Sunday, 27th November 2022

ರಸ್ತೆ ಅಪಘಾತದ ನಿಯಂತ್ರಣ ಅಸಾಧ್ಯವೇ ?

ಕಳಕಳಿ

ಡಾ.ಎಸ್.ಜಿ.ಹೆಗಡೆ

ರಸ್ತೆ ಅಪಘಾತಕ್ಕಿರುವ ಕರಾಳ ಮುಖಗಳು ಒಂದೆರಡಲ್ಲ. ಆದರೆ, ಪ್ರತಿಬಾರಿ ಅಪಘಾತವಾದಾಗಲೂ ಅದರ ಹಿಂದಿನ ಕಾರಣ ಮಹತ್ವ ಪಡೆದು, ಚರ್ಚೆಯಾಗಿ, ತರುವಾಯದಲ್ಲಿ ಮನಸ್ಸಿನ ಕಾಳಜಿ ವಲಯ ದಿಂದ ಜಾರಿಹೋಗುತ್ತದೆ. ಹೀಗಾಗಿ ಎಲ್ಲ ತೆರನಾದ ಸುರಕ್ಷತಾ ಕ್ರಮಗಳೂ ಅಪೂರ್ಣವೆನಿಸಿಬಿಡುತ್ತವೆ.

ಕಳೆದ ಆಗಸ್ಟ್ ೪ರಂದು ಪುಣೆಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲು ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿ ಮೂಲಕ ಬೆಳಗಿನ ಜಾವ ಪ್ರಯಾಣಿಸಿದ್ದೆ. ಪುಣೆ ತಲುಪಿದಾಗ ಅಲ್ಲಿನ ಚಾನಲ್‌ನಲ್ಲಿ ಬಿತ್ತರವಾಗುತ್ತಿದ್ದ ಇಬ್ಬರು ಪ್ರಮುಖರ ಸಾವಿನ ಸುದ್ದಿ ಮತ್ತು ಸಂತಾಪ ಸೂಚಕ ಕಾರ್ಯಕ್ರಮ ನನ್ನ ಗಮನ ಸೆಳೆದವು.

ಷೇರು ಮಾರುಕಟ್ಟೆಯ ಸರದಾರ ರಾಕೇಶ್ ಜುಂಜುನ್ವಾಲಾ ಮತ್ತು ಶಿವ ಸಂಗ್ರಾಮ ಪಕ್ಷದ ಸಂಸ್ಥಾಪಕ ವಿನಾಯಕ್ ಮೇಟೆ ಇವರೇ ಸತ್ತ ಆ ಇಬ್ಬರು ಪ್ರಮುಖರು. ಈ ಪೈಕಿ, ಜುಂಜುನ್ವಾಲಾ ಸಾವಿಗೆ ಅವರ ಆರೋಗ್ಯಹಾನಿ ಕಾರಣವಾದರೆ, ಮೇಟೆ ಸಾವಿಗೆ ಕಾರಣವಾಗಿದ್ದು ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅದೇ ಮುಂಜಾನೆ ಘಟಿಸಿದ ಭೀಕರ ಅಪಘಾತ. ಅದೇ ದಾರಿಯಲ್ಲಿ ನಾನು ಸಾಗುವಾಗ ರಸ್ತೆಯಲ್ಲಿ ಯಾವುದೇ ಗೊಂದಲ ಕಂಡಿರಲಿಲ್ಲ; ಪ್ರಾಯಶಃ ಅಪಘಾತದ ತಾಣ ಅದಾಗಲೇ ಕ್ಲಿಯರ್ ಆಗಿದ್ದಿರಬೇಕು.

