Tuesday, 26th October 2021

ಹೆಸರು ಮಾಡಲು ನರ, ನೆಡಬೇಕು ಮರ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಮರ-ಗಿಡಗಳಿಗೆ, ವೃಕ್ಷಗಳಿಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಪರಿಸರ ಪ್ರಜ್ಞೆ ಜಾಗೃತವಾಗುತ್ತಿದೆ. ಅದರಲ್ಲೂ ಕರೋನಾ ತೀವ್ರತೆ ಅನುಭವಿಸಿದ ಮೇಲಂತೂ ಪರಿಸರ ಪ್ರೇಮಿಗಳು ಮರ, ಗಿಡಗಳ ಬೆಳವಣಿಗೆಗೆ, ಸಂರಕ್ಷಣೆಗೆ ತುಂಬಾ ಮಹತ್ವ ಕೊಡುತ್ತಿದ್ದಾರೆ. ಗೆಳೆಯ ಡಾ. ಶಿವಕುಮಾರ ಮಾಲಿಪಾಟೀಲ್ ದಂತ ವೈದ್ಯರೂ ಹೌದು, ಕವಿಯೂ ಹೌದು, ಗಿಡ ನೆಡಲು ನೀನು ಬಗ್ಗದಿದ್ದರೆ ಓ! ಮನುಜ ಆಕ್ಸಿಜನ್ ಸಿಲೆಂಡರ್ ಎತ್ತಲು ಬಗ್ಗಲೇ ಬೇಕಾಗುತ್ತದೆ. ಎಂಬ ಮಾರ್ಮಿಕವಾದ ಚುಟುಕನ್ನು ಬರೆದು ವಾಟ್ಸಾಪ್ ಗಳಲ್ಲಿ ಬಿಟ್ಟು ಜನರನ್ನು ಎಚ್ಚರಿಸಿದ್ದರು.

ಆದರೆ, ಇತ್ತೀಚಿನ ಜನರಲ್ಲಿ ಮೂಡುತ್ತಿರುವ ಪರಿಸರ ಪ್ರಜ್ಞೆಗೆ ಹೋಲಿಸಿದರೆ ಕೆಲವು ಕಡೆ ಅರಣ್ಯ ಇಲಾಖೆಯವರು, ವಿದ್ಯುತ್ ನಿಗಮದವರು ಯಾವ ಕರುಣೆ, ಎಗ್ಗು ಸಿಗ್ಗುಗಳಿಲ್ಲದೇ ಅಡ್ಡ ಬರುವ ಅಡವಿಗಳನ್ನೂ ಕತ್ತರಿಸಿ ಎಸೆದು ಬಿಡುತ್ತಾರೆ. ಮತ್ತೊಂದು ಚುಟುಕು ಈ ಅರಣ್ಯ ನಾಶದ ಕಾರ್ಯದಲ್ಲಿ ನಮ್ಮನ್ನಾಳುವ ಮಂತ್ರಿ ಮಾಗಧರ ಬಗ್ಗೆ ಬರೆದಿದ್ದು ಹಾಸ್ಯ ಲೇಪಿತವಾಗಿದ್ದರೂ ಸತ್ಯವಾದ ವಿಡಂಬನೆಯೇ ಆಗಿದೆ. ಅದೆಂದರೆ, ಡಾ. ಶಿವಕುಮಾರ ಹೀಗೆ ಬರೆಯುತ್ತಾರೆ, ‘ವಿಷಾನೀಲ CO2 ಕುಡಿದು ಮರಗಳು ನಮಗೆ ಆಕ್ಸಿಜನ್ ಕೊಡುವವು ಸಹಾಯ ಮಾಡಿದ ತಪ್ಪಿಗೆ ನಾವು, ಮರಗಳನ್ನು ಕಡಿದೆವು ಆಕ್ಸಿಜನ್‌ಗಾಗಿ ಸಹಾಯವಾಣಿ ತೆರೆದೆವು’ ಎಷ್ಟು ಸತ್ಯಸ್ಯ ಸತ್ಯವಲ್ಲವೇ ಈ ಮಾತು.

