Sunday, 14th August 2022

ಕೈದಿಗಳು ತಯಾರಿಸಿದ ರಾಕೆಟ್‌ !

ಡಾ.ಉಮಾಮಹೇಶ್ವರಿ ಎನ್‌.

ಎರಡನೇಯ ಮಹಾಯುದ್ಧದ ಕಾಲದಲ್ಲಿ ಜರ್ಮನಿಯು ಲಕ್ಷಾಂತರ ಜನರನ್ನು ಸಾಯಿಸಿದ್ದು ಗೊತ್ತೇ ಇದೆ. ಜತೆಗೆ, ವಿವಿಧ ದೇಶಗಳ ಸೈನಿಕರನ್ನು ಬಂಧಿಸಿ,
ಸುರಂಗಗಳಲ್ಲಿ ಕೂಡಿಹಾಕಿ, ಅವರನ್ನು ದುಡಿಸಿ ರಾಕೆಟ್ ಮೊದಲಾದ ಯುದ್ಧ ಸಾಮಗ್ರಿಗಳನ್ನು ತಯಾರಿಸಲಾಗುತ್ತಿತ್ತು. ಅಮಾನವೀಯ ಸ್ಥಿತಿಯಲ್ಲಿ ಕೆಲಸ
ಮಾಡುತ್ತಿದ್ದ ಅಂತಹ ಸಾವಿರಾರು ಜನ ಸತ್ತರು. ಆ ಜಾಗಗಳನ್ನು ಇಂದು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ – ಅಂದಿನ ನೋವಿನ ನೆನಪುಗಳು, ಮುಂದೆ ಅಂತಹ ಹಿಂಸೆಯಾಗದಂತೆ ತಡೆಯುತ್ತದೆ ಎಂಬ ಭರವಸೆಯಿಂದ.

ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಸೈನ್ಯ ಯುದ್ಧಕೈದಿಗಳನ್ನು ಅಮಾನವೀಯವಾಗಿ ಹಿಡಿದಿಟ್ಟದ್ದಲ್ಲದೇ ಅಂತರರಾಷ್ಟ್ರೀಯ ಯುದ್ಧ ನಿಯಮಗಳಿಗೆ ವಿರುದ್ಧವಾಗಿ ಅವರನ್ನು ಕಾರ್ಮಿಕ ರಾಗಿ ಬಳಸಿಕೊಂಡದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಯುದ್ಧಕೈದಿಗಳನ್ನು ಕರೆತಂದು ಹಲವಾರು ಕಡೆ ಯಾತನಾ ಶಿಬಿರ ಗಳಲ್ಲಿಟ್ಟು ವಿವಿಧ ಉದ್ದೇಶಗಳಿಗೋಸ್ಕರ ಬಳಸಲಾಯಿತು. ಆ ಶಿಬಿರಗಳನ್ನು ಮತ್ತು ಹತ್ಯಾಕಾಂಡದ ಸ್ಥಳಗಳನ್ನು ಈಗ ವಸ್ತುಸಂಗ್ರಹಾಲಯವನ್ನಾಗಿ ರೂಪಿಸಿ ದ್ದಾರೆ. ಇವುಗಳಲ್ಲಿ ಒಂದಾದ ಮಿ ಟ್ಟೆಲ್ ಬಾವ್- ಡೋರಾ ಶಿಬಿರಗಳಿದ್ದ ಜಾಗವನ್ನು ನೋಡುವ ಅವಕಾಶ ೨೦೧೯ರಲ್ಲಿ ಒದಗಿ ಬಂತು.

