Tuesday, 9th August 2022

ಸ್ವಯಂ ಸೇವಾ ಸಂಘದೊಂದಿಗಿನ ಒಡನಾಟದ ನೆನಪು

rss

ಶಂಕರ್‌ ಬಿದರಿ – ಸತ್ಯಮೇವ ಜಯತೇ- ಭಾಗ ೬

ನಿಪ್ಪಾಣಿಯಲ್ಲಿ ಗ್ರಂಥಾಲಯದಲ್ಲಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷದಲ್ಲಿ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ನಾನು ಕುತೂಹಲದಿಂದ ಅವರನ್ನು ಭೇಟಿ ಮಾಡಿದೆ. ಅವರು ರಾನಡೆ ಎಂದೂ ನಿಪ್ಪಾಣಿಯಲ್ಲಿ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದಾರೆ ಎಂದು ತಿಳಿದುಬಂತು. ನಿಪ್ಪಾಣಿಯಲ್ಲಿಯೂ ಸುಮಾರು ಐದು ತಿಂಗಳು ಶಾಖೆಗೆ ಹಾಜರಾದೆ.

ನಾನು ನಿಪ್ಪಾಣಿ ಕಾಲೇಜಿಗೆ ಹೊರಟಾಗ ನನಗೆ ಹದಿನೈದು ವರ್ಷ. ಕಾಲೇಜು ಜೀವನದ ಬಗ್ಗೆ ಬರೆಯುವ ಮುನ್ನ ನನ್ನ ಹದಿನೈದು ವರ್ಷಗಳಲ್ಲಿ ನಡೆದ ಕೆಲವು ಘಟನೆಗಳನ್ನು ದಾಖಲಿಸಬೇಕೆಂದು ಬಯಸುತ್ತೇನೆ.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಧಾರವಾಡದ ನವಕಲ್ಯಾಣ ಮಠದ ಶ್ರೀ ಕುಮಾರ ಸ್ವಾಮೀಜಿ ಅವರು ನಮ್ಮ ಊರಿಗೆ ಮೇಲಿಂದ ಮೇಲೆ ಬಂದು ಪ್ರವಚನ ನೀಡುತ್ತಿದ್ದರು. ಅವರ ಪ್ರವಚನ ಸಾಯಂಕಾಲ ನಡೆಯುತ್ತಿತ್ತು. ಮುಂಜಾನೆ ಅವರು ಮಲ್ಲಪ್ಪನ ಗುಡಿಯ ಆವರಣದಲ್ಲಿದ್ದ ಅಕ್ಕನ ಬಳಗದ ವಿಶಾಲವಾದ ಕೋಣೆಯೊಂದರಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಈ ಸಭೆಯಲ್ಲಿ ಎಲ್ಲರೂ ‘ಹೇ ಪ್ರಭು ಪ್ರಸೀದ ಓಂ’ ಎಂಬ ಮೂಲಮಂತ್ರ ವನ್ನು ಭಕ್ತಿಭಾವದಿಂದ ಸ್ತುತಿಸುತ್ತಿದ್ದರು.

ಚಿಕ್ಕ ಮಕ್ಕಳಾದ ನಮಗೆ ಸ್ವಾಮೀಜಿಯವರು ಈ ಮಂತ್ರವನ್ನು ಒಂದು ಸಾವಿರ ಬಾರಿ, ಹತ್ತು ಸಾವಿರದ ಬಾರಿ ಬರೆಯುವಂತೆ ತಿಳಿಸಿದ್ದರು. ನಾನು ಅದರಂತೆ ಒಂದು ತಿಂಗಳು ನಿರಂತರವಾಗಿ ಈ ಮೂಲಮಂತ್ರವನ್ನು ಒಂದು ಲಕ್ಷ ಬಾರಿ ಬರೆದು ಗುರುಗಳಗೆ ತೋರಿಸಿದೆ. ಅವರು ಬಹಳ ಸಂತೋಷಪಟ್ಟು ನನಗೆ ಒಂದು ರುದ್ರಾಕ್ಷಿ ಮಾಲೆಯನ್ನು ನೀಡಿದರು. ಯೋಗೀಶ್ವರ ಶ್ರೀಗಳು ನೀಡಿದ ಮುಳುಗದ ಲಿಂಗ ನಮ್ಮ ಅಜ್ಜನ ಮೊಮ್ಮಕ್ಕ ಳಲ್ಲಿ ನಾನೇ ಹಿರಿಯ ಗಂಡು ಮಗನಾಗಿದ್ದೆ. ನಮ್ಮ ಮನೆಯಲ್ಲಿ ದೇವರ ಪೂಜೆ ಯನ್ನು ಗಂಡು ಮಕ್ಕಳೇ ಮಾಡಬೇಕಾಗಿತ್ತು. ನಾನು ೯ ವರ್ಷದವನಿದ್ದಾಗ ಮನೆಯಲ್ಲಿ ದೇವರ ಪೂಜೆ ಮಾಡುವ ಜವಾಬ್ದಾರಿ ಯನ್ನು ನನಗೇ ವಹಿಸಿಕೊಟ್ಟರು.

