Tuesday, 23rd April 2024

ನಾಳೆ ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಮಾ.2ರ ಗುರುವಾರ ಪುರಭವನದಲ್ಲಿ ಬಜೆಟ್ ಮಂಡನೆ ನಡೆಯಲಿದೆ.

ಚುನಾವಣೆ ಹೊಸ್ತಿಲಲ್ಲಿ ಇರುವಾಗ ಜನರ ನಿರೀಕ್ಷೆಗಳು ಹೆಚ್ಚಾಗಿದ್ದು, ಯಾವ ಯಾವ ಯೋಜನೆಗಳು ಘೋಷಣೆ ಯಾಗಬಹುದು ಎಂಬ ಕುತೂಹಲ ಮೂಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ.

ಹೀಗಾಗಿ, ಎರಡೂ ವರ್ಷ ಗಳಿಂದಲೂ ಅಧಿಕಾರಿಗಳೇ ಆಯವ್ಯಯ ಮಂಡಿಸಿ, ಸರ್ಕಾರದ ಅನುಮೋದನೆ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯೂ ಅಧಿಕಾರಿಗಳೇ ಗುರುವಾರ ಬೆಳಗ್ಗೆ 11ಕ್ಕೆ ಪುರಭವನದಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.

ಈ ಬಾರಿ ಬರೋಬ್ಬರಿ 10 ಸಾವಿರ ಕೋಟಿಗೂ ಅಧಿಕ ಮೌಲ್ಯದ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಬಜೆಟ್‌ ನಲ್ಲಿ ಬಿಬಿಎಂಪಿಗೆ ನೀಡಿದ ಅನುದಾನ ಹಾಗೂ ಸ್ವಂತ ವರಮಾನವು ಇದರಲ್ಲೇ ಸೇರಿದೆ. 2022 – 23ನೇ ಸಾಲಿನಲ್ಲಿ ಬಿಬಿಎಂಪಿ 10,484.28 ಕೋಟಿ ರೂಪಾಯಿ ಗಾತ್ರದ ಬಜೆಟ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಬಳಿಕ ಸರ್ಕಾರ ಬಜೆಟ್ ಗಾತ್ರವನ್ನು 377.5 ಕೋಟಿಗಳಷ್ಟು ಹೆಚ್ಚಿಸಿ ಒಪ್ಪಿಗೆ ನೀಡಿತ್ತು.

ಇನ್ನು, ರಾಜ್ಯ ಸರ್ಕಾರವು ತನ್ನ 2023 – 24ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಗೆ ಸುಮಾರು 6 ಸಾವಿರ ಕೋಟಿ ಅನುದಾನ ನೀಡಿದೆ.

ಈ ಅನುದಾನ ಸೇರಿದಂತೆ ಬಿಬಿಎಂಪಿಯ ಆದಾಯದ ಮೂಲಗಳಿಂದ ಸಂಗ್ರಹಿಸಲಾದ ಮೊತ್ತ ಸೇರಿಸಿ 10 ಸಾವಿರ ಕೋಟಿಗೂ ಅಧಿಕ ಮೊತ್ತದ ಬಜೆಟ್‌ ಮಂಡನೆ ಆಗುವ ನಿರೀಕ್ಷೆ ಇದೆ. ಬುಧವಾರ ಬಜೆಟ್‌ ಪುಸಕ್ತ ಮುದ್ರಣಗೊಳ್ಳಲಿದ್ದು, ಗುರುವಾರ ಬೆಳಗ್ಗೆ 11ಕ್ಕೆ ಪುರಭವನದಲ್ಲಿ ಮಂಡಿಸಲಾಗುವುದು ಎಂದು ಹಣಕಾಸು ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರವಿರುವ ಕಾರಣ ಚುನಾವಣೆಗೆ ಪೂರಕವಾದ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಗಳಿವೆ.

ಚುನಾವಣಾ ದೃಷ್ಟಿಯಿಟ್ಟುಕೊಂಡಿರುವ ಸರ್ಜಾರ ಬೆಂಗಳೂರಿಗರನ್ನು ಒಲಿಸಿಕೊಳ್ಳಲು ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಒತ್ತು ನೀಡಿದರೆ ಆಸ್ತಿ ತೆರಿಗೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದ ಕೆಲವು ಯೋಜನೆಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ. ಸಂಘಗಳಿಗೆ ನಿಗಮದಿಂದ ಮೀಸಲಿಟ್ಟ ಅನುದಾನ ಕುಗ್ಗಲಿದೆ ಎಂದು ಮೂಲಗಳು ಸೂಚಿಸಿವೆ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ಹಂಚಿಕೊಂಡಿದ್ದು, “ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ನಾಗರಿಕ ಸೌಕರ್ಯ ಗಳಿಗೆ ಅನುದಾನ ಮೀಸಲಿಡುವುದನ್ನು ಹೊರತುಪಡಿಸಿ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಈ ಬಾರಿಯ ಬಜೆಟ್ ಗಮನಹರಿಸುತ್ತದೆ. ಬಜೆಟ್ ಗಾತ್ರವು ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿದಂತೆಯೇ ಇರುತ್ತದೆ. ಬಿಬಿಎಂಪಿ ಈ ವರ್ಷ 9,000 ಕೋಟಿ ರೂಪಾಯಿಗಳ ಬಜೆಟ್ ಮಂಡಿ ಸುವ ನಿರೀಕ್ಷೆ ಇದೆ” ಎಂದು ಹೇಳಿದ್ದಾರೆ.

ಇನ್ನು, ಬಜೆಟ್ ಮಂಡನೆಗೆ ಎರಡರಿಂದ ಮೂರು ತಿಂಗಳು ಇದ್ದಾಗಲೇ ಪೂರ್ವಭಾವಿಯಾಗಿ ಜನರಿಂದ ಎಲ್ಲ ವಾರ್ಡ್ ಅಭಿವೃದ್ಧಿ, ವಸ್ತುಸ್ಥಿತಿ ಕುರಿತು ಜನಾಗ್ರಹ ಸಂಸ್ಥೆ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿದೆ.

error: Content is protected !!