ಕವಿ ಶಿವಕುಮಾರ್ ಬರೆದ ಈ ಚುಟುಕವು ಮರಗಿಡಗಳ ಅನಿವಾರ್ಯತೆಯನ್ನು ಎತ್ತಿ ಹೇಳುತ್ತದೆ. ‘ಹುಟ್ಟಿದಾಗ ತೊಟ್ಟಿಲು ಕಟ್ಟಿಗೆ ಸತ್ತಾಗ ಸುಡಲು ಕಟ್ಟಿಗೆ ಬದುಕಿದಾಗ ಇರಲಿ ಗಿಡಮರಗಳು ನಮ್ಮೊಟ್ಟಿಗೆ’ ಹೀಗೆ ಗಿಡಮರಗಳ ಬಗ್ಗೆ ಮಾತ್ರ ಬರೆದು ಸುಮ್ಮನಾಗದ ಮಿತ್ರ ಡಾ. ಶಿವಕುಮಾರ ಪಾಟೀಲ್ ಗಂಗಾವತಿಯ ಬಿಜಿಯೆಸ್ಟ್ ದಂತ ವೈದ್ಯರಾಗಿದ್ದರೂ ಭಾನುವಾರ, ಕೇಸುಗಳು ಕಡಿಮೆ ಇದ್ದ ದಿನ, ಹಬ್ಬದ ದಿನ ಇತ್ಯಾದಿಗಳಲ್ಲಿ ಗಿಡ ನೆಡುವ, ನೆಡಿಸುವ ಕಾರ್ಯಕ್ಕಾಗಿ ಅರಣ್ಯ ಇಲಾಖೆಯವರೊಂದಿಗೆ ಊರಿನ ಗಣ್ಯರನ್ನು ಕರೆದೊಯ್ದು ಗಿಡ ಮರಗಳನ್ನು ನೆಡಿಸುವ ಒಂದು ಆಂದೋಲನವನ್ನೇ ಮಾಡುತ್ತಿದ್ದಾರೆ.

ಹಾಗೆಯೇ ನಮ್ಮೂರಿನ ಮಧುಚಂದ್ರ ಎಂಬ ಯುವಕ ಕೂಡಾ ಗಂಗಾವತಿಯ ಕೆಎಸ್‌ಆರ್‌ಟಿಸಿಯ ಕೋರಿಯರ್ ಸರ್ವೀಸ್ ನಡೆಸುತ್ತಿದ್ದು, ಪಿ.ಡಬ್ಲ್ಯೂ.ಡಿ ಕ್ಲಾಸ್ ತ್ರಿ
ಕಾಂಟ್ರ್ಯಾಕ್ಟರ್ ಕೂಡಾ ಆಗಿದ್ದರೂ ಇಡೀ ಊರು ತುಂಬಾ ಅಂಗಡಿಗಳ ಮುಂದೆ, ವಾಕಿಂಗ್ ಟ್ರ್ಯಾಕ್ ಬಳಿ ನೂರಾರು ಗಿಡಗಳನ್ನು ನೆಟ್ಟಿದ್ದಾರೆ. ಟ್ರ್ಯಾಕ್ಟರ್, ರಿಕ್ಷಾ, ಬಂಡಿಗಳಲ್ಲಿ ನೀರು ಒಯ್ದು ಹಾಕಿ ಆ ಗಿಡಗಳನ್ನೆಲ್ಲ ಪೋಷಿಸುತ್ತಿದ್ದಾರೆ. ನಾನು ಇವರನ್ನು ಗಂಡು ರೂಪದಲ್ಲಿನ ಸಾಲು ಮರದ ತಿಮ್ಮಕ್ಕ ಎಂದೇ ಕರೆಯುತ್ತಿರು ತ್ತೇನೆ.

