Friday, 3rd February 2023

ಆನ್‌ಲೈನ್‌ ಬೆಟ್ಟಿಂಗ್: ಏಕರೂಪ ಕಾನೂನು ಬರಲಿ

ಅಭಿಮತ

ಡಿ.ಎಸ್.ಅರುಣ್

ಅರಿಸ್ಟಾಟಲ್ ಹೇಳಿರುವ ‘ಮಾನವ ಸಂಘ ಜೀವಿ’ ಎಂಬ ಹೇಳಿಕೆ ಬುಡಮೇಲಾಗಿದೆ. ಮಾನವ ಸಂಘವನ್ನು ಬಿಟ್ಟು ತಾಂತ್ರಿಕತೆ ಯೊಡನೆ ಏಕಾಂಗಿಯಾಗಿ ಬದುಕುವ ಪ್ರಚೋದನೆಗೆ ಒಳಗಾಗಿದ್ದಾನೆ. ಕುಟುಂಬದ ಚೌಕಟ್ಟಿನಲ್ಲಿ ಬದುಕಲು ಇಚ್ಛಿಸದ ಯುವ ಪೀಳಿಗೆ, ಅವಿಭಕ್ತ ಕುಟುಂಬ ಎಂಬ ಪದದ ಅರ್ಥವನ್ನು ಕೇಳಿಲ್ಲ ಹಾಗೂ ಎಷ್ಟೋ ಮಂದಿಗೆ ಇದರ ಮಹಾಮೂಲ್ಯ ಅರ್ಥವೇ ಆಗಿಲ್ಲ. ವಾಗಿಲ್ಲ ಎಂದರೆ ತಪ್ಪಾಗಲಾರದು.

ಯಾಂತ್ರಿಕ ಬದುಕಿನಲ್ಲಿ ದಿನದ ಆರಂಭದಿಂದ ಕೊನೆಯವರೆಗೂ ಮನುಷ್ಯನ ಸಂಬಂಧ ಹಾಗೂ ಮನುಷ್ಯತ್ವದ ಜತೆ ಅರ್ಥಪೂರ್ಣವಾಗಿ ಜೀವಿಸುವ ಬದಲು ತಾಂತ್ರಿಕತೆಯ ಹೊಸ ಆವಿಷ್ಕಾರದ ಒಡನೆ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾನೆ. ಈ ಹಿಂದೆ ಇದ್ದ ಆರೋಗ್ಯ ಕರ ಜೀವನ ಈಗಿನ ಮನುಕುಲದಲ್ಲಿ ಕಾಣೆಯಾಗಿದೆ. ಈಗಿನ ಯುಗದ ಅಥವಾ ಕಾಲದ ಹೊಸ ಆವಿಷ್ಕಾರದ ಪ್ರಮುಖ ಆಕರ್ಷಣೆ ಮೊಬೈಲ್ ಫೋನ್. ಮಕ್ಕಳಿಂದ- ವಯಸ್ಸಾ ದವರ ತನಕ ಎಲ್ಲರ ಬಳಿ ಇರಲೇಬೇಕಾದ ಅನಿವಾರ್ಯ ವಸ್ತು ಈ ಮೊಬೈಲ್ ಫೋನ್.

