Tuesday, 9th August 2022

OMG; ಒಹ್‌ ಮೈ ಗೋಲ್‌

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

‘ಫೆರಾರಿ ಕಾರು, ಎರಡು ವಿಮಾನ, ವಜ್ರದ ವಾಚು, ದೊಡ್ಡ ಮನೆ, ಇವೆಲ್ಲ ನನಗೆ ಏಕೆ ಬೇಕು? ನಾನು ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದೇನೆ. ಅದರಿಂದ ಸಾಕಷ್ಟು ಗಳಿಸಿದ್ದೇನೆ. ನಾನು ಗಳಿಸಿದ್ದನ್ನು ಅವಶ್ಯಕತೆ ಇರುವ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ವಿನಿಯೋಗಿಸುತ್ತೇನೆ’ ಎನ್ನುತ್ತಾನೆ ಸ್ಯಾಡಿಯೋ.

‘ಆಡುವ ಮಕ್ಕಳು ಆಡಬೇಕು, ಬೇಡುವ ಮಕ್ಕಳು ಬೇಡಬೇಕು’. ಹೀಗೊಂದು ಮಾತಿದೆ. ಅದನ್ನು ಯಾರು, ಯಾರಿಗೆ, ಏಕೆ, ಎಲ್ಲಿ ಹೇಳಿದರು, ವಿವರ ಗೊತ್ತಿಲ್ಲ. ಅವರವರ ಯೋಗ್ಯತೆಗೆ ತಕ್ಕ ಕೆಲಸ ಮಾಡಬೇಕು ಎನ್ನುವ ಅರ್ಥದಲ್ಲಿ, ಒಂದು ನಿರ್ದಿಷ್ಟ ಸಮಯ ದಲ್ಲಿ ಹೇಳಿರಬೇಕು. ಅದಕ್ಕೆ ಅಪವಾದ ಎಂಬಂತೆ ಒಂದಲ್ಲ ಸಾಕಷ್ಟು ಉದಾಹರಣೆಗಳಿವೆ. ಅವುಗಳಲ್ಲಿ ಖ್ಯಾತ ಫುಟ್‌ಬಾಲ್ ಆಟಗಾರ ಸ್ಯಾಡಿಯೋ ಮಾನೆಯ ಉದಾಹರಣೆಯೂ ಒಂದು.

ಸ್ಯಾಡಿಯೋ ಮಾನೆ, ಹೆಸರು ಕೇಳಿದರೆ ಗೋವಾ, ಗುಜರಾತ್ ಅಥವಾ ಮಹಾರಾಷ್ಟ್ರದ ಆಸಾಮಿ ಇರಬೇಕು ಎಂದೆನಿಸುವುದು ಸುಳ್ಳಲ್ಲ. ಆ ಪ್ರದೇಶದಲ್ಲಿ ರಾಣೆ, ಮಾನೆ, ಕಾಣೆ ಇತ್ಯಾದಿ ಅಡ್ಡ ಹೆಸರು ಮಾಮೂಲು. ಆದರೆ ಈ ಸ್ಯಾಡಿಯೋ ಮಾನೆ ಆಫ್ರಿಕಾ ಖಂಡದ ಸೆನೆಗಲ್ ದೇಶದವನು. ಫುಟ್ ಬಾಲ್ ಪ್ರಿಯರಿಗೆ ಚಿರಪರಿಚಿತ ಹೆಸರು. ತಾನು ಫುಟ್‌ಬಾಲ್ ಅಭಿಮಾನಿ ಎಂದು ಹೇಳಿ ಕೊಳ್ಳುವವನೊಬ್ಬ ಮಾನೆಯ ಹೆಸರು ಕೇಳಿಲ್ಲವೆಂದರೆ, ಮಾನೆ ಜನಪ್ರಿಯನಲ್ಲ ಎಂದಲ್ಲ, ಅಭಿಮಾನಿ ನಿಜವಾಗಿಯೂ ಫುಟ್‌ಬಾಲ್ ಆಟದ ಕುರಿತು ತಿಳಿದುಕೊಂಡಿಲ್ಲ ಎಂದು ಅರ್ಥ!

