Sunday, 25th September 2022

ಜೋಸ್ ಬಟ್ಲರ್ ಅರ್ಧಶತಕ: ರಾಜಸ್ಥಾನದೆದುರು ಸೊಲ್ಲೆತ್ತದ ಚೆನ್ನೈ

ಅಬುಧಾಬಿ: ಜೋಸ್ ಬಟ್ಲರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 126 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ 17.3 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಬಟ್ಲರ್ 48 ಎಸೆತಗಳಲ್ಲಿ 70 ರನ್ ಹಾಗೂ ನಾಯಕ ಸ್ಟೀವನ್ ಸ್ಮಿತ್ 26 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾದರು. ಚೆನ್ನೈ ಪರ ದೀಪಕ್ ಚಾಹರ್ 2, ಹ್ಯಾಝ್ಲೆಹುಡ್ 1 ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ತಂಡದ ಬ್ಯಾಟಿಂಗ್‌ ನಿರ್ಧಾರವನ್ನು ವೇಗಿ ಜೋಫ್ರ ಆರ್ಚರ್‌ ತಲೆ ಕೆಳಗಾಗಿಸಿದರು. ಮೊದಲ 2 ಓವರ್‌ಗಳಲ್ಲಿ ಕೇವಲ 5 ರನ್‌ ನೀಡಿದ ಅವರು ಫಾ ಡು ಪ್ಲೆಸಿಸ್‌ (10) ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಶೇನ್‌ ವಾಟ್ಸನ್‌ (8) ಕೂಡ ಕ್ರೀಸ್‌ ಆಕ್ರಮಸಿಕೊಳ್ಳಲು ವಿಫ‌ಲರಾದರು. ಪವರ್‌ ಪ್ಲೇ ಅವಧಿಯಲ್ಲಿ ಎರಡು ದೊಡ್ಡ ವಿಕೆಟ್‌ ಕಳೆದು ಕೊಂಡ ಧೋನಿ ಪಡೆ ಸಂಕಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಸ್ಯಾಮ್ ಕುರ್ರನ್ 22, ನಾಯಕ ಧೋನಿ 28, ರವೀಂದ್ರ ಜಡೇಜ 35 ರನ್ ಬಾರಿಸಿದರು.

ರಾಜಸ್ಥಾನ ರಾಯಲ್ಸ್ ಪರ ಜೋಫ್ರ ಅರ್ಚರ್, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ರಾಹುಲ್ ತೆವಾಟಿತ ತಲಾ ಒಂದು ವಿಕೆಟ್ ಪಡೆದರು.