ಹಾಗೆಯೇ ಪತ್ರಿಕೆಗಳಲ್ಲಿ ಓದಿದ್ದು, ‘ಮುಖಂಡ ಬೆಳಗ್ಗೆ ಗಿಡ ನೆಟ್ಟ, ಮಧ್ಯಾಹ್ನ ಕುರಿ ಗಿಡ ತಿಂತು ರಾತ್ರಿ ಆ ಕುರಿಯನ್ನ ಮುಖಂಡ ತಿಂದ……. ಇಲ್ಲಿಗೆ ವನ ಮಹೋ ತ್ಸವ ಮುಕ್ತಾಯವಾಯಿತು” ಗಿಡ, ಮರಗಳ ಬಗ್ಗೆ ಅನಾದಿ ಕಾಲದಿಂದಲೂ ಜಾಗೃತಿ ಇದೆ. ಸಸ್ಯ ಸಂಪತ್ತು, ವನ ಸಂಪತ್ತು, ಅರಣ್ಯ ಸಂಪತ್ತು ಎನ್ನುವುದೇ ಅವು ಗಳು ಹಣ, ಬೆಳ್ಳಿ, ಬಂಗಾರದಷ್ಟೇ ಪ್ರಾಮುಖ್ಯ ಹೊಂದಿದವು ಎನ್ನುವುದಕ್ಕೆ ಗಿಡಮರಗಳನ್ನು ಸೃಷ್ಟಿಸಿದ ಪರಮಾತ್ಮನೇ ಅವುಗಳ ಜತೆಗೇ ನಮ್ಮನ್ನು ಸೃಷ್ಟಿಸಿ
ದ್ದಾನೆ ಹೌದಲ್ಲವೇ? ಆದ್ದರಿಂದ ಗಿಡ, ಮರ, ಬಳ್ಳಿ, ಪಕ್ಷಿಗಳೆಲ್ಲ ನಮ್ಮ ಬಂಧುಗಳೇ ಮಾತ್ರವಲ್ಲ, ನಮ್ಮಿಂದ ಸೇವೆ ಪಡೆಯಬೇಕಾದ ನೆಂಟರಿಷ್ಟರು.

ಜಗದೀಶಚಂದ್ರ ಬೋಸ್‌ರಂಥಹ ವಿಜ್ಞಾನಿಗಳು ಮರ, ಗಿಡ, ವೃಕ್ಷಗಳೂ ಸಜೀವ ಹಾಗೂ ನಮ್ಮಂತೆ ಸುಖ, ದುಃಖ ನೋವು, ನಲಿವು ಅನುಭವಿಸುತ್ತವೆಂದು ವೈಜ್ಞಾನಿಕವಾಗಿ ಸಿದ್ಧಗೊಳಿಸಿದ್ದಾರೆ. ಇಂದಿಗೂ ತುಳಸಿಯನ್ನು ಕೀಳುವಾಗ ಅವುಗಳ ಕ್ಷಮೆ ಕೇಳುತ್ತಾ ಕೀಳಬೇಕೆಂದು ಶಾಸ್ತ್ರಗಳಲ್ಲಿ ಹೇಳಿದೆ. ‘ತಾಯಿ, ನಾನು ಮೋಜಿಗೋ, ಹೊತ್ತು ಹೋಗದ್ದಕ್ಕೋ, ಟೈಮ್‌ಪಾಸ್ ಮಾಡಲೋ ಕೀಳುತ್ತಿಲ್ಲ’, ‘ವಿಷ್ಣು ಆರಾಧನಾರ್ಥಯ ಲುಂಚಾಮಿ, ಕ್ಷಮಸ್ವಮೆ’ ಎಂದೇ ಗಿಡದಿಂದ ಅದನ್ನು ಬಿಡಿಸಿಕೊಳ್ಳಬೇಕು. ಕಿತ್ತುಕೋ, ಹರಿದುಕೋ, ಮುರಿದುಕೋ’ ಎಂಬ ಶಬ್ದಗಳನ್ನೂ ಗಿಡಗಳ ಮುಂದೆ ಆಡಬಾರದಂತೆ.