ಈ ಅಪಘಾತದ ಸುದ್ದಿ ಹರಡುತ್ತಿದ್ದಂತೆ ‘ಮೇಟೆ ಅವರಂಥವರಿಗೂ ರಸ್ತೆಯಲ್ಲೇ ಬದುಕಿನ ಅಂತ್ಯ ಬರೆದಿತ್ತೇ’ ಎಂದು ಜನ ದಿಗ್ಭ್ರಮೆಗೊಳಗಾಗಿದ್ದು ನಿಜ. ಮುಂಬೈ-ಪುಣೆ ರಸ್ತೆಯು ಭಾರತದ ಮೊಟ್ಟಮೊದಲ ಆರು ಲೇನ್‌ನ ಸಿಮೆಂಟ್ ಕಾಂಕ್ರೀಟ್ ಎಕ್ಸ್‌ಪ್ರೆಸ್ ಹೆದ್ದಾರಿ. ಅತ್ಯಂತ ದಟ್ಟಣೆಯಿರುವ ದೇಶದ ರಸ್ತೆಗಳಲ್ಲಿ ಇದೂ ಒಂದು. ೯೪.೫ ಕಿ.ಮೀ. ಉದ್ದದ ಈ ಹೆದ್ದಾರಿ ಪ್ರತಿದಿನ ಸುಮಾರು ೬೦,೦೦೦ ವಾಹನಗಳ ಸಂಚಾರವನ್ನು ನಿಭಾಯಿಸುತ್ತದೆ.

ದಿನಗಳೆದಂತೆ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿದಿನ ಸುಮಾರು ೧ ಲಕ್ಷ ವಾಹನಗಳನ್ನು ನಿಭಾಯಿಸಲು ಆಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಸುರಕ್ಷತೆ ಮತ್ತು ವೇಗದ ನಿರ್ವಹಣೆಯ ವಿಚಾರದಲ್ಲಿನ ಭಾರತದ ಪ್ರಥಮ ನೂತನ ರಸ್ತೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇಷ್ಟಾಗಿಯೂ ಈ ಮಾರ್ಗದಲ್ಲಿ ಅನೇಕ ಪ್ರಾಣಾಂತಿಕ ಅಪಘಾತಗಳಾಗಿರುವುದು ವಿಷಾದ ನೀಯ.

೨೦೧೮ರ ಈಚೆಗೆ ಈ ಹೆದ್ದಾರಿಯಲ್ಲಿ ಆಗಿರುವ ಮಾರಕ ಅಪಘಾತಗಳ ಸಂಖ್ಯೆ ೪೦೦ರಷ್ಟಿದೆ. ಮುಖ್ಯಮಂತ್ರಿಗಳ ಜತೆಗಿನ ಮಹತ್ವದ ಮೀಟಿಂಗ್‌ಗೆಂದು ಮಹಾರಾಷ್ಟ್ರದ ಭೀಡ್ ಭಾಗದಿಂದ ಪುಣೆ ಮೂಲಕ ಮುಂಬೈಗೆ ತೆರಳುತ್ತಿದ್ದ ಮೇಟೆ ಅವರ ಎಸ್
ಯುವಿ ಕಾರು, ಲೇನ್ ಬದಲಾವಣೆಯ ಸಂದರ್ಭದಲ್ಲಿ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು. ಅವರ ನಿಧನವು ಇಂಥ ಹೆದ್ದಾರಿಗಳಲ್ಲಿನ ಪ್ರಯಾಣದ ಅಸುರಕ್ಷತೆಯ ವಿಚಾರವನ್ನು ಮತ್ತಷ್ಟು ಗಂಭೀರವಾಗಿಸಿದೆ.

