Tuesday, 5th July 2022

ಈರುಳ್ಳಿ ಸಾಗಿಸುತ್ತಿದ್ದ ಐಷರ್ ವಾಹನಕ್ಕೆ ಲಾರಿ ಡಿಕ್ಕಿ: ನಾಲ್ವರ ಸಾವು

ಚಿತ್ರದುರ್ಗ: ಈರುಳ್ಳಿ ಸಾಗಿಸುತ್ತಿದ್ದ ಐಷರ್ ಲಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈತರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿ ರಾಷ್ಟ್ರೀಯ ಹೆದ್ದಾರಿ- ೪ರಲ್ಲಿ ಶನಿವಾರ ದುರ್ಘಟನೆ ಸಂಭವಿಸಿದೆ.

ಮೃತರನ್ನು ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ತಾಲೂಕಿನ ಮಂಜುನಾಥ, ವಿಜಯಪುರದ ಲಾರಿ ಕ್ಲೀನರ್ ಸಂಜಯ್, ರೋಣದ ಚಾಲಕ ಶರಣಪ್ಪ ಮೃತರು ಎಂದು ಗುರುತಿಸಲಾಗಿದೆ. ಗಾಯಗೊಂಡ ಗ್ಯಾಸ್ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈತರಿಬ್ಬರು ಈರುಳ್ಳಿ ತುಂಬಿಕೊಂಡು ಬೆಂಗಳೂರು ಕೃಷಿ ಮಾರುಕಟ್ಟೆ ತೆರಳುವಾಗ ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿ ಬಳಿ ಐಷರ್ ಲಾರಿ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ, ಟೈರ್ ಬಿಚ್ಚುವಾಗ ಹಿಂಬದಿಯಿಂದ ಬಂದ ಗ್ಯಾಸ್ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯಾದ ರಭಸಕ್ಕೆ ಈರುಳ್ಳಿ ಚೀಲಗಳು ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.