Thursday, 30th November 2023

ರಾಜಕೀಯ ಸಂತ: ಜೆ.ಎಚ್.ಪಟೇಲ್

ಅಭಿಪ್ರಾಯ

ಸಿದ್ದು ಯಾಪಲಪರವಿ ಕಾರಟಗಿ

ಕರ್ನಾಟಕ ರಾಜಕಾರಣದ ವರ್ಣರಂಜಿತ ವ್ಯಕ್ತಿ ಜೆ.ಎಚ್.ಪಟೇಲ್ ಸದಾ ಸ್ಮರಣೀಯರು. ತುಂಬಾ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿ ಆದವರು. ದೇವೇಗೌಡರು ಅಷ್ಟೇ ಅನಿರೀಕ್ಷಿತವಾಗಿ ದೇಶದ ಪ್ರಧಾನ ಮಂತ್ರಿಗಳಾದಾಗ, ಇಲ್ಲಿ ಆ ಹುದ್ದೆಗೆ ಸಣ್ಣ ಪೈಪೋಟಿ ನಡೆಯಿತು. ಆಗ ಪಟ್ಟು ಹಿಡಿದು ಮುಖ್ಯಮಂತ್ರಿ ಸ್ಥಾನವನ್ನು ಹಟಕ್ಕೆ ಬಿದ್ದು ಪಡೆದ ಘಟನೆಯನ್ನು ಮಾಜಿ ಪ್ರಧಾನಿ ಗಳು ರಸವತ್ತಾಗಿ ವಿವರಿಸಿದ್ದಾರೆ.

ದೇವೇಗೌಡರು ಮುಖ್ಯಮಂತ್ರಿ ಆದಾಗ ಹಟ ಮಾಡಿ ಉಪ ಮುಖ್ಯಮಂತ್ರಿ ಆಗಿದ್ದರೆ ಮುಖ್ಯಮಂತ್ರಿ ಆಗುವ ಅವಕಾಶ ಸಾಧ್ಯ ವಾಗುತ್ತಿರಲಿಲ್ಲ. ಸಣ್ಣ ಪ್ರಾಯದಲ್ಲಿ ರಾಜಕೀಯ ಗಟ್ಟಿತನ ಬೆಳೆಸಿಕೊಂಡಿದ್ದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಯಾಗಲು ಪೈಪೋಟಿ ಮಾಡಿದ್ದು ಪಟೇಲರನ್ನು ಕೆರಳಿಸಿರಬಹುದು. ಆದರೆ ವಯಸ್ಸು ಮತ್ತು ಅನುಭವದ ಹಿರಿತನದ ಮೇಲೆ ಪಟೇಲರು ಮುಖ್ಯಮಂತ್ರಿ ಆದದ್ದು ಸೂಕ್ತ ನಿರ್ಣಯ.

ರಾಜಕಾರಣವನ್ನು ಹಣ ಗಳಿಸುವ ಉದ್ಯಮವೆಂದು ಪರಿಗಣಿಸದ ಮೇರು ವ್ಯಕ್ತಿತ್ವ ಪಟೇಲರದು. ವೈಯಕ್ತಿಕ ಬದುಕಿನ ಐಷಾ ರಾಮಿ ಶೋಕಿಯಾಚೆ ಕೋಟಿ ಗಟ್ಟಲೆ ಹಣ ಮಾಡುವ ದುರಾಸೆ ಪಟೇಲರಿಗೆ ಇರಲಿಲ್ಲ. ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುವ ಪುತ್ರ ವ್ಯಾಮೋಹವೂ ಇರಲಿಲ್ಲ.ಇಂದಿರಾಗಾಂಧಿ ಕುಟುಂಬ ರಾಜಕಾರಣದ ವಿರುದ್ಧ ಹೋರಾಡಿ ಅಧಿಕಾರ ಹಿಡಿದ ಪಟೇಲರು ಧೃತರಾಷ್ಟ್ರ ಪ್ರೇಮ ಬೆಳೆಸಿಕೊಳ್ಳದೆ ಮೌಲ್ಯ ಕಾಪಾಡಿಕೊಂಡರು. ವೈಯಕ್ತಿಕ ಬದುಕಿನ ದೌರ್ಬಲ್ಯಗಳನ್ನು ಮುಕ್ತವಾಗಿ ಹೇಳಿ ಕೊಂಡು ವಿವಾದಕ್ಕೆ ತೆರೆ ಎಳೆದ ಎದೆಗಾರಿಕೆ ಅದ್ಭುತ.

ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿ ಹೀಗೆ ತನ್ನ ದೌರ್ಬಲ್ಯಗಳನ್ನು ಹೇಳಿಕೊಳ್ಳಬಹುದೇ? ಎಂಬ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕೂಡ ಕೊಟ್ಟು ಹೊಸ ಬಗೆಯ ಆಲೋಚನೆಗೆ ಚಾಲನೆ ಕೊಟ್ಟರು. ಮೂಲತಃ ಪಟೇಲರು ಶ್ರೇಷ್ಠ ಅಭ್ಯಾಸಿಗಳು, ಸಾಹಿತ್ಯ, ರಾಜಕಾರಣ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಆಳವಾಗಿ ಓದಿಕೊಂಡು ಅಷ್ಟೇ ರಸವತ್ತಾಗಿ ಮಾತನಾಡುವ ಜಾದೂಗಾರ. ಅವರ ಹಾಸ್ಯ ಪ್ರಜ್ಞೆಯ ಘಟನೆಗಳು ಆಲ್ಬರ್ಟ್ ಐನ್‌ಸ್ಟಿನ್ ವ್ಯಕ್ತಿತ್ವವನ್ನು ನೆನಪಿಸುತ್ತವೆ.

ಹೆಣ್ಣು, ಹೆಂಡ ದೌರ್ಬಲ್ಯ ಎಂದು ಹೇಳಿಕೊಳ್ಳುವ ವ್ಯಕ್ತಿ ಖಂಡಿತವಾಗಿ ಲಂಪಟನಾಗಿರಲು ಸಾಧ್ಯವಿಲ್ಲ. ಪಟೇಲರು ಮತ್ತು ಓಶೋ ವಿಚಾರಧಾರೆಗಳಲ್ಲಿ ತುಂಬಾ ಸಾಮ್ಯತೆಯನ್ನು ಕಂಡುಕೊಂಡಿದ್ದೇನೆ. ಕಾಮದ ಅಘಾದತೆಯನ್ನು ಓಶೋ ಧ್ಯಾನಕ್ಕೆ ಹೋಲಿಸುತ್ತಾನೆ. ಧ್ಯಾನ ಮತ್ತು ಕಾಮ ಏಕಾಗ್ರತೆಯಿಂದ ಸಾಧ್ಯ. ಪ್ರತಿ ಯೊಬ್ಬ ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗವಾದ
ಕಾಮವನ್ನು ವೈಭವೀಕರಿಸುವ ಭಾರತೀಯ ಮನೋಧರ್ಮವನ್ನು ಓಶೋ ಬಹಿರಂಗವಾಗಿ ಟೀಕಿಸಿದ.

ಅದೇ ಜಾಡಿನಲ್ಲಿ ಪಟೇಲರು ವಿಧಾನ ಸಭಾ ಕಲಾಪಗಳಲ್ಲಿ ಮುಕ್ತವಾಗಿ ಚರ್ಚಿಸಿ ಇಂತಹ ಹೊಸ ವಿಷಯಗಳನ್ನು ವಿವರಿಸಿ, ವಿಪಕ್ಷ ನಾಯಕ ಖರ್ಗೆ ಅವರು ಪಟೇಲರ ವೈಯಕ್ತಿಕ ವಿಷಯ ಚರ್ಚಿಸುವುದಕ್ಕೆ ತೆರೆ ಎಳೆದರು. ರಾಜ್ಯದ ಅಭಿವೃದ್ಧಿ ವಿಷಯ ಗಳಿಗೆ ಮೀಸಲಿರಬೇಕಾದ ಸಮಯವನ್ನು ವೈಯಕ್ತಿಕ ವಿಷಯಗಳ ಕುರಿತು ಚರ್ಚೆ ಮಾಡಿ ಸಮಯ ಹಾಳು ಮಾಡಬಾರದು ಎಂಬುದನ್ನು ಎರಡೂವರೆ ದಶಕದ ಹಿಂದೆಯೇ ಪಟೇಲರು ಕಲಿಸಿ ಹೋಗಿದ್ದಾರೆ.