ಕೆಲದಿನಗಳ ನಂತರ, ಅಹ್ಮದಾಬಾದ್-ಮುಂಬೈ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಪ್ರಸಿದ್ಧ ಟಾಟಾ ಸಂಸ್ಥೆಯ ಹಿಂದಿನ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಸುನೀಗಿದ್ದು ದೊಡ್ಡ ಸುದ್ದಿಯಾಯಿತು. ಮುಂಬೈ ಸಮೀಪದ ಪಾಲ್‌ಘರ್ ಬಳಿಯ ಸೂರ್ಯ ನದಿಯ ಸೇತುವೆ ಮೇಲೆ ಕಾರು ಸಾಗುವಾಗ ಈ ಅಪಘಾತ ಘಟಿಸಿತು. ಸೇತುವೆಯ ಮೇಲೆ ಸಾಗುವಾಗ ಪ್ರತಿ ಘಂಟೆಗೆ ೪೦ ಕಿ.ಮೀ. ವೇಗ ಮಿತಿ ನಿಗದಿಪಡಿಸಿದ್ದರೂ ಮಿಸ್ತ್ರಿ ಅವರಿದ್ದ ಕಾರು ೧೦೦ ಕಿ.ಮಿ.ಗೂ ಹೆಚ್ಚು ವೇಗದಿಂದ ಚಲಿಸಿರುವ ಮಾಹಿತಿ ಲಭ್ಯವಾಗಿದೆ.

ರಸ್ತೆಯ ಎಡಭಾಗದಲ್ಲಿ ಚಲಿಸುತ್ತಿದ್ದ ಇನ್ನೊಂದು ವಾಹನದ ಎಡಗಡೆಯಿಂದ ತಿರುವಿನಲ್ಲಿ ಓವರ್‌ಟೇಕ್ ಮಾಡಲೆತ್ನಿಸಿದಾಗ ನಿಯಂತ್ರಣ ತಪ್ಪಿದ ಮಿಸಿಯವರ ಕಾರು ಸೇತುವೆಯ ದಿಂಡಿಗೆ ಬಲವಾಗಿ ಅಪ್ಪಳಿಸಿದ ಪರಿಣಾಮ ಗಿರಕಿ ಹೊಡೆದು ನಿಂತಿತು
ಎನ್ನುತ್ತದೆ ವರದಿ. ಹಿಂದಿನ ಆಸನದಲ್ಲಿದ್ದ ಮಿಸ್ತ್ರಿ ಹಾಗೂ ಸಂಬಂಧಿ ಜಹಾಂಗೀರ್ ಪಂಡೋಲೆ ಸೀಟ್‌ಬೆಲ್ಟ್ ಧರಿಸದಿದ್ದುದು ಸಾವಿಗೆ ಮುಖ್ಯ ಕಾರಣವಾಯಿತು ಎನ್ನಲಾಗಿದೆ.

ಜಗತ್ತಿನಲ್ಲೇ ಅತ್ಯುತ್ಕೃಷ್ಟ ಎಂಬ ಹೆಗ್ಗಳಿಕೆಯಿರುವ ಮತ್ತು ಸಾಕಷ್ಟು ಸುರಕ್ಷತಾ ಗ್ಯಾಜೆಟ್‌ಗಳನ್ನು ಹೊಂದಿದ್ದ ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಮಿಸಿ ಪ್ರಯಾಣಿಸಿದ್ದು. ಅವರು ಒಂದು ಕಾಲಕ್ಕೆ ಮುಖ್ಯಸ್ಥರಾಗಿದ್ದ ಟಾಟಾ ಸಂಸ್ಥೆಯು ಪ್ರತಿವರ್ಷ ಸಾವಿರಾರು ಕಾರುಗಳನ್ನು ತಯಾರಿಸಿ ರಸ್ತೆಗಿಳಿಸುತ್ತದೆ. ಬಳಸಿದ ವಾಹನದ ಉತ್ಕೃಷ್ಟತೆ ಹಾಗೂ ಸುರಕ್ಷತಾ ವಿಚಾರದ ಸಾಕಷ್ಟು ಜ್ಞಾನವಿದ್ದರೂ ಸೀಟ್ ಬೆಲ್ಟ್ ಧರಿಸುವ ವಿಷಯದಲ್ಲಿ ಮಿಸ್ತ್ರಿ ತೋರಿದ ಅಜಾಗರೂಕತೆ ಚರ್ಚೆಯ ವಿಷಯವಾಗಿದೆ.