‘ಬಿಡಿಸಿಕೋ’ ಎನ್ನಬೇಕಂತೆ. ಹಳ್ಳಿಗಳಲ್ಲಿ ಇಂದಿಗೂ ಮನೆಯ ಮುಂದೆಯೇ ಗಿಡಮರಗಳಿರುತ್ತವೆ. ಏಕೆಂದರೆ, ನಾವು ನೆಟ್ಟಿರುವ ಫಲವೃಕ್ಷಗಳು ನಮ್ಮ ಮಾತು ಕೇಳುವಷ್ಟು ಹತ್ತಿರದಲ್ಲಿರಬೇಕಂತೆ. ಅವುಗಳ ಬಗ್ಗೆ ನಾವು ಆಡುವ ಒಳ್ಳೆಯ ಮಾತುಗಳನ್ನು ಕೇಳುತ್ತಲೇ ಅವು ಬೆಳೆಯುತ್ತವಂತೆ. ನಿಮಗೊಂದು ಮಗು ಹುಟ್ಟಿದ ದಿನವೇ ಒಂದು ಗಿಡ ನೆಟ್ಟು, ಮಗುವಿನ ಜತೆಜತೆಗೇ ಅದನ್ನು ಬೆಳೆಸಬೇಕಂತೆ. ಒಮ್ಮೊಮ್ಮೆ ಮಗ, ಮಗಳು ನಿಮ್ಮನ್ನು ಅಲಕ್ಷಿಸಿದರೂ, ನೋಯಿಸಿದರೂ ಈ ಗಿಡ ಅಥವಾ ಮರ ನಿಮಗೆ ಅದರ ನೆರಳಿನ ತಂಪು, ಬೆಳೆದ ಹಣ್ಣಿನ ಊಟವನ್ನು ನೀಡುತ್ತದೆಯಂತೆ.

ಬೆಳುವಲದ ಮಡಿಲಲ್ಲಿ ಎಂಬ ಕನ್ನಡ ಚಿತ್ರದ ಒಂದು ಹಾಡಿನಲ್ಲಿ ‘ತೆಂಗಿನ ಮರ ಬೆಳೆಸಿದ್ರೆ ಎಳನೀರು ಸಿಗ್ತದೆ, ಪ್ರೀತ್ಸಿ ಬೆಳೆಸಿದ ಮಕ್ಳಿಂದ ಕಣ್ಣೀರ್ ಸಿಗ್ತದೆ, ಬರೀ
ಕಣ್ಣೀರ್ ಸಿಗ್ತದೆ’ ಎಂಬ ಸಾಲುಗಳು ನಿಜ ಎನಿಸುತ್ತವೆ. ಶ್ರೀ ಕನಕದಾಸರು ತಮ್ಮ ‘ತಲ್ಲಣಿಸದಿರು ಕಂಡ್ಯಾ ತಾಳು ಮನವೇ’ ಹಾಡಿನಲ್ಲಿ ಬೆಟ್ಟದಾ ತುದಿಯಲಿ ಹುಟ್ಟಿರುವ ಗಿಡಕ್ಕೆ ಅಲ್ಲಲ್ಲಿ ಕಟ್ಟೆಯ ಕಟ್ಟಿ ನೀರೆರೆದವರಾರು? ಎಂದು ಕೇಳುವುದರ ಮೂಲಕ ಗಿಡ, ಮರಗಳಿಂದ ನಾವು ಮಾನಸಿಕ ಶಾಂತಿ (ಮೆಂಟಲ್ ಪೀಸ್) ಪಡೆಯಬೇಕು ಎಂದಿದ್ದಾರೆ, ಪುರಾಣ, ಇತಿಹಾಸಗಳಲ್ಲಿ ಬರುವ ಕಥೆಗಳನ್ನು ನಮ್ಮ ರಾಜಕಾರಣಿಗಳು ಓದಬೇಕು.

