Wednesday, 1st February 2023

ಆರೆಸ್ಸೆಸ್‌ ನಿಷೇಧಕ್ಕೆ ಕಾರಣ ಕೊಡಬಲ್ಲಿರಾ ?

rss

ವರ್ತಮಾನ

maapala@gmail.com

ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು, ಪಿಎಫ್ಐ ನಿಷೇಧಿಸುವುದಾದರೆ ಆರ್ ಎಸ್‌ಎಸ್‌ಅನ್ನೂ ನಿಷೇಧಿಸಬೇಕು ಎಂದು ಹೇಳುತ್ತಿದ್ದಾರೆ. ಆ ಮೂಲಕ ಪಿಎಫ್ಐ ನಿಷೇಧವನ್ನು ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಏಳು ಅಂಗ ಸಂಸ್ಥೆಗಳನ್ನು ನಿಷೇದಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದಕ್ಕೆ ಐದು ಪ್ರಮುಖ ಕಾರಣಗಳನ್ನೂ ನೀಡಿದೆ. ಅದರಂತೆ ದೇಶಾದ್ಯಂತ ಇರುವ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರ ಬಿಜೆಪಿಗೆ ಹೊಸ ಶಕ್ತಿ ನೀಡಿದರೆ, ಪ್ರತಿಪಕ್ಷಗಳ ಪಾಲಿಗೆ ಈ ನಿರ್ಧಾರ ಅತ್ತ ನುಂಗಿ ಕೊಳ್ಳಲೂ ಆಗದ, ಇತ್ತ ಉಗುಳಲೂ ಸಾಧ್ಯವಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನಿಷೇಧವನ್ನು ಸಮರ್ಥಿಸಿಕೊಂಡರೆ ಬಹುಸಂಖ್ಯಾತ ಹಿಂದೂ ಮತಗಳು ದೂರವಾಗಬಹುದು, ವಿರೋಧಿಸಿದರೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಆ ಪಕ್ಷಗಳದ್ದು. ಅದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸು ವಂತೆ ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಪಿಎಫ್ ಐನಂತಹ ಸಂಘಟನೆ ಜತೆಗೆ ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಂತೂ ಕಾಂಗ್ರೆಸ್ ನಾಯಕರು ಆರ್ ಎಸ್‌ಎಸ್ ಮೇಲೆ ಇನ್ನಿಲ್ಲದಂತೆ ಮುಗಿಬೀಳುತ್ತಿದ್ದಾರೆ. ಆ ಮೂಲಕವಾದರೂ ಮುಸ್ಲಿಂ ಸಮುದಾಯವನ್ನು ಓಲೈಸಿ ಕೊಳ್ಳಲು ಹುಚ್ಚು ಸಾಹಸ ಮಾಡುತ್ತಿದ್ದಾರೆ.

ಆದರೆ, ಆರ್‌ಎಸ್‌ಎಸ್ ನಿಷೇಧಿಸಬೇಕು ಎಂಬ ಒತ್ತಾಯಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕೊಡುತ್ತಿರುವ ಕಾರಣಗಳು
ಎಷ್ಟು ಬಾಲಿಷವಾಗಿದೆ ಎಂದರೆ ಜನಸಾಮಾನ್ಯರಿಗೂ ಇದು ದೊಡ್ಡ ಜೋಕ್‌ನಂತೆ ಕಾಣುತ್ತಿದೆ. ಒಂದು ರಾಷ್ಟ್ರಪ್ರೇಮಿ
ಸಂಘಟನೆಯನ್ನು ಪಿಎಫ್ಐನಂತಹ ಮತಾಂಧ ಸಂಘಟನೆ ಜತೆಗೆ ಹೋಲಿಸಿ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ ಎಂದರೆ ಅವರ ವೋಟ್ ಬ್ಯಾಂಕ್ ರಾಜಕಾರಣ ಯಾವ ಮಟ್ಟಕ್ಕೆ ಇಳಿದಿದೆ ಎಂಬಂತಹ ಟೀಕೆಗಳನ್ನು ಎದುರಿಸುವ ಮಟ್ಟಕ್ಕೆ ಆ ಟೀಕೆಗಳು ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಕಾಣಿಸಿಕೊಳ್ಳುತ್ತಿದೆ.