ಇಷ್ಟೊಂದು ಅಜಾಗರೂಕರಾಗಿದ್ದರೆ ಅಪಘಾತದ ನಿಯಂತ್ರಣ ಹೇಗೆ ಸಾಧ್ಯ ಎಂಬ ಆತಂಕವೂ ವ್ಯಾಪಿಸಿದೆ. ರಸ್ತೆ ಅಪಘಾತ ಕ್ಕಿರುವ ಕರಾಳ ಮುಖಗಳು ಒಂದೆರಡಲ್ಲ. ಆದರೆ, ಪ್ರತಿಬಾರಿ ಅಪಘಾತವಾದಾಗಲೂ ಅದರ ಹಿಂದಿನ ಕಾರಣವು ಮಹತ್ವ ಪಡೆದು, ಗಂಭೀರ ಚರ್ಚೆಯಾಗಿ, ತರುವಾಯದಲ್ಲಿ ಮನಸ್ಸಿನ ಕಾಳಜಿ ವಲಯದಿಂದ ಮತ್ತೆ ಜಾರಿ ಹೋಗುತ್ತದೆ. ಹೀಗಾಗಿ ಎಲ್ಲ ತೆರನಾದ ಸುರಕ್ಷತಾ ಕ್ರಮಗಳೂ ಅಪೂರ್ಣವೆನಿಸಿಬಿಡುತ್ತವೆ.

ಅವಘಡಕ್ಕೆ ಹೊಣೆಯಾರು ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ಪ್ರಮುಖರ ಅಪಘಾತಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿ
ಎಲ್ಲರ ಗಮನ ಸೆಳೆದರೆ, ಜನಸಾಮಾನ್ಯರ ಸಾವು-ನೋವುಗಳು ಸಂಖ್ಯೆಗೆ ಕೇವಲ ಸೇರ್ಪಡೆಯಾಗುತ್ತವೆ, ಅಷ್ಟೇ.
ದಾಖಲೆಯ ಪ್ರಕಾರ, ೨೦೧೯ರಲ್ಲಿ ೪.೩೯ ಲಕ್ಷ ಅಪಘಾತಗಳು ಸಂಭವಿಸಿ ೧.೫೪ ಲಕ್ಷ ಸಾವು ಸಂಭವಿಸಿದರೆ, ೨೦೨೦ ರಲ್ಲಿ ೩.೫೪ ಲಕ್ಷ ಅಪಘಾತಗಳಾಗಿ ೧.೩೩ ಲಕ್ಷ ಜನ ಹಾಗೂ ೨೦೨೧ರಲ್ಲಿ ೪.೦೩ ಲಕ್ಷ ಅಪಘಾತಗಳಾಗಿ ೧.೫೫ ಲಕ್ಷ ಜನ ಸಾವನ್ನಪ್ಪಿದ್ದಾರೆ.

ಅಪಘಾತದ ಒಟ್ಟಾರೆ ಸಂಖ್ಯೆಯಲ್ಲಿ ಬಹಳಷ್ಟೇನೂ ಕಡಿತವಾಗದಿರುವಾಗ, ರಸ್ತೆಯ ವಿಸ್ತಾರ ಮತ್ತು ಸಾಗಾಟ ಸಂಖ್ಯೆಯನ್ನೂ ಪರಿಗಣಿಸಿನೋಡುವ ಅಗತ್ಯವಿದೆ. ರಸ್ತೆ ಅಪಘಾತದ ನಿಯಂತ್ರಣದ ವಿಚಾರ ಅದೆಷ್ಟು ಕ್ಲಿಷ್ಟವಾದುದು ಎಂಬುದು ಇಲ್ಲಿ ತಿಳಿಯುತ್ತದೆ. ಜಗತ್ತಿನ ವಾಹನದ ಸಂಖ್ಯೆಯ ಶೇ.೩ರಷ್ಟು ವಾಹನಗಳು ಮಾತ್ರವೇ ನಮ್ಮ ದೇಶದ ರಸ್ತೆಯಲ್ಲಿ ಓಡಾಡು ತ್ತಿದ್ದರೂ, ಅಪಘಾತದ ಸಂಖ್ಯೆಯು ಶೇ.೧೨ರಷ್ಟಿದೆ ಎನ್ನಲಾಗಿದೆ.