ಉಳಿದ ಖಂಡಗಳಿಗೆ ಹೋಲಿಸಿದರೆ ಬಡ ಖಂಡ ಎಂದೇ ಗುರುತಿಸಿಕೊಳ್ಳುವ ಆಫ್ರಿಕಾದಲ್ಲಿರುವ ಬಡ ದೇಶಗಳಲ್ಲಿ ಸೆನೆಗಲ್ ಕೂಡ ಒಂದು. ದೇಶದ ಒಂದು ಮೂರಾಂಶ ಜನ ಇಂದಿಗೂ ಬಡತನದ ರೇಖೆಯ ಕೆಳಗಿದ್ದಾರೆ. ಅದರಲ್ಲೂ ಶೇ.75ರಷ್ಟು ಜನ ದೀರ್ಘ ಕಾಲದಿಂದ ಬಡತನದಲ್ಲಿಯೇ ಇದ್ದಾರೆ. ಇಂದಿಗೂ ಸಾಕಷ್ಟು ಜನರ ನಿತ್ಯದ ಆದಾಯ ಒಂದು ಡಾಲರ್‌ಗಿಂತಲೂ ಕಮ್ಮಿ ಇದೆ.
ದೇಶದ ಆರ್ಥಿಕತೆ ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ, ಇತ್ತೀಚೆಗೆ ಗಣಿಗಾರಿಕೆಯನ್ನು ಅವಲಂಬಿಸಿದೆ.

ಅದರಲ್ಲೂ, ಮಳೆಯ ಮನಸ್ಸು ಕೆಟ್ಟರೆ, ಹವಾಮಾನದ ತಲೆ ತಿರುಗಿದರೆ ಕೃಷಿಯೂ ಗೋವಿಂದ! ಸಾಲದು ಎಂಬಂತೆ ಮಿತಿ ಮೀರಿದ ಭ್ರಷ್ಟಾಚಾರದ ಛಾಯೆ ಬೇರೆ. ಇಂತಿರ್ಪ ದೇಶದ ಬಂಬಾಲಿ ಎಂಬ ಕುಗ್ರಾಮದಲ್ಲಿ ಒಂದು ಮುರುಕಲು ಗುಡಿಸಲು. ಒಂದೇ ಕೋಣೆಯ ಆ ಗುಡಿಸಿಲಿನಲ್ಲಿ ಒಂದೇ ಕುಟುಂಬದ ಹತ್ತು ಜನರ ವಾಸ. ನಿತ್ಯ ಭವಿಷ್ಯದಲ್ಲಿ ಅದೃಷ್ಟ ಚೆನ್ನಾಗಿದ್ದವರಿಗೆ ಊಟ. ಉಳಿದವರಿಗೆ ಸೊಪ್ಪು- ಸದೆಯೇ ಆಹಾರ. ಆ ಹತ್ತು ಜನರ ಪರಿವಾರದ ಸದಸ್ಯರಲ್ಲಿ ಒಬ್ಬ ಸ್ಯಾಡಿಯೋ ಮಾನೆ.

ಸ್ಯಾಡಿಯೋ ಮೂರು ವರ್ಷದವನಿದ್ದಾಗ ಮೊದಲ ಬಾರಿ ಆತನಲ್ಲಿ ಫುಟ್‌ಬಾಲ್ ಆಟದ ಕುರಿತು ಆಸಕ್ತಿ ಹುಟ್ಟಿತು. ವರ್ಷ ಕಳೆದಂತೆ ಅವನಲ್ಲಿ ಆಸಕ್ತಿ ಅಧಿಕವಾಗತೊಡಗಿತು. ಅಪ್ಪ ಅಮ್ಮ ಇಬ್ಬರೂ ಅದನ್ನು ವಿರೋಧಿಸಿದರು. ಮಗ ಶಾಲೆಗೆ ಹೋಗಿ, ವಿದ್ಯಾವಂತ ಗಲಿ ಎಂಬುದು ಅವರ ಕನಸಾಗಿತ್ತು. ಅವರ ಪ್ರಕಾರ, ಫುಟ್‌ಬಾಲ್ ಆಡುವುದೆಂದರೆ ಸಮಯ ವ್ಯರ್ಥ ಮಾಡುವುದು, ಅದರಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ, ಅದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವುದಾಗಿತ್ತು. ಅದಕ್ಕೆ ಕಾರಣವೂ ಇತ್ತು.

