Tuesday, 31st January 2023

ಗುಳಿಗೆನ್ನೆಗೆ ಒಂದು ಹನಿ ನೀರು !

ಅರ್ಜುನ್‌ ಶೆಣೈ ಗಾವಳಿ

ಯಾವುದೋ ಬಸ್ ಹತ್ತಿ ಹೊರಟ ನಿನ್ನ ಮುಗ್ಧತೆಯನ್ನು ಏನೆಂದು ಕರೆಯಲಿ?

ನಿನ್ನನ್ನೀಗ ನಾನು ಎಡಬಿಡಂಗಿ ಎಂದೇ ಕರೀಬೇಕಿದೆ. ಯಾಕೆ ಗೊತ್ತಾ? ಅಲ್ಲಾ, ಈ ಪ್ರಪಂಚದಲ್ಲಿ ಯಾರಾದರೂ ಚಪ್ಪಲಿಯನ್ನು ತಿರುವು ಮುರುವು ಹಾಕಿಕೊಳ್ಳುತ್ತಾ ರೇನು? ನಿನ್ನನ್ನು ನೋಡಿದಾಗಲೇ ನನಗೆ ಅಂತಹಾ ವಕ್ರವ್ಯಕ್ತಿ ನನಗೆ ತಕ್ಕುದಾದದ್ದು ಎಂದು ಅನ್ನಿಸಿದ್ದು. ಅದಕ್ಕಾಗಿಯೇ ನಿನಗೆ ಪ್ರೀತಿಯಿಂದ ಎಡಬಿಡಂಗಿ ಎಂದು ನಾಮಕರಣ ಮಾಡಿದ್ದೇನೆ, ಖುಷಿಪಡು.

ಮೊನ್ನೆಯಷ್ಟೇ ನಿನ್ನ ಗೆಳತಿ ಸಿಕ್ಕಿದ್ದಳು. ನಿನ್ನ ಬಾಯ್ತುಂಬಾ ಹೊಗಳಿದಳು. ನೀನು ಗಣಿತ ಪರೀಕ್ಷೆ ದಿನ, ವಿಜ್ಞಾನ ಓದಿಕೊಂಡು ಹೋಗಿದ್ದಿಯಂತೆ. ಅದನ್ನು ಕೇಳಿ ಒಂದರೆಕ್ಷಣ ಎದೆಬಡಿತ ನಿಂತುಹೋಗಿತ್ತು ನನಗೆ. ಆದಾಗ್ಯೂ ೧೦೦ಕ್ಕೆ ೪೬ಅಂಕಗಳು ಬಂದುವೆಂದು ಕೇಳಿದಾಗಲೇ ಹೋದ ಉಸಿರು ಮತ್ತೆ ಮರುಕಳಿಸಿದ್ದು.

ಮುಖಕ್ಕೊಂದಿಷ್ಟೂ ಮೇಕಪ್ ಮಾಡದ ನೀನು ನೈಸರ್ಗಿಕ ಪ್ರೇಮಿಯೆಂದು ನಿನ್ನ ಗೆಳತಿ ತಿಳಿಸಿದಳು. ನಿನ್ನ ಬಗ್ಗೆ ನಿನಗಿಂತಲೂ ಹೆಚ್ಚಾಗಿ ಈಗೀಗ ನಾನು ತಿಳಿದುಕೊಂಡಿದ್ದೇನೆ ಎನ್ನಲು ನಾಚಿಕೆಭರಿತ ಹೆಮ್ಮೆ ನನಗುಂಟಾಗುತ್ತದೆ. ಆಗಾಗ್ಗೆ ತಲೆಗೆ ಮೆಹಂದಿ ಹಾಕಿ ಕೊಂಡೇ ಪೇಟೆಗೆ ತರಕಾರಿ ತರಲು ಹೋಗುತ್ತೀಯ, ಕಣ್ಣು ಕಾಣದಿದ್ದರೂ ಕನ್ನಡಕ ಹಾಕುವುದಿಲ್ಲ, ನಿನಗೆ ಲಾರಿ ಬಿಡಬೇಕು ಎನ್ನುವಾಸೆಯಿದೆ, ನವಿಲಿಗೆ ನೃತ್ಯ ಕಲಿಸುವಾಸೆಯಿದೆ, ಆಗಾಗ ಆಕಾಶ ನೋಡುವುದು ನಿನ್ನ ಖಯಾಲಿ, ಸಮುದ್ರಕ್ಕೆ ಹೋದಾ ಗೆಲ್ಲ ಕಡಲ ಮಧ್ಯದಲ್ಲಿ ಧ್ಯಾನ ಮಾಡುವುದು ನಿನ್ನ ಅಭ್ಯಾಸ, ಮಳೆಗಾಲದಲ್ಲಿ ನೀನು ಕೊಡೆ ಉಪಯೋಗ ಮಾಡುವುದಿಲ್ಲ, ನಿನ್ನ ನಿದ್ರೆಯ ಕನಸುಗಳೆಲ್ಲವೂ ಸಮುದ್ರದಾಳದ ಪ್ರಪಂಚದ್ದು, ಸಾಯಂಕಾಲ ಹಕ್ಕಿಗಳ ಸರಸ ನೋಡುವುದು ನಿನ್ನ ಕೆಟ್ಟ ಚಟಗಳಲ್ಲೊಂದು, ಪ್ರತಿರಾತ್ರಿ ಚಂದ್ರನಿಗೆ ಲೈನ್ ಹೊಡೆಯದೇ ನಿದ್ರೆ ಆವರಿಸುವುದಿಲ್ಲ.

