Wednesday, 29th June 2022

ತಡೆಯಿಲ್ಲದೇ ಹರಿಯುವುದು ನದಿಗಳ ಹಕ್ಕು !

ಅಭಿಮತ

ಡಾ.ಎಂ.ಆರ್‌.ದೇಸಾಯಿ

ನದಿ ನೀರಿನ ಹರಿವಿಗೆ ಅಡೆತಡೆಯೊಡ್ಡಿ ಬೇರೆಡೆ ತಿರುಗಿಸುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತದೆ. ನಿಸರ್ಗ ವನ್ನು ಪೂರ್ತಿ ಅರ್ಥೈಸಿಕೊಳ್ಳದೆ ಅದನ್ನು ಕಡೆಗಣಿಸಿ ಆತುರತೆಯ ನಿರ್ಣಯಗಳನ್ನು ತೆಗೆದುಕೊಳ್ಳತ್ತಿರುವುದು ಅಪಾಯಕ್ಕೆ ಆಹ್ವಾನವಾಗಿದೆ.

ನದಿಗಳು ಭೂಮಿಯ ಮೇಲೆ ಬಿದ್ದ ಮಳೆ ನೀರನ್ನು ಸಮುದ್ರಕ್ಕೆ ಸೇರಿಸಿ ನೀರಿನ ಚಕ್ರವನ್ನು ಪೂರ್ತಿಗೊಳಿಸುವದರ ಜೊತೆಗೆ ಹಲವಾರು ರೀತಿಯಲ್ಲಿ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಕ್ರೀಯೆಗೆ ಅಡೆತಡೆ ಮಾಡುವದರ ದುಷ್ಟಪರಿ ಣಾಮ ಇನ್ನೆಲ್ಲಿ ಯೋ ಆಗುವುದು ನಿಶ್ಚಿತ.

ಬೆಟ್ಟದಲ್ಲಿ ಹುಟ್ಟಿ ಹರಿದು ಬಹರುವ ನದಿ ತನ್ನ ದಾರಿಗುಂಟ ತನ್ನದೇ ಜೀವವ್ಯವಸ್ಥೆ ಯನ್ನು, ಅಂತರ್ಜಲವನ್ನು ಸೃಷ್ಟಿ ಮಾಡಿ ಕೊಳ್ಳುತ್ತ ನಡೆಯುತ್ತದೆ. ಮಳೆ ನೀರನ್ನು ಶುದ್ಧಗೊಳಿಸಿ ಭೂ ಗರ್ಭಕ್ಕೆ ಸೇರಿಸುತ್ತ ಹೋಗುತ್ತದೆ. ತಾನು ಸೃಷ್ಟಿಸಿದ ಜೀವ ವ್ಯವಸ್ಥೆ ಯನ್ನು ಕಾಪಾಡಿಕೊಳ್ಳುವ ಹಕ್ಕ ನದಿಗಳಿಗಿದೆ. ಇಲ್ಲಿರುವ ಜೀವರಾಶಿಯಿಂದಾಗಿಯೇ ನದಿಗಳನ್ನು ಜೀವನದಿ ಎಂದು ಕರೆಯ ಲಾಗುತ್ತದೆ.

ನಿಸರ್ಗದ ಸಮಸ್ತ ಜೀವರಾಶಿಗಳಲ್ಲಿ ಮಾನವ ತಾನು ಒಂದು ಚಿಕ್ಕ ಭಾಗ ಮಾತ್ರ ಎನ್ನುವು ದನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳಬೇಕು. ನಮ್ಮ ಉಪಯೋಗಕ್ಕೆ ಬಾರದ ವಸ್ತುಗಳೆ ಲ್ಲವೂ ನಿರುಪಯೋಗ ಎಂದು ಭಾವಿಸುವುದು ದೊಡ್ಡ ತಪ್ಪು. ನಿಸರ್ಗ ದಲ್ಲಿ ತ್ಯಾಜ್ಯ ವೆನ್ನುವುದು ಇಲ್ಲ. ಈಗ ನಾವು ಬೋಧಿಸುತ್ತಿರುವ ಮರುಬಳಕೆ ಮಂತ್ರ ನಿಸರ್ಗದಲ್ಲಿ ಪ್ರಾರಂಭದಿಂದಲೂ ಇದೆ. ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ ಎಂದು ಭಾವಿಸುವುದು ನಿಜ ಸ್ಥಿತಿಗೆ ಬಹಳ ದೂರವಾದದ್ದು.