೨೦೨೧-೨೨ರ ವರ್ಷದಲ್ಲಿ ಕರ್ನಾಟಕದಲ್ಲಿ ೩೪,೩೯೪ ಅಪಘಾತಗಳು ಸಂಭವಿಸಿದ್ದು ೯೮೬೮ ಮಂದಿ ಸಾಯುವುದಕ್ಕೆ
ಮತ್ತು ೪೦೪೮೪ ಮಂದಿ ಗಾಯಾಳುಗಳಾಗುವುದಕ್ಕೆ ಅವು ಕಾರಣವಾಗಿವೆ. ಉತ್ತರಕನ್ನಡ ಜಿಲ್ಲೆಯ ಶಿರೂರು ಟೋಲ್
ಗೇಟ್ ಹತ್ತಿರ ರೋಗಿಯನ್ನು ಒಯ್ಯುತ್ತಿದ್ದ ಆಂಬುಲನ್ಸ್ ಅಪಘಾತಕ್ಕೀಡಾಗಿ ರೋಗಿಯಲ್ಲದೆ ಜತೆಗಿದ್ದವರೂ ಅಸುನೀಗಿದರು. ಬಹುಸೌಲಭ್ಯಗಳ ಆಸ್ಪತ್ರೆಗಳು ಎಲ್ಲೆಡೆ ಬೇಕು ಎಂಬ ಕೂಗು ತಾರಕಕ್ಕೇರುವುದಕ್ಕೆ ಈ ಘಟನೆ ಕಾರಣವಾಯಿತು.

ಯುವಕನೊಬ್ಬ ಕುಮಟಾ ಸಮೀಪ ಬೈಕ್ ಸವಾರಿ ಮಾಡುತ್ತಿರುವಾಗ ದನವೊಂದು ಅಡ್ಡಬಂದು ಬಿದ್ದು ನೆಲಕ್ಕಪ್ಪಳಿಸಿದ. ಆತ ಹೆಲ್ಮೆಟ್ ಧರಿಸಿದ್ದರೂ ಮಿದುಳಿಗೆ ಪೆಟ್ಟಾದ ಕಾರಣ ಕೊನೆಯುಸಿರೆಳೆದದ್ದು ಅಚ್ಚರಿಯ ಸಂಗತಿ. ಕಾರು ಚಾಲಕನಿಗೆ ಅರೆಕ್ಷಣ ನಿದ್ರೆಬಂದು ಕಣ್ಣು ಮುಚ್ಚಿದ್ದರಿಂದಾಗಿ ಅಪಘಾತವಾಗಿ ಗಂಭೀರ ಪೆಟ್ಟು ತಗುಲಿದವರು ನನ್ನ ಪರಿಚಿತರಲ್ಲೇ ಇದ್ದಾರೆ. ರಸ್ತೆಯಲ್ಲಿ
ಹಠಾತ್ತನೆ ನುಸುಳಿಬಂದ ಪ್ರಾಣಿಗಳಿಗೆ ಅಪ್ಪಳಿಸುವುದನ್ನು ತಪ್ಪಿಸಲು ಹೋಗಿ ವಾಹನಗಳು ಉರುಳಿದ ಅನೇಕ ನಿದರ್ಶ
ನಗಳಿವೆ. ಮದ್ಯ ಸೇವಿಸಿ ವಾಹನ ಚಲಾಯಿಸುವಾಗ ಆಗುವ ಅಪಘಾತಗಳನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಮುಂಬೈನ ಕಲ್ಯಾಣದ ವೃತ್ತದಲ್ಲಿ ಸಿಗ್ನಲ್ ತಪ್ಪಿಬಂದ ಯುವಕರ ಬೈಕ್ ಮೇಲೆ ಟ್ರಕ್ಕೊಂದು ಸವಾರಿ ಮಾಡಿ ಅವರು ಮಾಂಸದ ಮುದ್ದೆಯಾಗಿದ್ದು ಕಣ್ಣಾರೆ ಕಂಡ ನೋವು ನನ್ನ ಮನದಲ್ಲಿನ್ನೂ ಮಾಯವಾಗಿಲ್ಲ. ಹೀಗೆ ರಸ್ತೆ ಅಪಘಾತಕ್ಕಿರುವ ಬಗೆ, ಕಾರಣಗಳು ಅನೇಕ. ಆದರೆ ಪರಿಣಾಮ ಮಾತ್ರ ಭೀಕರ. ಹೀಗಾಗಿ ರಸ್ತೆ ಅಪಘಾತಗಳ ನಿಯಂತ್ರಣ ಹೇಗೆ ಎಂಬ ಪ್ರಶ್ನೆಯು ಕಗ್ಗಂಟಾಗಿಯೇ ಉಳಿದುಕೊಂಡಿದೆ. ವಿನಾಯಕ್ ಮೇಟೆ ಸಾವಿನ ನಂತರ, ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ‘ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (ITMS) ಅಳವಡಿಸುವ ವಿಚಾರ ಮುಂಚೂಣಿಗೆ ಬಂದಿದೆ.

