Friday, 1st December 2023

ಸಾಮೂಹಿಕ ಅಸ್ಥಿ ವಿಸರ್ಜನೆ ಶ್ಲಾಘನೀಯ

ಅಭಿಮತ

ನಂ.ಶ್ರೀಕಂಠ ಕುಮಾರ್‌

ಸನಾತನ ಹಿಂದೂ ಧರ್ಮದಲ್ಲಿ ಮನುಷ್ಯನ ಹುಟ್ಟಿನಿಂದ ಜೀವನದ ಅಂತ್ಯದವರೆಗೆ ಷೋಡಶ ಸಂಸ್ಕಾರಗಳನ್ನು ಪಡೆಯಲಿದ್ದು ಅಂತಿಮವಾಗಿ ನಿಧನದ ನಂತರ ಸೂಕ್ತ ರೀತಿಯಲ್ಲಿ ವ್ಯಕ್ತಿಯ ಶವ ಸಂಸ್ಕಾರ ಹಾಗೂ ಅಸ್ಥಿ ವಿಸರ್ಜನೆಯನ್ನು ನಡೆಸಿದಲ್ಲಿ ಮೃತನ ದೇಹ ಮುಕ್ತಿ ಪಡೆದು ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂಬುದು ನಂಬಿಕೆ.

ಆದರೆ ಇಂದು ದೇಶಾದ್ಯಂತ ಹರಡಿರುವ ಕರೋನಾದಿಂದಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರು ಮೃತದೇಹವನ್ನು ಪಡೆದು ಅಂತಿಮ ಸಂಸ್ಕಾರವನ್ನು ಮಾಡಲು ಸಾಧ್ಯವಾಗದೇ ಇರುವುದು, ಅಲ್ಲದೇ ಶವ ಸಂಸ್ಕಾರದ ನಂತರ ಮೃತಪಟ್ಟ ವ್ಯಕ್ತಿಯ ಅಸ್ಥಿಯನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗದೆ ಚಿತಾಗಾರದ ಬಿಟ್ಟಿದ್ದು ನೋವಿನ ಸಂಗತಿ.

ಇದೇ ಸಂದರ್ಭದಲ್ಲಿ ಕರೋನಾ ಸೊಂಕಿತರಲ್ಲದ ವಯೋ ಧರ್ಮಾನುಸಾರ, ಇನ್ನಿತರ ಕಾಯಿಲೆಗಳಿಂದ ನಿಧನರಾದ ವ್ಯಕ್ತಿಗಳ ಶವ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸುತ್ತಿದ್ದು ಮಾರನೇ ದಿನದ ಅಸ್ಥಿ ವಿಸರ್ಜನಾ ಕಾರ್ಯಕ್ಕೆ ಸೂಕ್ತ ರೀತಿಯಲ್ಲಿ ಯಾವುದೇ ಅವಕಾಶವಿಲ್ಲದೆ ಮೃತನ ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ.

ಇತ್ತೀಚೆಗೆ ಕರೋನಾ ಸಂದರ್ಭದಲ್ಲಿ ಮೃತಪಟ್ಟ ಹಿಂದೂ ವ್ಯಕ್ತಿಗಳ ಅನಾಥ ಆಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖಾಂತರ ಸಂಗ್ರಹಿಸಿದ್ದು ಸುಮಾರು 800ಕ್ಕೂ ಹೆಚ್ಚು ಮೃತಪಟ್ಟ ವ್ಯಕ್ತಿ ಗಳ ಅಸ್ಥಿಯನ್ನು ಸೂಕ್ತ ರೀತಿಯಲ್ಲಿ ಧಾರ್ಮಿಕ ಕ್ರಿಯೆಯೊಡನೆ ಸಾಮೂಹಿಕವಾಗಿ ಪವಿತ್ರ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಿರು ವುದು ಸ್ತುತಾರ್ಯ ಕಾರ್ಯ.ಮನುಷ್ಯ ಮೃತಪಟ್ಟ ನಂತರ ಕೊನೆಯದಾಗಿ ಮುಕ್ತಿ ನೀಡುವಂಥ ಮಹತ್ವದ ಕಾರ್ಯ ಅಸ್ಥಿ ವಿಸರ್ಜನೆ.

ಇದೀಗ ಅನಾಥ ಅಸ್ಥಿ ವಿಸರ್ಜನೆ ಕಾರ್ಯವು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆದಿರುವುದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರಲ್ಲಿ ನೆಮ್ಮದಿ ತಂದಿದೆ. ಕರೋನಾ ಸಂಕಷ್ಟ ಸಮಯದಲ್ಲಿ ದೇಶದ ಪ್ರಥಮವಾಗಿ ಇಂಥ ಕಾರ್ಯಕ್ಕೆ ಚಾಲನೆ ಯನ್ನು ನೀಡಿರುವ ಮಾನ್ಯ ಸಚಿವರು ಅಭಿನಂದನಾರ್ಹರು. ಮುಕ್ತಿ ನೀಡುವಂಥ ಧಾರ್ಮಿಕ ವಿಧಿ ವಿಧಾನಗಳನ್ನು ಹಲವಾರು ವರ್ಷಗಳಿಂದ ಯಾವುದೇ ಲೋಪವಿಲ್ಲದೇ ನಡೆಸಿಕೊಂಡು ಬರುತ್ತಿರುವ ಶ್ರೀರಂಗ ಪಟ್ಟಣದ ವೇ ಬ್ರ ಶ್ರೀ ಡಾ. ಭಾನುಪ್ರಕಾಶ್ ಶರ್ಮಾ ಅವರೂ ಸಹ ಈ ಪ್ರಮುಖ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡು ಮೃತ ವ್ಯಕ್ತಿಗೆ ಮುಕ್ತಿ ನೀಡಿರುವುದು ಎಂದಿಗೂ ಸ್ಮರಣೀಯ.

ಅಂತೆಯೇ ರಾಜ್ಯದ ಎಡೆ ಮೃತಪಟ್ಟ ಹಿಂದೂ ವ್ಯಕ್ತಿಯ ಕುಟುಂಬಗಳು ಎದುರಿಸುತ್ತಿದ್ದ ಅಸ್ಥಿ ವಿಸರ್ಜನೆಯ ಸಮಸ್ಯೆಯನ್ನು ಸೂಕ್ತ ಸಮಯದಲ್ಲಿ ಸರಕಾರದ ಮಾನ್ಯ ಕಂದಾಯ ಮಂತ್ರಿಗಳ ಗಮನಕ್ಕೆ ತಂದು ಈ ಸಮಸ್ಯೆಯ ಪರಿಹಾರಕ್ಕೆ ಕಾರಣರಾದ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್. ಸಚ್ಚಿದಾನಂದ ಮೂರ್ತಿರವರು ಹಾಗೂ ಸರಕಾರದ ಸಂಬಂಧ ಪಟ್ಟ ಅಧಿಕಾರಿಗಳಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಸಹ ಚಿತಾಗಾರದಲ್ಲಿ ಶವ ಸಂಸ್ಕಾರದ ನಂತರ ಮಾರನೇ ದಿನ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಯಾವುದೇ ತೊಡಕಾಗದಂತೆ ಸರಕಾರ ಗಮನ ಹರಿಸಿ ಅವಕಾಶ ಕಲ್ಪಿಸಲಿ.

Leave a Reply

Your email address will not be published. Required fields are marked *

error: Content is protected !!