Friday, 24th March 2023

ಯಡಿಯೂರಪ್ಪ ಅವರೇ ಸಂಬಳ ಕೊಡಿ ಇಲ್ಲ, ಪ್ರಾಣ ಬಿಡಲು ಅನುಮತಿ ಕೊಡಿ: ಅತಿಥಿ ಉಪನ್ಯಾಸಕರ ಅಳಲು

ಬೆಂಗಳೂರು: ಲಾಕ್‌ಡೌನ್ ಪ್ರಾರಂಭ ಆದಾಗಿನಿಂದ ನಯಾ ಪೈಸೆ ಸಂಬಳ ಕೊಡದೆ ರಾಜ್ಯ ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕ ರನ್ನು ಉಪವಾಸ ಕೆಡವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಸಂಬಳ ಕೊಡಿ ಇಲ್ಲ ಪ್ರಾಣ ಬಿಡಲು ಅನುಮತಿ ಕೊಡಿ ಎಂದು ಅತಿಥಿ ಉಪನ್ಯಾಸಕ ಚನ್ನಬಸಪ್ಪ ರೇವಡಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸರಿಯಾಗಿ ಸಂಬಳ ಸಿಗದೆ 23 ಜನ ಉಪನ್ಯಾಸಕರು ಜೀವ ಬಿಟ್ಟಿದ್ದಾರೆ, ನಿಮಗೆ ಇನ್ನೆಷ್ಟು ಜೀವ ಬೇಕು ಎಂದು ಪ್ರಶ್ನಿಸಿದರು. ಅನೇಕ ವರ್ಷಗಳಿಂದ ಕೇವಲ 10 ಸಾವಿರ ಸಂಬಳಕ್ಕೆ ಜೀತದಾಳುಗಳಂತೆ ದುಡಿಯುತ್ತಿದ್ದೇವೆ. ನಾವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ನಮ್ಮ ಭವಿಷ್ಯವೇ ಹಾಳಾಗಿದೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕ ಎಲ್.ಎನ್.ರೆಡ್ಡಿ ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಕೈಹಿಡಿಯದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿ ಸಂಬಳ ನೀಡಿ ಎಂದು ಹೇಳಿ ಸರ್ಕಾರದ ಅಡಿಯಲ್ಲಿ ದುಡಿಯುತ್ತಿರುವ ನಮಗೆ ಮೋಸ ಮಾಡುತ್ತಿದೆ. ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿದ್ದು ಮತ್ತೆ ನಮ್ಮನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ಅವರು ವಚನ ಭ್ರಷ್ಟರಾಗಿದ್ದಾರೆ ಎಂದರು.

ಆಮ್ ಆದ್ಮಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಅವರು ಮಾತನಾಡಿ, ನವೆಂಬರ್ 30ರ ಒಳಗೆ ಅತಿಥಿ ಉಪನ್ಯಾಸಕರ ಖಾತೆಗೆ ಸಂಬಳ ಜಮೆ ಮಾಡದಿದ್ದರೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಲಾಗು ವುದು ಎಂದು ಎಚ್ಚರಿಕೆ ನೀಡಿದರು.

error: Content is protected !!