Thursday, 11th August 2022

ಸಮಸ್ಯೆ ದೊಡ್ಡದಲ್ಲ, ನಾವು ಚಿಕ್ಕವರು !

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ಸಮಸ್ಯೆಗಳು ತೀರಾ ದೊಡ್ಡದಲ್ಲ. ನಾವು ತುಂಬಾ ಚಿಕ್ಕವರು. ನಮ್ಮಿಂದ ನಿಭಾಯಿಸಲು ಸಾಧ್ಯವಾಗದ ಕಾರಣ ನಮ್ಮ ಸಮಸ್ಯೆ ನಮಗೆ ದೊಡ್ಡದಾಗಿ ಕಾಣುತ್ತದೆ. ಸರಿಯಾಗಿ ನಿಭಾಯಿಸಿದರೆ ಘೋರ ಸಮಸ್ಯೆಯೂ ಸಣ್ಣದಾಗುತ್ತದೆ ಎಂಬುದಕ್ಕೆ ಅವಳು ಅಂದರೆ, ‘ಮುನಿಬಾ ಮಜಾರಿ ಬಲೂಚಿ’ ಜೀವಂತ ಉದಾಹರಣೆ.

ಫೆಬ್ರವರಿ 27, 2008. ಅವರಿಬ್ಬರೂ ಅಂದು ಮುಂಜಾನೆಯೇ ಮನೆ ಬಿಟ್ಟು ಹೊರಟಿದ್ದರು. ಹೆಣ್ಣು ಮಕ್ಕಳಿಗೆ ತವರು ಮನೆಗೆ ಹೋಗುವುದೆಂದರೆ ಎಲ್ಲಕ್ಕಿಂತ ದೊಡ್ಡ ಹಬ್ಬ. ಅದಕ್ಕೆ ಅವಳೂ ಹೊರತಾಗಿರಲಿಲ್ಲ. ಅದೂ ಅಲ್ಲದೆ ಗಂಡನ ಮನೆ ಕ್ವೆಟ್ಟಾದಿಂದ ತನ್ನ ತವರುಮನೆ ರಹಿಮ್ ಯಾರ್ ಖಾನ್‌ಗೆ ಸುಮಾರು ಆರುನೂರು ಕಿಲೋಮೀಟರ್ ದೂರ. ರಹಿಮ್ ಯಾರ್ ಖಾನ್ ವ್ಯಕ್ತಿಯ ಹೆಸರಿನಂತೆ ಕೇಳಿದರೂ, ಅದು ಬಲೂಚಿಸ್ತಾನದ ದಕ್ಷಿಣದಲ್ಲಿರುವ ಒಂದು ಊರಿನ ಹೆಸರು.

1880ರ ಆರಂಭದಲ್ಲಿ, ಅಂದು ಆಡಳಿತ ನಡೆಸುತ್ತಿದ್ದ ಬಹಾವಲ್ಪುರದ ನವಾಬ ತನ್ನ ಮೊದಲ ಮಗ ಮತ್ತು ಯುವರಾಜನ ನೆನಪಿಗಾಗಿ ಮಗನ ಹೆಸರನ್ನೇ ಆ ಊರಿಗೆ ಇಟ್ಟಿದ್ದ. ಇರಲಿ, ಸುಮಾರು ಒಂದೂವರೆ ದಶಕದ ಹಿಂದೆ, ಕಮ್ಮಿ ಕಮ್ಮಿ ಎಂದರೂ ಇದು ಹತ್ತು ಹನ್ನೆರಡು ಗಂಟೆಯ ಪ್ರಯಾಣ. ಪ್ರಯಾಣದ ಹೆಚ್ಚಿನ ಭಾಗ ಗುಡ್ಡ, ಕಣಿವೆಗಳಿಂದ ತುಂಬಿದ ನಿರ್ಜನ ಪ್ರದೇಶ.

ಆಗಷ್ಟೇ ಅವಳು ಇಪ್ಪತ್ತು ಕಳೆದು ಇಪ್ಪತ್ತೊಂದನೆಯ ವರ್ಷಕ್ಕೆ ಕಾಲಿಟ್ಟ ಕುಸುಮ ಕೋಮಲೆ. ಕೈ ತೊಳೆದು ಮುಟ್ಟಬೇಕು ಎನ್ನು ವಂಥ ಸೌಂದರ್ಯ. ಮದುವೆಯಾಗಿ ಎರಡು ವರ್ಷ ಮಾತ್ರ ಆಗಿತ್ತು. ತಾನು ನೋಡಿದ ಹುಡುಗನೊಂದಿಗೆ ಮದುವೆಯಾಗು ಎಂದು ತಂದೆ ಹೇಳಿದಾಗ, ‘ನಿನಗೆ ಅದ ರಿಂದ ಖುಷಿಯಾಗುತ್ತದೆ ಎಂದಾದರೆ ನಾನು ಸಿದ್ಧ’ ಎಂದು ಅಪ್ಪ ತೋರಿಸಿದವ ನನ್ನು ಮದುವೆಯಾಗಿದ್ದಳು.

ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕಲೆಯಲ್ಲಿ ಆಸಕ್ತಿ ಇದ್ದುದರಿಂದ ಕಾಲೇಜು ಸೇರಿ ಫೈನ್ ಆರ್ಟ್ ವಿಷಯ ಆಯ್ದು ಕೊಂಡಿದ್ದಳು. ಆದರೆ ಪದವಿ ಪಡೆಯುವುದಕ್ಕಿಂತ ಮುನ್ನವೇ ಮದುವೆಯಾಗಿತ್ತು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ಎಲ್ಲ ವಿಭಾಗದಲ್ಲೂ ಹಿಂದುಳಿದ ಬಲೂಚಿಸ್ತಾನದಲ್ಲಿ ಇಂದಿಗೂ ಅದೇ ಪದ್ಧತಿ. ಈ ವಿಷಯದಲ್ಲಿ (ಬಹುತೇಕ ಎಲ್ಲ ವಿಷಯದಲ್ಲೂ) ತಂದೆಗೆ ಎದುರು ನುಡಿಯದೆ, ಅವರು ಹೇಳಿದಂತೆ ನಡೆಯುವುದು, ಅವರು ತೋರಿಸಿದವರನ್ನೇ ಮದುವೆ ಯಾಗುವುದು. ಅದು ತಮ್ಮ ಸಂಸ್ಕೃತಿ, ಪರಂಪರೆ ಎಂದು ಬಲವಾಗಿ ನಂಬಿದವರು. ಅವಳೂ ಅದಕ್ಕೆ ಹೊರತಾಗಿರಲಿಲ್ಲ.

ಅಂದು ಗಂಡನೇ ಕಾರು ನಡೆಸುತ್ತಿದ್ದ. ಮಾರ್ಗ ಮಧ್ಯದಲ್ಲಿ ಆತನಿಗೆ ನಿದ್ದೆ ಆವರಿಸಿಕೊಂಡದ್ದರಿಂದ ಕಾರು ಅಪಘಾತಕ್ಕೀಡಾ ಯಿತು. ಗುಡ್ಡದ ಮೇಲಿಂದ ಉರುಳಿ ಕಾರು ಕಂದಕಕ್ಕೆ ಬಿದ್ದಿತ್ತು. ಉರುಳುವ ಕಾರಿನಿಂದ ಗಂಡ ಹೊರಗೆ ಜಿಗಿದಿದ್ದ. ಅವಳು ಮಾತ್ರ ಒಳಗೇ ಸಿಕ್ಕಿಕೊಂಡಿದ್ದಳು. ಆ ಅಪಘಾತದಲ್ಲಿ ಅವಳು ನುಜ್ಜುಗುಜ್ಜಾಗಿದ್ದಳು. ತೋಳಿನ ಮೂಳೆ, ಮಣಿಕಟ್ಟು ಮುರಿದಿತ್ತು. ಕೊರಳ ಪಟ್ಟಿಯ ಮೂಳೆ, ಭುಜದ ಎಲುಬು, ಪಕ್ಕೆಲುಬುಗಳು ಘಾಸಿಗೊಂಡಿದ್ದವು.

ಪರಿಣಾಮವಾಗಿ ಶ್ವಾಸಕೋಶ ಮತ್ತು ಯಕೃತ್ತಿನ ಕೆಲವು ಭಾಗ ಕತ್ತರಿಸಲ್ಪಟ್ಟಿತ್ತು. ಬೆನ್ನು ಮೂಳೆ ಮೂರು ಕಡೆ ಮುರಿದಿತ್ತು. ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಅವಳಿಗೆ ಸರಿಯಾಗಿ ಉಸಿರಾಡಲೂ ಆಗದಷ್ಟು
ನೋವು ಆವರಿಸಿಕೊಂಡಿತ್ತು. ನಿರ್ಜನ ಪ್ರದೇಶವಾದದ್ದರಿಂದ ಅವರ ಅಪಘಾತದ ವಿಷಯ ಇತರರಿಗೆ ತಿಳಿಯಲು ಕೆಲವು ನಿಮಿಷ ಗಳೇ ಹಿಡಿದವು. ಸರಕು ಸಾಗಿಸುವ ಜೀಪಿನಲ್ಲಿ ಹೋಗುತ್ತಿದ್ದವರಿಬ್ಬರು ಇವರ ಸಹಾಯಕ್ಕೆ ಮುಂದಾದರು. ಕಾರಿನಿಂದ ಹೊರಗೆ ಎಳೆದು ತೆಗೆದರೂ ಅವಳ ಪರಿಸ್ಥಿತಿ ಕಂಡು ಅವರೂ ಬೆಚ್ಚಿದ್ದರು.