ಹೌದು, ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಕೊಟ್ಟಿರುವ ಕಾರಣಗಳನ್ನೇ
ಗಮನಿಸೋಣ. ಪಿಎಫ್ಐ ದೇಶದ ಭದ್ರತೆಗೆ ಅಪಾಯ ತರುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿತ್ತು.
ದೇಶದ ಕೋಮುಸೌಹಾರ್ದ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. ದೇಶದಲ್ಲಿ ಉಗ್ರಗಾಮಿ
ಚಟುವಟಿಕೆಗಳಿಗೆ ಬೆಂಬಲ ನೀಡಿತ್ತು. ಭಯೋತ್ಪಾದನೆಗೆ ಹಣಕಾಸು ಸಂಗ್ರಹ ಮಾಡುತ್ತಿತ್ತು.

ವಿದೇಶಗಳಿಂದ ಅಕ್ರಮವಾಗಿ ಹಣ ಪಡೆದು ಅದನ್ನು ದೇಶದಲ್ಲಿ ಸಮಜಘಾತಕ ಶಕ್ತಿಗಳನ್ನು ಪೋಷಿಸಲು ಬಳಸುತ್ತಿತ್ತು. ಪಿಎಫ್ಐನ ಸಂಸ್ಥಾಪಕರು ನಿಷೇಧಿತ ಸಿಮಿ ಉಗ್ರ ಸಂಘಟನೆಯ ನಾಯಕರಾಗಿದ್ದವರು. ಬಾಂಗ್ಲಾದೇಶ ಜಮಾತ್-ಉಲ್-ಮುಜಾಹಿದೀನ್ (ಜೆಎಂಬಿ) ಜೊತೆ ನಂಟು ಹೊಂದಿದ್ದಾರೆ. ಐಸಿಸ್ ಮುಂತಾದ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜೊತೆ ಪಿಎಫ್ಐಗೆ ಸಂಬಂಧ ಇದೆ. ದೇಶದಲ್ಲಿ ನಿರ್ದಿಷ್ಟ ಸಮುದಾಯದವರನ್ನು ಮತಾಂಧಗೊಳಿಸುವ ಮತ್ತು ದೇಶದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಪಿಎಫ್ಐ ಕಾರ್ಯನಿರ್ವಹಿಸುತ್ತಿತ್ತು ಎಂದು ಕೇಂದ್ರ ಸರಕಾರ
ನೀಡಿರುವ ಕಾರಣಗಳು.

ಇದರಲ್ಲಿ ಒಂದೇ ಒಂದು ಕಾರಣ ಕೂಡ ಆರ್‌ಎಸ್‌ಎಸ್ ಗೆ ಅನ್ವಯವಾಗುವುದಿಲ್ಲ. ಆರ್‌ಎಸ್‌ಎಸ್ ಯಾವತ್ತೂ ಯಾವುದೇ ಒಂದು ಧರ್ಮ, ಜಾತಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿಲ್ಲ. ಆರ್‌ಎಸ್‌ಎಸ್ ಬೈಠಕ್ ಸೇರಿದಂತೆ ಅದರ ಎಲ್ಲಾ ಚಟುವಟಿಕೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಯಾರು ಬೇಕಾದರೂ ಅದನ್ನು ವೀಕ್ಷಿಸಬಹುದು. ಈ ಸಂಘಟನೆಯನ್ನು ಸ್ಥಾಪಿಸಿದವರು ಅಪ್ರತಿಮ ದೇಶಭಕ್ತ ಕೇಶವ ಬಲಿರಾಮ ಹೆಡಗೇವಾರ್. ಆರ್‌ಎಸ್‌ಎಸ್‌ನಲ್ಲಿ ಇದ್ದ ಎನ್ನಲಾದ ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆ ಮಾಡಿದ ಎಂಬ ಆರೋಪ ಬಿಟ್ಟರೆ ಆರ್‌ಎಸ್‌ಎಸ್ ಮೇಲೆ ಬೇರೆ ಯಾವುದೇ ಗಂಭೀರ ಆರೋಪಗಳು ಇಲ್ಲ.