ಇದರಿಂದ ಉಪಯೋಗಗಳೇನೋ ಇದೆ, ಈ ಹಿನ್ನೆಲೆಯಲ್ಲೇ ಇಂದು ಎಲ್ಲರ ಬಳಿ ಕನಿಷ್ಠ ಒಂದು ಮೊಬೈಲ್ ಫೋನ್ ಆದರೂ ಇದ್ದೇ ಇರುತ್ತದೆ. ಆದರೆ ಆ ತಂತ್ರಜ್ಞಾನದ ಸಮರ್ಥ ಬಳಕೆ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬುದು ಪ್ರಶ್ನೆ. ಒಂದೆಡೆ ಉಪಗ್ರಹ ಸಂಪರ್ಕದಿಂದ ರೇಡಿಯೋ ತರಂಗಗಳ ಮೂಲಕ ಮೊಬೈಲ್ ಸೆಟ್ಟಿಗೆ ಬರುವ ಮೆಸೇಜ್, ಕಾಲ, ನೋಟಿಫಿ ಕೇಶನ್‌ಗಳು ವಿಕಿರಣವನ್ನು ಹೊರ ಹಾಕುತ್ತದೆ. ಮನುಷ್ಯನ ದೇಹಕ್ಕೆ ಈ ವಿಕಿರಣಗಳು ತುಂಬಾ ಅಪಾಯಕಾರಿ ಎಂಬ ವಿಷಯ ಬಹಳಷ್ಟು ಮಂದಿಗೆ ಗೊತ್ತಿದೆ. ಆದರೆ ಇನ್ನೊಂದೆಡೆ, ಇದನ್ನೂ ಹೊರತುಪಡಿಸಿ ತೀರಾ ಹಾವಳಿಗಿಟ್ಟುಕೊಂಡಿರುವುದು ಇದರಲ್ಲಿನ ಆನ್ಲೈನ್ ಬೆಟ್ಟಿಂಗ್ ಗೇಮಿಂಗ್.

ಇಂಥ ಕಂಪನಿಗಳು ಬಿಸಿನೆಸ್ ರೂಪದಲ್ಲಿ ಮನುಷ್ಯರನ್ನು ಹಾಗೂ ಮನುಷ್ಯತ್ವವನ್ನು ನಾಶ ಮಾಡುತ್ತಿರುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಬೆಳೆಯುತ್ತಿರುವ ತಂತ್ರಜ್ಞಾನ ಬಳಕೆಯ ಅನಿವಾರ್ಯ ಸನ್ನಿವೇಶ ಮತ್ತು ಯುವ ಪೀಳಿಗೆಯ ತಂತ್ರeನ ಆಧಾರಿತ ಬೇಡಿಕೆಯನ್ನು ಆನ್ಲೈನ್ ಬೆಟ್ಟಿಂಗ್, ಗೇಮಿಂಗ್ ಕಂಪನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕೈಗೆಟುಕುವ ಬೆಲೆಯಲ್ಲಿ
ಸ್ಮಾರ್ಟ್ ಫೋನ್‌ಗಳು, ಅಗ್ಗದ ಇಂಟರ್ನೆಟ್ ಹಾಗೂ ಉನ್ನತ ಪ್ರೊಫೈಲ್ ಗೇಮಿಂಗ್ ಕಂಪನಿ ಇವೆಂಟುಗಳು ಯುವ
ಸಮೂಹ ವನ್ನು ಉತ್ತೇಜಿಸುತ್ತಿವೆ.

ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್ ಗೇಮ್ಸನ ಸಹವಾಸ ಯುವಕರಲ್ಲಿ ಬಿಡಿಸಲಾಗದ ಚಟವಾಗಿ ಪರಿವರ್ತನೆ ಆಗುತ್ತಿದೆ. ಸಾಲ
ಮಾಡಿ ಹಣ ತಂದು ಇಂತಹ ಆನ್ಲೈನ್ ಗೇಮ್‌ಗಳಲ್ಲಿ ತೊಡಗಿಸಿ, ಬೆಟ್ಟಿಂಗ್ ಆಡುವ ಹವ್ಯಾಸ ಸೃಷ್ಟಿಯಾಗಿದೆ. ಇದು ಮಾನಸಿಕ ಗೀಳಾಗಿ ಪರಿವರ್ತನೆ ಆಗುತ್ತಿದೆ. ಶಾಲಾ ಕಾಲೇಜಿನ ಪಠ್ಯಪುಸ್ತಕ ಓದು ಹಾಗೂ ಭವಿಷ್ಯದ ಕಡೆ ಗಮನ ಕಡಿಮೆ ಮಾಡಿಕೊಂಡು ತಮ್ಮನ್ನೇ ತಾವು ಇಂತಹ ಗೀಳಿನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಾನಸಿಕತೆ ಹಾಳು ಮಾಡುವ ವಿಷವು ಯುವಕರ ಮೆದುಳನ್ನು ಆವರಿಸಿಕೊಳ್ಳುತ್ತಿದೆ. ಒಂದು ಕಡೆ ಮಾದಕ ವಸ್ತುಗಳ(ಡ್ರಗ್ಸ್) ದಾಸರಾಗುತ್ತಿರುವ ಯುವ ಸಮೂಹವು ಈ ರೀತಿ ಆನ್ಲೈನ್ ಬೆಟ್ಟಿಂಗ್ ಗೇಮ್ಸಗೂ ದಾಸರಾಗುತ್ತಿದೆ.