ಅವಳಿನ್ನೂ ಬದಿಕಿದ್ದಾಳಾ? ಒಂದು ವೇಳೆ ಬದುಕಿದ್ದರೂ, ಆಸ್ಪತ್ರೆಗೆ ಸೇರಿಸುವವರೆಗೆ ಬದುಕಿರುತ್ತಾಳಾ? ಭರವಸೆ ಕಮ್ಮಿಯೇ ಇತ್ತಾದರೂ ಅವರು ಪ್ರಯತ್ನಕ್ಕೆ ಮುಂದಾದರು. ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಹೋಗಲು ಮೂರು ತಾಸು ಬೇಕಿತ್ತು. ಇನ್ನು ಆಂಬ್ಯುಲೆನ್ಸ್ ಕೇಳಲೇ ಬೇಡಿ. ಕಣಿವೆಯ ಪ್ರದೇಶವಾದದ್ದರಿಂದ ಹತ್ತಿರದಲ್ಲೂ ದೂರವಾಣಿ ಸಂಪರ್ಕವೂ ಇರಲಿಲ್ಲ. ಅಂತೂ, ಹಿಂದುಗಡೆಯ ಸರಕಿನೊಂದಿಗೆ ಅವಳನ್ನೂ ಸೇರಿಸಿಕೊಂಡ ಜೀಪು ಆಸ್ಪತ್ರೆಯ ಕಡೆ ನಡೆದಿತ್ತು. ಮುಂದಿನ ಎರಡೂವರೆ ತಿಂಗಳು ಅವಳು ಆಸ್ಪತ್ರೆಯ ಹಾಸಿಗೆಯ ಮೇಲೆ ಕೊಚ್ಚಿಟ್ಟ ಕೊತ್ತಂಬರಿ ಸೊಪ್ಪಿನಂತೆ ಮಲಗಿದ್ದಳು.

ಆಸ್ಪತ್ರೆಯಲ್ಲಿರುವಾಗ ಅವಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಅವಳೊಂದಿಗೆ ಮಾತಾಡಿದರು. ಕೈ ಮತ್ತು ಮಣಿಕಟ್ಟು ಮುರಿದದ್ದರಿಂದ ಚಿತ್ರ ಬಿಡಿಸಲು ಸಾಧ್ಯವಿಲ್ಲವೆಂದೂ, ದೇಹದ ಕೆಳಗೆ ಪಾರ್ಶ್ವವಾಯು ಹೊಡೆದದ್ದರಿಂದ ನಡೆಯಲು ಆಗದೆಂದೂ, ಎಲ್ಲಕ್ಕಿಂತ ಹೆಚ್ಚಾಗಿ ಎಂದಿಗೂ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲವೆಂದೂ ಹೇಳಿದರು. ಮೊದಲ ಎರಡನ್ನು ಸಹಿಸಿಕೊಂಡರೂ, ಕೊನೆಯ ಮಾತನ್ನು ಅವಳಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮಕ್ಕಳಾಗುವುದಿಲ್ಲವೆಂದರೆ ಗಂಡನೂ ತನ್ನ ಜತೆ ಇರುವುದಿಲ್ಲ, ವಿಚ್ಛೇದನ ಬಯಸುತ್ತಾನೆ ಎಂದು ಆಕೆ ಕಳವಳಕ್ಕೆ ಒಳಗಾದಳು. ದೂರ ದೂರದವರೆಗೆ ಎಲ್ಲೂ ಬೆಳಕಿನ ಸುಳಿವೇ ಕಾಣದ ಸುರಂಗದಲ್ಲಿ ನಡೆಯಬೇಕಾದ ಪರಿಸ್ಥಿತಿ ಅವಳzಗಿತ್ತು. ತಾನು ಇನ್ನು ಬದುಕಿದ್ದು ಏನಾದರೂ ಪ್ರಯೋಜನ ಇದೆಯೇ ಎಂದು ಅಳುತ್ತಿರುವಾಗ, ‘ದೇವರು ನಿನಗಾಗಿ ಬೇರೆ ಏನನ್ನೋ ಯೋಚಿಸಿದ್ದಾನೆ’ ಎಂದು ಅಮ್ಮ ಸಮಾಧಾನ ಹೇಳುತ್ತಿದ್ದಳು. ಆ ಒಂದು ವಾಕ್ಯದಲ್ಲಿ ಎಷ್ಟು ಶಕ್ತಿ ಇತ್ತೆಂದರೆ, ಅವಳು ಅಳು ನಿಲ್ಲಿಸಿದ್ದಳು. ಅವಳ
ಒಳಗೆ ಹುದುಗಿದ್ದ ಅವ್ಯಕ್ತ ಶಕ್ತಿ ಹೊರಗೆ ಚಿಮ್ಮಿತ್ತು.