ಯುದ್ಧ ಕೈದಿಗಳನ್ನು ಕರೆತಂದು ಅವರಿಂದ ಸುರಂಗಗಳನ್ನು ಕೊರೆಯಿಸಿ, ಒಳಗಡೆ ಯುದ್ಧಸಾಮಗ್ರಿ ಗಳನ್ನು, ಮುಖ್ಯವಾಗಿ ರಾಕೆಟ್‌ಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಪ್ರಾರಂಭಿಸಲಾಯಿತು. ಸುರಂಗಗಳನ್ನು ಕೊರೆಯಲು ಬೇಕಾದ ಯುದ್ಧಕೈದಿಗಳನ್ನು ಇರಿಸಲು ೧೯೪೪ರ ಆಸುಪಾಸಿನಲ್ಲಿ ಸುಮಾರು ಸಬ್ ಕ್ಯಾಂಪುಗಳು ಹೆಝ್‌ರ್ ಪರ್ವತದ ಆಸುಪಾಸಿನಲ್ಲಿ ಬಂದವು. ಕೊನೆಗೆ ಇವೆಲ್ಲ ವನ್ನೂ ಡೋರಾ ಶಿಬಿರದ ಅಧೀನಕ್ಕೆ ತರಲಾಯಿತು. ಇವೇ ಮಿಟ್ಟೆಲ್ ಬಾವ್ ಶಿಬಿರಗಳು.

ಒಂದೇ ಜತೆ ಬಟ್ಟೆ
ಹೊರಗಿನ ಕೈದಿಗಳ ಹಾಗೂ ಸೈನ್ಯದ ವಸತಿಗಳ ನಿರ್ಮಾಣದಲ್ಲಿ ಹಾಗೂ ಸುರಂಗ ಕೊರೆಯಲು ಮತ್ತು ರಾಕೆಟ್ ತಯಾರಿಸಲು ಕೈದಿಗಳನ್ನೇ ಉಪಯೋಗಿಸಿ ಕೊಂಡರು. ಕೈದಿಗಳು ಒಗ್ಗಟ್ಟಾಗ ದಂತೆ ಊಟ ಕೊಡುವುದೂ ಅತಿ ನಿಗದಿತ ಪ್ರಮಾಣದಲ್ಲಿ ಆಗಿತ್ತು. ಬಟ್ಟೆ ನೀಡುವಾಗಲೂ ಹಾಗೆಯೇ – ಒಬ್ಬ ಕೈದಿಗೆ ಒಂದೇ ಬಟ್ಟೆ. ಅದು ಹರಿದರೆ ತಕ್ಷಣ ಹೊಸ ಉಡುಗೆ ನೀಡಲಾಗುತ್ತಿರಲಿಲ್ಲ. ಕೊಡುವ ಬಟ್ಟೆಯೂ ಹವಾಮಾನಕ್ಕೆ ಅನುಗುಣವಾಗಿರಲಿಲ್ಲ. ಯಾರಾದರೂ ತಿರುಗಿ ಬೀಳುವ ಲಕ್ಷಣಗಳು ಕಂಡು ಬಂದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ವಧಿಸಲಾಗುತ್ತಿತ್ತು, ಯಾರಿಗೂ ತಿಳಿಯದಂತೆ.

ಕೈದಿಗಳಲ್ಲಿ ಸ್ವಲ್ಪ ಬಲವಾಗಿರುವವರನ್ನು ಸೈನಿಕರು ತಮಗೆ ಹತ್ತಿರವಿರಿಸಿಕೊಂಡು ಉಳಿದವರನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದರು. ಸುರಂಗ ಕೊರೆಯು ವವರ ಸ್ಥಿತಿ ಮತ್ತು ಹೊರಗೆ ಕೆಲಸ ಮಾಡುವವರ ಪರಿಸ್ಥಿತಿ ಹೀನಾಯವಾಗಿತ್ತು. ಒಂದು ಗುಹೆಯೊಳಗೇ ಸಾವಿರಗಟ್ಟಲೆ ಜನರನ್ನು ಬೇರೆ ಬೇರೆ ಎತ್ತರಗಳಲ್ಲಿ ಇರಿಸಲಾಗುತ್ತಿತ್ತು. ಒಂದು ಮಲಗುವ ಸ್ಥಳದಲ್ಲಿ ಮೊದಲಿಗೆ ಮೂರು ನಾಲ್ಕು ಜನ ಇದ್ದರೆ ನಂತರ ಏಳೆಂಟು ಜನರನ್ನು ಹಾಕಲಾಗುತ್ತಿತ್ತು. ಜನ ಪಾಳಿಯಲ್ಲಿ ಆ ಮಲಗುವ ಸ್ಥಳಗಳನ್ನು ಉಪಯೋಗಿಸುತ್ತಿದ್ದರು. ಅದೇ ಸ್ಥಳದಲ್ಲಿಯೇ ಕೆಲಸಗಳೂ ನಡೆಯುತ್ತಿದ್ದುದರಿಂದ ವಿಶ್ರಾಂತಿ ಗಗನಕುಸುಮವಾಗಿತ್ತು.
ಮರದ ಕೊಮೋಡ್‌ಗಳನ್ನು ಬಹಿರ್ದೆಸೆಗೋಸ್ಕರ ಅ ಇಡಲಾಗುತ್ತಿತ್ತು.