ಒಬ್ಬ ಕಾರ್ಪೋರೇಟರ್ ಆ ದಾರಿಯಲ್ಲಿ ಬರುತ್ತಾನೆಂದರೆ ಆ ರಸ್ತೆಯಲ್ಲಿನ ಮರ ಕಡಿದು ದಾರಿ ಮಾಡುವ ಮೂರ್ಖ ಅನುಯಾಯಿಗಳು ರಾಣಾ ರಣಜಿತ್ ಸಿಂಗ್‌ನ ಈ ಕಥೆ ಓದಬೇಕು. ರಾಣಾ ರಣಜಿತ್ ಸಿಂಗ್ ಒಮ್ಮೆ ವನವಿಹಾರಕ್ಕೆ ಬಂದು ಒಂದು ಮರದ ಕೆಳಗೆ ಕೂತಾಗ, ದಾರಿಹೋಕ ಮುದುಕಿಯೋರ್ವಳು, ಆ ಮರದ ಹಣ್ಣಿಗಾಗಿ ಹೊಡೆದ ಒಂದು ಕಲ್ಲು ರಾಜನ ಕಣ್ಣಿಗೆ ಬಿದ್ದು ಇಡೀ ಕಣ್ಣೇ ಕಳಚಿ ಬಿತ್ತಂತೆ. ಆಗ ರಣಜಿತ ಸಿಂಗ್‌ನ ಅಂಗರಕ್ಷಕರು ಆ ಮುದುಕಿಯನ್ನು ಶಿಕ್ಷಿಸಲು ಮುಂದಾದಾಗ, ರಣಜಿತ ಸಿಂಗ್ ಅವರನ್ನು ತಡೆದು ‘ಬೇಡ ಬೇಡ, ಆ ಮುದುಕಿಯನ್ನು ಶಿಕ್ಷಿಸಬೇಡಿ, ಆಕೆ ಹಣ್ಣಿಗಾಗಿ ಹೊಡೆದ ಕಲ್ಲು ಗುರಿ ತಪ್ಪಿದೆ ಅಷ್ಟೆ, ಅದು
ಗುರಿ ಮುಟ್ಟಿದ್ದರೆ ಆ ಗಿಡ ಇಷ್ಟೇ ನೋವಿನ ಪೆಟ್ಟು ತಿಂದು ಆಕೆಗೆ ಹಣ್ಣು ಕೊಡುತ್ತಿತ್ತು ತಾನೆ? ಆದರೆ, ನಾನು ಈ ರಾಜ್ಯದ ರಾಜ, ಆಕೆಯನ್ನು ಶಿಕ್ಷಿಸಿ ಮರಕ್ಕಿಂತ
ಕಡೆಯಾಗಲೇ ಎಂದು ಆಕೆಗೆ ಊಟ, ವಸತಿಗಳ ಏರ್ಪಾಟು ಮಾಡಿದನಂತೆ.

ಹಾಗೆಯೇ, ಛತ್ರಸಾಲನೆಂಬ ರಾಜನು ರಥವನ್ನೇರಿ ಬರುತ್ತಿರುವಾಗ ಒಂದು ಸುಂದರ ಬಳ್ಳಿಯು ದಾರಿಯ ಮಾರ್ಗದಲ್ಲಿ ಅಡ್ಡವಾಗಿ ಬೆಳೆದಿತ್ತಂತೆ, ಆ ರಾಜನ ಸೈನಿಕರು ಆ ಬಳ್ಳಿಯನ್ನು ಕತ್ತರಿಸಿ, ರಾಜನ ರಥಕ್ಕೆ ದಾರಿ ಮಾಡಿಕೊಡಲು ಮುಂದಾದಾಗ, ರಾಜಾ ಛತ್ರಸಾಲನು ತನ್ನ ಸೈನಿಕರಿಗೆ ಓ! ಮೂರ್ಖರೇ ನಿಲ್ಲಿ, ನಿಮ್ಮ ಈ ದುಷ್ಟತನವನ್ನು ನಿಲ್ಲಿಸಿ, ಆ ಬಳ್ಳಿಗೆ ಹರಿದು ಬೆಳೆಯಲು ಒಳ್ಳೆ ಆಶ್ರಯ ದೊರಕುತ್ತಿದ್ದಲ್ಲಿ ಅದೇಕೆ ಹೀಗೆ ಹಾದಿ ಬೀದಿಗಳಲ್ಲಿ ಹಬ್ಬುತ್ತಿತ್ತು? ನಾನು ರಾಜ! ಆಶ್ರಯ ಹೀನರಿಗೆ ಆಶ್ರಯ ಕಲ್ಪಿಸುವವನು. ಹೀಗೆ ಹೇಳಿದ ಛತ್ರಸಾಲನು ತಾನು ರಥದಿಂದ ಕೆಳಗಿಳಿದು ತನ್ನ ರಥಕ್ಕೆ ಅಡ್ಡವಾಗಿದ್ದ ಬಳ್ಳಿಯನ್ನು ಹಬ್ಬಲು ಬಿಟ್ಟು ತಾನು ಬರಿಗಾಲಲ್ಲಿ ನಡೆದು ಅರಮನೆ ಸೇರಿದನಂತೆ.