ಪ್ರತಿನಿತ್ಯ ಅಸ್ಪತ್ರೆಯ ಬಿಳಿಯಗೋಡೆ, ಬಿಳಿ ಬಟ್ಟೆ ಧರಿಸಿದ ವೈದ್ಯರು, ದಾದಿಯರನ್ನು ಕಂಡು ಅವಳು ರೋಸಿಹೋಗಿದ್ದಳು. ಆಸ್ಪತ್ರೆಯಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಒಂದಷ್ಟು ಬಣ್ಣ ನೋಡಲೇಬೇಕೆಂದು ನಿರ್ಧರಿಸಿ, ಕಾಗದ, ಬಣ್ಣ, ಕ್ಯಾನ್ವಾಸ್ ತರಿಸಿಕೊಂಡಳು. ತನ್ನ ಕೈ ಮೊದಲಿನಂತಿಲ್ಲ ನಿಜ, ಇದ್ದದ್ದರ ಒಂದಷ್ಟು ಚಿತ್ರ ಬರೆಯಬೇಕೆಂದು ನಿರ್ಧರಿಸಿ, ಆರಂಭಿಸಿದಳು. ತಿಂಗಳಿನ ಹಿಂದಷ್ಟೇ ಸಾವಿನ ಹಾಸಿಗೆ ಎಂದುಕೊಂಡಿದ್ದ ಹಾಸಿಗೆಯ ಕುಳಿತು ತನ್ನ ಜೀವನದ ಮೊದಲ ಕ್ಯಾನ್ವಾಸ್ ಪೇಂಟ್ ಮಾಡಿದಳು.

ಅದು ಅವಳಿಗೆ ಕೇವಲ ಚಿತ್ರವಾಗಿರಲಿಲ್ಲ, ಬದಲಾಗಿ ಚಿಕಿತ್ಸೆಯಾಯಿತು. ಕೆಲವು ದಿನ ಇದು ಮುಂದುವರಿಯಿತು. ಆಸ್ಪತ್ರೆಗೆ ಬಂದವರೆಲ್ಲ ಅವಳು ಚಿತ್ರದಲ್ಲಿ ತುಂಬಿದ ಬಣ್ಣವನ್ನು ಪ್ರಶಂಸಿಸುತ್ತಿದ್ದರು. ಅದರ ಹಿಂದೆ ತನ್ನ ನೋವಿನ ಕಪ್ಪು ಬಣ್ಣವನ್ನು ಅವಳು ಮರೆಮಾಚಿದ್ದಳು. ಆಸ್ಪತ್ರೆಯಿಂದ ಮನೆಗೆ ಬಂದರೂ, ಆಕೆ ಓಡಾಡುವಂತಿರಲಿಲ್ಲ. ಹಾಸಿಗೆಯಲ್ಲಿ ಒಂದೇ ಸ್ಥಿತಿಯಲ್ಲಿ ಮಲಗುವುದರಿಂದ ಬೆನ್ನಿಗೆ ಹುಣ್ಣುಗಳಾಗುತ್ತಿದ್ದವು.