ದಿನಗಟ್ಟಲೆ ಅದನ್ನು ಖಾಲಿಮಾಡಲು ಬಿಡುತ್ತಿರಲಿಲ್ಲ. ಕೆಲಸ ನಡೆಯುವಾಗ ಏಳುವ ಧೂಳು, ಶಬ್ದ, ಶುದ್ಧಗಾಳಿ ಹಾಗೂ ಶುದ್ಧನೀರಿನ ಕೊರತೆ, ಆಹಾರದ ಕೊರತೆ
ಎಲ್ಲವೂ ಸೇರಿ ಜನರಲ್ಲಿ ನಿತ್ರಾಣ-ರೋಗಗಳನ್ನು ಉಂಟುಮಾಡುತ್ತಿದ್ದವು. ವಾಂತಿಭೇದಿ, ನ್ಯುಮೋನಿಯಾ, ಕ್ಷಯರೋಗಗಳು ಬಹು ಸಾಮಾನ್ಯ. ಸುರಂಗ ಕೊರೆಯಲು ಮೊದಲು ಕರೆಸಿದ ಸುಮಾರು ಹತ್ತುಸಾವಿರ ಕೈದಿಗಳಲ್ಲಿ ಐದು ಸಾವಿರ ಜನರು ಸಾವಿಗೀಡಾದರು.

ಅಮೆರಿಕದ ವಶ
ಅಮೆರಿಕಾದ ಸೈನ್ಯ ಇದರ ಇರುವನ್ನು ತಿಳಿದು ೧೧ ಏಪ್ರಿಲ್ ೧೯೪೫ರಂದು ಇದನ್ನು ವಶಪಡಿಸಿಕೊಂಡಿತು. ಇದರ ಸುಳಿವು ತಿಳಿದ ಜರ್ಮನ್ ಸೈನ್ಯ ಹೆಚ್ಚಿನ ಕೈದಿಗಳನ್ನು ಬೇರೆ ಶಿಬಿರಗಳಿಗೆ ಕಾಲ್ನಡಿಗೆಯಲ್ಲಿ ಹಾಗೂ ರೈಲುಗಳ ಮೂಲಕ ಸ್ಥಳಾಂತರಿಸಿತ್ತು. ನಡಿಗೆಯಲ್ಲಿ ಹೊರಟವರಲ್ಲಿ ಹಲವರು ಮೃತ್ಯುವಿಗೀಡಾಗಿದ್ದರು. ಅಮೆರಿಕ ಸೈನ್ಯ ಬಂದಾಗಿ, ಇಲ್ಲಿ ಕೇವಲ ಸಾವಿರದಷ್ಟು ಅತೀ ಬಳಲಿ ಅಡಲೂ ಆಗದೆ ಇದ್ದ ಕೈದಿಗಳಿದ್ದರು.

ಯುದ್ಧ ಮುಗಿದ ನಂತರ ಈ ಜಾಗಗಳನ್ನು ಅನಾರೋಗ್ಯಪೀಡಿತ ಕಾರ್ಮಿಕರನ್ನು ಇರಿಸಲು ಉಪಯೋಗಿಸಿ, ಅವರು ಗುಣಮುಖರಾಗಿ ತಮ್ಮ ದೇಶಕ್ಕೆ ವಾಪಸಾಗುವ ತನಕ ನೋಡಿಕೊಂಡರು. ಸುರಂಗದ ಈ ಭಯಾನಕ ಅನುಭವದ ಮ್ಯೂಸಿಯಂ ನೋಡಲು ಸಿಬ್ಬಂದಿಯ ಜೊತೆಗೆ ಗೈಡೆಡ್ ಟೂರ್ ನಲ್ಲಿ ಹೋಗಬಹುದು. ಪ್ರತಿನಿತ್ಯ ಜನರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಾರೆ. ಕನಿಷ್ಠ ಹತ್ತು ಜನರಿರಬೇಕು. ಇದಕ್ಕೆ ಶುಲ್ಕವಿಲ್ಲ.

