Friday, 27th May 2022

ಗಣಪತಿ ಉಳ್ವೇಕರ್- ಭೀಮಣ್ಣ ನಡುವೆ ಪರಿಷತ್ ಆಯ್ಕೆಗೆ ನೇರ ಹಣಾಹಣಿ

VIdhana Parishad

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆಯ್ಕೆಯಾಗಿದ್ದಾರೆ. ಇದರಿಂದ ಮೀನುಗಾರ ಮುಖಂಡ ಗಣಪತಿ ಉಳ್ವೇಕರ್ ಹಾಗೂ ಭೀಮಣ್ಣ ನಡುವೆ ಪರಿಷತ್ ಆಯ್ಕೆಗೆ ನೇರ ಹಣಾಹಣಿ ನಡೆಯಲಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿತ್ತು. ಹಲವರ ಹೆಸರೂ ಸಹ ಮುಂಚೂಣಿಯಲ್ಲಿತ್ತು. ಆದರೆ ಅಂತಿಮವಾಗಿ ಈ ಹಿಂದಿನ ಚುನಾವಣೆಯಲ್ಲಿ ಆಪತ್ಬಾಂಧವರಂತಿದ್ದ ಭೀಮಣ್ಣ ಅವರನ್ನು ಅಂತಿಮಗೊಳಿಸಿ, ಪರಿಷತ್ ಚುನಾವಣೆಗೆ ಸಜ್ಜಾಗಿದೆ.

ಕಳೆದ ನಾಲ್ಕು ಬಾರಿ ಪರಿಷತ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಮೊದಲಿನಷ್ಟು ಸದೃಢವಾಗಿಲ್ಲ. ಇದರಿಂದ ಅಭ್ಯರ್ಥಿ ಆಯ್ಕೆ ಜಟಿಲವಾಗಿತ್ತು. ಆದರೆ ಬಿಜೆಪಿ ಮೀನುಗಾರ ಮುಖಂಡನಿಗೆ ಟಿಕೇಟ್ ನೀಡಿರುವ ಕಾರಣ ದೊಡ್ಡ ಸಮುದಾಯವಾದ ನಾಮಧಾರಿ ಸಮುದಾಯದ ಭೀಮಣ್ಣಗೆ ಕಾಂಗ್ರೆಸ್ ಮಣೆ ಹಾಕಿದೆ.

ಬಂಡಾಯ ?
ಬಿಜೆಪಿಯಲ್ಲಿ ಪರಿಷತ್ ಸ್ಥಾನಕ್ಕೆ ೨೩ ಕ್ಕೂ ಅಧಿಕ ಜನರು ಆಕಾಂಕ್ಷಿಗಳಾಗಿದ್ದರು. ಆದರೆ ಈ ಹಿಂದೆ ಟಿಕೇಟ್ ನೀಡಿದ್ದ ಉಳ್ವೇಕರ್ ಅವರಿಗೆ ಈ ಬಾರಿಯೂ ಟಿಕೇಟ್ ನೀಡಿದ ಪರಿಣಾಮ ಬಂಡಾಯದ ಬಿಸಿ ಕಾಡುತ್ತಿದೆ. ಈಗಾಗಲೇ ಭಾಸ್ಕರ ನಾರ್ವೇಕರ್ ಬಂಡಾಯ ಪ್ರದರ್ಶನ ಮಾಡಿದ್ದಾರೆ. ಇನ್ನುಳಿದಂತೆ ಹಲವು ನಾಮಧಾರಿ ಮುಖಂಡರು ಆಕಾಂಕ್ಷಿಗಳಾಗಿದ್ದರೂ ಅವರನ್ನು ಕಡೆಗಣಿಸಲಾಗಿದೆ. ಇದರಿಂದ ಬಿಜೆಪಿಯ ನಾಮಧಾರಿ ಮುಖಂಡರೂ ಕಾಂಗ್ರೆಸ್ ಗೆ ಹಿಂಬಾಗಿಲಿನಿಂದ ಬೆಂಬಲ ಕೊಡುವ ಸಾಧ್ಯತೆಗಳಿರುವ ಕಾರಣ ಭೀಮಣ್ಣ ಅವರನ್ನು ಆಯ್ಕೆ ಮಾಡಲಾಡಗಿದೆ. ಅಲ್ಲದೇ ಪ್ರಮುಖ ಸಮುದಾಯವಾದ ಬ್ರಾಹ್ಮಣ ಹಾಗೂ ನಾಮಧಾರಿಗಳ ಮುಖಂಡರಿಗೆ ಬಿಜೆಪಿ ಮಣೆ ಹಾಕದ ಕಾರಣ ಅವರ ಮತಗಳಲ್ಲಿ ಕಾಂಗ್ರೆಸ್ ಗೆ ಲಾಭವಾಗುವ ಸಾಧ್ಯತೆಗಳಿದೆ.