ಔಷಧಗಳಿಂದ ಆಗುವ ಪರಿಣಾಮ, ಸೋಂಕು ಇತ್ಯಾದಿಗಳಿಂದಾಗಿ ಅವಳು ಬರೊಬ್ಬರಿ ಎರಡು ವರ್ಷ ಹಸೆಯಾಳಾಗಿ ಮಲಗಿ ದ್ದಳು. ಕಿಟಕಿಯ ಆಚೆ ಹಕ್ಕಿಗಳ ಧ್ವನಿ ಕೇಳಿದಾಗಲೆಲ್ಲ ಆಕೆಗೆ ಆರೋಗ್ಯವಂತರು ಎಷ್ಟು ಅದೃಷ್ಟಶಾಲಿಗಳು, ಆದರೆ ಆರೋಗ್ಯ ಸರಿ ಇರುವವರೆಗೂ ಅದರ ಮಹತ್ವ ನಮಗೆ ತಿಳಿಯುವುದಿಲ್ಲ ಎಂದು ಆಕೆಗೆ ಅನಿಸುತ್ತಿತ್ತು. ಆದರೆ ಎರಡು ವರ್ಷ, ಎರಡೂವರೆ ತಿಂಗಳಿನ ನಂತರ ಅವಳು ಮೊದಲ ಸಲ ಚಕ್ರದ ಕುರ್ಚಿ (ವ್ಹೀಲ್ ಚೇರ್‌) ಮೇಲೆ ಕುಳಿತಳು. ಯಾವುದಾದರೂ ಪವಾಡ ತನ್ನ ಬಳಿ ಬಂದು ನಾನು ನಡೆಯುವಂತೆ ಮಾಡುತ್ತದೆ, ನಾನು ಮೊದಲಿನಂತೆ ಆಗುತ್ತೇನೆ ಎಂದು ನಂಬುವ ಸ್ಥಿತಿಯನ್ನು ಆಕೆ ಮೀರಿದ್ದಳು.

ನಾಲ್ಕು ಗೋಡೆಯ ನಡುವೆ ಅಳುತ್ತಾ ಕುಳಿತರೆ ಯಾರೂ ತನ್ನ ಗೋಳು ಕೇಳುವುದಿಲ್ಲ, ಈ ಲೋಕದಲ್ಲಿ ಅದಕ್ಕೆಲ್ಲ ಯಾರ ಬಳಿಯೂ ಸಮಯವಿಲ್ಲ. ತಾನು ಎಷ್ಟು ಬೇಗ ಇದರಿಂದ ಹೊರಗೆ ಬರುತ್ತೇನೆಯೋ ಅಷ್ಟು ತನಗೇ ಒಳ್ಳೆಯದು ಎಂದು, ಒಬ್ಬಳೇ ಹೋರಾಡಲು ನಿರ್ಧರಿಸಿ, ಸಿದ್ಧಳಾದಳು. ತನ್ನಲ್ಲಿರುವ ಭಯದ ವಿರುದ್ಧ ಹೋರಾಡಬೇಕೆಂಬುದು ಅವಳಿಗೆ ಗೊತ್ತಿತ್ತು. ಅದಕ್ಕಾಗಿ ತನ್ನಲ್ಲಿರುವ ಎಲ್ಲ ಭಯವನ್ನೂ ಪಟ್ಟಿ ಮಾಡಿದಳು. ಹಣ, ಆರೋಗ್ಯದ ಅಭಾವ, ಮಕ್ಕಳಾಗದೇ ಇರುವುದು, ವಿಚ್ಛೇದನ ಇವೆಲ್ಲ ತನ್ನಲ್ಲಿರುವ ಭಯ ಎಂದು ಅವಳಿಗೆ ಅರಿವಾಗಿತ್ತು. ಒಂದಲ್ಲ ಒಂದು ದಿನ ವಿಚ್ಛೇದನ ಆಗುತ್ತದೆ ಎಂದು ತಿಳಿದಿದ್ದರಿಂದ, ಮೊದಲು ವಿವಾಹ ಬಂಧನದಿಂದ ಹೊರಗೆ ಬರಲು ನಿರ್ಧರಿಸಿ, ತನ್ನ ಅಭಿಪ್ರಾಯವನ್ನು ಪತಿಗೆ ತಿಳಿಸಿದಳು.