ನದಿಗಳು ಸಮುದ್ರ ಸೇರುವಲ್ಲಿ ನದಿಮುಖ (ಇಸ್ಟೋರಿ) ಎಂಬ ಪರಿಸರಗಳು ನಿರ್ಮಾಣವಾಗುತ್ತವೆ. ನದಿಮುಖಗಳು ಬಹಳ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಸಿಹಿ ಹಾಗೂ ಉಪ್ಪು ನೀರಿನ ಮಧ್ಯವರ್ತಿ ಪರಿಸರಗಳಾಗಿವೆ. ಸಮುದ್ರದ ಉಬ್ಬರಿಳಿತಗಳು ಹಾಗೂ ನದಿ ನೀರಿನ ಪ್ರವಾಹಗಳಲ್ಲಿ ಆಗುವ ಏರಿಳಿತಗಳಿಂದ ಇವು ಕ್ರಿಯಾತ್ಮಕ (ಡೈನಾಮಿಕ್) ಪರಿಸರಗಳಾಗಿರುತ್ತವೆ. ಇವು ಸಮುದ್ರದ ನೀರಿನ ಪಿಎಚ್ ಸಮರ್ಪಕವಾಗಿ ಕಾಯ್ದುಕೊಳ್ಳುತ್ತವೆ. ಇವುಗಳಲ್ಲಿ ಹಲವಾರು ಅವಾಸಸ್ಥಾನಗಳು ನಿರ್ಮಾಣ ಗೊಂಡಿರುತ್ತವೆ.

ಫೋಟೊಪ್ಲಾಂಕ್ಟನ್ ಸಸ್ಯವು ಇಲ್ಲಿ ಹೇರಳವಾಗಿ ಇರುತ್ತವೆ. ಮಳೆಗಾಲದಲ್ಲಿ ಸಿಹಿನೀರು ಹೆಚ್ಚು ಬರುವುದರಿಂದ ಇದರ ಉತ್ಪಾದನೆ ಇನ್ನೂ ಹೆಚ್ಚಾಗುತ್ತದೆ. ಇದು ಗಣನೀಯ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುವದರಿಂದ ಆರೋಗ್ಯಕರ ಪರಿಸರಕ್ಕೆ ಅನುಕೂಲವಾಗುತ್ತದೆ. ಸಾಗರದ ಅನೇಕ ಜೀವಿಗಳು ತಮ್ಮ ಬಾಲ್ಯಾವಸ್ಥೆಯಲ್ಲಿ ಇವುಗಳನ್ನು ನರ್ಸರಿಗಳಾಗಿ ಉಪಯೋಗಿಸುವಾಗ ಫೋಟೊಪ್ಲಾಂಕ್ಟನ್ ಅವುಗಳ ಆಹಾರವಾಗಿರುತ್ತದೆ.

ನದಿಗೆ ತಡೆಯೊಡ್ಡುವುದರಿಂದ ಸಾಗರದಲ್ಲಿ ಸಿಹಿನೀರಿನ ಕೊರತೆಯಾದರೆ ಆಲ್ಗೆ ಎಂಬ ಹಾನಿಕಾರಕ ಸಸ್ಯ ಹೆಚ್ಚಾಗುವದೆಂದು ವೈಜ್ಞಾನಿಕ ಅಭ್ಯಾಸಗಳಿಂದ ತಿಳಿದಿದೆ. ಆಲ್ಗೆ ಫೋಟೊ ಪ್ಲಾಂಕ್ಟನ್ನನ್ನು ನಾಶಪಡಿಸುತ್ತದೆ. ಸತ್ತ ಆಲ್ಗೆ ಮೀನುಗಳ ಶ್ವಾಸಕೋಶ ದಲ್ಲಿ ಸೇರಿಕೊಂಡು ಅವುಗಳನ್ನು ಕೊಲ್ಲುತ್ತವೆ. ಸತ್ತ ಸಸ್ಯ ಹಾಗೂ ಜಲಚರ ಪ್ರಾಣಿಗಳು ಕೊಳೆಯಲಾರಂಭಿಸುವವು. ಈ ಕೊಳೆ ಯುವ ಕ್ರೀಯೆಯಿಂದ ಪರಿಸರ ಮಾಲಿನ್ಯ ಹೆಚ್ಚುತ್ತದೆ. ಸಮುದ್ರಗಳಲ್ಲಿ ಸಿಹಿ ನೀರಿನ ಕೊರತೆ ಉಂಟಾದರೆ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಈ ಪರಿಸರಕ್ಕೆ ಒಗ್ಗದ ಜೀವಿಗಳು ನಾಶವಾಗುವುದು ಸಹಜ. ನದಿಯ ನೀರು ಸಮುದ್ರ ಸೇರುವುದರಿಂದ ಇನ್ನೂ ಅನೇಕ ಅವಶ್ಯಕ ಖನಿಜಗಳು ಹರಿದು ಬರುತ್ತವೆ.