ಒಂಬತ್ತನೇ ವರ್ಷದಿಂದ ನಾನು ಪ್ರತಿ ಮುಂಜಾನೆ ದೇವರ ಪೂಜೆ ಮಾಡುವುದಲ್ಲದೆ, ಸಾಯಂಕಾಲ ಸಹಿತ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚುವ ಕೆಲಸ ಮಾಡುತ್ತಿದ್ದೆ. ಸುಮಾರು 10 ವರ್ಷದವನಿದ್ದಾಗ ನನಗೆ ಆಸಂಗಿಯ ಶ್ರೀ ಯೋಗೀಶ್ವರ ಸ್ವಾಮೀಜಿಯವರು ಲಿಂಗ ದೀಕ್ಷೆಯನ್ನು ನೀಡಿ ಒಂದು ಲಿಂಗವನ್ನು ದಯಪಾಲಿಸಿದರು. ಅಂದಿನಿಂದ ಲಿಂಗಪೂಜೆಯನ್ನು ದಿನಾ ಎರಡು ಬಾರಿ ಮಾಡುತ್ತಿದ್ದೆ.

ಇದಾದ ಬಳಿಕ ಸುಮಾರು ಎರಡು ವರ್ಷಗಳ ಬಳಿಕ ನಮ್ಮವ್ವನ ಊರು ಗಲಗಲಿಗೆ ಹೋದಾಗ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಕೊಂಡು, ನದಿಯಲ್ಲೇ ನಿಂತು ಲಿಂಗಪೂಜೆ ಮಾಡುವ ದುಸ್ಸಾಹಸಕ್ಕೆ ಹೋದಾಗ ನೀರಿನ ರಭಸಕ್ಕೆ ಕೈಯಲ್ಲಿದ್ದ ಲಿಂಗ ಜಾರಿ ಹೊಳೆಯಲ್ಲಿ ಕೊಚ್ಚಿಹೋಯಿತು. ಸುಮಾರು ಒಂದು ಗಂಟೆ ಹುಡುಕಿದರೂ ಲಿಂಗ ಸಿಗಲಿಲ್ಲ. ಇದರಿಂದ ಬಹಳ ದುಃಖವಾಯಿತು. ರಜೆ ಮುಗಿದ ಬಳಿಕ ಬನಹಟ್ಟಿಗೆ ಬಂದ ಮೇಲೆ ಮತ್ತೆ ಸ್ವಾಮೀಜಿಯವರಿಗೆ ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದೆ. ಆಗ ಸ್ವಾಮೀಜಿಯವರು ‘ಆಗಿದ್ದು ಆಗಿಹೋಯಿತು, ಚಿಂತಿಸಬೇಡ, ಈ ಸಲ ನಿನಗೆ ನೀರಿನಲ್ಲಿ ಮುಳುಗಲಾರದ ಲಿಂಗವನ್ನು ಮಾಡಿ ಕೊಡುತ್ತೇನೆ’ ಎಂದು ತಿಳಿಸಿದರು.

ಅದೇ ರೀತಿ ಒಂದು ವಾರದ ನಂತರ ಅವರು ಮತ್ತೊಂದು ಲಿಂಗವನ್ನು ನನಗೆ ದಯಪಾಲಿಸಿದರು. ಆ ಲಿಂಗ ನೀರಿನಲ್ಲಿ ಮುಳುಗು ವುದಿಲ್ಲ. ಅದೇ ಲಿಂಗವನ್ನು ಇಂದಿಗೂ ಪ್ರತಿದಿನ ಪೂಜೆ ಮಾಡುತ್ತಿದ್ದೇನೆ. ಕಾಡಿನಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ನಿತ್ಯದ ಪೂಜೆ ತಪ್ಪಿಲ್ಲ. ಪ್ರತಿದಿನ ಪೂಜೆಯ ನಂತರ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮುಂದಿನ 24 ಘಂಟೆ ನಾನು ಸಂಪೂರ್ಣ ಸುರಕ್ಷಿತ ಎಂಬ ನಂಬಿಕೆ ಮೂಡುತ್ತದೆ.

ನಾನು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ ಜೂನ್ 1978ರಲ್ಲಿ ಮಸ್ಸೂರಿಗೆ ಮೂಲಭೂತ ತರಬೇತಿಗೆ ಹೋದಾಗ
ಅಲ್ಲಿ ತುಂಬಾ ಚಳಿಯಿತ್ತು ಮತ್ತು ಸಾಯಂಕಾಲ ನಮಗೆ ನಿಗದಿಪಡಿಸಿದ ಸೇವಕನು ಬಿಸಿನೀರು ಪೂರೈಸುತ್ತಿರಲಿಲ್ಲ. ಆದ್ದರಿಂದ
ದಿನಾಲೂ ಸಾಯಂಕಾಲ ಸ್ನಾನ ಮಾಡಿ ಪೂಜೆ ಮಾಡುವ ಅಭ್ಯಾಸ ನಿಂತುಹೋಯಿತು. ಅಲ್ಲಿಂದ ಇಲ್ಲಿಯವರೆಗೂ ಒಂದೇ ಹೊತ್ತು ಪೂಜೆ ಮಾಡುತ್ತಿದ್ದೇನೆ.