ಮಿತಿಮೀರಿದ ವೇಗದಲ್ಲಿ ಸಾಗುವ, ಲೇನ್ ಬದಲಿಸುವ ವಾಹನಗಳನ್ನು ಗುರುತಿಸಿ ದಂಡಹಾಕುವ ಇ-ಚಲನ್ ಯಂತ್ರ, ಸ್ಪೀಡ್ ಗನ್ ಮತ್ತು ವಾಹನದ ನಂಬರ್ ಪ್ಲೇಟ್ ಅನ್ನು ಸ್ವಯಂಚಾಲಿತವಾಗಿ ಗುರುತಿಸುವ ವ್ಯವಸ್ಥೆ ಇತ್ಯಾದಿ ಆಧುನಿಕ ಕಣ್ಗಾವಲು ವ್ಯವಸ್ಥೆಗಳನ್ನು ಇದು ಹೊಂದಿರುತ್ತದೆ. ಮಿಸ್ತ್ರಿಯವರ ಸಾವು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಸೀಟ್‌ಬೆಲ್ಟ್ ಅನ್ನು ಕಡ್ಡಾಯವಾಗಿಸುವ ವಿಚಾರವನ್ನು ಮುನ್ನೆಲೆಗೆ ತಂದಿದೆ. ಜತೆಗೆ ಕಾರುಗಳಲ್ಲಿ ಏರ್‌ಬ್ಯಾಗ್ ಸಂಖ್ಯೆಯನ್ನು ಹೆಚ್ಚಿಸುವ ಕುರಿತೂ ಮಾತುಕತೆ ನಡೆದಿದೆ. ಉನ್ನತ ವ್ಯಕ್ತಿಗಳ ನಿಧನವು ಇಂಥ ಉನ್ನತ ವಿಚಾರಗಳಿಗೆ ಎಡೆಮಾಡಿಕೊಡುವುದು ಅಸಹಜವೇನಲ್ಲ!

