Saturday, 8th August 2020

ಇರಾನ್‌, ಚೀನಾ,ರಷ್ಯಾ,ಅಫ್ಘಾನಿಸ್ತಾನಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾದ ಪ್ರಧಾನಿ

ಶಾಂಘಾಯ್‌ ಸಹಕಾರ ಒಕ್ಕೂಟ(SCO)ದ ಶೃಂಗದ ಸಂದರ್ಭ, ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಭಾರತದ ಕಟಿಬದ್ಧತೆಯನ್ನು ಪುನರುಚ್ಛರಿಸಿದ ಪ್ರಧಾನಿ, ನಾಯಕರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡುವ ಸಂದರ್ಭ, ನಾಲ್ಕು ದಶಕಗಳ ನಿರಂತರ ಆಂತರ್ಯುದ್ಧ ಹಾಗೂ ಗಲಭೆಗಳಿಂದ ತತ್ತರಿಸಿರುವ ದೇಶದ ಮರುನಿರ್ಮಾಣ ಬಹಳ ಮಹತ್ವದ್ದಾಗಿದೆ ಎಂದಿದ್ದಾರೆ.

ಶೃಂಗದ ಸಂದರ್ಭ, ಕೇಂದ್ರ ಏಷ್ಯಾ ಹಾಗೂ ಕಕಾಸಿಯನ್‌ ಪ್ರದೇಶದ ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ಮುಖಾಂತರ ಮಹತ್ವದ ಮಾತುಕತೆಗಳಲ್ಲಿ ಭಾಗಿಯಾದ ಪ್ರಧಾನಿ, ಭಾರತದ ವ್ಯೂಹಾತ್ಮಕ ಯೋಜನೆಗಳು ಹಾಗೂ ಏಷ್ಯಾದ ಭೌಗೋಳಿಕದ ರಾಜಕೀಯದಲ್ಲಿ ತಾನಿಡಬೇಕಾದ ಹೆ‌ಜ್ಜೆಗಳ ಅಂದಾಜು ನೀಡಿದ್ದಾರೆ.

ಸಭೆಯ ವೇಳೆ ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹಾನಿರನ್ನು ಭೇಟಿಯಾಗಲಿರುವ ಪ್ರಧಾನಿಯ ನಿಲುವುಗಳು ಜಾಗತಿಕ ರಾಜಕೀಯದಲ್ಲಿ ಕುತೂದಹಲ ಮೂಡಿಸಿವೆ. ಪರ್ಶಿಯನ್‌ ಕೊಲ್ಲಿಯಲ್ಲಿ ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವೆ ಹೊತ್ತಿ ಉರಿಯುತ್ತಿರುವ ಉದ್ವಿಗ್ನತೆಯ ನಡುವೆ ಚಾಬಾಹಾರ್‌ ಬಂದರು ಹಾಗೂ ಕಚ್ಛಾ ತೈಲ ಖರೀದಿಯಂಥ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಏನು ಮಾಡಲಿದೆ ಎಂಬ ಪ್ರಶ್ನೆ ಎಲ್ಲೆಡೆ ಎದ್ದಿದೆ.

ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಬಳಿಕ ಟೆಹರಾನ್‌ ಮೇಲೆ ಮುರಿದುಕೊಂಡು ಬಿದ್ದಂತೆ ಕಾಣುತ್ತಿರುವ ಅಮೆರಿಕದ ಪ್ರಭಾವವನ್ನು ಮೆಟ್ಟಿ ನಿಂತು ಇರಾನ್‌ನೊಂದಿಗೆ ತನ್ನ ಬಾಂಧವ್ಯವನ್ನು ಭಾರತದ ಮುಂದುವರೆಸಬೇಕಿದೆ. ಇರಾನ್‌ನಿಂದ ಕಚ್ಛಾ ತೈಲ ಖರೀದಿಸಲು ತಾನು ಹೇರಿರುವ ನಿರ್ಬಂಧದ ವಿಚಾರದಲ್ಲಿ ಭಾರತ ಸೇರಿದಂತೆ ಯಾವುದೇ ದೇಶಕ್ಕೂ ಹೊಸ ವಿನಾಯಿತಿ ನೀಡಲು ಬರುವುದಿಲ್ಲ ಎಂದು ಅಮೆರಿಕ ಇತ್ತೀಚೆಗಷ್ಟೇ ಘೋಷಿಸಿದೆ.

ಇದೇ ವಿಚಾರವಾಗಿ ಕಳೆದ ತಿಂಗಳು ದೆಹಲಿಗೆ ಆಗಮಿಸಿದ್ದ ಇರಾನ್‌ ವಿದೇಶಾಂಗ ಸಚಿವ ಜಾವದ್‌ ಝರೀಫ್‌ ಹಿಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಜತೆ ಮಾತನಾಡಿದ್ದರು. ಸಾರ್ವತ್ರಿಕ ಚುನಾವಣೆಗಳು ಮುಗಿದ ಬಳಿಕ ಇರಾನ್‌ನಿಂಧ ತೈಲ ಖರೀದಿಸುವ ವಿಚಾರವಾಗಿ ನಿರ್ಣಯಕ್ಕೆ ಬರಲಾಗುವುದು ಎಂದು ಸ್ವರಾಜ್‌ ತಿಳಿಸಿದ್ದರು.

ಸಭೆಯ ಕಾಲಘಟ್ಟದಲ್ಲೇ, ಚೀನಾ ಅಧ್ಯಕ್ಷ ಶೀ ಝಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.

Leave a Reply

Your email address will not be published. Required fields are marked *