Friday, 19th August 2022

ಪ್ಲಾಸ್ಟಿಕ್ ಮಾಲಿನ್ಯ ಮುಕ್ತವಾಗಿ

ರಾಜ್ಯಗಳ ರಾಜಕೀಯ ಮೇಲಾಟಗಳು, ರಾಷ್ಟ್ರಪತಿ ಚುನಾವಣೆ, ಅಗ್ನಿಪಥ್ ಹೆಸರಿನಲ್ಲಿ ಹೋರಾಟಗಳಂಥ ಸುದ್ದಿಗಳ ನಡುವೆ ಅತ್ಯಂತ ಮುಖ್ಯವಾದ ಸುದ್ದಿ ಮಾದ್ಯಗಳಲ್ಲಿ ಕಳೆದು ಹೋಗಿದೆ.

ಜಗತ್ತಿನಲ್ಲಿ ವಾಯು ಮಾಲಿನ್ಯವು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬ ಆಘಾತಕಾರಿ ಸುದ್ದಿಯನ್ನು ಸಮೀಕ್ಷೆಯೊಂದು ಹೊರ ಹಾಕಿದೆ. ವಾಯು ಮಾಲಿನ್ಯದ ನಡುವೆ ಬದುಕುವುದರಿಂದ ಅಕಾಲಿಕ ಮರಣ ಪ್ರಮಾಣವು ಶೇ.20ರಷ್ಟು ಹೆಚ್ಚಾಗಿದೆ. ಅದೇ ರೀತಿ ಹೃದಯರಕ್ತನಾಳದ ಕಾಯಿಲೆಯಿಂದಲೂ ಶೇ.17ರಷ್ಟು ಜನರು ಸಾವಿನ ಮನೆ ಸೇರಿದ್ದಾರೆ ಎಂದು ಅಧ್ಯಯನವು ತಿಳಿಸಿದೆ. ಅದರಲ್ಲೂ ಇಂಥ ಸಾವು ಗ್ರಾಮೀಣ ಪ್ರದೇಶದಲ್ಲಿ ಆಗುತ್ತಿದೆ ಎಂಬುದು ಇನ್ನಷ್ಟು ಆತಂಕಕ್ಕೆ ಕಾರಣ.

ಸಹಜವಾಗಿ ವಾಯು ಮಾಲಿನ್ಯ ನಗರ ಪ್ರದೇಶಗಳಲ್ಲಿ ಹೆಚ್ಚೆಂದು ಭಾವಿಸಿರುತ್ತೇವೆ. ಆದರೆ PLOS ONE ನಿಯತಕಾಲಿಕದಲ್ಲಿ ಪ್ರಕಟ ವಾದ ಸಂಶೋಧನೆಯ ಪ್ರಕಾರ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಧೂಮಪಾನದ ಜತೆಗೆ ವಾಯು ಮಾಲಿನ್ಯ ದಂತಹ ಪರಿಸರದ ಪರಿಣಾಮಗಳಿಂದ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರಂತೆ. ದಿನದಿಂದ ದಿನಕ್ಕೆ ದೇಶದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವುದಂತೂ ಸತ್ಯ. ಸರಕಾರಗಳು ಇದರ ತಡೆಗೆ ನಾನಾ ಉಪಕ್ರಮಗಳನ್ನು ಕೈಗೊಂಡಿದ್ದರೂ ಪರಿಣಾಮ ಕಾರಿಯಾಗುತ್ತಿಲ್ಲ ವೇಕೆಂದರೆ ಅದಕ್ಕೆ ಮುಖ್ಯ ಕಾರಣ ಪ್ಲಾಸ್ಟಿಕ್.

ಎಲ್ಲೆಡೆ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೊಲಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುವ ಪರಿಪಾಠ ಹೆಚ್ಚಿದ್ದು, ಈ ಸಂದರ್ಭದಲ್ಲಿ ಜತೆಗೇ ದಹಿಸುವ ಪ್ಲಾಸ್ಟಿಕ್ ವಸ್ತುಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಇಂದಿಗೂ ಭಾರತದಂಥ ದೇಶದ ಹಳ್ಳಿಗಳಲ್ಲಿ ಸೀಮೆಎಣ್ಣೆ ಬಳಕೆಯಿದ್ದು, ನಾಲ್ಕು ಗೋಡೆಗಳ ಮಧ್ಯೆ ಇಂಧನ ದಹಿಸಿ ಉಂಟಾದ ಮಾಲಿನ್ಯವೂ ಹೆಚ್ಚು ಅಪಾಯಕಾರಿಯಾಗುತ್ತಿದೆ. ಈ ದೃಷ್ಟಿಯಿಂದ ಕೇಂದ್ರ ಸರಕಾರ ಮರುಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿರುವುದು ಸ್ತುತ್ಯರ್ಹ. ಈ ನಿಷೇಧ ಕಟ್ಟುನಿಟ್ಟಾಗಿ ಪಾಲನೆಯಾಗಲಿ.