ಕೋಮು ದ್ವೇಷ ಹರಡುತ್ತದೆ, ಹಿಂದೂಗಳನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುತ್ತದೆ ಎಂಬಿತ್ಯಾದಿ ಆಧಾರವಿಲ್ಲದ ಆರೋಪಗಳನ್ನು ಹೊರತುಪಡಿಸಿ ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತಂದಂತಹ, ಶಾಂತಿ ಕದಡುವ ಪ್ರಯತ್ನ ಮಾಡಿದ
ಉದಾಹರಣೆಗಳು ಇಲ್ಲವೇ ಇಲ್ಲ. ಆದರೆ, ಪಿಎಫ್ಐ ಹಾಗಲ್ಲ. 2001ರಲ್ಲಿ ಆಗಿನ ಅಟಲ್ ಬಿಹಾರಿ ವಾಜಪೇಯಿ ಸರಕಾರ ಸಿಮಿ ಎಂಬ ಮತಾಂಧ ಸಂಘಟನೆಯನ್ನು ನಿಷೇಧಿಸಿದ ಬಳಿಕ ಆ ಸಂಘಟನೆಯಲ್ಲಿ ತೊಡಗಿ ನಿಷೇಧದ ಬಳಿಕ ಬೇರೆ ಬೇರೆ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫಾರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು 2007ರಲ್ಲಿ ಸ್ಥಾಪನೆ ಯಾಗಿದ್ದೇ ಪಿಎಫ್ಐ.

ವಿಲೀನಗೊಂಡು ೪ ತಿಂಗಳ ಬಳಿಕ ಫೆಬ್ರುವರಿ 2007ರಲ್ಲಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು.
ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯದ ಜನರ ಹಕ್ಕುಗಳಿಗಾಗಿ ಹೋರಾಡುವುದಾಗಿ ಪಿಎಫ್ಐ ಹೇಳುತ್ತದೆ. ಆದರೆ, ಅಂತಹ ಹೋರಾಟ ನಡೆಸಿದ ಉದಾಹರಣೆಗಳು ಸಿಗುವುದಿಲ್ಲ. ಬದಲಾಗಿ ಅನೇಕ ಹಿಂದೂ ಕಾರ್ಯ ಕರ್ತರ ಹತ್ಯೆ, ಅವರಿಗೆ ಪ್ರಾಣ ಬೆದರಿಕೆ ಪ್ರಕರಣಗಳಲ್ಲಿ ಕೇವಲ ಪಿಎಪ್‌ಐ ಕಾರ್ಯಕರ್ತರು ಮಾತ್ರವಲ್ಲ, ಆ ಸಂಘಟನೆ ಪ್ರಮುಖರು ಶಾಮೀಲಾಗಿರುವು ಸಾಬೀತಾಗಿದೆ.

ಈ ಮಧ್ಯೆ ಪಿಎಫ್ಐ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಎಂಬ ರಾಜಕೀಯ ಸಂಘಟನೆ ರಚಿಸಿತು. ಕ್ಯಾಂಪಸ್ ಫಂಟ್ ಆಫ್ ಇಂಡಿಯಾ (ಸಿಎಫ್ಐ) ಎಂಬ ವಿದ್ಯಾರ್ಥಿ ಸಂಘಟನೆಯೂ ಅಸ್ತಿತ್ವಕ್ಕೆ ಬಂತು. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸಿದ್ದರೂ ಅದು ರಾಜಕೀಯವಾಗಿಯೇ ಧರ್ಮಗಳ ಮಧ್ಯೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂಬ ಆರೋಪವಿದ್ದು, ಅದಕ್ಕೆ ಸಾಕ್ಷ್ಯಗಳೂ ಲಭ್ಯವಾಗಿವೆ. ಇನ್ನು ಇತ್ತೀಚೆಗೆ ರಾಜ್ಯದಲ್ಲಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಲು ಕಾರಣವಾದ ಹಿಜಾಬ್ ವಿವಾದದ ರುವಾರಿಯೇ ಸಿಎಫ್ಐ.