ಆದರೆ, ಜನಸಾಮಾನ್ಯರಿಗೆ ಬಂದೆರಗುವ ಅಪಘಾತವನ್ನು ನಿಯಂತ್ರಿಸುವುದು ಹೇಗೆಂಬುದು ಇಲ್ಲಿ ಉದ್ಭವಿಸುವ ಮುಖ್ಯಪ್ರಶ್ನೆ. ಆಡಳಿತಾಂಗಕ್ಕೆ ಇದು ಸುಲಭದ ವಿಷಯವೇನೂ ಅಲ್ಲ. ಕಾರು ಮಾತ್ರವೇ ಅಲ್ಲ, ಬೈಕು, ಟ್ರಕ್ಕು, ಬಸ್ಸು, ರಿಕ್ಷಾದಂಥ ವಾಹನಗಳ ಅಪಘಾತಗಳ ಸಂಖ್ಯೆಯೂ ಸಾಕಷ್ಟಿರುತ್ತದೆ. ಬಹುತೇಕ ವಾಹನಗಳಲ್ಲಿ ಸೀಟ್‌ಬೆಲ್ಟ್ ಪ್ರಯೋಗ ಸಾಧ್ಯವಿಲ್ಲ. ಹೆಲ್ಮೆಟ್ ಧರಿಸುವ ನಿಯಮ ಎಲ್ಲೆಡೆ ಪ್ರಯೋಗದಲ್ಲಿಲ್ಲ. ಇನ್ನು ವಾಹನ ಅಪಘಾತಗಳ ವೇಳೆ ರಸ್ತೆಯಲ್ಲಿನ ಪಾದಚಾರಿಗಳೂ ಬಳಲುವ ಪ್ರಮಾಣ ಸಾಕಷ್ಟಿದೆ.

ಸುಸ್ಥಿತಿಯಲ್ಲಿಲ್ಲದಿದ್ದರೂ ಓಡಾಡುತ್ತಿರುವ ವಾಹನಗಳ ಸಂಖ್ಯೆ ಸಾಕಷ್ಟಿದೆ. ನಮ್ಮ ದೇಶದಲ್ಲಿ ಸಂಚಾರ ಸುಭದ್ರತೆ ಕುರಿತಾದ ಕಾನೂನು, ನೀತಿ-ನಿಯಮಗಳಿಗೆ ಕಮ್ಮಿಯಿಲ್ಲ. ಆದರೆ ಕಾರಣಾಂತರಗಳಿಂದ ಅವೆಲ್ಲ ‘ಪುಸ್ತಕದ ಬದನೆಕಾಯಿ’ ಆಗಿವೆಯಷ್ಟೇ! ಹಾಗಂತ, ರಸ್ತೆ ಅಪಘಾತದ ನಿಯಂತ್ರಣದ ವಿಚಾರದಲ್ಲಿ ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದಲ್ಲ, ಅಂಥ ದೂಷಣೆ ಸಲ್ಲ. ಜನರ ಅಜಾಗರೂಕತೆಯಿಂದಲೂ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ ಎಂಬುದು ತಿಳಿದಿರಲಿ.

ಹೀಗಾಗಿ ಆಡಳಿತಾಂಗದ ಗಂಭೀರ ಯತ್ನವು ತಳಮಟ್ಟಕ್ಕೆ ತಲುಪುವ ಅವಶ್ಯಕತೆಯಿದೆ. ಪ್ರತಿಯೊಂದು ಹಳ್ಳಿಯ ಮಟ್ಟದಲ್ಲೂ ಅಪಘಾತ ನಿಯಂತ್ರಣ ವ್ಯವಸ್ಥೆ ಮತ್ತು ತರಬೇತಿ ಜಾರಿಗೆ ಬರಬೇಕು. ಗುರಿಸಾಧನೆಗೆ ಸಂಕಲ್ಪಿಸಬೇಕು, ಹೊಣೆಗಾರಿಕೆಯನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಆಗ ಮಾತ್ರವೇ ರಸ್ತೆ ಅಪಘಾತದ ಬಾಬತ್ತನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯ.
ರಸ್ತೆಯಲ್ಲಿ ಸಂಚರಿಸುವವರಲ್ಲಿ, ತಮ್ಮ ಬದುಕು ಅತ್ಯಮೂಲ್ಯವೆಂಬ ತಿಳಿವಳಿಕೆ, ಹೊಣೆಗಾರಿಕೆ ಮತ್ತು ಎಚ್ಚರ ಇರಬೇಕಾದ್ದು ಅತಿಮುಖ್ಯವಾದುದು.