ಆ ಊರಿನಲ್ಲಿ ಫುಟ್‌ಬಾಲ್ ಆಡುವುದಕ್ಕೆ ಮೈದಾನವೂ ಇರಲಿಲ್ಲ, ಚೆಂಡೂ ಇರಲಿಲ್ಲ. ಹರುಕು ಗೋಣಿಪಾಟನ್ನೇ ಚೆಂಡಿನ ಆಕಾರದಲ್ಲಿ ಸುತ್ತಿ, ಬೀದಿಯಲ್ಲಿ ಆಡುತ್ತಿದ್ದರು. ಕೆಲವೊಮ್ಮೆ ಅದೃಷ್ಟ ಒಲಿದಾಗ ದೂರದ ಶಾಲೆಯಲ್ಲಿ ಬಳಸಿ, ಎಸೆದ ಚೆಂಡು
ಸಿಗುತ್ತಿತ್ತು. ಅದಕ್ಕೇ ಸ್ಯಾಡಿಯೋ ಪಾಲಕರು ಆತ ನಾಲ್ಕು ಜನರಿಗೆ ಪಾಠ ಹೇಳುವ ಶಿಕ್ಷಕನಾಗಲಿ ಎಂದು ಬಯಸಿದ್ದರು.

ಸ್ಯಾಡಿಯೋಗೆ ಮಾತ್ರ ಅದು ಮನಸ್ಸಿರಲಿಲ್ಲ. ಆತ ನಿದ್ರೆಯಲ್ಲಿದ್ದರೂ ಫುಟ್‌ಬಾಲ್ ಎಂದು ಕನವರಿಸುತ್ತಿದ್ದ. ಆತ ಫುಟ್‌ಬಾಲ್
ಎಂದಾಗಲೆಲ್ಲ ಆತನಿಗೆ ಒದೆ ಬೀಳುತ್ತಿತ್ತು. ಸ್ಯಾಡಿಯೋ ಮಾತ್ರ ತಾನು ತಿಂದ ಪ್ರತಿಯೊಂದು ಒದೆಯನ್ನೂ ‘ಗೋಲ್’ ಆಗಿ ಪರಿವರ್ತಿಸಲು ನಿರ್ಧರಿಸಿದ್ದ. ಅಂತಹ ಸ್ಯಾಡಿಯೋ ಇದ್ದಕ್ಕಿದ್ದಂತೆ ಶಾಲೆಗೆ ಹೋಗಲು ಒಪ್ಪಿದ್ದ. ಏಕೆ ಗೊತ್ತೇ? ಓದುವುದಕ್ಕಂತೂ
ಖಂಡಿತ ಅಲ್ಲ, ಶಾಲೆಯಲ್ಲಿ ಫುಟ್‌ಬಾಲ್ ಆಡಲು ಸಿಗುತ್ತದೆ ಎಂದು! ಶಾಲೆಗೆ ಹೋದರೆ ಅಲ್ಲಿ ಆಡಲು ಸಿಗುತ್ತದೆ ಎಂದು ಆತನ ಸ್ನೇಹಿತರು ಹೇಳಿದ್ದರು.

ಹೀಗಿರುವಾಗ, ತಂದೆಯ ಅನಾರೋಗ್ಯದಿಂದ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಒಬ್ಬ ಚಿಕ್ಕಪ್ಪನ ಆದಾಯ ಒಂಬತ್ತು ಜನರ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಸ್ಯಾಡಿಯೋ ಮತ್ತು ಅವನ ಅಣ್ಣ, ಶಾಲೆ ಮುಗಿದ ನಂತರ ಗzಯಲ್ಲಿ ಸಣ್ಣ ಪುಟ್ಟ
ಕೆಲಸ ಮಾಡಬೇಕಾಗುತ್ತಿತ್ತು. ಅವನ ಇಷ್ಟದ ಆಟ ಆಡಲು ಸಮಯವೇ ಸಿಗುತ್ತಿರಲಿಲ್ಲ. ಆದರೂ ಸಿಕ್ಕ ಸಮಯದ ಆತ ತನ್ನ ತಲುಬು ತೀರಿಸಿಕೊಳ್ಳುತ್ತಿದ್ದ. ಒಂದು ದಿನ ಆತ ಗzಯಲ್ಲಿ ಕೆಲಸ ಮಾಡುತ್ತಿರುವಾಗ ಆತನ ಅಣ್ಣ ಓಡಿ ಬಂದು ತಂದೆ ತೀರಿ ಕೊಂಡ ವಿಷಯ ಹೇಳಿದ.