ಅವಳು ಎಷ್ಟರವರೆಗೆ ಮಾನಸಿಕವಾಗಿ ಸಿದ್ಧಳಾಗಿದ್ದಳೆಂದರೆ, ಪತಿಯ ಎರಡನೆಯ ಮದುವೆಯ ದಿನ ಅವನಿಗೆ ಶುಭಾಶಯದ ಸಂದೇಶ ರವಾನಿಸಿದಳು. ಹಣದ ಅವಶ್ಯಕತೆ ಇದ್ದುದ್ದರಿಂದ ಪೇಂಟಿಂಗ್ ಆರಂಭಿಸಿದಳು. ಅವಳ ಪೇಂಟಿಂಗ್ ಕಂಡ ಖ್ಯಾತ
ಗಾಯಕನೊಬ್ಬ ತನ್ನ ಫೇಸ್ಬುಕ್ ಪುಟವನ್ನು ಇನ್ನಷ್ಟು ವಿನ್ಯಾಸಗೊಳಿಸಿ, ಅದನ್ನು ನಡೆಸುವ ಕೆಲಸ ಕೊಟ್ಟ. ನಂತರ ಅವಳು ತನ್ನ ಮಗನ ಶಾಲೆಯಲ್ಲಿ ಉರ್ದು ಶಿಕ್ಷಕಿಯಾಗಿ ಸೇರಿಕೊಂಡಳು.

ಅಕ್ಕ ಪಕ್ಕದ ಶಾಲೆಗಳಿಗೂ ಉರ್ದು ಕಲಿಸಲು  ಹೋಗುತ್ತಿದ್ದಳು. ಅಷ್ಟು ಹೊತ್ತಿಗೆ ಅವಳಲ್ಲಿ ಜೀವನದ ಧನಾತ್ಮಕ ಅಂಶಗಳ
ಖಜಾನೆ ತುಂಬಿ ಹರಿಯುತ್ತಿತ್ತು. ಸಮಯ ಸಿಕ್ಕಾಗ ಜೀವನೋತ್ಸಾಹ ತುಂಬುವ ಪ್ರೇರಕ ಭಾಷಣಕ್ಕೆ ಹೋಗುತ್ತಿದ್ದಳು. ಅದರಿಂದ ಅವಳಿಗೆ ಪಾಕಿಸ್ತಾನದ ಟೆಲಿವಿಷನ್ ಸಂಸ್ಥೆ, ಪಿಟಿವಿಯಲ್ಲಿ ಉದ್ಯೋಗ ದೊರಕಿತು. ಸೌಂದರ್ಯವರ್ಧಕ ಸಾಧನಗಳನ್ನು
ತಯಾರಿಸುವ Pond’s ಸಂಸ್ಥೆ ಅವಳನ್ನು Miracle Woman ಎಂದು ಆಯ್ಕೆ ಮಾಡಿತು.

ಅಂತಾರಾಷ್ಟ್ರೀಯ ಹೇರ್ ಡ್ರೆಸ್ಸಿಂಗ್ ಸಲೂನ್ ಸಂಸ್ಥೆ Toni Guy ಅವಳನ್ನು ಏಷ್ಯಾದ ಮೊದಲ ವ್ಹೀಲ್ ಚೇರ್ ಮಾಡೆಲ್ ಆಗಿ ಆಯ್ದುಕೊಂಡಿತು. 2015ರಲ್ಲಿ ಬಿಬಿಸಿಯ, ನೂರು ಸೂರ್ತಿದಾಯಕ ಮಹಿಳೆಯರಲ್ಲಿ ಒಬ್ಬಳಾಗಿ ಆಯ್ಕೆಯಾದಳು. ಅದೇ ವರ್ಷ
ಸಂಯುಕ್ತ ರಾಷ್ಟ್ರಗಳ ಒಕ್ಕೂಟಕ್ಕೆ ಪಾಕಿಸ್ತಾನದ ಮಹಿಳಾ ರಾಯಭಾರಿಯಾಗಿ ಆಯ್ಕೆಯಾದಳು. ೨೦೧೬ರಲ್ಲಿ ‌ಫೋರ್ಬ್ಸ್ನ ಮೂವತ್ತು ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮೂವತ್ತು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಳು. ಇಂದು
ಅವಳು ನಿರೂಪಕಿಯಾಗಿ, ರೂಪದರ್ಶಿಯಾಗಿ, ಗಾಯಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿಯೂ ಕಾರ್ಯ ನಿರ್ವಹಿಸು ತ್ತಿದ್ದಾಳೆ. ಅಂದಹಾಗೆ, ವೈದ್ಯರು ಆಕೆಗೆ ಮಕ್ಕಳಾಗುವುದಿಲ್ಲ ಎಂದಿದ್ದರು, ಮಗು ಎಲ್ಲಿಂದ ಬಂತು ಎಂಬ ಗೊಂದಲ ಬೇಡ.

