Saturday, 10th April 2021

ಬಾಂಗ್ಲಾದಲ್ಲಿ ಪಾಕಿಸ್ತಾನ ಇನ್ನೂ ಜೀವಂತ !

ಅಭಿಮತ

ಶರತ್ ಚಂದ್ರ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಾಂಗ್ಲಾದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ಮೇಲೂ ಅಲ್ಲಿ ಹಿಂಸಾ ಚಾರ ನಿಂತಿಲ್ಲ. ಮೋದಿ ಭೇಟಿಯ ಹಿನ್ನೆಲೆಯಲ್ಲಿ ತೀವ್ರಗಾಮಿ ಇಸ್ಲಾಮಿಕ್ ಗುಂಪು ಹೆಫಾಝತ್ – ಇ – ಇಸ್ಲಾಂನ ನೂರಾರು ಜನ, ಅಲ್ಪಸಂಖ್ಯಾತ ಹಿಂದೂಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ನಡೆಸಿದೆ.

ಘರ್ಷಣೆಯಲ್ಲಿ 11 ಜನ ಸತ್ತ ಮೇಲೂ ಬೆಂಕಿ ಆರಿಲ್ಲ. ಈ ತೀವ್ರಗಾಮಿ ಸಂಘಟನೆಗಳ ಪ್ರಕಾರ ಮೋದಿ ಮುಸ್ಲಿಂ ವಿರೋಧಿ. ಇದು ಅವರ ಗಲಭೆಗೆ ಕಾರಣವಾದರೆ, ಇಸ್ಲಾಮಿಕ್ ದೇಶದಲ್ಲಿ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿ ಪೂಜೆ  ಮಾಡಿದ್ದು ಇವರ ನಿದ್ದೆಗೆಡಿಸಿದೆ.

2017ರಲ್ಲಿ ಇದೇ ಸಂಘಟನೆ ಅವಾಮಿ ಓಲಾಮ ಲೀಗ್ ಜತೆಗೂಡಿ ಬಾಂಗ್ಲಾದೇಶ ಸರ್ವೋಚ್ಚ ನ್ಯಾಯಾಲಯದ ಮುಂದೆ ಇರುವ ನ್ಯಾಯದೇವತೆಯ ಮೂರ್ತಿಯನ್ನು ತೆಗೆದು ಹಾಕಲು ಪ್ರತಿಭಟನೆ ನಡೆಸಿತು. ಸಾವಿರಾರು ಜನ ರಸ್ತೆಗಿಳಿದು ನ್ಯಾಯಾಲಯದ ಮುಂದೆ ಪ್ರತಿಭಟಿಸಿದರು. ಕೊನೆಗೂ ಇವರ ಬೇಡಿಕೆಗೆ ಒಪ್ಪಿದ ಶೇಖ್ ಹಸೀನಾ ಸರಕಾರ ಮೂರ್ತಿಯನ್ನು ನ್ಯಾಯಾಲಯದ ಮುಂದಿನಿಂದ ತೆಗೆದು ಅಲ್ಲಿಂದ ಸ್ವಲ್ಪ ದೂರ, ಜನರ ಗಮನಕ್ಕೆ ಬಾರದ ಜಾಗಕ್ಕೆ ಸ್ಥಳಾಂತರಿಸಿತು. ಇದರ ಮುಖಂಡ ಜುನೈದ್ ಬಾಬುನಗರಿ ಇತ್ತೀಚಿಗೆ ಸರಕಾರಕ್ಕೆ ಮಾಡಿದ 4 ಬೇಡಿಕೆ ನೀವು ಓದಬೇಕು.

ಇಸ್ಕಾನ್ ಅವರ ಚಟುವಟಿಕೆಗಳನ್ನು ನಿಲ್ಲಿಸುವುದು, ಅಹ್ಮದೀಯರನ್ನು ಮುಸಲ್ಮಾನರಲ್ಲ ಎಂದು ಘೋಷಿಸುವುದು, ಫ್ರಾನ್ಸ್ ರಾಯಭಾರಿ ಕಚೇರಿಯನ್ನು ಮುಚ್ಚಿಸುವುದು ಹಾಗೂ ಫ್ರಾನ್ಸ್ ವಿರುದ್ಧ ಸದನದಲ್ಲಿ ನಿರ್ಧಾರ ತೆಗೆದುಕೊಳ್ಳುವುದು. ಇವನ್ನು ಓದಿದಾಗ ಕಾಝಿನಜ್ರುಲ್ ಇಸ್ಲಾಂ ಅವರ ನೆನಪಾಗುತ್ತದೆ. ಬಾಂಗ್ಲಾದೇಶದ ರಾಷ್ಟ್ರ ಕವಿಯಾದ ಇವರು ಕಾಳಿ ದೇವಿಗೆ ಅರ್ಪಣೆ ಯಾಗಿ ಶ್ಯಾಮಾ ಸಂಗೀತವನ್ನು ರಚಿಸಿದರು.

