Sunday, 29th January 2023

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ವಿಶ್ವವಾಣಿ ವರದಿ ಪರಿಣಾಮ

ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ಕೃಷಿ ಅಧಿಕಾರಿಗಳಿಂದ ಬೀಗ

ಬೆರಕೆ ಗೊಬ್ಬರ ಪೂರೈಕೆ ಆರೋಪ

ಮಂಡ್ಯ: ನಕಲಿ ಆರ್ಗ್ಯಾನಿಕ್ ರಸಗೊಬ್ಬರ ತಯಾರಿಕಾ ಕಾರ್ಖಾನೆಯನ್ನು ಸೀಜ್ ಮಾಡಲಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚೆತ್ತ ಕೃಷಿ
ಇಲಾಖಾಧಿಕಾರಿಗಳು ಶನಿವಾರ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿದ್ದ ನಕಲಿ ಜೆ.ಕೆ.ಆರ್ಗ್ಯಾನಿಕ್ ಕಾರ್ಖಾನೆಗೆ ಬೀಗ ಜಡಿದಿದ್ದಾರೆ.

ಬೆಂಗಳೂರು ಮೂಲದ ಕಾಂತರಾಜು ಎಂಬುವವರಿಗೆ ಸೇರಿದ ಈ ಜೆ.ಕೆ. ಆರ್ಗ್ಯಾನಿಕ್ ಕಾರ್ಖಾನೆ ಯಲ್ಲಿ ಮಣ್ಣು ಹಾಗೂ ಅವಧಿ ಮೀರಿದ ಸಿಮೆಂಟ್, ಚಗರೆ ಪುಡಿ, ತಿಪ್ಪೆ ಗೊಬ್ಬರ ಬೆರೆಸಿ ರೈತರಿಗೆ ಮಾರಾಟ ಮಾಡುತ್ತಿದ್ದನ್ನು ರೈತರು ಪತ್ತೆ ಹಚ್ಚಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟ ವಾಗಿತ್ತು. ಇದರ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಕೃಷಿ ಅಧಿಕಾರಿಗಳು ಪರವಾನಗಿ ಇಲ್ಲದೆ ಶೇಖರಣೆ ಮಾಡಿರುವ 2800 ಅಕ್ರಮ ದಾಸ್ತಾನು ರಸಗೊಬ್ಬರ ಚೀಲಗಳಿದ್ದ ಗೋದಾಮನ್ನು ವಶಕ್ಕೆ ಪಡೆದು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಯೋಗಾಲಯಕ್ಕೆ ವಸ್ತು ರವಾನೆ: ಕಾರ್ಖಾನೆಯನ್ನು ಸೀಜ್ ಮಾಡಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಉಪ ಕೃಷಿ ನಿರ್ದೇಶಕಿ ಮಾಲತಿ ಜೆ.ಕೆ. ಆರ್ಗ್ಯಾ ನಿಕ್ ಕಾರ್ಖಾನೆ ಸಾವಯವ ಮತ್ತು ಎರೆಗೊಬ್ಬರ ಉತ್ಪಾದನೆಗೆ ಪರವಾನಗಿ ಪಡೆದಿದ್ದು ಜತೆಗೆ ಮಣ್ಣು ಸುಧಾರಕಗೊಳ್ಳಲು ಚೇಳು ಮಣ್ಣು ಹೊಂದಿರುವ ಕೊಡಗು ಮತ್ತು ಚಿಕ್ಕಮಗಳೂರಿಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಪರವಾನಗಿ ಅವಶ್ಯಕತೆ ಇಲ್ಲವೆಂದರು.

ಗೋದಾಮಿನಲ್ಲಿ ಸಿಕ್ಕಿರುವ ೧೧ ಮಾದರಿಯ ವಸ್ತುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕಳುಹಿಸಿದ್ದು ಮುಂದಿನ ಒಂದು ವಾರದೊಳಗಾಗಿ ವರದಿ ಕೈ ಸೇರಲಿದ್ದು ಜಿಲ್ಲಾಧಿಕಾರಿಗಳೊಂದಿಗೆ ಸಾಧಕ, ಬಾಧಕಗಳನ್ನು ಚರ್ಚಿಸುವುದಾಗಿ ಹೇಳಿದರು. ರೈತರು ಹಾಗೂ ವಿವಿಧ ಸಂಘಟನೆಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿ ಕ್ರಮ ವಹಿಸಿದ್ದು ಅಕ್ರಮವಾಗಿ ಶೇಖರಣೆ ಮಾಡುವ ಜತೆಗೆ ಪರವಾನಗಿ ಇಲ್ಲದೆ ರಸ ಗೊಬ್ಬರವನ್ನು ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ರಸಗೊಬ್ಬರ ನಿಯಂತ್ರಣ ಆದೇಶದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ಹೇಳಿದರು.

ಈ ವೇಳೆ ಗ್ರಾ.ಪಂ. ಸದಸ್ಯ ಪ್ರೀತಮ್, ವೃತ್ತ ನಿರೀಕ್ಷಕ ಹರೀಶ್, ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ್, ಜಾರಿದಳ ಸಹಾಯಕ ನಿರ್ದೇಶಕ ಗುರುಮೂರ್ತಿ, ತಾಂತ್ರಿಕ ಕೃಷಿ ಅಧಿಕಾರಿಗಳಾದ ಮಂಜು, ರೂಪಶ್ರೀ ಇತರರಿದ್ದರು.

error: Content is protected !!