೆ ಬ್ಯಾರೆಲ್ ಒಂದಕ್ಕೆ ನೂರ ಹತ್ತು ಡಾಲರ್‌ಗಳಾದವು. ಇದು ಕಳೆದ ಹದಿನಾಲ್ಕು ವರ್ಷಗಳ ಇತಿಹಾಸದಲ್ಲಿಯೇ ಗರಿಷ್ಟ ಬೆಲೆ. ಅದಕ್ಕೆ ಕಾರಣ, ಆಗಲೇ ಹೇಳಿದಂತೆ, ವಿಶ್ವದ ತೈಲ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳು ಅದರ ಮೇಲೆ ಹೇರಿರುವ ನಿರ್ಬಂಧ. ಇಲ್ಲಿ ವ್ಯತ್ಯಾಸ ಇಷ್ಟೇ, ರಷ್ಯಾ ತಾನಾಗಿಯೇ ಉತ್ಪಾದನೆ ನಿಲ್ಲಿಸಲೂ ಇಲ್ಲ, ಕಡಿತಗೊಳಿಸಲೂ ಇಲ್ಲ. ಆದರೆ, ಬೇಡಿಕೆಯಿದ್ದರೂ
ಖುಲ್ಲಂ ಖು ಮಾರಾಟ ಮಾಡುವಂತಿರಲಿಲ್ಲ.

ಅದರಿಂದ ಬೆಲೆ ಹೆಚ್ಚಾಯಿತು. ಸುಮಾರು ಮೂರು ನಾಲ್ಕು ತಿಂಗಳು ಹೀಗೆಯೇ ಮುಂದುವರಿದು, ಕ್ರಮೇಣ ಇಳಿಕೆ ಆರಂಭ ವಾಯಿತು. ತೈಲ ಬೆಲೆ ಇಳಿದು ಪುನಃ ಮೂವತ್ತರ ಗಡಿ ತಲುಪುವುದು ತೈಲ ಉತ್ಪಾದಿಸುವ ಯಾವ ದೇಶಕ್ಕೂ ಬೇಕಾಗಿರಲಿಲ್ಲ. ಈ ಆತಂಕದಿಂದಲೇ ಒಪೆಕ್ ದೇಶಗಳು ತೈಲ ಉತ್ಪಾದನೆ ಕಡಿತಗೊಳಿಸಿದ್ದು. ಅದರ ಪರಿಣಾಮವಾಗಿ ಬ್ಯಾರೆಲ್‌ಗೆ ತೊಂಬತ್ತೊಂದಕ್ಕೆ ಕುಸಿದಿದ್ದ ಬೆಲೆ ಇಂದು ಪುನಃ ತೊಂಬತ್ಮೂರಕ್ಕೆ ಏರಿದೆ.

ಒಂದು ನೆನೆಪಿರಲಿ, ತೈಲ ಬೆಲೆ ಏರಿಕೆಯಿಂದ ಕಾರ್ಖಾನೆಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚುತ್ತದೆ, ಸಾರಿಗೆ ದರ ಜಾಸ್ತಿಯಾಗಿತ್ತದೆ. ಅದರಿಂದ ದಿನನಿತ್ಯ ಬಳಸುವ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ತೈಲ ಬೆಲೆ ಹೆಚ್ಚುವುದರಿಂದ ಯಾರಿಗೆ ಲಾಭ ಆಗುತ್ತದೆಯೋ, ಇಲ್ಲವೋ, ನಮ್ಮ ನಿಮ್ಮಂತಹ ಸಾಮಾನ್ಯ ಜನ ಮಾತ್ರ ರುಬ್ಬಿಸಿಕೊಳ್ಳುತ್ತೇವೆ. ಸರಿ ಇದರಿಂದ ಅಮೆರಿಕ ಮತ್ತು ಯುರೋಪ್ ಯಾಕೆ ಚಿಂತಿಸಬೇಕು? ಸದ್ಯ ಅಮೆರಿಕದಲ್ಲಿ ಹಣದುಬ್ಬರ ಸುಮಾರು ಎಂಟು ಪ್ರತಿಶತಕ್ಕಿಂತಲೂ
ಹೆಚ್ಚಾಗಿದೆ. ಅಮೆರಿಕದ ಇತಿಹಾಸದಲ್ಲಿ ಎಂಬತ್ತರ ದಶಕದ ನಂತರ, ನಾಲ್ಕು ದಶಕದಲ್ಲಿ ಇದೇ ಮೊದಲ ಬಾರಿ ಹಣದುಬ್ಬರ ಈ ಮಟ್ಟ ತಲುಪಿದೆ ಎಂದು ವರದಿ ಹೇಳುತ್ತಿದೆ.