ಸ್ವಯಂ ಸೇವಕ ಸಂಘದ ಶಾಖೆಯೊಂದಿಗಿನ ಒಡನಾಟ ನಾನು 1966ರಲ್ಲಿ ಎಂಟನೇ ತರಗತಿಯಲ್ಲಿದ್ದಾಗ, ಒಂದು ದಿನ
ಹೈಸ್ಕೂಲಿನಿಂದ ಮನೆಗೆ ವಾಪಸ್ ಬರುತ್ತಿದ್ದೆ. ಒಂದು ಸಾಯಂಕಾಲ ಶ್ರೀ ಈಶ್ವರಲಿಂಗ ದೇವಸ್ಥಾನದ ಬಳಿಯಲ್ಲಿ ರಾಷ್ಟ್ರೀಯ
ಸ್ವಯಂಸೇವಕ ಸಂಘದ ಶಾಖೆ ನಡೆಯುತ್ತಿತ್ತು. ನಾನು ಕುತೂಹಲದಿಂದ ಸಮೀಪ ಹೋದೆ. ಅಲ್ಲಿ ಶೆಟ್ಟರ್ ಎಂಬ ಪ್ರಚಾರಕರು
ನನ್ನ ವಯಸ್ಸಿನ ನಾಲ್ಕೈದು ಹುಡುಗರನ್ನು ಕೂಡಿಸಿಕೊಂಡು ರಾಮಾಯಣದ ಕತೆ ಹೇಳುತ್ತಿದ್ದರು. ಅವರು ನನ್ನನ್ನೂ ಕರೆದು
‘ನೀವೂ ಶಾಖೆಗೆ ಬನ್ನಿ’ ಎಂದು ಆಹ್ವಾನಿಸಿದರು. ಅದಾದ ಮೇಲೆ ಮೂರು ವರ್ಷ ನಾನು ಬನಹಟ್ಟಿಯಲ್ಲಿ ಇರುವವರೆಗೂ ಹೆಚ್ಚು
ಕಡಿಮೆ ವಾರದಲ್ಲಿ ನಾಲ್ಕೈದು ದಿನ ಶಾಖೆಗೆ ಹೋಗುತ್ತಿದ್ದೆ.

ಶಾಖೆಗೆ ಬರುತ್ತಿದ್ದ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದ್ದುದರಿಂದ ಪ್ರಾರ್ಥನೆ, ಕತೆ ಹೇಳುವುದು ಮತ್ತು ಸಣ್ಣಪುಟ್ಟ ಕವಾಯತು
ಮಾಡುವುದನ್ನು ಬಿಟ್ಟರೆ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಶಾಖೆಯಲ್ಲಿ ಬರಿ ಆರೇಳು ಹುಡುಗರಿದ್ದರೂ, ಶೆಟ್ಟರ್
ಅವರು ಬಹಳ ನಿಯಮಿತವಾಗಿ ಮತ್ತು ಅಚ್ಚುಕಟ್ಟಾಗಿ ಶಾಖೆ ನಡೆಸುತ್ತಿದ್ದರು. ಕೆಲವು ದಿನ ಅವರು ಸರಿಯಾಗಿ ನಾಲ್ಕು ಗಂಟೆಗೆ ಧ್ವಜಾರೋಹಣ ಮಾಡಿ ಒಬ್ಬರೇ ಕುಳಿತಿರುತ್ತಿದ್ದರು. ಕೆಲವು ಸಲ ಶಾಖೆಗೆ ಇಬ್ಬರೋ ಮೂವರೋ ಹುಡುಗರು ಮಾತ್ರ ಬರುತ್ತಿದ್ದರು.

ಈ ಸಮಯದಲ್ಲಿ ನನಗೆ ಶೆಟ್ಟರ್ ಅವರೊಂದಿಗೆ ಆತ್ಮೀಯತೆ ಬೆಳೆಯಿತು. ಆಮೇಲೆ ತಿಳಿದುಬಂದಿದ್ದೇನೆಂದರೆ, ಅವರು ಪೂರ್ಣಾ ವಧಿ ಪ್ರಚಾರಕರಾಗಿ ದ್ದರು. ಅವರು ನಮ್ಮೂರಿನ ಮಾಲಗಾರಕಟ್ಟೆ (ಕಾಯಿಪಲ್ಲೆ ಮಾರುವವರ ಕಟ್ಟೆ) ಬಳಿ ಒಂದು ಕೋಣೆ ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಇರುತ್ತಿದ್ದರು. ಅವರಿಗೆ ಸಂಘದಿಂದ ಪ್ರತಿ ತಿಂಗಳ ಖರ್ಚಿಗೆ 30 ರುಪಾಯಿಗಳನ್ನು, ವರ್ಷಕ್ಕೆ ಎರಡು ಜೊತೆ ಬಟ್ಟೆ, ಒಂದು ಕರಿ ಟೊಪ್ಪಿಗೆ (ಹೆಡಗೆವಾರ ಟೊಪ್ಪಿಗೆ) ಕೊಡುತ್ತಿದ್ದರು ಎಂದು ತಿಳಿಯಿತು.