ವ್ಹೀಲ್ ಚೇರ್ ಮೇಲೆ ಕುಳಿತು ತಿರುಗಾಟ ಆರಂಭಿಸಿದ ಎರಡೇ ವರ್ಷದಲ್ಲಿ, ಅನಾಥಾಶ್ರಮ ದಿಂದ ಒಬ್ಬ ಮಗುವನ್ನು ಆಕೆ ದತ್ತು ಪಡೆದಿದ್ದಳು. ವಿಪರ್ಯಾಸ ಎಂದರೆ, ಕೆಲವು ವರ್ಷಗಳ ಹಿಂದೆ, ಅವಳ ಪತಿಯೇ ಅವಳ ವಿರುದ್ಧ ಕೋರ್ಟಿಗೆ ಹೋಗಿದ್ದ. ಕಾರು ನಡೆಸುವಾಗ ನನಗೆ ನಿದ್ದೆ ಬಂದಿತ್ತು ಎನ್ನುವುದು ಸುಳ್ಳು, ಅಂದು ಕತ್ತೆ ಅಡ್ಡ ಬಂದಿತ್ತು, ನಾನು ಕಾರಿನಿಂದ ಹೊರಗೆ ಜಿಗಿದಿದ್ದೇ ಎಂಬುದು ತಪ್ಪು, ಕಾರು ಉರುಳುವಾಗ ನಾನು ಹೊರಗೆ ಬಿದ್ದಿದ್ದೆ, ಜನರ ಅನುಕಂಪ ಗಿಟ್ಟಿಸಲು ಅವಳು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾಳೆ ಎಂಬುದು ಅವನ ವಾದವಾಗಿತ್ತು.

ಏನೇ ಆದರೂ, ಪರಿಣಾಮ ಒಂದೇ ಅಲ್ಲವೇ? ಅವಳು ಅನುಭವಿಸಿದ್ದು ಸುಳ್ಳೇ? ಜೀವನದಲ್ಲಿ ಹೋರಾಡಿದ್ದು ಸುಳ್ಳೆ? ಮುಂದಿನ
ಬದುಕಿಗಾಗಿ ಹೋರಾಡುತ್ತಿರುವುದು ಸುಳ್ಳೆ? ಆ ಕತ್ತೆಗೆ ಅಷ್ಟೂ ಅರ್ಥವಾಗಲಿಲ್ಲ. ನ್ಯಾಯಾಲಯದಲ್ಲಿ ಅವನ ವಾದಕ್ಕೆ ಬೆಲೆ ಇರಲಿಲ್ಲ. ಅವಳು ಅಲ್ಲಿಯೂ ಗೆದ್ದಿದ್ದಳು. ಅದರಿಂದ ಅವಳು ಇನ್ನೊಂದು ಪಾಠ ಕಲಿತಿದ್ದಳು.

ಇಂದು ಅವಳು ಹೇಳುತ್ತಾಳೆ, ಪ್ರಪಂಚದಲ್ಲಿ ಮೂರು ಬಗೆಯ ಜನ ಇರುತ್ತಾರೆ. ಮೊದಲನೆಯ ವರ್ಗ, ನಮ್ಮ ಜತೆಗಿದ್ದು, ನಮ್ಮ ಕಷ್ಟ ಕಾಲದಲ್ಲಿ ಒದಗಿ ಬರದೆ ಇರುವವರು. ಅವರಿಂದ ನಮಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಅರಿತು ತಾವಾಗಿಯೇ ನಮ್ಮಿಂದ ದೂರ ಹೋಗುವವರು. ಅಂಥವರು ಒಂದು ರೀತಿಯಲ್ಲಿ ಒಳ್ಳೆಯವರು. ಅವರ ಪ್ರಾಮಾಣಿಕತೆಗಾದರೂ ನಾವು ಗೌರವ ಕೊಡಬೇಕು.