ಡ್ರಗ್ಸ್ ಅನ್ನು ಉಚಿತವಾಗಿ ಪೂರೈಕೆ ಮಾಡಿ ದಾಸರನ್ನಾಗಿ ಪರಿವರ್ತಿಸಿ ಮುಂದೆ ಸಾಲ ಮಾಡಿಯಾದರೂ ಕೊಳ್ಳುವ ಮನಃಸ್ಥಿತಿ ರೂಪಿಸುವ ರೀತಿ ಯ, ಆನ್ಲೈನ್ ಗೇಮ್ಸ್ ನಲ್ಲಿಯೂ ಉಚಿತ ಅಥವಾ ಗೇಮಿಂಗ್ ಕಂಪನಿಗಳಿಂದಲೇ ಹಣ ನೀಡಿ, ಕ್ರಮೇಣ ಚಟವಾಗಿ ಪರಿವರ್ತಿಸಿ ಸಾಲ ಮಾಡಿಯಾದರೂ ಆಡುವ ಮನಃಸ್ಥಿತಿ ಕಲ್ಪಿಸಲಾಗುತ್ತಿದೆ. ಈ ಹಿಂದೆ ಹಳ್ಳಿ- ದಿಲ್ಲಿ ಎನ್ನದೇ ಸಾರ್ವಜನಿಕ ಪ್ರದೇಶ ದಲ್ಲಿಯೇ ಜೂಜು ಸರ್ವೇಸಾಮಾನ್ಯ ಆಗಿತ್ತು. ಆದರೆ ಈಗ ಹಳೆಯ ಜೂಜು ಎನ್ನುವ ವಿಚಾರಕ್ಕೆ ಮುಂಬಡ್ತಿ ಕೊಟ್ಟು ‘ಆನ್ಲೈನ್ ಗೇಮ್ಸ್ ‘ ಎಂದು ಮರುನಾಮಕರಣವಾಗಿ ಎಲ್ಲರ ಮನಃಸ್ಥಿತಿ ಹಾಗೂ ನಿದ್ರೆ ಹಾಳು ಮಾಡಲಾಗು ತ್ತಿದೆ. ಕಷ್ಟ ಪಟ್ಟು ದುಡಿದಿರುವ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕೆಂಬ ಅತಿಯಾಸೆಯಿಂದ ಸಂಪಾದಿಸಿರುವ ಹಣವನ್ನು ಕೈಚೆಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಕಂಡು ಬಂದಿರುವ ಸಂಗತಿ.

ಹೌದು, ಇದೊಂದು ಮಾನಸಿಕ ರೋಗವಾಗಿ ಪರಿವರ್ತನೆ ಆಗುತ್ತಿದೆ ಎಂಬುದನ್ನು ಮನೋವೈದ್ಯರು ಪ್ರತಿ ಪಾದಿಸುತ್ತಿದ್ದಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಕೂಡ ದಾಖಲಾಗಿದೆ. ಕೌರವರು ಮತ್ತು ಪಾಂಡವರ ನಡುವೆ ನಡೆದ ಜೂಜು, ದ್ವಾಪರ ಯುಗದಲ್ಲಿ ನಡೆದ ಮಹಾಭಾರತ ಯುದ್ಧಕ್ಕೆ ಸಾಕ್ಷಿಯಾಗಿದೆ. ಇದನ್ನು ತಿಳಿದೂ, ಇಂದಿನ ಪ್ರಜಾಪ್ರಭುತ್ವ ಸರಕಾರದಲ್ಲಿ ಎರಡು ವಿಧದ ಜೂಜಾಟಗಳು ಈ ಯುಗವನ್ನು ಅಂತ್ಯದತ್ತ ಕೊಂಡೊಯ್ಯುತ್ತಿದೆ ಎನ್ನುವ ಆತಂಕ ಕಾಡುತ್ತಿದೆ.
ಸರಕಾರದ ಪರವಾನಗಿ ಇಲ್ಲದಂತಹ ಲಾಟರಿ, ಮಟ್ಕಾ ಅಂತಹ ಜೂಜಾಟಗಳು ಕ್ರಮೇಣ ನಿರ್ಬಂಧಕ್ಕೆ ಒಳಗಾಗಿವೆ.