ಆದರೂ ಇತ್ತೀಚೆಗೆ ಮಂತ್ರಿಗಳೊಬ್ಬರ ಸಿ.ಡಿ. ಪ್ರಕರಣವನ್ನು ತಿಂಗಳು ಗಟ್ಟಲೆ ಚರ್ಚಿಸಿ ಬೆಲೆ ಬಾಳುವ ಸಮಯ ಹಾಳು ಮಾಡಿದ್ದನ್ನು ಸ್ಮರಿಸಬಹುದು. ಪಟೇಲರು ಮುಖ್ಯಮಂತ್ರಿಯಾಗಿ ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸಿದರು. ಸಂಪುಟ ಸಹೋದ್ಯೋಗಿಗಳಿಗೆ ಅತಿ ಹೆಚ್ಚು ಸ್ವಾತಂತ್ರ್ಯ ಕೊಟ್ಟ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಯಾವುದೇ ವಿವಾದ
ಹಗರಣಗಳು ಜರುಗದಂತೆ ನೋಡಿಕೊಂಡರು. ಮುಖ್ಯವಾಗಿ ಬೇನಾಮಿ ಹಣ ಸಂಗ್ರಹಿಸಿ ಹೈಕಮಾಂಡಿಗೆ ಮುಟ್ಟಿಸುವ ವಾತಾವರಣ ಆಗ ಇರಲಿಲ್ಲ.

ವೈಯಕ್ತಿಕವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಹಣ ಮಾಡುವ ಮನಸ್ಥಿತಿ ಅವರಿಗಿರಲಿಲ್ಲ. ನೀರಾವರಿ ಯೋಜನೆ ಗಳು, ಕೂಡಲ ಸಂಗಮ ಅಭಿವೃದ್ಧಿ, ನೂತನ ಜಿಲ್ಲೆ ರಚನೆಯಂತಹ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡರು. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಆಂತರಿಕ ಕಚ್ಚಾಟ ಮತ್ತು ಸ್ವಪಕ್ಷೀಯ ಭಿನ್ನಮತವನ್ನು ನಿರಂತರ ಎದುರಿಸಿದ ಸಮರ್ಥ ಮುಖ್ಯ ಮಂತ್ರಿ ಎನಿಸಿಕೊಂಡರು. ಈಗ ಯಡಿಯೂರಪ್ಪ ಅವರು ಅದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಪಟೇಲರಿಗೆ ಇರುವ ದಿಟ್ಟತನ ಮತ್ತು ಪ್ರಾಮಾಣಿಕತೆ ಇಂದಿನ ಮುಖ್ಯಮಂತ್ರಿಗಳಿಗೆ ಇಲ್ಲ.

ಪ್ರತಿಯೊಂದು ವಿಷಯಗಳನ್ನು ಆಳವಾಗಿ ಅಭ್ಯಸಿಸಿ, ಗಂಭೀರವಾಗಿ ಮಂಡಿಸುವ ತಾಕತ್ತು ಇಂದು ಯಾವ ನಾಯಕರಲ್ಲಿ ಕಾಣುತ್ತಿಲ್ಲ. ಇಡೀ ದಿನ ರಾಜಕಾರಣ ಮಾಡಿ ಕಾಲ ಕಳೆಯದೆ ಬದುಕನ್ನು ರಸವತ್ತಾಗಿ ಅನುಭವಿಸಿದರು. ಓದು, ಬರಹ, ಮೋಜು,
ಇಸ್ಪೀಟು ಆಟ, ಕುಡಿತಗಳ ಮಧ್ಯೆ ತಾವೊಬ್ಬ ಸೂಕ್ಷ್ಮ ಸಂವೇದನೆಯ ಆಡಳಿತಗಾರ ಎಂಬುದನ್ನು ಸಾಬೀತು ಮಾಡಿದರು.

ಅವರ ಸಂಪುಟ ಸಹೋದ್ಯೋಗಿಗಳ ಪ್ರಾಮಾಣಿಕತೆಯನ್ನು ಗೌರವಿಸಿ ಹೆಚ್ಚು ಸ್ವಾತಂತ್ರ್ಯ ನೀಡಿದ್ದರು. ಸಿದ್ದರಾಮಯ್ಯ ಅವರ ಹಣಕಾಸು ಇಲಾಖೆಯಲ್ಲಿ ಅನಾವಶ್ಯಕ ಹಸ್ತಕ್ಷೇಪ ಮಾಡದೇ ಉತ್ತಮ ಬಜೆಟ್ ಮಂಡಿಸುವ ವಾತಾವರಣ ಕಲ್ಪಿಸಿದರು. ಎಚ್.ಜಿ.ಗೋವಿಂದೇಗೌಡರ ಪ್ರಾಮಾಣಿಕತೆಯ ಪರಿಣಾಮವಾಗಿ ಶಿಕ್ಷಣ ಇಲಾಖೆ ಅನೇಕ ಬದಲಾವಣೆಗಳನ್ನು ಕಂಡಿತು. ಸಾವಿರಾರು ಶಿಕ್ಷಕರು ಮೆರಿಟ್ ಆಧಾರದ ಮೇಲೆ ನಯಾಪೈಸೆ ಲಂಚ ನೀಡದೆ ನೇಮಕಗೊಂಡರು.