ಎರಡನೆಯ ವರ್ಗ, ತಮ್ಮನ್ನೂ ನಮ್ಮ ಜತೆ ಸೇರಿಸಿಕೊಂಡು, ನಮ್ಮ ಜತೆ ಇದ್ದಂತೆ ತೋರಿಸಿಕೊಳ್ಳುವವರು. ಅವರಿಗೆ ನಮ್ಮ ಜತೆಗಿದ್ದರೆ ಮಾತ್ರ ಬೆಲೆ ಅಥವಾ ನಮ್ಮಿಂದ ಏನಾದರೂ ಪ್ರಯೋಜನವಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಜತೆ ಇರುವವರು.
ಇಡೀ ಜಗತ್ತಿಗೇ ನಮ್ಮ ಜತೆ ಇದ್ದೇನೆಂದು ತೋರಿಸಿಕೊಂಡರೂ, ತಾನು ಇವರ ಜತೆ ಇಲ್ಲವೆಂಬುದು ಅವರಿಗೇ ಗೊತ್ತಿರುತ್ತದೆ. ನಮ್ಮಿಂದ ಅವರಿಗೆ ಏನೂ ಪ್ರಯೋಜನ ಇಲ್ಲವೆಂದು ತಿಳಿದಾಗ ನಮ್ಮನ್ನು ಬಿಟ್ಟು ಹೋಗುವ ಅವಕಾಶವಾದಿಗಳು ಅವರು. ಅವರು ತಮ್ಮ ಅನುಕೂಲಕ್ಕಾಗಿ, ನಮ್ಮ ಜೀವನದಲ್ಲಿ ತಮ್ಮ ಪಾಲೂ ಇದೆ ಎಂದು ಹೇಳಲು ಆಗಾಗ ನಮಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ.

ಆದರೆ ಅಂಥವರಿಂದ ನಾವು ಮುಕ್ತಿ ಪಡೆಯುವುದು ಒಳಿತು. ಏಕೆಂದರೆ, ಕೆಟ್ಟದ್ದು ನಮ್ಮಿಂದ ದೂರವಾಗುತ್ತಿದ್ದಂತೆ ಒಳ್ಳೆಯದು ತಾನಾಗಿಯೇ ಹತ್ತಿರ ಬರಲಾರಂಭಿಸುತ್ತದೆ. ಇನ್ನು ಮೂರನೆಯ ವರ್ಗ, ಇವರು ಸದಾ ನಮ್ಮ ಜತೆಗಿದ್ದರೂ, ಎಂದಿಗೂ ಹೇಳಿ ಕೊಳ್ಳುವುದಿಲ್ಲ. ಇವರು ನಮ್ಮ ಕೆಲಸದಲ್ಲಿ ಜತೆಗಿದ್ದು, ನಮ್ಮ ಏಳಿಗೆಯಲ್ಲಿ ಸಹಕರಿಸುತ್ತಾರೆ. ಆದರೆ ನಮ್ಮ ಯಶಸ್ಸಿನಲ್ಲಿ,
ಶ್ರೇಯಸ್ಸಿನಲ್ಲಿ ಎಂದೂ ತಮಗೆ ಪಾಲು ಕೇಳುವುದಿಲ್ಲ. ಬೇಷರತ್ತಾಗಿ ನಮ್ಮನ್ನು ಪ್ರೀತಿಸುತ್ತಾರೆ. ಅವರು ನಿಜಕ್ಕೂ ಬೆಲೆ ಕಟ್ಟ ಲಾಗದ ನಮ್ಮ ಜನ.

ಅಂಥವರನ್ನು ಗೌರವಿಸಿ, ನಮ್ಮ ಜತೆ ಇರುವಂತೆ ನೋಡಿಕೊಳ್ಳಬೇಕು. ಅಂಥವರು ನನ್ನ ಜತೆ ಇರುವುದರಿಂದ ಇಂದು ನಾನು ಆನಂದದಲ್ಲಿದ್ದೇನೆ. ಇದು ಅವಳ ಅನುಭವದ ಮಾತು. ಅವಳೇ ಹೇಳುವಂತೆ, ಸಮಸ್ಯೆಗಳು ತೀರಾ ದೊಡ್ಡದಲ್ಲ. ನಾವು ತುಂಬಾ ಚಿಕ್ಕವರು. ನಮ್ಮಿಂದ ನಿಭಾಯಿಸಲು ಸಾಧ್ಯಾವಾಗದ ಕಾರಣ ನಮ್ಮ ಸಮಸ್ಯೆ ನಮಗೆ ದೊಡ್ಡದಾಗಿ ಕಾಣುತ್ತದೆ. ಸರಿಯಾಗಿ ನಿಭಾಯಿಸಿದರೆ ಘೋರ ಸಮಸ್ಯೆಯೂ ಸಣ್ಣದಾಗುತ್ತದೆ ಎಂಬುದಕ್ಕೆ ಅವಳು ಅಂದರೆ, ಪಾಕಿಸ್ತಾನದ ಉಕ್ಕಿನ ಮಹಿಳೆ, ‘ಮುನಿಬಾ ಮಜಾರಿ ಬಲೂಚಿ’ ಜೀವಂತ ಉದಾಹರಣೆ.