ಎಷ್ಟೋ ಸಲ ನಾನು ಸಮಯವಿದ್ದಾಗ ಅವರ ಕೋಣೆಯಲ್ಲಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದೆ. ಅಮವಾಸ್ಯೆ ಮತ್ತು ಹಬ್ಬದ ದಿನಗಳಲ್ಲಿ ನಮ್ಮ ಮನೆಯಿಂದ ಊಟ ತಂದುಕೊಡುತ್ತಿದ್ದೆ. ನಾನು ಬನಹಟ್ಟಿ ಬಿಟ್ಟ ಮೇಲೆ ಅವರನ್ನು ಭೇಟಿಯಾಗಿದ್ದು
ಇಂಡಿಯಲ್ಲಿ. ಆಗ ಕರ್ನಾಟಕ ಉತ್ತರ ಪ್ರಾಂತೀಯ ಪ್ರಚಾರಕರಾಗಿದ್ದ ಸಿದ್ಧಣ್ಣ ಡಗೆಯವರು ತಿಂಗಳಿಗೊಮ್ಮೆ ನಮ್ಮ ಶಾಖೆಗೆ ಭೇಟಿ ನೀಡುತ್ತಿದ್ದರು.

ಜೂನ್ 1969ರಲ್ಲಿ ನನ್ನ ಬಟ್ಟೆಬರೆ ಮತ್ತು ಕೆಲವು ಪುಸ್ತಕಗಳನ್ನು ತೆಗೆದುಕೊಂಡು 3 ರೂಪಾಯಿ 60 ಪೈಸೆ ಕೊಟ್ಟು ಟಿಕೆಟ್ ಪಡೆದು ಬಿಜಾಪುರ-ಕೊಲ್ಹಾಪುರ ಬಸ್ ಮೂಲಕ ನಿಪ್ಪಾಣಿಗೆ ಪ್ರಯಾಣಿಸಿದೆ. ನಿಪ್ಪಾಣಿಗೆ ನಮ್ಮೂರಿನಿಂದ ಸುಮಾರು 70
ಕಿಲೋಮೀಟರ್. ಅಂದಾಜು ಮೂರು ಗಂಟೆಯ ಪ್ರಯಾಣ. ಹಲವಾರು ಕನಸುಗಳನ್ನು ಹೊತ್ತು ಈ ಪ್ರಯಾಣದ ಮೂಲಕ ಹೊಸ ಜಗತ್ತನ್ನು ಪ್ರವೇಶಿಸಿದೆ. ಪ್ರಥಮ ಬಾರಿಗೆ ನಾನು ಏಕಾಂಗಿಯಾಗಿ ಜೀವನ ಪ್ರಯಾಣ ಪ್ರಾರಂಭಿಸಿದೆ. ದಿನಾಲೂ ಎರಡು ಬಿಜಾಪುರ-ಕೊಲ್ಹಾಪುರ ಬಸ್‌ಗಳು ಮತ್ತು ಎರಡು ಜಮಖಂಡಿ-ಕೊಲ್ಲಾಪುರ ಬಸ್‌ಗಳು ನಿಪ್ಪಾಣಿ ಮುಖಾಂತರ ಕೊಲ್ಹಾಪುರಕ್ಕೆ ಹೋಗುತ್ತಿದ್ದವು ಹಾಗೂ ಅದೇ ರೀತಿ ನಾಲ್ಕು ಬಸ್ ಗಳು ಕೊಲ್ಹಾಪುರದಿಂದ ಬರುತ್ತಿದ್ದವು. ಮೊದಲನೇ ದಿನ ನಾನು ನಮ್ಮ ಊರಿನ ವಿದ್ಯಾರ್ಥಿಗಳಿದ್ದ ರೂಮಿನಲ್ಲಿ ಉಳಿದು ಮರುದಿನ ಜಿ.ಐ. ಬಾಗೇವಾಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎಸ್.ಬಿ. ಕರಬಂಟನಾಳ ಅವರನ್ನು ಭೇಟಿಯಾದೆ. ಅವರು ನನ್ನ ಬಗ್ಗೆ ವಿಚಾರಿಸಿ, ನಾನು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಬಗ್ಗೆ ಸಂತೋಷಪಟ್ಟರು.

