Monday, 5th December 2022

ಮುಲಾಜು ಬೇಡ, ಇಲಾಜು ಬೇಕು

ಅಕ್ರಮವಾಗಿ ವಿದೇಶಿ ದೇಣಿಗೆ ಸಂಗ್ರಹ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ನೆಲೆಗಳ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾದಳ ಸಾಕಷ್ಟು ಶಂಕಿತರ ಹೆಡೆಮುರಿ ಕಟ್ಟಿದೆ.

ಇದೊಂದು ದಿಟ್ಟಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವಾಗಲೋ ನಡೆಯಬೇಕಿದ್ದ ಈ ಕಾರ್ಯಾಚರಣೆಗೆ ಈಗ ಮುಹೂರ್ತ ಒದಗಿದೆ. ಪ್ರಾಯಶಃ, ಪೂರಕ ದಾಖಲೆಯ ಸಂಗ್ರಹಣೆ, ದಾಳಿಗೊಂದು ಸಕಾರಣ ಇಂಥವನ್ನು ಗಟ್ಟಿಮಾಡುವಲ್ಲಿ ‘ವ್ಯವಸ್ಥೆ’ ಇಷ್ಟೂ ದಿನ ವ್ಯಸ್ತವಾಗಿದ್ದಿರಬಹುದು ಎಂದು ಭಾವಿಸೋಣ. ದಾಳಿಯ ವಿಳಂಬಕ್ಕೆ ಕಾರಣವೇನೇ ಇರಲಿ, ಈ ಕಾರ್ಯಾಚರಣೆಯು ವಿದ್ರೋಹಿಗಳಿಗೆ ಚಾಟಿಯೇಟು ನೀಡಿ ಚುರುಕು ಮುಟ್ಟಿಸಿರುವುದಂತೂ ಹೌದು.

ತಮಗೆ ಬದುಕಲು ನೆಲೆ ಒದಗಿಸಿದ ನೆಲಕ್ಕೇ ಎರಡು ಬಗೆಯುವಂಥ ಕುತ್ಸಿತ ಚಿಂತನೆಗಳನ್ನು ಸರ್ವಥಾ ಸಹಿಸಲಾಗದು. ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ್ದ ಇಂಥ ವ್ಯಕ್ತಿ- ಶಕ್ತಿ-ಸಂಘಟನೆಗಳ ಮೇಲೆ ನಿಷೇಧ ಹೇರಬೇಕೆಂಬ ಕೂಗು ಈಗ ವ್ಯಾಪಕವಾಗಿದೆ. ದೇಶದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತೆಗಳಿಗೆ ಸಂಚಕಾರ ತರುವಂಥವರ ಚಹರೆ ಬಯಲಾದಾಗ ಇಂಥ ಸಾತ್ವಿಕ ಆಕ್ರೋಶ ಸಹಜವೂ ಹೌದು.

ಆದರೆ ನಿಷೇಧವೊಂದೇ ಇದಕ್ಕೆ ಪರಿಹಾರ ಅಥವಾ ಮಾರ್ಗವಾಗಲಾರದು. ಏಕೆಂದರೆ, ಯಾವುದೇ ಸಂಘ-ಸಂಸ್ಥೆಗೆ ನೋಂದಣಿ ನಿರಾಕರಿಸಲಾಗದು, ಸುಖಾಸುಮ್ಮನೆ ನಿಷೇಧ ಹೇರಲಾಗದು. ಜತೆಗೆ, ರಾಷ್ಟ್ರೀಯ ತನಿಖಾದಳವು ಈಗ ಕತ್ತರಿಸಿರುವುದು ‘ವಿದ್ರೋಹಿ-ವೃಕ್ಷ’ದ ಕೆಲ ರೆಂಬೆಕೊಂಬೆಗಳನ್ನು ಮಾತ್ರ. ಮರದ ಬೇರು ಎಷ್ಟು ಆಳಕ್ಕಿಳಿದಿದೆ, ಭೂಮ್ಯಾಂತ ರಾಳದಲ್ಲಿ ಹೇಗೆಲ್ಲ ವ್ಯಾಪಿಸಿದೆ ಎಂಬುದರ ಅಳತೆ-ಅಂದಾಜು ಆಗಬೇಕಿದೆ. ಐಸಿಸ್ ಭಯೋತ್ಪಾದಕ ಸಂಘಟನೆಗೆ ಹೊಸ ಸದಸ್ಯರನ್ನು ನೇಮಿಸುವಲ್ಲಿ ವ್ಯಸ್ತವಾಗಿದ್ದ ಪಿಎಫ್ ಐ ಸಂಘಟನೆಯು ಕರ್ನಾಟಕ, ಆಂಧ್ರಪ್ರದೇಶ, ಕೇರಳ ತಮಿಳುನಾಡು ಸೇರಿದಂತೆ ದೇಶದ ಉದ್ದಗಲಕ್ಕೂ ತನ್ನ ಕಬಂಧಬಾಹುಗಳನ್ನು ಚಾಚಿ, ಉಗ್ರವಾದದ ಚಿಂತನೆಯುನ್ನು ಯುವಮನಸ್ಸುಗಳಲ್ಲಿ ನೆಟ್ಟಿರುವ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಲು ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ.

ಹೀಗಾಗಿ ನಾನಾ ನೆಲೆಗಟ್ಟಿನಲ್ಲಿ ಕಣ್ಗಾವಲು ಮತ್ತು ತನಿಖೆಯನ್ನು ಹೆಚ್ಚಿಸಬೇಕಿದೆ. ‘ದೇಶ ಮೊದಲು’ ಎಂಬ ಆದ್ಯತಾಮಂತ್ರ ಪಠಿಸುತ್ತ ಯಾವ ಮುಲಾಜಿಲ್ಲದೆ ಇಂಥವರನ್ನು ಕಟ್ಟಿಹಾಕುವ ಮೂಲಕ ಈ ಸಮಸ್ಯೆಗೆ ಇಲಾಜು ಮಾಡಬೇಕಿದೆ.