ಸ್ಯಾಡಿಯೋ ಆಗಿನ್ನೂ ಸಾವು ಎಂದರೆ ಏನು ಎಂದು ಅರ್ಥವೇ ಆಗದ ಏಳು ವರ್ಷದ ಹುಡುಗನಾಗಿದ್ದ. ಅವನ ಚಿಕ್ಕಪ್ಪ ಇನ್ನೂ
ತಿರ್ಸಟ್ಟು ಮನುಷ್ಯ. ಫುಟ್‌ಬಾಲ್ ಎಂದರೆ ಸಾಕು, ಆತ ಎರಡು ಪೆಟ್ಟು ಕೊಟ್ಟು ಒಂದು ಎಣಿಸುತ್ತಿದ್ದ. ಎರಡೂವರೆ ವರ್ಷ ಹೀಗೇ ಮುಂದುವರಿಯಿತು. 2002ರಲ್ಲಿ ಸ್ಯಾಡಿಯೋಗೆ ಹತ್ತು ವರ್ಷವಾಗಿದ್ದಾಗ ಸೆನೆಗಲ್ ಫುಟ್‌ಬಾಲ್ ತಂಡ ಮೊದಲ ಬಾರಿ ವಿಶ್ವಕಪ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿತ್ತು. ಆ ವರ್ಷ ತಂಡ ಅಂತಿಮ ಎಂಟರ ಘಟ್ಟದವರೆಗೂ ಹೋಯಿತು.

ದೇಶದ ಎಡೆ ಹಬ್ಬದ ವಾತಾವರಣವಿತ್ತು. ಅದು ಸ್ಯಾಡಿಯೋನ ಊರಾದ ಬಂಬಾಲಿಗೂ ತಲುಪಿತು. ತಾನೂ ಒಂದು ದಿನ ತನ್ನ ದೇಶಕ್ಕಾಗಿ ಆಡಬೇಕೆಂಬ ಉತ್ಕಟ ಅಭಿಲಾಷೆ ಆತನಲ್ಲಿ ಮನೆಮಾಡಿತ್ತು. ತನ್ನ ಆಸೆಯನ್ನು ಆತ ಹೇಳಿಕೊಂಡಾಗ ಅವನ ಮನೆಯವರಷ್ಟೇ ಅಲ್ಲ, ಊರಿನ ಪ್ರತಿಯೊಬ್ಬರೂ ನಕ್ಕಿದ್ದರು. ಸ್ಯಾಡಿಯೋ ತನ್ನ ಸ್ನೇಹಿತನೊಂದಿಗೆ ಸೇರಿ ಊರಿನಲ್ಲಿ ಚಿಕ್ಕ ಪುಟ್ಟ ಪಂದ್ಯಾಟ ಏರ್ಪಡಿಸುತ್ತಿದ್ದ. ಹೀಗೇ ಐದು ವರ್ಷ ಕಳೆದವು. ಹದಿನೈದು ವರ್ಷದ ಸ್ಯಾಡಿಯೋ ಮಾನೆ ಮನಸ್ಸು ಗಟ್ಟಿ ಮಾಡಿ ಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದ. ಆತನ ಒಳಗೆ ಹುದುಗಿದ್ದ ಅಪರಿಮಿತ ಜ್ವಾಲೆ ಸ್ಯಾಡಿಯೋ ಆ ನಿರ್ಧಾರಕ್ಕೆ ಬರಲು ಕಾರಣವಾಗಿತ್ತು.