ಕಂಡಕ್ಟರ್ ಬೈದದ್ದೇಕೆ?
ಮೊನ್ನೆಯಷ್ಟೇ ಮೈಸೂರಿಗೆ ಹೋಗಬೇಕಾದವಳು, ಬಸ್ಸಿನ ಬೋರ್ಡು ನೋಡದೇ ಬೆಂಗಳೂರಿನ ಬಸ್ಸು ಹತ್ತಿ ಕಂಡಕ್ಟರನ ಬಳಿ ಉಗಿಸಿಕೊಂಡಿದ್ದನ್ನು ಕೇಳಿ ಮನಸಾರೆ ನಕ್ಕೆ. ಅದೊಂದು ದಿನ ನೀನು ನಿನ್ನ ಗೆಳತಿಯ ಬಳಿ ಕಾಲಿಗೆ ತೊಡುವ ಗೆಜ್ಜೆಯನ್ನು ಕಿವಿಗೆ ಹಾಕಿದರೆ ಹೇಗಿರುತ್ತದೆಯೆಂದು ಕೇಳಿದಕ್ಕೆ ನಿನ್ನ ಗೆಳತಿ ಪರಿಚಯ ಇರುವ ಎಲ್ಲ ಮಾನಸಿಕ ವೈದ್ಯರಿಗೆ ಕರೆಮಾಡಿದ್ದು ನೆನೆಸಿ ಈಗಲೂ ನಗೆಯುಕ್ಕುತ್ತದೆ. ನಿನಗಿಂತಹ ಯೋಚನೆಗಳು ಹೇಗೆ ಬರುತ್ತದೆಯೆಂಬುದೇ ನನಗೆ ದೊಡ್ಡ ಪ್ರಶ್ನೆ.

ಈಗೀಗ ನಿನ್ನದೇ ಗುಂಗಿನಲ್ಲಿ ನನಗೂ ಚಿತ್ರವಿಚಿತ್ರ ಆಸೆಗಳು ಮೊಳೆಯತೊಡಗಿವೆ. ನಿನ್ನ ಗುಳಿಗೆನ್ನೆಯೊಳಗೆ ಒಂದು ಬೊಗಸೆ  ನೀರು ಹಾಕಿದರೆ ಏನಾಗಬಹುದೆಂಬ ದಿವ್ಯ ಕುತೂಹಲ ನನ್ನದು. ನಿನ್ನ ಪೋಕರಿತನವನ್ನೂ ಮೀರಿಸಿ ನಿನ್ನಲ್ಲೊಂದು ಹಸಿನಾಚಿಕೆ ಮೂಡಿಸಿಬಿಟ್ಟರೆ ಜಗತ್ತೇ ಗೆದ್ದಷ್ಟು ಸಂತೋಷ ನನಗಾದೀತು ಎಂಬ ಭ್ರಮೆ ನನ್ನದು. ಬರುವ ಶುಕ್ರವಾರ ನಿನ್ನಿಷ್ಟದ ಗೋಲ್‌ಗಪ್ಪ ಅಂಗಡಿಯ ಎದುರು ಕೊಡೆ ಹಿಡಿದು ನಿಂತಿರುತ್ತೇನೆ. ಕೊಡೆಯೊಳಗೆ ನೀನೂ ಅಡಗುವೆಯೆಂಬ ಹಸಿಹುಸಿ ಹುಚ್ಚ ಆಸೆಯೊಂದಿಗೆ….

error: Content is protected !!