ಇವರು ರಚಿಸಿದ ಭಕ್ತಿಗೀತೆಗಳು ಇಂದಿಗೂ ಕೋಲ್ಕತಾದ ದೇವಸ್ಥಾನಗಳಲ್ಲಿ ಹಾಡುತ್ತಾರೆ. ಎಲ್ಲಿಯ ಕಾಝಿನಜ್ರುಲ್ ಇಸ್ಲಾಂ, ಎಲ್ಲಿಯ ಈ ತೀವ್ರಗಾಮಿಗಳು? ಬಂಗಾಳದಲ್ಲಿ ಇಸ್ಲಾಮಿನ ಪ್ರಾಬಲ್ಯ 13 ನೇ ಶತಮಾನದಿಂದಲೇ ಪ್ರಾರಂಭವಾಯಿತು. ಮುಂದಿನ 700 ವರ್ಷ ಖಿಲ್ಜಿ, ಮೊಘಲರು, ನವಾಬರು, ಆಂಗ್ಲರು ಇವರೆಲ್ಲರೂ ಬಂಗಾಳವನ್ನು ಆಳಿದರು.1901ರ ಜನಗಣತಿ ಮಾಡುವ ವೇಳೆಗೆ ಬಂಗಾಳದಲ್ಲಿ ಹಿಂದೂಗಳು ಶೇ.33ರಷ್ಟು ಇದ್ದರು. ಬಂಗಾಳದ ಕ್ರಾಂತಿಕಾರಿಗಳಿಂದ, ಬುದ್ಧಿಜೀವಿಗಳಿಂದ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಆಂಗ್ಲರು ಧರ್ಮದ ಆಧಾರದ ಮೇಲೆ 1905ರಲ್ಲಿ ಬಂಗಾಳದ ವಿಭಜನೆ ಮಾಡಿಬಿಟ್ಟರು. ಈ ವಿಷಬೀಜವು ಹೆಮ್ಮರವಾಗಿ 1943ರ ವೇಳೆಗೆ ಫಜ್ಲುಲ್ ಹಕ್ ನೇತೃತ್ವದಲ್ಲಿ ಪ್ರತ್ಯೇಕ ದೇಶದ ಬೇಡಿಕೆ ಇಟ್ಟರು. 1947ರ ಸ್ವಾತಂತ್ರ್ಯ ನಂತರ ಬಂಗಾಳವನ್ನು ಪಾಕಿಸ್ತಾನ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ತನ್ನ ಭಾರತ ವಿರೋಧಿ ಕಾರ್ಯಕ್ಕೆ ಪೂರ್ವ ಪಾಕಿಸ್ತಾನದ ಅಲ್ಪಸಂಖ್ಯಾತರನ್ನು ತನ್ನ ಪ್ರಯೋಗಾಲಯದ ಬಲಿಪಶುವನ್ನಾಗಿ ಮಾಡಿಕೊಂಡಿತು.

1945 ರ ಭಾರತ – ಪಾಕಿಸ್ತಾನದ ಯುದ್ಧದ ಸಂದರ್ಭದ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಪ್ರಾರಂಭವಾಯಿತು. ಇದು ತಾರಕ್ಕಕೇರಿದ್ದು 1971ರಲ್ಲಿ. ಪ್ರತ್ಯೇಕ ದೇಶದ ಬೇಡಿಕೆ ಎತ್ತಿದ್ದ ಬಾಂಗ್ಲಾದೇಶೀಯರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನ್ಯ ‘”operation searchlight’ ಮೂಲಕ ವಿವರಿಸಲಾಗದ ಅಸಂಖ್ಯಾತ ಅತ್ಯಾಚಾರ, ಕಗ್ಗೊಲೆಗಳನ್ನು ಮಾಡಿತು. ಲಕ್ಷಾಂತರ ಜನ ಭಾರತಕ್ಕೆ ಶರಣಾರ್ಥಿಯಾಗಿ ಬಂದರು.

ಕೊನೆಗೆ 1971ರಲ್ಲಿ ಭಾರತೀಯ ಸೈನ್ಯ ಪೂರ್ವ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ವಿಮೋಚನೆಗೆ ದಾರಿ ಮಾಡಿ ಕೊಟ್ಟಿತು. ಪಾಕಿಸ್ತಾನವು ಹೋದರೂ ಅದರ ಬುದ್ಧಿ ಬಿಡದ ಹಲವು ಸಂಘಟನೆಗಳು ಅದೇ ಅಲ್ಪಸಂಖ್ಯಾತ ವಿರೋಧಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಚಟುವಟಿಕೆಯೆಂದರೆ ಪ್ರತಿಭಟನೆ, ಸತ್ಯಾಗ್ರಹವಲ್ಲ.

ಲೂಟಿ, ಧ್ವಂಸ, ಅತ್ಯಾಚಾರ. 1965ರಿಂದ 2013ರವರೆಗೆ 1.3 ಕೋಟಿ ಹಿಂದೂಗಳು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ. ಜಾತ್ಯಾತೀತತೆಯ ಡಂಗೂರ ಬಾರಿಸುವ ಬುದ್ಧಿಜೀವಿ, ಅಂತಾರಾಷ್ಟ್ರೀಯ ಸಂಘ – ಸಂಸ್ಥೆಗಳಿಗೆಲ್ಲ ಭಾರತವು ನಾಲಗೆಯ ಮೇಲಿರುತ್ತದೆ. ಆದರೆ ಬಾಂಗ್ಲಾದೇಶದಲ್ಲಿ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಷಯ ಬಂದಾಗ ಅದೇನೋ ಹಿಂಜರಿಕೆ, ಜಾಣ ಮರೆವು.

Leave a Reply

Your email address will not be published. Required fields are marked *