ಸ್ಯಾಡಿಯೋ ತನ್ನ ಊರಿನಿಂದ ಸುಮಾರು ನಾಲ್ಕು ನೂರು ಕಿಲೋಮೀಟರ್ ದೂರ ಇರುವ ರಾಜಧಾನಿ ಡಕಾರ್‌ಗೆ ಹೊರಟ. ಫ್ರಾಂಕ್ ಆಗಿ ಹೇಳಬೇಕು ಎಂದರೆ ಆತನ ಕಿಸೆಯಲ್ಲಿ ಒಂದೇ ಒಂದು ಫ್ರಾಂಕ್ (ಸೆನೆಗಲ್ ದೇಶದ ದುಡ್ಡು) ಕೂಡ ಇರಲಿಲ್ಲ. ಮನೆಯಲ್ಲಿ ಹೇಳಿದರೆ ಖಂಡಿತ ಬಿಡುವುದಿಲ್ಲ ಎಂದು ತಿಳಿದಿದ್ದರಿಂದ ಯಾರಿಗೂ ಹೇಳದೆಯೇ ಹೊರಟಿದ್ದ. ಸ್ಯಾಡಿಯೋ ಊರು ಬಿಡುವ ವಿಷಯ ಆತನ ಆತ್ಮೀಯ ಸ್ನೇಹಿತನೊಬ್ಬನಿಗೆ ಮಾತ್ರ ಗೊತ್ತಿತ್ತು. ಬಡ ಊರಿನಲ್ಲಿ ಬದುಕುವ ಬಡ ಕುಟುಂಬದ ಹದಿನೈದು ವರ್ಷದ ಹುಡುಗನ ಬಳಿ ಎಷ್ಟು ಹಣವಿದ್ದೀತು? ಆದರೂ ಸ್ನೇಹಿತ ತನ್ನ ಬಳಿ ಇದ್ದದ್ದನ್ನೆಲ್ಲ ಸ್ಯಾಡಿಯೋನ ಕೈಗಿಟ್ಟ.

ಸ್ನೇಹಿತ ನೀಡಿದ ಹಣ ಎಷ್ಟಿತ್ತೆಂದರೆ, ತಲುಪಬೇಕಾಗಿದ್ದ ನಾಲ್ಕುನೂರು ಕಿಲೋಮೀಟರ್‌ನಲ್ಲಿ ಸುಮಾರು ಇನ್ನೂರೈವತ್ತು
ಕಿಲೋಮೀಟರ್ ಮಾತ್ರ ಬಸ್ ಪ್ರಯಾಣ, ಉಳಿದ ನೂರೈವತ್ತು ಕಿಲೋಮೀಟರ್ ನಡೆದುಕೊಂಡೇ ಹೋಗಿದ್ದ ಸ್ಯಾಡಿಯೋ!
ರಾಜಧಾನಿ ತಲುಪಿದ ಸರಿ, ಅಲ್ಲಿ ಯಾರೊಬ್ಬರ ಪರಿಚಯವಿಲ್ಲ, ಸಂಬಂಧಿಗಳಿಲ್ಲ, ಊಟ-ನಿದ್ರೆಗೆ ಗತಿಯಿಲ್ಲ. ಅದ್ಯಾವುದೂ ಅವನಿಗೆ ಲಕ್ಷ್ಯಕ್ಕಿರಲಿಲ್ಲ. ಅವನಿಗೆ ಅದ್ಯಾವುದೂ ಬೇಕಾಗಿರಲಿಲ್ಲ. ಅವನಿಗೆ ಬೇಕಾದದ್ದು ಒಂದೇ ಒಂದು ಅವಕಾಶ. ಸ್ಯಾಡಿಯೋ
ಅವಕಾಶ ಕೇಳಿದ ಕಡೆಯಲ್ಲಾ ಅವನ ಕಾಲು ನೋಡಿಯೇ ಅವಕಾಶ ಕೊಡುತ್ತಿರಲಿಲ್ಲ.

ಏಕೆಂದರೆ ಅವನ ಕಾಲಿನಲ್ಲಿ ಸರಿಯಾದ ಬೂಟು ಕೂಡ ಇರಲಿಲ್ಲ. ಹರುಕು ಮುರುಕು ಬೂಟು ತೊಟ್ಟು ಫುಟ್‌ಬಾಲ್ ಆಡುವುದು ಎಂದರೇನು? ಅದು ಆಟಕ್ಕೇ ಅವಮಾನ ಎಂದು ಯಾರೂ ಅವನಿಗೆ ಅವಕಾಶ ಕೊಡಲಿಲ್ಲ. ಅದೇ ಹರುಕು ಜತೆಯ ಬೂಟು ಒಂದು ದಿನ ಅವನನ್ನು ಜನರೇಶನ್ ಫುಟ್ ಅಕಾಡೆಮಿಯ ಎದುರು ತಂದು ನಿಲ್ಲಿಸಿತ್ತು. ಅಕಾಡೆಮಿಯ ಕೋಚ್ ಬಳಿ ಅವಕಾಶ ಕ್ಕಾಗಿ ಕೇಳಿಕೊಂಡಾಗ, ‘ಈ ಬೂಟು ತೊಟ್ಟು ನೀನು ಆಡಲು ಸಾಧ್ಯವೇ ಇಲ್ಲ’ ಎಂದ.