ತೈಲ ಬೆಲೆ ಹೆಚ್ಚಾದರೆ ಇನ್ನೊಂದು ರಿಸೆಷನ್ ಅಥವಾ ಹಿಂಜರಿತವಾಗುತ್ತದೆ ಎಂಬ ಆತಂಕದಲ್ಲಿ ಪಾಶ್ಚಿಮಾತ್ಯ ದೇಶಗಳಿದ್ದರೆ, ವಿಶ್ವ ಮತ್ತೊಂದು ಆರ್ಥಿಕ ಹಿಂಜರಿತ ಕಾಣಬಹುದೆಂಬ ಆತಂಕದಲ್ಲಿ ಒಪೆಕ್ ದೇಶಗಳಿವೆ. ಅದಕ್ಕೆ ತಕ್ಕಾಗಿ ತಮಗೆ ಬೇಕಾದಂತೆ ಇಬ್ಬರೂ ಹೆಜ್ಜೆ ಇಡುತ್ತಿದ್ದಾರೆ. ಎರಡನೆಯದಾಗಿ, ತೈಲ ಬೆಲೆ ಹೆಚ್ಚಾದರೆ, ದೇಶದ ಸರಕಾರ ಹೆಚ್ಚಿನ ಹಣ ವಿನಿಯೋಗಿಸಬೇಕಾಗುತ್ತದೆ, ಅಥವಾ ಮಾರುಕಟ್ಟೆಯಲ್ಲಿ ಹೆಚ್ಚು ಸೆಕ್ಯೂರಿಟಿ ಬಾಂಡ್ ನೀಡಬೇಕಾಗುತ್ತದೆ. ಆಗ ಬಾಂಡ್ ಬೇಡಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಬಾಂಡ್‌ನ ಬಡ್ಡಿ ದರ ಹೆಚ್ಚುತ್ತದೆ, ಹಣದ ಮೌಲ್ಯ ಕುಸಿಯುತ್ತದೆ. ಅದರಿಂದ ಇಂಧನಕ್ಕೆ ಪುನಃ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದೆಲ್ಲ ಒಂದಕ್ಕೊಂದು ತಳಿಕೆ ಹಾಕಿಕೊಂಡ ಒಂದು ವರ್ತುಲ.

ಇವೆರಡಕ್ಕಿಂತಲೂ ಹೆಚ್ಚಾಗಿ, ತೈಲ ಬೆಲೆ ಹೆಚ್ಚಾದಂತೆ ರಷ್ಯಾ ಹೆಚ್ಚು ಹಣ ಸಂಪಾದಿಸುತ್ತಿದೆ. ಅದರಿಂದ ರಷ್ಯಾಕ್ಕೆ ಯುದ್ಧಕ್ಕೆ ಬೇಕಾದ ಹಣವೂ ದೊರಕುತ್ತಿದೆ. ಇದು ಸುಳ್ಳು, ಇಷ್ಟೊಂದು ನಿರ್ಬಂಧದ ನಡುವೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಅಂಕಿ ಅಂಶಗಳೇ ಉತ್ತರ ಕೊಡುತ್ತಿವೆ. ಯುದ್ಧ ಆರಂಭವಾಗುವುದಕ್ಕೂ ಮೊದಲು ಯುರೋಪ್‌ನಿಂದ ರಷ್ಯಾಕ್ಕೆ ಪ್ರತಿ ವರ್ಷ ಮಾಚ್
ನಿಂದ ಜುಲೈವರೆಗೆ ತೈಲ ಮತ್ತು ಅನಿಲದಿಂದ ಸರಾಸರಿ ಸುಮಾರು ಐವತ್ತು ಬಿಲಿಯನ್ ಡಾಲರ್ ಬರುತ್ತಿತ್ತು. ಈ ವರ್ಷ ಯುದ್ಧ ಆರಂಭವಾದ ನಂತರ, ಅದೇ ಸಮಯದಲ್ಲಿ ರಷ್ಯಾದ ಆದಾಯ ವೃದ್ಧಿಸಿ, ತೊಂಬತ್ತು ಬಿಲಿಯನ್ ಡಾಲರ್ ದಾಟಿದೆ!