ಇನ್ನು ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಗೇಮ್‌ಗಳನ್ನು ಆಡಲು ಎಷ್ಟೋ ಸಿನಿ ಮತ್ತು ಕ್ರಿಕೆಟ್ ತಾರೆಯರು ನೇರವಾಗಿ ಮಾಧ್ಯಮಗಳ ಜಾಹೀರಾತು ನೀಡಿ, ಜನರನ್ನು ಪ್ರಚೋದನೆಗೆ ಒಳ ಪಡಿಸುತ್ತಿರುವುದನ್ನು ನೋಡಿದರೆ ಸರಕಾರದ ಸಮ್ಮತಿ ಇರಬಹುದೇ ಎನಿಸುತ್ತಿದೆ. ಈ ದ್ವಂದ್ವ ನಿಲುವಿಗೆ ಉತ್ತರವೇನು? ಸರಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ, ದಿಟ್ಟ ನಿಲುವು ಕೈಗೊಳ್ಳುವುದು ಸೂಕ್ತ. ಆನ್‌ಲೈನ್ ಜೂಜಿನ ನಿರ್ವಾಹಕರು ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಆಪ್‌ಗಳ ಜತೆಗೆ ವಿವಿಧ ಗೇಮಿಂಗ್ ಆಪರೇಟರ್  ಗಳು, ನಿರ್ದಿಷ್ಟವಾಗಿ ವೃತ್ತಿಪರ ಕ್ರೀಡಾ ಲೀಗ್‌ಗಳು, ತಂಡ ಗಳು ಮತ್ತು ಸಿನಿ-ಕ್ರೀಡಾ ಸ್ಟಾರ್‌ಗಳೊಂದಿಗೆ ಲಾಭದಾಯಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಭಾರತದಲ್ಲಿ ತಕ್ಷಣವೇ ಗುರುತಿಸಲ್ಪಡುವ ಕ್ರಿಕೆಟ್ ತಾರೆಯರು ಹಾಗೂ ಚಲನಚಿತ್ರ ತಾರೆಯರ ಸಂಖ್ಯೆ ಗಣನೀಯವಾಗಿದೆ. ಅವರಲ್ಲಿ ಹಲವರು ಆನ್ಲೈನ್ ಬೆಟ್ಟಿಂಗ್ ಮತ್ತು ಫ್ಯಾಂಟಸಿ ಕ್ರೀಡೆಗಳನ್ನು ಬಹಿರಂಗ ವಾಗಿ ಪ್ರಾಯೋಗಿಸುತ್ತಿದ್ದಾರೆ. ಈ ಅಭಿಯಾನಗಳು ನೈಜ ಹಣದ ಗೇಮಿಂಗ್‌ನ ಮೇಲೆ ನೇರವಾದ ಸಾಮಾಜಿಕ ಪ್ರಭಾವವನ್ನು ಬೀರಿದೆ ಮತ್ತು ಯುವ ಪೀಳಿಗೆ ಸಾರ್ವಜನಿಕ ಸ್ವೀಕಾರದ ಮೇಲೆ ಮತ್ತಷ್ಟು ಶಾಶ್ವತ ಪರಿಣಾಮಗಳು ಬೀರುತ್ತಿದೆ. ನರೇಂದ್ರ ಮೋದಿ ಅವರ ಸರಕಾರ ಹಲವಾರು ಕ್ರೀಡಾ ಯೋಜನೆಗಳಿಂದ, ಯುವಜನತೆಯನ್ನು ಪ್ರೋತ್ಸಾಹಿಸುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕ್ಷೇತ್ರಗಳಿಂದ ಗುರು ತಿಸಿಕೊಳ್ಳುತ್ತಿರುವ ಭಾರತದಲ್ಲಿ, ಇಂತಹ ನಕಾರಾತ್ಮಕ ಬೆಳವಣಿ
ಗೆಗೆ ಕಡಿವಾಣ ಹಾಕಿದಾಗ ಮಾತ್ರ ಭವ್ಯ ಭಾರತವಾಗುವಲ್ಲಿ ಸಂಶಯವಿಲ್ಲ. ಭಾರತೀಯರು ಅದರಲ್ಲೂ ದಕ್ಷಿಣ ಭಾರತದ ಜನತೆಯ ದೈಹಿಕ ಕಟ್ಟು ಬಲು ಸ್ಟ್ರಾಂಗ್. ಆದರೆ ಎಷ್ಟೋ ಕ್ರೀಡೆಗಳಲ್ಲಿ ನಮ್ಮ ಯುವಜನತೆ ಭಾಗವಹಿಸದಿರುವುದು ದೈಹಿಕ ದೌರ್ಬಲ್ಯವಲ್ಲ, ಅದರ ಬಗ್ಗೆ ಇರುವ ನಿರ್ಲಕ್ಷ್ಯ. ಇಷ್ಟು ಜನಸಂಖ್ಯೆ ಇರುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡೆಗಳಾದ ಫುಟ್ಬಾಲ್‌ನಲ್ಲಿ ಭಾರತದ ತಂಡವು ಈಗಿನ ಫೀಫಾ ವರ್ಲ್ಡ್ ಕಪ್‌ನಲ್ಲಿ ಭಾಗವಹಿಸದಿರುವುದು ವಿಷಾದನೀಯ. ಏಷ್ಯನ್ ಗೇಮ್ಸ್, ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ನಂತಹ ಕ್ರೀಡಾಕೂಟಗಳಲ್ಲಿ ಹಾಗೂ ಕ್ರಿಕೆಟ್‌ನಂತಹ ಹೆಗ್ಗಳಿಕೆಯ ಆಟಗಳಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಭಾರತ ಗೆಲುವು ಎಲ್ಲಿದೆ ಎಂದು ಹುಡುಕಾಡುವ ಪರಿಸ್ಥಿತಿ ಬಂದಿದೆ.