ಶುಲ್ಕ ಕಟ್ಟಿಸಿಕೊಂಡು ನನಗೆ ಪ್ರವೇಶ ಕಲ್ಪಿಸಿಕೊಟ್ಟರು. ಅದಲ್ಲದೆ, ಕಾಲೇಜು ಕಚೇರಿಯ ಮ್ಯಾನೇಜರ್ ಅವರನ್ನು ಕರೆದು ನನ್ನಿಂದ ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಪ್ ಮತ್ತು ಶಿರಸಂಗಿ ಲಿಂಗರಾಜ ಸ್ಕಾಲರ್‌ಶಿಪ್ ಅರ್ಜಿ ಪಡೆಯಲು ತಿಳಿಸಿದರು. ಈ
ರೀತಿ ನಾನು ಅರ್ಜಿಗಳಿಗೆ ಸಹಿ ಹಾಕಿದ ಒಂದೂವರೆ ತಿಂಗಳ ನಂತರ ನನಗೆ ೬೦೦ ರುಪಾಯಿ ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಪ್ ಮತ್ತು ೬೦ ರುಪಾಯಿ ಶಿರಸಂಗಿ ಲಿಂಗರಾಜ ಸ್ಕಾಲರ್‌ಶಿಪ್ ಮಂಜೂರಾಗಿ ಬಂತು. ಪ್ರತಿ ತಿಂಗಳ ನನ್ನ ಖರ್ಚಿಗೆ ಬೇಕಾಗುತ್ತಿದ್ದ ಸುಮಾರು ೨೦ ರುಪಾಯಿಗಳನ್ನು ಮತ್ತು ಕಾಲೇಜು ಶುಲ್ಕವನ್ನು ನಮ್ಮ ತಂದೆಯವರು ಕೊಡುತ್ತಿದ್ದುದರಿಂದ, ಈ ಎರಡೂ ಸ್ಕಾಲರ್‌ಶಿಪ್ ಹಣ ಬಂದ ಮೇಲೆ ಅದನ್ನು ನನ್ನ ತಂದೆಯವರಿಗೆ ಕಳುಹಿಸಿಕೊಟ್ಟೆನು.

ನಿಪ್ಪಾಣಿಯಲ್ಲಿ ಮೊದಲ ಒಂದು ತಿಂಗಳ ಅವಽಯಲ್ಲಿ ನಾನು ಕಾಲೇಜಿನಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಸಮಾಧಿ
ಮಠದ ಬೋರ್ಡಿಂಗ್‌ನಲ್ಲಿದ್ದೆ. ಈ ವಸತಿ ನಿಲಯದ ಆವರಣದಲ್ಲಿ ಒಂದು ದೊಡ್ಡ ತೋಟದ ಬಾವಿ ಇತ್ತು. ಈ ಬಾವಿಯಲ್ಲಿ
ನಿಲಯದ ವಿದ್ಯಾರ್ಥಿಗಳು ಈಜುವ ಅಭ್ಯಾಸ ಮಾಡುತ್ತಿದ್ದರು. ಇವರಲ್ಲಿ ಅಪ್ಪಾಜಿಗೋಳ ಮತ್ತು ಹಂಸರಾಣಿ ಇವರು ವಿಶ್ವವಿದ್ಯಾ ಲಯಗಳ ಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು.

ಬೋರ್ಡಿಂಗ್‌ನಿಂದ ಕಾಲೇಜಿಗೆ ಎರಡು ಕಿ.ಮೀ ದೂರ ಇತ್ತು. ಆಗ ಮಳೆಗಾಲ ಇದ್ದುದರಿಂದ ನನಗೆ ವಸತಿ ನಿಲಯದಲ್ಲಿ
ಮೇಲಿಂದ ಮೇಲೆ ಜ್ವರ ಬರಲು ಶುರುವಾಯಿತು. ಆದ್ದರಿಂದ ನಾನು ಒಂದು ತಿಂಗಳ ನಂತರ ಸಮಾಽ ಮಠದ ವಸತಿ ನಿಲಯ
ದಿಂದ ನಿರ್ಗಮಿಸಿ, ನಿಪ್ಪಾಣಿಯ ಸ್ಟೇಟ್‌ಬ್ಯಾಂಕ್ ಹತ್ತಿರ ಉಪಾಸೆ ಎಂಬುವವರ ಕಿರಾಣಿ ಅಂಗಡಿ ಮೇಲೆ ಒಂದು ಕೋಣೆಯನ್ನು
ಬಾಡಿಗೆಗೆ ತೆಗೆದುಕೊಂಡೆನು. ನನ್ನ ಜೊತೆ ರೂಮಿನಲ್ಲಿ ಅದೇ ಕಾಲೇಜಿನಲ್ಲಿ ಬಿ.ಎ ಫೈನಲ್ ಓದುತ್ತಿದ್ದ ಮಹಾಲಿಂಗಪುರದ
ಎಸ್. ಆರ್. ಕಪಾಳಗಂಟಿ ಎಂಬುವವರೂ ಸಹಿತ ಸೇರಿಕೊಂಡರು.