ಯುಕ್ರೇನ್‌ಗೆ ಶಸ್ತ್ರಾಸ್ತ್ರ ಮಾರಿ ಹಣಗಳಿಸಬೇಕೆಂದಿದ್ದ ಅಮೆರಿಕ ಅದೇ ಯುಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ, ತನ್ನ ವಿರೋಧಿ ರಷ್ಯಾ ಹಣ ಗಳಿಸುವುದನ್ನು ನೋಡಿ ಹೇಗೆ ಸಹಿಸೀತು? ಈಗ ರಷ್ಯಾಕ್ಕೆ ಒಪೆಕ್ ದೇಶಗಳು ಪರೋಕ್ಷವಾಗಿ ಸಹಾಯ
ಮಾಡುತ್ತಿವೆ ಎಂಬ ಪುಕಾರು ಅಮೆರಿಕ ಮತ್ತು ಯುರೋಪ್ ದೇಶಗಳದ್ದು. ಎಲ್ಲ ದೇಶಗಳದ್ದೂ ಅವರದ್ದೇ ಆದ ಸಮೀಕರಣ!

ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಆರಂಭವಾಗಿ ಆರು ತಿಂಗಳಾಯಿತು. ರಷ್ಯಾದ ಕೈಯಲ್ಲಿ ಯುದ್ಧ ಗೆಲ್ಲಲು ಆಗುತ್ತಿಲ್ಲವೋ ಅಥವಾ ಯುಕ್ರೇನ್ ಬಲಶಾಲಿ ದೇಶವೋ? ಈ ಪ್ರಶ್ನೆಗೆ ಉತ್ತರ; ಎರಡೂ ಅಲ್ಲ. ಯುಕ್ರೇನ್ ಕೆಟ್ಟಿದ್ದು ಪರರನ್ನು ನಂಬಿ. ಆದರೆ ರಷ್ಯಾ ಮಾತ್ರ ಬೇಕಂತಲೇ ಯುದ್ಧವನ್ನು ಎಳೆಯುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ.
ಇದನ್ನು ಅರ್ಥ ಮಾಡಿಕೊಳ್ಳದ ಕೆಲವು ದೇಶಗಳು ಮಾತ್ರ ಇನ್ನೂ ವಾಕ್ಸಮರದಲ್ಲಿ ನಿರತವಾಗಿವೆ.

ಯುದ್ಧ ರಷ್ಯಾ ಮತ್ತು ಯುಕ್ರೇನ್ ಮಧ್ಯ, ಒದ್ದಾಡುತ್ತಿರುವುದು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು. ನಿಧಾನವಾಗಿ ರಷ್ಯಾ
ತನಗೆ ಬೇಕಾದದ್ದನ್ನು ಪಡೆಯುವ, ಅಂದುಕೊಂಡದ್ದನ್ನು ಸಾಧಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಒಂದು ಕಡೆ ರಷ್ಯಾ ಯುಕ್ರೇನ್ ಮೇಲೆ ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡುತ್ತಿದೆ. ಇನ್ನೊಂದು ಕಡೆಯಿಂದ ರಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳು ಸೇರಿಕೊಂಡು ಪಾಶ್ಚಿಮಾತ್ಯ ದೇಶಗಳ ವಿರುದ್ಧ ತೈಲ ಸಮರಕ್ಕೆ ಸಜ್ಜಾಗುತ್ತಿವೆ. 2023 ರ ವಿಶ್ವದ ಆರ್ಥಿಕತೆಯ ಹಣೆಬರಹ ನಿರ್ಣಯಿಸುವಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ. ವಿಶ್ವದ ದೊಡ್ಡಣ್ಣ ರಷ್ಯಾ ಬೀಸಿದ ಬಲೆಗೆ ಬೀಳುತ್ತಿದ್ದಾನೆಯೇ? ಕಾದು ನೋಡಿ!

error: Content is protected !!