ಗೆಲುವು ಸಾಧ್ಯತೆ :
ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾಯಿತ ಸದಸ್ಯರು ಸಮವಾಗಿದ್ದಾರೆ. ಆದರೆ ಶಾಸಕರು, ಸಂಸದರು ಬಿಜೆಪಿ ಮೇಲುಗೈ ಹೊಂದಿದೆ. ಇದೇ ಲೆಕ್ಕಾಚಾರದಲ್ಲಿ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಬಿಜೆಪಿಯಿದೆ. ಆದರೆ ಹಿಂದಿನಿಂದಲೂ ಹಿಡಿತ ಹೊಂದಿರುವ ಕಾಂಗ್ರೆಸ್ ಈ ಬಾರಿ ಸ್ವಲ್ಪ ಹೆಚ್ಚು ಕಷ್ಟ ಪಟ್ಟಲ್ಲಿ ಗೆಲುವು ಸಾಧ್ಯವಿದೆ ಎಂಬ ಅಭಿಪ್ರಾಯ ಹೊಂದಿದೆ.

ಕೊನೆ ಅವಕಾಶ ?
ಭೀಮಣ್ಣ ನಾಯ್ಕ ಗೆ ಇದು ರಾಜಕೀಯವಾಗಿ ಒಂದು ರೀತಿಯ ಕೊನೆಯ ಅವಕಾಶ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸೇರ್ಪಡೆಯಾದ ನಂತರವೇ ಇದು ಮೂರನೇ ಚುನಾವಣೆಯಾಗಿದೆ. ಒಂದು ಬಾರಿ ಶಿರಸಿ, ನಂತರ ಯಲ್ಲಾಪುರ ಉಪ ಚುನಾವಣೆ ಈಗ ಪರಿಷತ್ ಗೆ ಅಭ್ಯರ್ಥಿಯಾಗಿದ್ದಾರೆ. ಅದಕ್ಕೂ ಮೊದಲು ಸಮಾಜವಾದಿ ಪಕ್ಷದಿಂದ ಶಾಸಕ, ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತಗೊಂಡಿದ್ದರು‌. ಈ ಹಿನ್ನಲೆಯಲ್ಲಿ ಇದು ಒಂದು ರೀತಿಯಾಗಿ ಭೀಮಣ್ಣ ಅವರಿಗೆ ಕೊನೆ ಅವಕಾಶ ಹಾಗೂ ರಾಜಕೀಯ ಜೀವನದ ಅಗ್ನಿ ಪರೀಕ್ಷೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದೆಯೂ ಬಂದಿತ್ತು ಅವಕಾಶ !
ಭೀಮಣ್ಣ ನಾಯ್ಕ ಗೆ ಈ ಹಿಂದಿನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಒದಗಿಬಂದಿತ್ತು. ಅಲ್ಲದೇ ಆಗ ಕಾಂಗ್ರೆಸ್ ಜಿಲ್ಲೆಯಲ್ಲಿ ಸಶಕ್ತವಾಗಿತ್ತು. ಆದರೆ ಶಾಸಕನಾಗಿ, ವಿಧಾನಸಭೆಗೆ ಪ್ರವೇಶಿಸಬೇಕು ಎಂಬ ಮಹದಾಸೆಯಿಂದ ಪರಿಷತ್ ಸದಸ್ಯರಾಗುವ ಸಂದರ್ಭ ಕೈ ತಪ್ಪಿತ್ತು. ಆದರೆ ಈಗ ಪುನಃ ಅವಕಾಶ ಒದಗಿ ಬಂದಿದ್ದು, ಯಾವ ರೀತಿಯಲ್ಲಿ ಬಿಜೆಪಿ ಸೋಲಿಸಲು ಕಾರ್ಯತಂತ್ರ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರ್.ವಿ.ಡಿ vs ಹೆಬ್ಬಾರ್ !
ಪರಿಷತ್ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎನ್ನುವುದಕ್ಕಿಂತ ಆರ್.ವಿ.ದೇಶಪಾಂಡೆ ಹಾಗೂ ಶಿವರಾಮ ಹೆಬ್ಬಾರ್ ನಡುವೆ ಎನ್ನುವಂತಾಗಿದೆ. ಕಾಂಗ್ರೆಸ್ ನಲ್ಲಿ ಇದ್ದ ಸಂದರ್ಭದಿಂದಲೂ ಇಬ್ಬರ ಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಾಗಿದೆ. ಈಗ ಪಕ್ಷಗಳೂ ಬೇರೆ ಬೇರೆಯಾಗಿರುವ ಕಾರಣ ಇಬ್ಬರಿಗೂ ಗೆಲ್ಲ ಬೇಕಾದ ಒತ್ತಡವಿದೆ. ಒಂದೆಡೆ ದೇಶಪಾಂಡೆಗೆ ಪರಿಷತ್ ಸ್ಥಾನ ಉಳಿಸಿಕೊಳ್ಳುವ ಒತ್ತಡವಾದರೇ, ಇನ್ನೊಂದೆಡೆ ಹೆಬ್ಬಾರ್ ಗೆ ಇದೇ ಮೊದಲ ಬಾರಿಗೆ ಪರಿಷತ್ ನಲ್ಲಿ ಕಮಲ ಅರಳಿಸುವ ಜವಾಬ್ದಾರಿಯಿದೆ.