ಬಾಡಿಗೆಯನ್ನು ನಾವಿಬ್ಬರೂ ಹಂಚಿ ಕೊಳ್ಳುತ್ತಿದ್ದೆವು. ನಿತ್ಯ ಊರಿನಿಂದ ಬಸ್‌ನಲ್ಲಿ ಬರುತ್ತಿದ್ದ ಊಟ ಊಟಕ್ಕೆ ಉಳಿದ ವಿದ್ಯಾರ್ಥಿ ಗಳಂತೆ ನಾನು ನಮ್ಮೂರಿನಿಂದ ದಿನಾಲೂ ಬುತ್ತಿ ಡಬ್ಬಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡೆ. ದಿನಾಲೂ ಒಂಬತ್ತು ಗಂಟೆಗೆ ನಮ್ಮೂರಿನಿಂದ ಹೊರಡುತ್ತಿದ್ದ ಬಿಜಾಪುರ-ಕೊಲ್ಹಾಪುರ ಬಸ್‌ಗೆ ಹೋಗಿ ದಿನಕ್ಕೆ ಆಗುವಷ್ಟು ಊಟವನ್ನು ಡಬ್ಬಿಯಲ್ಲಿ ಇಟ್ಟು ಅದಕ್ಕೆ ಸಣ್ಣ ಕೀಲಿಯನ್ನು ಹಾಕಿ ಬಸ್‌ನಲ್ಲಿ ಇಡುತ್ತಿದ್ದರು. ಈ ಬುತ್ತಿ ಡಬ್ಬಿಗಳನ್ನು ನಿಪ್ಪಾಣಿ ಬಸ್ ಸ್ಟ್ಯಾಂಡ್‌ನಲ್ಲಿ ಒಬ್ಬ ನಿಗದಿತ ಹಮಾಲನು ಬಸ್‌ನಿಂದ ಇಳಿಸುತ್ತಿದ್ದನು. ಕಾಲೇಜು ಮುಗಿದ ಮೇಲೆ ಸುಮಾರು ಎರಡು ಗಂಟೆಗೆ ಬಸ್ ಸ್ಟ್ಯಾಂಡ್‌ಗೆ ಬಂದು, ನಮ್ಮ ಬುತ್ತಿ ಡಬ್ಬಿಯನ್ನು ತೆಗೆದುಕೊಂಡು ರೂಮಿಗೆ ಹೋಗುತ್ತಿದ್ದೆವು.

ಮರುದಿನ ಕಾಲೇಜಿಗೆ ಹೋಗುವಾಗ ಹಿಂದಿನ ದಿನದ ಖಾಲಿ ಡಬ್ಬಿಯನ್ನು ಇಡುತ್ತಿದೆವು. ನಿಗದಿತ ಹಮಾಲನು ಅದನ್ನು ಕೊಲ್ಹಾಪುರ -ಬಿಜಾಪುರ ಬಸ್‌ಗೆ ಇಡುತ್ತಿದ್ದನು. ಅದನ್ನು ನಮ್ಮ ಮನೆಯವರು ಬನಹಟ್ಟಿ ಬಸ್ ಸ್ಟ್ಯಾಂಡ್‌ನಿಂದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಡಬ್ಬಿಯಲ್ಲಿ ಊಟ ಬರುವುದಲ್ಲದೆ ವಿಶೇಷ ಸುದ್ದಿ ಇದ್ದರೆ ಚೀಟಿ ಬರೆದಿಡುತ್ತಿದ್ದರು. ನಾನೂ ನನ್ನ ತಂದೆ ತಾಯಿಗೆ ಏನಾದರೂ ತಿಳಿಸಬೇಕಾದರೆ ಚೀಟಿ ಬರೆದು ಡಬ್ಬಿಯಲ್ಲಿ ಇಡುತ್ತಿದ್ದೆ.

ನಿಪ್ಪಾಣಿ ಬಸ್ ಸ್ಟ್ಯಾಂಡ್‌ನಲ್ಲಿ ನಮ್ಮ ಬುತ್ತಿ ಡಬ್ಬಿಯ ಕೆಲಸ ನಿರ್ವಹಿಸುತ್ತಿದ್ದ ಹಮಾಲನಿಗೆ ನಾವು ಪ್ರತಿ ತಿಂಗಳು ತಲಾ ಒಂದು
ರುಪಾಯಿ ನಾಲ್ಕಾಣೆ ನೀಡುತ್ತಿದ್ದೆವು. ನಿಪ್ಪಾಣಿಯಲ್ಲಿ ನನ್ನ ಅಭ್ಯಾಸ ಚೆನ್ನಾಗಿ ನಡೆಯಿತು. ಪಿ.ಯು.ಸಿ.ಗೆ ವಿಜ್ಞಾನ ಆಯ್ಕೆ
ಮಾಡಿಕೊಂಡಿದ್ದರಿಂದ ಬೀಜಗಣಿತ, ಕ್ಯಾಲ್ಕ್ಯುಲಸ್ ಮತ್ತು ಜ್ಯಾಮೆಟ್ರಿ ವಿಷಯಗಳನ್ನೂ ಸಹಿತ ನಾವು ಅಭ್ಯಾಸ ಮಾಡಬೇಕಿತ್ತು. ನನಗೆ ಬೀಜಗಣಿತ, ಕ್ಯಾಲ್ಕ್ಯುಲಸ್ ಮತ್ತು ಜ್ಯಾಮೆಟ್ರಿ ತುಂಬಾ ಕಠಿಣವೆನಿಸಿತು. ಈ ಮೂರೂ ವಿಷಯಗಳಲ್ಲಿ ಪಾರಂಗತನಾಗಲು ನನಗೆ ಸಾಧ್ಯವಾಗಲಿಲ್ಲ.