ದೊಡ್ಡಗುಂಪುಗಳು ಪ್ರತ್ಯೇಕವಾಗಿ ಹೋಗಬೇಕೆಂದರೆ ಶುಲ್ಕ ತೆರಬೇಕು. ಸಿಬ್ಬಂದಿ ವಿವರಿಸುವ ಭಾಷೆ ಜರ್ಮನ್. ಅ ಇಕ್ಕಟ್ಟಿನ ವಾಸಸ್ಥಳ ಸುರಂಗದೊಳಗೆ ಹೋಗಲು ಇದ್ದ ಎರಡು ಪ್ರವೇಶಸ್ಥಳಗಳೂ ರಷ್ಯಾದವರ ಬಾಂಬ್ ದಾಳಿಯಲ್ಲಿ ನಾಶವಾಗಿದ್ದವು. ಹೊಸ ದೊಂದು ಸುರಂಗ ಕೊರೆದು ಇದನ್ನು ನೋಡಲು ಅವಕಾಶ ಮಾಡಿದ್ದಾರೆ. ಸುಮಾರು ಅರ್ಧ ಕಿ.ಮೀ. ಮಬ್ಬುಗತ್ತಲೆ ಇರುವ ಸುರಂಗದೊಳಗೆ ನಡೆದ ನಂತರ ವಿಶಾಲವಾದ ಗುಹೆಯೊಂದನ್ನು ಪ್ರವೇಶಿಸುತ್ತೇವೆ. ಇಲ್ಲಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಸುರಂಗಗಳ ವಿನ್ಯಾಸದ ನಮೂನೆಯೊಂದನ್ನು ತೂಗು ಹಾಕಿzರೆ. ಒಂದು ರಾಕೆಟ್‌ನ ಮಾದರಿಯೂ ಇದೆ. ಈ ಗುಹೆಯ ಇಕ್ಕೆಲಗಳಲ್ಲಿರುವ ಬದಿಯ ಗುಹೆಗಳಲ್ಲಿ ಬೇರೆ ಬೇರೆ ಎತ್ತರಗಳಲ್ಲಿ ಕಲ್ಲುಗಳನ್ನು ಕೊರೆದು ಕೈದಿಗಳು ಮಲಗಲು ಜಾಗ ಮಾಡಲಾಗಿತ್ತು. ಅದೇ ಜಾಗದಲ್ಲಿ ಕೆಲಸಗಳು ನಡೆಯು ತ್ತಿದ್ದವು. ಒಂದೇ ಸ್ಥಳದಲ್ಲಿ ಹಲವಾರು ಜನ ಸುಧಾರಿಸಿಕೊಳ್ಳಬೇಕಾಗಿತ್ತು.

ನಮ್ಮ ಗೈಡ್ ಟಾರ್ಚ್ ದೀಪದಲ್ಲಿ ಮರದ ಕೃತಕ ನಿರ್ಮಿತಿಯ ಮೇಲೆ ಕರೆದುಕೊಂಡು ಹೋಗಿ ಇಕ್ಕೆಲಗಳಲ್ಲಿರುವ ಜಾಗಗಳನ್ನು ತೋರಿಸಿ, ರಾಕೆಟ್ ತಯಾರಿಸಲು ಕೈದಿಗಳು ಹೇಗೆ ಹೆಣಗಾಡುತ್ತಿದ್ದರೆಂದು ಹೇಳಿದ. ಕೊನೆಯ ಪ್ರದೇಶದಲ್ಲಿ ನೆಲಮಟ್ಟದಲ್ಲಿ ನೀರು ತುಂಬಿತ್ತು. ಇಲ್ಲಿ ಮೂರು ಸ್ತರಗಳಲ್ಲಿ ಕೆಲಸಕ್ಕೆ ಅವಕಾಶ. ಸುತ್ತಲೂ ಹರಡಿಕೊಂಡಿದ್ದ ಕಲ್ಲು – ಕಬ್ಬಿಣದ ಸಾಮಗ್ರಿಗಳು ಭಯ ಹುಟ್ಟಿಸುವಂತೆಯೇ ಇದ್ದವು. ಮರದ ಕೊಮೋಡ್‌ಗಳು ಒಂದೆಡೆ ಕಾಣಿಸಿದವು. ಈ ಸುರಂಗ
ವ್ಯವಸ್ಥೆಯ ಒಟ್ಟು ಉದ್ದ ಸುಮಾರು ೨೧೫ ಕಿ. ಮೀ. ಇದರಲ್ಲಿ ನಮಗೆ ಕಾಣಿಸುವುದು ಬರೀ ಒಂದೆರಡು ಕಿ.ಮೀ. ಮಾತ್ರ.