ಸಹಕಾರ ಇಲಾಖೆಯಲ್ಲಿ ಹೊಸ ಕಾನೂನು ರೂಪಿಸಲು ಸಚಿವ ಎಸ್.ಎಸ್.ಪಾಟೀಲ ಅವರಿಗೆ ಅವಕಾಶ ಮಾಡಿಕೊಟ್ಟರು. ಎಂ.ಪಿ.ಪ್ರಕಾಶ್, ಸಿಂದ್ಯ ಹಾಗೂ ಇತರ ಸಚಿವರು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಿದರು. ನೂತನ ಜಿಯ ಘೋಷಣೆ ಸುಲಭದ ಮಾತಾಗಿರಲಿಲ್ಲ. ಗದಗ, ಹಾವೇರಿ ಎರಡು ಜಿಲ್ಲೆಗಳ ರಚನೆ ಅಸಾಧ್ಯವಾಗಿತ್ತು. ಉಗ್ರ ಹೋರಾಟವನ್ನು ಗಮನಿಸಿ, ಎರಡು ಜಿಲ್ಲೆಗಳನ್ನು ಘೋಷಣೆ ಮಾಡಿ ಐತಿಹಾಸಿಕ ನಿರ್ಣಯ ತೆಗೆದುಕೊಂಡರು.

ಆಂತರಿಕ ಕಚ್ಚಾಟದಲ್ಲಿದ್ದ ಕಾರಣದಿಂದ ಬೆಳಗಾವಿ ವಿಭಜನೆ ಮಾಡುವ ರಿಸ್ಕ್ ತೆಗೆದುಕೊಳ್ಳದೇ ಜಾಣ್ಮೆ ಮೆರೆದರು. ಬಸವೇಶ್ವರ ಐಕ್ಯ ಸ್ಥಳ ಕೂಡಲ ಸಂಗಮ ಅಭಿವೃದ್ಧಿಗೆ ಪ್ರಾಧಿಕಾರ ಸ್ಥಾಪಿಸಿ, ಇಡೀ ದೇಶದ ಗಮನ ಸೆಳೆದರು. ಇಂದು ಗೌಡರ ಸಾಧನೆಗಳನ್ನು ಸ್ಮರಿಸಲು ಅವರ ಪರಿವಾರದವರಿಗೆ ಸಾಧ್ಯವಾಗಿದೆ. ಅವರೂ ಕೂಡ ತಮ್ಮ ತಂದೆಯ ಹಾಗೆ ಉನ್ನತ ಅಧಿಕಾರ ಅನುಭವಿಸಿದ ಸುದೈವಿಗಳು. ಆದರೆ ವಿಷಾಧನೀಯ ಸಂಗತಿ ಎಂದರೆ, ಪಟೇಲರಿಂದ ಲಾಭ ಪಡೆದ ರಾಜಕೀಯ ನಾಯಕರಿಗೆ ಪಟೇಲರ ಕೊಡುಗೆಯನ್ನು ಸ್ಮರಿಸುವ ಔದಾರ್ಯ ಮಾಯವಾಗಿದೆ. ಅವರ ಕುಟುಂಬದ ಸದಸ್ಯರು ರಾಜಕೀಯ ಮೊಗಸಾಲೆಯಿಂದ
ದೂರ ಸರಿದಿದ್ದಾರೆ.

ಅವರ ವಿನೂತನ ಆಡಳಿತ ವೈಖರಿ ಮೂಲಕ ಅನುಕೂಲ ಪಡೆದುಕೊಂಡ ಜನರಾದರೂ ಪಟೇಲರ ಕೊಡುಗೆಯನ್ನು ಮರೆಯಬಾರದು. ಐತಿಹಾಸಿಕ ಪ್ರಜ್ಞೆ ಕೊರತೆಯಿಂದ ಸಾಧಕರು ಕಾಲ ಗರ್ಭದಲ್ಲಿ ಮರೆಯಾಗಬಾರದು. ಪಟೇಲರ ಆಡಳಿತದ ರಜತ ಮಹೋತ್ಸವದ ಸಡಗರ ಹೊಸ ಜಿಯ ಜನರಲ್ಲಿ ಮೂಡಿದರೆ, ಅದೇ ನಾವು ಪಟೇಲರಿಗೆ ತೋರಿಸಬಹುದಾದ ನುಡಿ ಗೌರವ.

Leave a Reply

Your email address will not be published. Required fields are marked *

error: Content is protected !!