ಆದರೂ ಪರೀಕ್ಷೆಗಾಗುವಷ್ಟು ಓದಲು ಪ್ರಯತ್ನಿಸಿದೆ. ನಾನು ನಿಪ್ಪಾಣಿಯಲ್ಲಿದ್ದಾಗ ಅಂದರೆ, 1969ರಲ್ಲಿ, ಅಪೋಲೊ ಗಗನಯಾನ ನೌಕೆಯಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್ ಅವರು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವರಾದರು. ಇದಕ್ಕೆ ಸಂಬಂದಪಟ್ಟ ವರದಿಗಳನ್ನು ಓದುವುದು ಒಂದು ರೋಚಕ ವಿಷಯವಾಗಿತ್ತು. ಇದಾದ ಎರಡು ತಿಂಗಳ ನಂತರ ಕಾಲೇಜಿನಲ್ಲಿ ನಡೆದ ಒಂದು ಚರ್ಚಾ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಲಭಿಸಿತು.

ಬಹುಮಾನವಾಗಿ ‘ಮ್ಯಾನ್ ಆನ್ ದಿ ಮೂನ್’ ಎಂಬ ಇಂಗ್ಲಿಷ್ ಪುಸ್ತಕವನ್ನು ನೀಡಿದರು. ಆ ಪುಸ್ತಕವನ್ನು ಸುಮಾರು ಹತ್ತು ಬಾರಿ ನಾನು ಓದಿದೆ. ಇದೇ ಸಮಯದಲ್ಲಿ ನಾನು ಎನ್.ಸಿ.ಸಿ.ಗೆ ಸೇರಿಕೊಂಡೆ. ಒಂದು ವರ್ಷ ಎನ್.ಸಿ.ಸಿ. ತರಬೇತಿ ತೆಗೆದುಕೊಂಡೆ. ನಮ್ಮ
ಕಾಲೇಜು ಮಧ್ಯಾಹ್ನ ಎರಡು ಗಂಟೆವರೆಗೆ ಮಾತ್ರ ಇರುತ್ತಿತ್ತು. ಸಾಯಂಕಾಲದ ವೇಳೆ ನಾನು ಬಾಡಿಗೆ ಮನೆಯ ಸಮೀಪದಲ್ಲಿದ್ದ
ನಗರಸಭೆ ಗ್ರಂಥಾಲಯದಲ್ಲಿ ಕನ್ನಡ ಮತ್ತು ಮರಾಠಿ ಪತ್ರಿಕೆಗಳನ್ನು ಓದುತ್ತಿದ್ದೆ. ಒಂದು ದಿನ ಗ್ರಂಥಾಲಯದಲ್ಲಿದ್ದಾಗ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷದಲ್ಲಿ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ನಾನು ಕುತೂಹಲದಿಂದ ಅವರನ್ನು ಭೇಟಿ
ಮಾಡಿದೆ. ಅವರು ರಾನಡೆ ಎಂದೂ ನಿಪ್ಪಾಣಿಯಲ್ಲಿ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದಾರೆ ಎಂದು ತಿಳಿದುಬಂತು.

ಅವರೂ ಸಹ ಸ್ಟೇಟ್ ಬ್ಯಾಂಕ್ ಹಿಂಭಾಗದ ಒಂದು ಓಣಿಯಲ್ಲಿ ಒಂದು ಬಾಡಿಗೆ ಕೋಣೆಯಲ್ಲಿದ್ದರು ಎಂದು ತಿಳಿಯಿತು. ಅವರು
ನಾನು ಬನಹಟ್ಟಿಯಲ್ಲಿ ಕೆಲವು ಕಾಲ ಸಂಘದ ಶಾಖೆಗೆ ಹೋಗಿದ್ದನ್ನು ತಿಳಿದು, ತಮ್ಮ ಮನೆಯ ಸಮೀಪವೇ ನಡೆಯುತ್ತಿದ್ದ
ಸಂಘದ ಶಾಖೆಗೆ ಬರುವಂತೆ ಆಹ್ವಾನಿಸಿದರು. ನಾನು ನಿಪ್ಪಾಣಿಯಲ್ಲಿಯೂ ಸುಮಾರು ಐದು ತಿಂಗಳು ಶಾಖೆಗೆ ಹಾಜರಾದೆ.
ನಾನು ನಿಪ್ಪಾಣಿಯಲ್ಲಿದ್ದಾಗ ಅಲ್ಲಿಂದ ಸುಮಾರು ಐದು ಕಿ. ಮೀ. ದೂರದಲ್ಲಿದ್ದ ಸ್ತವನಿಽ ಎಂಬ ಪವಿತ್ರ ಕ್ಷೇತ್ರಕ್ಕೆ ಎರಡು ಬಾರಿ
ಭೇಟಿ ನೀಡಿದೆ. ಇದೇ ಸಮಯದಲ್ಲಿ ನಿಪ್ಪಾಣಿ ಯಿಂದ ಬರೀ ೨೪ಕಿ.ಮಿ. ದೂರದಲ್ಲಿದ್ದ ಕೊಲ್ಹಾಪುರಕ್ಕೆ ಹೋಗಿ ಆಗ ತುಂಬಾ
ಜನಪ್ರಿಯವಾಗಿದ್ದ ‘ಏಕ್ ಫೂಲ್ ದೋ ಮಾಲೀ’ ಎಂಬ ಹಿಂದಿ ಸಿನಿಮಾವನ್ನು ನೋಡಿ ಬಂದೆ.