ನಾವೆಲ್ಲರೂ ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ ವ್ಯಾಪಕ ಸಾವು, ನೋವು, ಜನಾಂಗೀಯ ಹತ್ಯೆ, ಪ್ರಾಣ ಹಾನಿಗಳನ್ನು ನೆನಪಿನಲ್ಲಿಟ್ಟುಕೊಂಡು ಮನುಜರೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಿದರಷ್ಟೇ ಜಗತ್ತಿನ ಉಳಿವು ಸಾಧ್ಯ. ಕರೋನಾ ವೈರಸ್ ಮನುಷ್ಯರೊಡನೆ ಮೂರನೇ ಮಹಾ ಯುದ್ಧ ನಡೆಸುತ್ತಿದೆ ಎಂಬ ಹೇಳಿಕೆಗಳು ಬರುತ್ತಿದ್ದರೂ ಮನುಷ್ಯನ ಕ್ರೂರತೆಯ ಮುಂದೆ ಈ ವೈರಸ್‌ನ ಕ್ರೂರತೆ ಏನೇನೂ ಅಲ್ಲವೆಂಬುದು ಸತ್ಯ.

ಸಾವಿರ ರಾಕೆಟ್ ಪತ್ತೆ
ಅಮೆರಿಕನ್ನರು ೧೯೪೫ರಲ್ಲಿ ಇದನ್ನು ವಶಪಡಿಸಿಕೊಂಡಾಗ ಸುಮಾರು ಒಂದು ಸಾವಿರ ರಾಕೆಟ್‌ಗಳು ದೊರೆತವು. ಇವೆಲ್ಲವನ್ನೂ ಅವರು ತಮ್ಮ ದೇಶಕ್ಕೆ ಸಾಗಿಸಿದರು. ತಮ್ಮದೇ ದೇಶದ ಪೂರ್ವಜರು ಮಾಡಿದ ಅನಾಚಾರಗಳನ್ನು ಒಪ್ಪಿಕೊಂಡು ಜಗತ್ತಿನ ಕ್ಷಮಾಪಣೆಯನ್ನು ಬಹಿರಂಗವಾಗಿ ಕೇಳಿ ಸಂಬಂಧ ಪಟ್ಟ ಸ್ಥಳಗಳನ್ನು ಸ್ಮಾರಕಗಳಾಗಿ ಪರಿವರ್ತಿಸಿ ಜನಸಾಮಾನ್ಯರ ವೀಕ್ಷಣೆಗೆ ಅನುವು ಮಾಡಿಕೊಟ್ಟ ಜರ್ಮನರ ಪ್ರಾಮಾಣಿಕತೆಯನ್ನು ಮೆಚ್ಚಲೇ ಬೇಕು.

***

ಜರ್ಮನಿಯ ನಾರ್ಡ್ ಹೌಸೆನ್‌ವರೆಗೆ ಬೇರೆ ನಗರಗಳಿಂದ ರೈಲು ಸಂಪರ್ಕವಿದೆ. ಹತ್ತಿರದ ಟ್ರಾಮ, ರೈಲು ನಿಲ್ದಾಣಗಳಿಂದ ಈ ಮ್ಯೂಸಿಯಂ ತಲುಪಲು ಇಪ್ಪತ್ತು ನಿಮಿಷಗಳ ಕಾಲ್ನಡಿಗೆ.