ಇನ್ನೂ ಕೆಲವು ಆಶ್ಚರ್ಯಕರ ವಿಷಯಗಳು ಭವಿಷ್ಯ ಪುರಾಣದಲ್ಲಿವೆ. ಅವು ಯಾವುವೆಂದರೆ, ಈ ಕೆಲವು ಶ್ಲೋಕಗಳು. ‘ಪನಸೆ ಮಂದ ಬುದ್ಧಿ ಸ್ಯಾತ ಕಲೀವೃಕ್ಷಃ ಶ್ರೀಯ ಹರೇತ್ ಪ್ಲಕ್ಷೋ ಭಾರ್ಯಾಪ್ರದಶ್ಚೈವ ಬಿಲ್ವ ಆಯುಷ್ಯದ ಸೃತಃ ಧನ ಪ್ರದೋ ಜಂಬು ವೃಕ್ಷಃ ಬ್ರಹ್ಮದ ಪ್ಲಕ್ಷವೇಕ್ತಃ’ ಅಂದರೆ, ಹಲಸಿನ ಮರದಿಂದ ಬುದ್ಧಿ ಮಾಂದ್ಯ, ತಾರೀ ಮರದಿಂದ ಧನನಾಶ, ಹೀಗಾಗಿ ಕಾರಣ, ದೇಶ ಕಾಲಗಳ ಸೂಕ್ತತೆ ಗಮನಿಸದೇ ಈ ಮರಗಳನ್ನು ನೆಡಬಾರದಂತೆ.

ಬಸರಿ ಮರದಿಂದ ಒಳ್ಳೆಯ ಹೆಂಡತಿಯ ಲಾಭ ದೊರೆಯುತ್ತದೆ. ಬಿಲ್ವ ವೃಕ್ಷವು ಆಯುಷ್ಯವನ್ನು ವಧಿಸುತ್ತದೆ. ನೇರಳೆ ಮರವು ಸಂಪತ್ತನ್ನು ನೀಡುತ್ತದೆ.
ನೆಲ್ಲಿ ಹಾಗೂ ಬಿಲ್ವಗಳನ್ನು ನೆಟ್ಟರೆ ಕೀರ್ತಿ ಹೆಚ್ಚುತ್ತದೆ. ಅಶ್ವತ್ಥ ವೃಕ್ಷ ಬೆಳೆಸುವುದರಿಂದ ಧರ್ಮವೃದ್ಧಿಯೂ, ನೇರಳೆ ಯಿಂದ ಧನಲಾಭವೂ, ದಾಳಿಂಬೆಯಿಂದ ಇಷ್ಟಕಾಮ ಪ್ರಾಪ್ತಿಯೂ, ಆಲದ ಮರದಿಂದ ಮೋಕ್ಷ ಸಂಪಾದನೆ ಆಗುತ್ತದೆ. ಜಾಲಿಯ ಮರವು ದುರ್ಜನರಿದ್ದಂತೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಪುರಂದರ ದಾಸರು ಇದನ್ನು ತಮ್ಮ ಹಾಡಿನ ಮೂಲಕ ಅದ್ಭುತವಾಗಿ ವಿಷದೀಕರಿಸಿದ್ದಾರೆ. ಶ್ರೀಕೃಷ್ಣನು ಶ್ರೀಮದ್ಭಾಗವತದಲ್ಲಿ ಪುಷ್ಪ ಫಲಭರಿತ ವೃಕ್ಷಗಳನ್ನು ಸಜ್ಜನರಿಗೆ ಹೋಲಿಸಿದ್ದಾನೆ. ಈ ಮೂಲಕ ಜನರಂತೆಯೇ ವೃಕ್ಷ ಯೋನಿಗಳಲ್ಲಿ ದುಷ್ಟ, ಶಿಷ್ಠ ಶಕ್ತಿಗಳಿವೆ ಎಂದು ಸಾರಿದ್ದಾರೆ.