ಇದಕ್ಕೆಲ್ಲ ಒಂದು ರೀತಿಯ ಕಾರಣವೆಂದರೆ ಆನ್‌ಲೈನ್‌ಗೇಮ್ಸ್ ಎಂದರೆ ತಪ್ಪಾಗಲಾರದು. ಇಂದಿನ ಬಹಳಷ್ಟು ಆರೋಗ್ಯವಂತ ಯುವಕರು ಆನ್‌ಲೈನ್ ಗೇಮ್ಸನಲ್ಲಿ ವೇಳೆ ಕಳೆಯುತ್ತ ಸೋಲು ಗೆಲುವಿನ -ಲಿತಾಂಶದ ಉದ್ವೇಗದಲ್ಲಿ ಮಾನಸಿಕ ಒತ್ತಡ ನಂತರ ಖಿನ್ನತೆಗೆ ಒಳಗಾಗಿ ಧೂಮಪಾನ, ಮಧ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿರುವುದು ನಮ್ಮ ದುರ್ವಿಧಿ.
ಭಾರತದಲ್ಲಿ ಆಚರಣೆಯಲ್ಲಿರುವಂತೆ ಬೆಟ್ಟಿಂಗ್‌ನಿಂದ ಹಲವಾರು ಇತರ ನಕಾರಾತ್ಮಕ ಪರಿಣಾಮಗಳಿವೆ.