ತನ್ನ ಬಳಿ ಇದರ ಹೊರತು ಬೇರೇನೂ ಇಲ್ಲ ಎಂದು ಮುಗ್ಧನಾಗಿ ಹೇಳಿದ ಸ್ಯಾಡಿಯೋ ತಾನು ಬರಿಗಾಲ ಆಡುವುದಾಗಿ ಹೇಳಿದ. ಕೋಚ್ ಅವನಿಗೆ ಕೇವಲ ಐದು ನಿಮಿಷದ ಅವಕಾಶ ಕಲ್ಪಿಸಿಕೊಟ್ಟ. ಆ ಐದು ನಿಮಿಷದಲ್ಲಿ ಸ್ಯಾಡಿಯೋ ಮಾನೆಯ ಆಟ ಕಂಡ ಕೋಚ್ ಸಿಡಿಲು ಹೊಡೆದವನಂತೆ ನಿಂತುಬಿಟ್ಟ. ಸ್ಯಾಡಿಯೋ ದೊಡ್ಡ ಪೆಟ್ಟಿನ ಆಟಗಾರ ಎಂದು ಕೋಚ್‌ಗೆ ಆಗಲೇ ಮನದ ಟ್ಟಾಗಿತ್ತು.

ಆತನನ್ನು ತನ್ನ ಕ್ಲಬ್ಬಿಗೆ ಸೇರಿಸಿಕೊಂಡ. ಅತ್ತ ಮನೆಯಲ್ಲಿ ಒಂದು ವಾರದಿಂದ ಮಗನನ್ನು ಕಾಣದೆ ಕಂಗಾಲಾಗಿದ್ದ ಅಮ್ಮನಿಗೆ ಸ್ಯಾಡಿಯೋ ರಾಜಧಾನಿಗೆ ಹೋಗಿದ್ದು ತಿಳಿಯಿತು. ಅವನ ಫುಟ್‌ಬಾಲ್ ಹುಚ್ಚನ್ನು ತಿಳಿದ ಮನೆಯವರೂ ಒಲ್ಲದ ಮನಸ್ಸಿ ನಿಂದಲೇ ಒಪ್ಪಿಗೆ ನೀಡಿದ್ದರು. ಸುಮಾರು ಮೂರೂವರೆ ವರ್ಷದ ನಂತರ ಕ್ಲಬ್ ಪಂದ್ಯಾಟಕ್ಕೆ ಆತ ಫ್ರಾನ್ಸ್‌ಗೆ ಹೋದ. ಅಲ್ಲಿಂದ ಅಮ್ಮನಿಗೆ ಕರೆ ಮಾಡಿ ತಾನು ಫುಟ್‌ಬಾಲ್ ಆಡಲು ಫ್ರಾನ್ಸ್‌ಗೆ ಬಂದಿದ್ದೇನೆ ಎಂದಾಗ ಆಕೆಯೂ ನಂಬಲಿಲ್ಲ. ಮೊದಲು ಮಗ ತಮಾಷೆ ಮಾಡುತ್ತಿದ್ದ ನೆಂದು ತಿಳಿದಿದ್ದ ಆಕೆ ಕೊನೆಗೆ ನಂಬಲೇಬೇಕಾಗಿತ್ತು.

2012, ಅವನಿಗೆ ಇಪ್ಪತ್ತು ವರ್ಷ ಮಾತ್ರವಾಗಿತ್ತು. ಲಂಡನ್‌ನಲ್ಲಿ ನಡೆಯಬೇಕಿದ್ದ ಬೇಸಿಗೆಯ ಒಲಂಪಿಕ್ ಪಂದ್ಯಾಟದಲ್ಲಿ ಭಾಗವಹಿಸಲು ತೆರಳಬೇಕಿದ್ದ ಸೆನೆಗಲ್ ದೇಶದ ತಂಡಕ್ಕೆ ಆತ ಆಯ್ಕೆಯಾಗಿದ್ದ. ಯಾವ ತಂಡ ಅವನನ್ನು ಆಡಲು ಪ್ರೇರೇಪಿ ಸಿತ್ತೋ, ಕೇವಲ ಹತ್ತು ವರ್ಷದ ಒಳಗೆ ಅದೇ ತಂಡದ ಸದಸ್ಯನಾಗಿದ್ದ ಸ್ಯಾಡಿಯೋ. ಆ ಪಂದ್ಯಾಟದಲ್ಲಿ ಅವನ ಆಟ ಕಂಡ ಸ್ಯಾಲ್ಜ್‌ಬರ್ಗ್ ಕ್ಲಬ್‌ನವರು ನಾಲ್ಕು ಮಿಲಿಯನ್ ಯೂರೋ ನೀಡಿ ಅವನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಕಾಲದಲ್ಲಿ ಅದು ಸ್ಯಾಡಿಯೋಗಷ್ಟೇ ಅಲ್ಲ, ಸೆನೆಗಲ್ ದೇಶದ ಲೆಕ್ಕಾಚಾರದಲ್ಲೂ ದೊಡ್ಡ ಮೊತ್ತವಾಗಿತ್ತು.