ಜಾಲಿಯ ಮರದಂತೆ ಧರೆಯೊಳು ದುರ್ಜನರು |
ಮೂಲಾಗ್ರ ಪರಿಯಂತ | ಮುಳ್ಳು ಕೂಡಿಪ್ಪಂಥ ||
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ,
ಹಸಿದು ಬಂದವರಿಗೆ ಹಣ್ಣಿಲ್ಲ, ಕುಸುಮ ವಾಸನೆಯಿಲ್ಲ,
ಕೂಡಲು ಸ್ಥಳವಿಲ್ಲ, ರಸದಲ್ಲಿ ಸ್ವಾದವು ವಿಷದಂತೆ
ಇರುತಿಹ || ೧ ||
ತನ್ನಿಂದ ಉಪಕಾರ ತಟುಕಾದರೂ ಇಲ್ಲ |
ಬಿನ್ನಾಣ ಮಾತಿಗೆ ಕೊನೆಯಿಲ್ಲವು ||
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿದರ ಕಾರ್ಯವು ಪುರಂದರ ವಿಠ್ಠಲ || ೨ ||

ಪುರಾತನ ಗ್ರಂಥಗಳಲ್ಲಿ ನೂರಾರು ವೃಕ್ಷಗಳ ಹೆಸರು ಉಲ್ಲೇಖಿತವಾಗಿದೆ. ಇಂದು ಬಳಕೆಯಲ್ಲಿರು ಈ ಮರಗಳ ಸಮಾನಾರ್ಥಕ ಪದಗಳು ಗೊತ್ತಾಗುತ್ತಿಲ್ಲ. ಇವನ್ನು ಅನ್ವೇಷಿಸಿ ಸರ್ವತ್ರ ಸುಲಭವಾಗುವಂತೆ ತಜ್ಞರು ಪರಿಶೀಲಿಸ ಬೇಕಾಗಿದೆ. ಅಷ್ಟಲ್ಲದೇ ಇವುಗಳಲ್ಲಿ ವಿನಾಶದ ಅಂಚಿನಲ್ಲಿರುವ ಕೆಲ ಸಸ್ಯ ಪ್ರಭೇದಗಳನ್ನೂ ಸಂರಕ್ಷಿಸುವಲ್ಲಿ ಕೂಡಾ ತೆಂಗು, ತುಳಸಿ, ಆಲ, ಬಿಲ್ವ, ಸೀತಾಫಲ, ಪೇರಲ ಬಿಟ್ಟರೆ ಬೇರೆಯದನ್ನು ತೋಟಗಾರಿಕಾ ತಜ್ಞರು, ಎಲ್ಲರೂ ತಾವಿರುವ ಸ್ಥಿತಿ
ಯಲ್ಲೇ ಇದ್ದು, ನೌಕರಿಯಿಂದ ನಿವೃತ್ತಿಯಾಗಲು ಕಾಯುತ್ತಿರುವ ಈ ದಿನಗಳಲ್ಲಿ ನೂರು ಜಾತಿ ಮರಗಳ ಅನ್ವೇಷಣೆ, ವೃಥಾ ಕಂಠ ಶೋಷಣೆ ಆದೀತೆಂಬುದು ಅಷ್ಟೇ ಸತ್ಯ.

Leave a Reply

Your email address will not be published. Required fields are marked *