ಕ್ರೀಡೆಗಳಲ್ಲಿನ ಭ್ರಷ್ಟಾಚಾರವು ಬುಕ್ಕಿಗಳು ಮತ್ತು ಬೆಳೆಯುತ್ತಿರುವ ಪ್ರಭಾವವನ್ನು ಹೊಂದಿರುವ ಇತರ ದೊಡ್ಡ- ಪ್ರಮಾಣದ ಮಧ್ಯವರ್ತಿಗಳಂತಹ ಸುಗಮಗೊಳಿಸುವವರ ಅಸ್ತಿತ್ವವನ್ನು ಪೋಷಿಸುತ್ತದೆ ; ಮ್ಯಾಚ್-ಫಿಕ್ಸಿಂಗ್‌ನ ನೆರಳು. ಅನಿಯಂತ್ರಿತ ಹಣದ ಹರಿವು ಅನುಸರಿಸಲು ಸವಾಲಾಗಿದೆ, ಇದು ಮನಿ ಲಾಂಡರಿಂಗ್ ಮತ್ತು ಕ್ರಿಮಿನಲ್ ಮರುಹೂಡಿಕೆಗೆ ಕಾರಣವಾಗುತ್ತದೆ.
ಇಂತಹ ಆಟಗಳಲ್ಲಿ ಸೋತ ಕಡೆ ಕೊನೆಗೊಳ್ಳುವವರಿಗೆ ಹಣ ಕಾಸಿನ ಪರಿಣಾಮಗಳು ಗಣನೀಯವಾಗಿರಬಹುದು; ಯಾವುದೇ ನಿಯಂತ್ರಕ ನಿರ್ಬಂಧಗಳು ಬೆಟ್ಟಿಂಗ್ ಮಾಡುವವರಿಗೆ ಯಾವುದೇ ರಕ್ಷಣೆಯಾಗಿಲ್ಲ.

ಕೋವಿಡ್ ಲಾಕ್‌ಡೌನ್ ಬಳಿಕ ಸುಮಾರು ೪೦ ಕೋಟಿಯಷ್ಟು ಆನ್‌ಲೈನ್ ಗೇಮ್ಸ ಬಳಕೆದಾರರಿದ್ದಾರೆ. ಆನ್ ಲೈನ್ ಗೇಮ್ಸ ಆಡುವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಲ್ಲಿ ಬೆಟ್ಟಿಂಗ್ ಗೇಮ್ಸ ಆಡುವರ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದೆ. ಪ್ರತಿದಿನ ಸುಮಾರು ೧೦೦೦-೨೦೦೦ ಜನರು ಭಾರತದಲ್ಲಿ ಆನ್‌ಲೈನ್ ಬೆಟ್ಟಿಂಗ್ ಗೇಮ್ಸ್ ಗೆ ಹೊಸ ಬಳಕೆದಾರರಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಕುರಿತು ಏಕರೂಪ ನಾಗರಿಕ ಕಾನೂನು ಇದ್ದರೆ ಉತ್ತಮ. ರಾಜ್ಯ ಸರಕಾರ ಆನ್ ಲೈನ್ ಬೆಟ್ಟಿಂಗ್ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಿದರೆ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಕೌಶಲ್ಯಾಭಿ ವೃದ್ಧಿಗೆ ಬೇಕಾಗಿರುವ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವಂತಹ ಗೇಮ್‌ಗಳನ್ನು ಆಡುವಲ್ಲಿ ಅರ್ಥವಿರುತ್ತದೆ.  ಸರಿಯಾದ ಮಾರ್ಗದಲ್ಲಿ ನೂತನ ಅನ್ವೇಷಣೆಯತ್ತ ಗಮನಹರಿಸಿದರೆ ಸಾರ್ಥಕವಾಗುತ್ತದೆ. ಅದೃಷ್ಟವನ್ನು ಪ್ರಶ್ನಿಸುವಂತಹ ಗೇಮ್‌ಗಳತ್ತ ಮನ ಸೋಲದಿರಿ.

(ಲೇಖಕರು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರು)

error: Content is protected !!