ನಿಪ್ಪಾಣಿಯಲ್ಲಿದ್ದಾಗಲೇ, ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇಂದ್ರಕ್ಕೇ ಪ್ರಥಮ ಸ್ಥಾನವನ್ನೂ, ಕೆಲವು ವಿಷಯಗಳಲ್ಲಿ ರಾಜ್ಯಕ್ಕೇ ಮೊದಲಿಗನಾದ ಕಾರಣಕ್ಕೆ ನನಗೆ ಹಲವಾರು ನಗದು ಬಹುಮಾನಗಳನ್ನು ನೀಡಿದರು. ನಾನು ಹೋಗಿ ಸ್ವೀಕರಿಸಲಿಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವುಗಳನ್ನು ಸ್ವೀಕರಿಸುವಂತೆ ನನ್ನ ತಂದೆಯವರಿಗೆ ಕೇಳಿಕೊಂಡೆ. ಈ ಬಹುಮಾನಗಳನ್ನು ಅವರು ಡಿ.೬ ೧೯೬೯ರಂದು ನಮ್ಮ ಹೈಸ್ಕೂಲ್ ವಾರ್ಷಿಕೋತ್ಸವ ಕಾಲಕ್ಕೆ ಸ್ವೀಕರಿಸಿದರು. ಒಂದು ದಿನ ನಾವು ಕಾಲೇಜಿನಿಂದ ರೂಮಿಗೆ ವಾಪಸಾಗುತ್ತಿದ್ಸಾಗ, ಒಂದು ಕಾರಿನ ಸುತ್ತ ಹಲವಾರು ಮಂದಿ ಸುತ್ತುವರೆದಿದ್ದನ್ನು ಗಮನಿಸಿದೆವು.

ಹೋಗಿ ನೋಡಿದಾಗ, ಆ ಕಾರು ಹಿಂದಿಯ ಪ್ರಖ್ಯಾತ ಹಾಸ್ಯನಟ ಮುಖ್ರಿಯವರದ್ದೆಂದೂ, ಕಾರಿನ ಟೈರು ಪಂಕ್ಚರ್ ಆಗಿದ್ದರಿಂದ
ಅವರು ಕಾರಿಗೆ ಹೊರಗೆ ನಿಂತಿದ್ದರು. ನಾನೂ ಅವರನ್ನು ಭೇಟಿ ಮಾಡಿ ನೋಟ್ ಬುಕ್‌ವೊಂದರಲ್ಲಿ ಅವರ ಆಟೊಗ್ರಾಫ್
ಪಡೆದೆನು. ಅಂತೂ ಇಂತೂ ಏಪ್ರಿಲ್ ೧೯೭೦ರಲ್ಲಿ ಪಿಯುಸಿ ಪರೀಕ್ಷೆ ಬರೆದೆ. ಆಗ ಪಿಯುಸಿ ಒಂದೇ ವರ್ಷದ ಕೋರ್ಸ್ ಆಗಿತ್ತು.
ತದನಂತರ ಪಿಯುಸಿ ಎರಡು ವರ್ಷದ ಕೋರ್ಸ್ ಆಯಿತು.

ಯಾಕೋ ನನಗೆ ಪರೀಕ್ಷೆಯನ್ನು ಚೆನ್ನಾಗಿ ನಿರ್ವಹಿಸಿಲ್ಲ ಎಂದು ಅನಿಸಿತು. ಜೂನ್‌ನಲ್ಲಿ ಫಲಿತಾಂಶ ಬಂದಾಗ ಅದು ಖಚಿತ ವಾಯಿತು. ಬರೀ 50 ಶೇಕಡಾ ಅಂಕ ಪಡೆದು ಪಾಸಾಗಿದ್ದೆ ಗಣಿತ ಮತ್ತು ಇಂಗ್ಲಿಷ್ (ಕನ್ನಡದ ಬದಲಾಗಿ) ಪತ್ರಿಕೆಗಳಲ್ಲಿ ಬಹಳ ಕಡಿಮೆ ಅಂಕ ಬಂದಿದ್ದು ಇದಕ್ಕೆ ಕಾರಣವಾಗಿತ್ತು. ಗಣಿತದಲ್ಲಿ ನನಗೆ ಪರಿಣತಿ ದೊರೆಯದ್ದರಿಂದ ಮುಂದಿನ ವರ್ಷ ಬಿ.ಎಸ್ಸಿ ಬದಲಾಗಿ ಬಿ.ಎ. ಪದವಿಗೆ ಸೇರಲು ನಿರ್ಧರಿಸಿದೆ.