ಮಾಲಿನ್ಯ ತಡೆಯುವಲ್ಲಿ, ಹೂಳು ತುಂಬುವದನ್ನು ನಿಯಂತ್ರಿಸುವಲ್ಲಿ ಹಾಗೂ ಮಹಾಪೂರ ಮತ್ತು ಚಂಡಮಾರುತಗಳಂಥ ನಿಸರ್ಗ ವಿಕೋಪಗಳಿಂದ ರಕ್ಷಣೆ ನೀಡುವದರಲ್ಲಿ ನದಿಮುಖಗಳ ಪಾತ್ರ ಮಹತ್ವದ್ದಾಗಿದೆ. ಮೋಡಗಳು ಸಾಗರಗಳ ಮೇಲೆ ಉತ್ಪತ್ತಿಯಾಗಿ ಭೂಮಿಯ ಮೇಲೆ ಮಳೆ ಸುರಿಸುತ್ತವೆ. ಸಾಗರದಿಂದ ಆವಿಯಾಗಿ ಹೋದ ನೀರು ತಿರಿಗಿ ಸಾಗರ ಸೇರಿ ನೀರಿನ ಚಕ್ರ
ಪೂರ್ತಿಯಾಗುತ್ತದೆ. ನದಿಯ ನೀರನ್ನು ಬೇರೆ ಕಡೆಗೆ ತಿರುವುದರಿಂದ ಸಮುದ್ರಕ್ಕೆ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ.

ಇದರಿಂದಾಗಿ ಇಂಗಾಲದ ಕ್ರೋಢಿಕರಣ ಆಮ್ಲಿಕರಣ ಸಾಗರದಲ್ಲಿ ಹೆಚ್ಚಾಗುತ್ತದೆ. ನದಿಗಳನ್ನು ಬೇರೆ ಕಡೆ ತಿರುಗಿಸುವುದು ಒಂದು ಅಸಹಜ ಭಯಾನಕ ಬೆಳವಣಿಗೆ ಎಂಬುದನ್ನು ಮರೆಯಬಾರದು. ಸಾಗರಗಳಿಗೆ ಹೋಲಿಸಿದರೆ ನದಿಮುಖಗಳ ಗಾತ್ರ ಬಹಳ ಚಿಕ್ಕದು. ಆದರೆ ಅವುಗಳ ಪಾತ್ರ ಬಹಳ ಮಹತ್ವದ್ದು. ಸಾಗರಗಳು, ನದಿಮುಖಗಳು ಹಾಗೂ ನದಿಗಳು ಪರಸ್ಪರ ಸಂಬಂಧ ಹೊಂದಿವೆ. ಒಂದರ ಮೇಲೆ ಆದ ದುಷ್ಪರಿಣಾಮ ಇನ್ನೊಂದರ ಖಂಡಿತ ಆಗುತ್ತದೆ. ಕೊನೆಗೆ ಮನುಷ್ಯರ ಮೇಲೂ ಆಗುತ್ತದೆ.

ನದಿ ನೀರಿನ ಹರಿವಿಗೆ ಅಡೆತಡೆಯೊಡ್ಡಿ ಬೇರೆಡೆ ತಿರುಗಿಸುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತದೆ. ನಿಸರ್ಗವನ್ನು ಪೂರ್ತಿ ಅರ್ಥೈಸಿಕೊಳ್ಳದೆ ಅದನ್ನು ಕಡೆಗಣಿಸಿ ಆತುರತೆಯ ನಿರ್ಣಯಗಳನ್ನು ತೆಗೆದುಕೊಳ್ಳತ್ತಿರುವುದು ಅಪಾಯಕ್ಕೆ ಆಹ್ವಾನ ವಾಗಿದೆ. ನಾವು ನಿಸರ್ಗವನ್ನರಿತು ಅದಕ್ಕನುಗುಣವಾಗಿ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ.
ಏಕೆಂದರೆ ನಿಸರ್ಗದ ಕಾರ್ಯವೈಖರಿಯನ್ನು ನಮಗೆ ಒಗ್ಗುವ ಹಾಗೆ ಬದಲಾಯಿಸುವುದು ಅಸಾಧ್ಯ.

ನಿಸರ್ಗ ಹಾಗೂ ವನ್ಯಜೀವಿಗಳ ಜೊತೆ ಸಹಜೀವನದೊಂದಿಗೆ ಬದುಕುದೊಂದೇ ದಾರಿ. ನಿಸರ್ಗ ಒಪ್ಪದಿದ್ದರೆ ಯಾವ
ತಂತ್ರಜ್ಞಾನವೂ ನಮ್ಮುನ್ನು ರಕ್ಷಿಸಲಾರದು. ಕುಡಿಯುವ ನೀರಿಗೆ, ಕೃಷಿಗೆ ನೀರು ಪಡೆಯಲು ಸ್ಥಳೀಯ ಜಲಮೂಲಗಳನ್ನು, ಪಾರಂಪರಿಕ ಕೆರೆ, ಕುಂಟೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ದೃಢ ನಿಶ್ಚಯದಿಂದ ತೊಡಗಿಕೊಳ್ಳಬೇಕು. ಹರಿಯುವ ನದಿಗೆ ಮೈಯೆಲ್ಲ ಕಾಲು ಎಂದು ಅಲ್ಲಮ ಪ್ರಭು ನದಿಯ ಚಲನಶೀಲತೆಯನ್ನು ಹೇಳಿದ ವಚನ ಇಲ್ಲಿ ನೆನಪಾಗುತ್ತದೆ.