ಎರಡು ವರ್ಷದ ನಂತರ ಸೌಥಂಪ್ಟನ್ ಕ್ಲಬ್ ಅವನೊಂದಿಗೆ ಹನ್ನೆರಡು ಮಿಲಿಯನ್, ಮತ್ತೆ ಎರಡು ವರ್ಷದ ನಂತರ ಪ್ರತಿಷ್ಠಿತ
ಲಿವರ್‌ಪೂಲ್ ಕ್ಲಬ್ ಇಪ್ಪತ್ತಾರು ಮಿಲಿಯನ್ ಪೌಂಡ್ ನೀಡಿ ಐದು ವರ್ಷದ ಒಪ್ಪಂದ ಮಾಡಿಕೊಂಡಿತು. ಆ ಕಾಲದಲ್ಲಿ ಇದು ಆಫ್ರಿಕಾದ ಯಾವುದೇ ಆಟಗಾರನಿಗೆ ಸಿಕ್ಕ ಅತಿ ದೊಡ್ಡ ಮೊತ್ತವಾಗಿತ್ತು. ಸ್ಯಾಡಿಯೋ ಇದುವರೆಗೆ ಸೆನೆಗಲ್ ರಾಷ್ಟ್ರೀಯ ತಂಡದ ಎಂಬತ್ತೊಂಬತ್ತು ಪಂದ್ಯಗಳೂ ಸೇರಿದಂತೆ ಒಟ್ಟೂ ಐದುನೂರ ನಲವತ್ತು ಪಂದ್ಯ ಆಡಿದ್ದಾನೆ. ಅದರಲ್ಲಿ ಇನ್ನೂರ ಹತ್ತೊಂಬತ್ತು ಗೋಲ್ ಹೊಡೆದಿದ್ದಾನೆ. ಆತ ಮೂರು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಮೂರು ಗೋಲ್ ಹೊಡೆದದ್ದು ಪ್ರೀಮಿ
ಯರ್ ಲೀಗ್ ಇತಿಹಾಸದಲ್ಲಿ ಇನ್ನೂ ದಾಖಲೆಯಾಗಿ ಉಳಿದಿದೆ.

ಎರಡು ಬಾರಿ ಆಫ್ರಿಕಾ ಕಪ್, ಒಂದು ಫಿಫಾ ಕ್ಲಬ್ ವರ್ಲ್ಡ್ ಕಪ್ ಸೇರಿದಂತೆ ಒಟ್ಟೂ ಹನ್ನೊಂದು ಬಾರಿ ವಿಜೇತ ತಂಡದ ಸದಸ್ಯ ನಾಗಿದ್ದಾನೆ. ಒಂದು ಬಾರಿ ವರ್ಷದ ಆಫ್ರಿಕನ್ ಫುಟ್ ಬಾಲ್ ಆಟಗಾರ ಎಂಬ ಪ್ರಶಸ್ತಿಯೂ ಸೇರಿದಂತೆ ಒಟ್ಟೂ ಸುಮಾರು ಮೂವತ್ತು ಪ್ರಶಸ್ತಿ ಪಡೆದಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ಆತ ಮಾಡುತ್ತಿರುವ ಇನ್ನೊಂದು ಕೆಲಸದ ಕುರಿತು ಹೇಳದಿದ್ದರೆ ಈ ಲೇಖ
ನ ಅಪೂರ್ಣ. ಸ್ಯಾಡಿಯೋ ತನ್ನ ಗಳಿಕೆಯ ಅರ್ಧದಷ್ಟನ್ನು ದಾನ ಮಾಡುತ್ತಾನೆ.

ತನ್ನ ಊರಿನಲ್ಲಿ ಶಾಲೆ, ಆಸ್ಪತ್ರೆ, ಫುಟ್‌ಬಾಲ್ ಕ್ರೀಡಾಂಗಣ ಕಟ್ಟಿಸಿದ್ದಾನೆ. ಪ್ರತಿ ನಿತ್ಯ ಐದು ಹೊಸ ಐ-ಫೋನ್ ಖರೀದಿ ಮಾಡುವ ತಾಕತ್ತಿದ್ದರೂ, ಆತ ಸ್ಕ್ರೀನ್ ಒಡೆದ ಫೋನ್ ಹಿಡಿದುಕೊಂಡು ಓಡಾಡುತ್ತಿದ್ದುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದನ್ನೆಲ್ಲ ಆತ ತಲೆಗೇ ಹಚ್ಚಿಕೊಳ್ಳಲಿಲ್ಲ. ‘ಹತ್ತು ಫೆರಾರಿ ಕಾರು, ಎರಡು ವಿಮಾನ, ಇಪ್ಪತ್ತು ವಜ್ರದ
ವಾಚು, ದೊಡ್ಡ ಮನೆ, ಇವೆಲ್ಲ ನನಗೆ ಏಕೆ ಬೇಕು? ನಾನು ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದೇನೆ. ಅದರಿಂದ ಸಾಕಷ್ಟು ಗಳಿಸಿ ದ್ದೇನೆ. ನಾನು ಗಳಿಸಿದ್ದನ್ನು ಅವಶ್ಯಕತೆ ಇರುವ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ವಿನಿಯೋಗಿಸುತ್ತೇನೆ’ ಎನ್ನುತ್ತಾನೆ ಸ್ಯಾಡಿಯೋ.

ಸ್ಯಾಡಿಯೋ ನಡೆದ ದಾರಿ ನೋಡಿ ಕಲಿಯಬಹುದಾದ ಅಂಶಗಳು ಸಾಕಷ್ಟಿವೆ. ನಮ್ಮಲ್ಲಿ ಸಾಧಿಸಬೇಕೆಂಬ ಛಲದ ಜ್ವಾಲೆ ಯೊಂದಿದ್ದರೆ ಯಾವ ಸಮಸ್ಯೆಯೂ ದೊಡ್ಡದಲ್ಲ, ಯಾವ ಬಯಕೆಯೂ ಸಣ್ಣದಲ್ಲ. ಯಾವುದೇ ಸಾಧನ, ಸಲಕರಣೆ, ಉಪಕರಣ ಗಳಿಲ್ಲದಿದ್ದರೂ ಗುರಿ ತಲುಪಬಹುದು. ಸಾಧಿಸಬೇಕೆಂಬ ಬೆಂಕಿ ನಮ್ಮನ್ನು ಸುಡುತ್ತಿದ್ದರೆ ಯಾರ ಮಾತಿಗೂ ಕಿವಿಗೊಡಬೇಕಿಲ್ಲ. ಹಾಗಂತ ಒಮ್ಮೆ ಸಾಧನೆಯ ಉತ್ತುಂಗಕ್ಕೇರಿದ ನಂತರ ನಮ್ಮವರನ್ನು, ನಮ್ಮ ಊರನ್ನು ಮರೆಯ ಬೇಕೆಂದೇನೂ ಇಲ್ಲ.

ಎಷ್ಟೇ ಶ್ರೀಮಂತರಾದರೂ ಐಷಾರಾಮಿ ವಸ್ತು ಗಳಿಲ್ಲದೆಯೂ ಜೀವನ ಸಾಗಿಸಬಹುದು ಎಂಬುದಕ್ಕೆ ಸ್ಯಾಡಿಯೋ ಮಾನೆ ಉದಾ ಹರಣೆ. ಮೈದಾನದಲ್ಲಿ ಆತ ಸಾಕಷ್ಟು ಗೋಲ್ ಹೊಡೆದಿ ದ್ದಾನೆ. ಆದರೆ ಆತ ನಿಜ ಜೀವನದಲ್ಲಿ ಹೊಡೆದ ಗೋಲ್ ಅವೆಲ್ಲಕ್ಕಿಂತ ಅತ್ಯುತ್ಕೃಷ್ಟವಾದದ್ದು.