Saturday, 24th October 2020

ನೇರ ಪಾವತಿ ವ್ಯಾಪ್ತಿಗೆ ಆಗ್ರಹಿಸಿ ಪಾಲಿಕೆ ವಾಹನ ಚಾಲಕರ ಪ್ರತಿಭಟನೆ

ತುಮಕೂರು:ತುಮಕೂರು ನಗರಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ವಾಟರ್ ಮನ್‌ಗಳಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಜಾರಿಗೊಳಿಸುವಂತೆ ಒತ್ತಾಯಿಸಿ ಇಂದು ಹೊರಗುತ್ತಿಗೆ ಕಾರ್ಮಿಕರು ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿದರು.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಸುಮಾರು 40 ಜನ ವಾಹನ ಚಾಲಕರು ಮತ್ತು 80ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರಾಗಿ,ವಾಟರ್ ಮನ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು,ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ.ಕನಿಷ್ಠ ವೇತನ ನಿಯಮಗಳನ್ನು ಅಳವಡಿಸಿಲ್ಲ.ಆದ್ದರಿಂದ ಇವರನ್ನು ನೇರ ಪಾವತಿ ವ್ಯಾಪ್ತಿಗೆ ಒಳಪಡಿಸಬೇಕೆಂಬುದು ಪ್ರತಿಭಟನಾನಿರತರ ಒತ್ತಾಯವಾಗಿದೆ.

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರುಸಭೆ ಪಟ್ಟಣಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಖಲೀಲ್ ಅಹಮದ್ ಮಾತನಾಡಿ,ಕಳೆದ 10 ರಿಂದ 15 ವರ್ಷಗಳಿಂದ ಅತಿ ಕಡಿಮೆ ದಿನಗೂಲಿಗೆ ದುಡಿಯುತ್ತಿ ರುವ ನಮ್ಮನ್ನು ಕನಿಷ್ಠ ವೇತನ ಪದ್ದತಿಗೂ ಅಳವಡಿಸಿಲ್ಲ. ಇದರಿಂದ ಗುತ್ತಿಗೆದಾರರು ನೀಡಿದಷ್ಟನ್ನೇ ಪಡೆದು ಜೀವನ ನಡೆಸಬೇಕಾಗಿದೆ.

ಈಗಾಗಲೇ, ಮೈಸೂರು ಪಾಲಿಕೆಯಲ್ಲಿ ಅಲ್ಲಿನ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸ ಲಾಗಿದೆ.ಅದೇ ರೀತಿ ತುಮಕೂರು ಪಾಲಿಕೆಯಲ್ಲಿಯೂ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸ ಬೇಕೆಂಬುದು ನಮ್ಮ ಒತ್ತಾಯವಾಗಿದೆ.

ಈ ನಿಟ್ಟಿನಲ್ಲಿ, ಪಾಲಿಕೆಯ ಆಯುಕ್ತರು ಹಾಗೂ ಮೇಯರ್ ಅವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ ಎಂದರು. ಮನವಿ ಸ್ವೀಕರಿಸಿದ ಪಾಲಿಕೆಯ ಆಯುಕ್ತರಾದ ರೇಣುಕಾ ಅವರು, ಈ ಸಂಬಂಧ ಸರಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *