Monday, 26th October 2020

ಸರಳ ಸತ್ಯದ ಪಾಠಗಳು

ಸಂತೋಷ್ ರಾವ್ ಪೆರ್ಮುಡ

ಗಾಂಧೀಜಿಯವರ ಬಾಲ್ಯದ ಹೆಸರು ಮೋನು ಎಂದಾಗಿತ್ತು. ಇವರ ತಾಯಿ ಪುತಲೀಬಾಯಿಯು ಪ್ರತೀ ಮಳೆಗಾಲದ ಚಾತು ರ್ಮಾಸದಲ್ಲಿ ಉಪವಾಸ ವೃತವನ್ನು ಮಾಡುತ್ತಿದ್ದರು. ಇವರು ತಮ್ಮ ಅನಾರೋಗ್ಯದ ಸಂದರ್ಭದಲ್ಲೂ ಸೂರ್ಯೋದಯ ವನ್ನು ಕಾಣದೆ ಆಹಾರವನ್ನು ಸ್ವೀಕರಿಸುತ್ತಿರಲಿಲ್ಲ.

ಒಂದು ದಿನ ತಾಯಿಯ ವೃತದ ಸಂದರ್ಭದಲ್ಲಿ ಆಕಾಶದಲ್ಲಿ ದಟ್ಟ ಮೋಡಗಳಿದ್ದವು. ಸೂರ್ಯ ಉದಯಿಸುವ ಸಮಯ.
ಆದರೂ ಮೋಡದ ಕಾರಣದಿಂದ ಸೂರ್ಯ ಕಾಣಿಸುತ್ತಿರಲಿಲ್ಲ. ತನ್ನ ತಾಯಿಯನ್ನು ಬೇಗ ಊಟ ಮಾಡಿಸುವ ಒಂದೇ ಆಸೆ ಯಿಂದ ಮೋನುವು ಉಪಾಯವನ್ನು ಮಾಡಿ, ತಾಯಿಗೆ ಕೇಳಿಸುವಂತೆ ಜೋರಾಗಿ ಸೂರ್ಯ ಕಾಣಿಸಿದ, ಸೂರ್ಯ ಉದಯಿಸಿದ! ಎಂದು ಕಿರುಚುತ್ತಾ ಕೋಣೆಯೊಳಕ್ಕೆೆ ಓಡಿ ಬಂದ.

ಆದರೆ ಮಗ ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ತಾಯಿಗೆ ತಿಳಿದಿತ್ತು. ಮಳೆಗಾಲದಲ್ಲಿ ಅದೂ ಆಗಸದಲ್ಲಿ ಕಪ್ಪು ಮೋಡಗಳು
ಕವಿದಿರುವಾಗ ಸೂರ್ಯ ಕಾಣಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಮಗನ ಸುಳ್ಳಿಗೆ ಪಾಠ ಕಲಿಸಲು ತಾಯಿಯು
ಒಂದು ಉಪಾಯ ಮಾಡಿದರು. ಪುತಲೀಬಾಯಿಯು ತಮ್ಮ ಬಲಗೈಯನ್ನು ಮುಂದಕ್ಕೆ ಚಾಚಿ, ‘‘ಮೋನು, ನಾನು ನನ್ನ ಕೈಯನ್ನು ಮುಂದಕ್ಕೆ ಚಾಚಿ ನಾನು ಕಣ್ಣು ಮುಚ್ಚಿಕೊಳ್ಳುವೆ. ಸೂರ್ಯ ಉದಯಿಸಿದ್ದನ್ನು ನೀನು ನೋಡಿರುವುದು ನಿಜವೇ ಆಗಿದ್ದರೆ ನನ್ನ ಕೈಯನ್ನು ನಿನ್ನ ಬಲಗೈಯಿಂದ ಮುಟ್ಟಬೇಕು, ನೀನು ಸುಳ್ಳು ಹೇಳಿದ್ದರೆ ನಿನ್ನ ಎಡಗೈಯಿಂದ ನನ್ನ ಚಾಚಿದ ಕೈಯನ್ನು ಮುಟ್ಟಬೇಕು. ನೀನು ಹೇಳಿದ್ದು ನಿಜವೋ ಸುಳ್ಳೋ ಎನ್ನುವುದು ಕಣ್ಣು ಮುಚ್ಚಿಕೊಂಡಿರುವ ನನಗೆ ಕಾಣಿಸುವುದಿಲ್ಲ’’ ಎಂದು ಹೇಳಿ ಕಣ್ಣು ಮುಚ್ಚಿಕೊಂಡರು.

ಮೋನುವಿಗೆ ತನ್ನ ತಪ್ಪಿನ ಅರಿವಾಗಿದ್ದರಿಂದ ತನ್ನ ತಾಯಿಯ ಕೈ ಮುಟ್ಟಲು ಭಯವಾಯಿತು. ಬಹಳ ಹೊತ್ತಾದರೂ ಮೋನುವು ತಮ್ಮ ಕೈಯನ್ನು ಮುಟ್ಟದೇ ಇದ್ದಾಗ ತಾಯಿಗೆ ಸಂತೋಷವಾಯಿತು. ತಪ್ಪನ್ನು ಒಪ್ಪಿಕೊಂಡ ಮಗನ ಬಗ್ಗೆೆ ಹೆಮ್ಮೆ ಅನಿಸಿ, ಮುಚ್ಚಿದ್ದ ತಮ್ಮ ಕಣ್ಣುಗಳನ್ನು ತೆರೆದು ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಮಗು ಎನ್ನುತ್ತಾ ಮೋನುವನ್ನು ಎದೆಗೆ ಅಪ್ಪಿಕೊಂಡರು. ಮೋನುವು ಎಷ್ಟೇ ಕಷ್ಟ ಎದುರಾದರೂ ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಅಂದೇ ಶಪಥ ಮಾಡಿ ದ್ದನು.

ಒಂದು ದಿನ ಮೋಹನದಾಸರು ಆಟವಾಡಲೆಂದು ಶಾಲೆಯ ಮೈದಾನಕ್ಕೆೆ ನಡೆದುಕೊಂಡು ಹೋಗುತ್ತಿದ್ದರು. ಅರ್ಧ ದಾರಿ
ತಲುಪಿದಾಗ ಜೋರಾಗಿ ಮಳೆ ಸುರಿಯಲು ಆರಂಭಿಸಿದ ಕಾರಣ ರಸ್ತೆಯ ಬದಿಯ ಅಂಗಡಿಯ ಛಾವಣಿಯ ಅಡಿಯಲ್ಲಿ ನಿಂತಿ ದ್ದರು. ಮಳೆಯಿಂದ ರಕ್ಷಿಸಿಕೊಳ್ಳಲೆಂದು ಅದಾಗಲೇ ನಾಲ್ಕು ಮಂದಿ ಹಿರಿಯರು ಅಲ್ಲಿ ನಿಂತಿದ್ದರು. ಆಗ ಅಲ್ಲಿಗೆ ಕಪ್ಪು ವರ್ಣೀಯ ಯುವಕನೊಬ್ಬನು ಮಳೆಯಲ್ಲಿ ಒದ್ದೆಯಾಗಿಕೊಂಡು ಅಲ್ಲಿಗೆ ಓಡುತ್ತಾ ಬಂದನು. ಆದರೆ ಆತನು ಇವರೆಲ್ಲರೂ ನಿಂತಿದ್ದ ಅಂಗಡಿಯ ಛಾವಣಿಯ ಅಡಿಗೆ ಬಂದು ನಿಲ್ಲದೇ, ಅಲ್ಲೇ ಪಕ್ಕದಲ್ಲಿದ್ದ ಮರದ ಕೆಳಗೆ ನಿಂತನು. ಅದನ್ನು ನೋಡೊದ ಮೋಹನದಾಸರು ಆಶ್ಚರ್ಯದಿಂದ ಆ ಯುವಕನನ್ನು ತನ್ನ ಬಳಿಗೆ ಬಂದು ಮಾಡಿನ ಅಡಿಯಲ್ಲಿ ನಿಲ್ಲುವಂತೆ ದೊಡ್ಡ ಧ್ವನಿ ಯಲ್ಲಿ ಕರೆದರು. ಆದರೆ ಆ ಯುವಕನು ಮೋಹನದಾಸರ ಮಾತನ್ನು ಕೇಳಿಯೂ ಕೇಳಿಸಿಕೊಳ್ಳುವಂತೆ ನಿಂತಿದ್ದನು.

ಇದನ್ನೆಲ್ಲಾ ನೋಡಿದ ಆ ಅಂಗಡಿಯ ಮಾಲಕನು ಜೋರಾಗಿ ನಗುತ್ತಾ ಮೋಹನದಾಸನಿಗೆ, ‘‘ನೋಡು ಮಗೂ ಅದು ಅವರವರ ಕರ್ಮದ ಫಲ, ಅವನು ಪೂರ್ವ ಜನ್ಮದಲ್ಲಿ ಪಾಪ ಮಾಡಿದ್ದರಿಂದ ಆ ಕರ್ಮದ ಫಲವನ್ನು ತನ್ನೊಂದಿಗೆ ಹೊತ್ತುಕೊಂಡು
ಬಂದು, ಈ ಜನ್ಮದಲ್ಲಿ ಕೆಳ ವರ್ಗದಲ್ಲಿ ಹುಟ್ಟಿದ್ದಾನೆ. ಆದ್ದರಿಂದ ಅವನಿಗೆ ನಮ್ಮಂಥ ಮೇಲ್ವರ್ಗದವರ ಜೊತೆಗೆ ನಿಲ್ಲುವ ಹಕ್ಕಿಲ್ಲ
ಎಂದು’’ ಹೇಳಿದನು.

ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದರೆ ಈ ಜನ್ಮದಲ್ಲಿ ಮಳೆಗೆ ಒದ್ದೆಯಾಗುತ್ತಲೇ ನಿಲ್ಲಬೇಕು ಎನ್ನುವ ಮಾತು ಮೋಹನದಾಸರಿಗೆ
ತಮಾಷೆಯಾಗಿ ಕಂಡಿತು. ಹಾಗಿದ್ದರೆ ನಾನೀಗ ಅಂಗಡಿಯ ಛಾವಣಿಯ ಅಡಿಯಲ್ಲಿ ನಿಂತಿದ್ದು, ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು, ಆದ್ದರಿಂದ ನಾನು ಮೇಲ್ವರ್ಗದಲ್ಲಿ ಹುಟ್ಟಿದ್ದೇನೆ. ಆದ್ದರಿಂದ ನಾನೀಗ ಅಂಗಡಿಯಿಂದ ಹೊರಗೆ ಹೋಗಿ ಮಳೆಯಲ್ಲಿ ನಿಂತರೂ ಮಳೆಗೆ ನಾನು ಒದ್ದೆಯಾಗಬಾರದು ಎಂದು ಯೋಚಿಸಿದರು. ಕೂಡಲೇ ಮೋಹನದಾಸರು ತಾನು ನಿಂತಿದ್ದಲ್ಲಿಂದ ಈಚೆಗೆ ಬಂದು, ಅದೇ ಮಳೆಯಲ್ಲೇ ಓಡಿಹೋಗಿ ಮರದ ಅಡಿಯಲ್ಲಿ ನಿಂತಿದ್ದ ಕಪ್ಪು ಬಣ್ಣದ ಯುವಕನ ಬಳಿ ನಿಂತರು. ಆದರೆ ಅವರು ಯೋಚಿಸಿದಂತೆ ಮಳೆಯು ನಿಲ್ಲಲಿಲ್ಲ. ಆಗ ಪೂರ್ವಜನ್ಮದ ಪಾಪ ಮತ್ತು ಪುಣ್ಯದ ಫಲಗಳು ಎಂಬ ನಂಬಿಕೆಗಳೆಲ್ಲ ಶುದ್ಧ ಸುಳ್ಳು ಎನ್ನುವುದು ಅವರ ಅರಿವಿಗೆ ಬಂತು. ಇದೇ ತಿಳಿವಳಿಕೆಯು ಅವರ ಮುಂದಿನ ಜೀವನದಲ್ಲಿ ಮಾರ್ಗದರ್ಶಕ ಎನಿಸಿತ್ತು.

Leave a Reply

Your email address will not be published. Required fields are marked *