ಅಷ್ಟೇ ಅಲ್ಲ, ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯಿದೆ ವಿರುದ್ಧ ನಡೆದ ಪ್ರತಿಭಟನೆಗಳು, ಹಾಥರಸ್ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಹಿಂಸಾಚಾರಕ್ಕೆ ಉತ್ತೇಜನ ನೀಡಲು ಹಣಕಾಸಿನ ನೆರವು ನೀಡಿದ ಆರೋಪ
ಕುರಿತಂತೆ ಪಿಎಫ್ಐ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಇತ್ತೀಚೆಗೆ ದೇಶಾದ್ಯಂತ ಪಿಎಫ್ಐ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಅದಕ್ಕೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಎಲ್ಲವೂ ಮೇಲ್ನೋಟಕ್ಕೆ ಸಾಬೀತಾದ ಬಳಿಕವೇ ಪಿಎ-ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದ್ದು.

ಆದರೆ, ಆರ್‌ಎಸ್‌ಎಸ್ ನಿಷೇಧದ ಒತ್ತಾಯಕ್ಕೆ ಅಂತಹ ಯಾವ ಕಾರಣಗಳಿವೆ? ಸ್ವಾತಂತ್ರ್ಯ ಪೂರ್ವದಲ್ಲೊಮ್ಮೆ ಬ್ರಿಟೀಷರು ಆರ್‌ಎಸ್ ಎಸ್ ನಿಷೇಧಿಸಿದ್ದರು. ಸ್ವಾತಂತ್ರ್ಯಾನಂತರ ಮಹಾತ್ಮಾ ಗಾಂಧಿ ಹತ್ಯೆ ನಡೆದಾಗ ಆರ್‌ಎಸ್‌ಎಸ್ ನಿಷೇಧಿಸಲಾ ಯಿತು. ಆದರೆ, ಒಂದು ವರ್ಷದಲ್ಲೇ ನಿಷೇಧ ವಾಪಸ್ ಪಡೆಯಲಾಯಿತು. ಇನ್ನು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಮತ್ತು 1992ರಲ್ಲಿ ಬಾಬರೀ ಮಸೀದಿ ಕೆಡವಿದ ಸಂದರ್ಭದಲ್ಲಿ ಆರ್ ಎಸ್‌ಎಸ್‌ಗೆ ನಿಷೇಧ ಹೇರಲಾಗಿತ್ತು. ಆದರೆ, ಆ ನಿಷೇಧ
ಹೆಚ್ಚು ಸಮಯ ಉಳಿಯಲಿಲ್ಲ. ಇನ್ನೂ ಒಂದು ಮಾತು ಹೇಳುವುದಾದರೆ 1975 ಮತ್ತು 1992ರಲ್ಲಿ ದೇಶದಲ್ಲಿ ಆರ್
ಎಸ್‌ಎಸ್‌ಗೆ ನಿಷೇಧ ಹೇರಿದ್ದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿತ್ತು.

ಏಕೆಂದರೆ, ನಿಷೇಧಿಸುವಂತಹ ಯಾವುದೇ ಗಂಭೀರ ಆರೋಪ ಆರ್‌ಎಸ್‌ಎಸ್ ಮೇಲಿರಲಿಲ್ಲ ಮತ್ತು ನಿಷೇಧ ಹೇರುವಂತಹ ದೇಶದ್ರೋಹಿ ಕೆಲಸಕ್ಕೂ ಅದು ಕೈಹಾಕಿರಲಿಲ್ಲ. ದೇಶದ ಯಾವುದೇ ಭಾಗದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಆದಾಗ, ಭೂಕಂಪ, ಸುನಾಮಿಯಂಂತಹ ಅಪಾಯ ಸಂಭವಿಸಿದಾಗೆಲ್ಲಾ ಮುಂಚೂಣಿಯಲ್ಲಿ ನುಗ್ಗುತ್ತಿದ್ದವರು ಆರ್‌ಎಸ್‌ಎಸ್ ಕಾರ್ಯಕರ್ತರು. ಯುದ್ಧದ ಸಂದರ್ಭದಲ್ಲಿ ಯೋಧರ ನೆರವಿಗೆ ಧಾವಿಸಿದ್ದರು.

ಇನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೀಗೆ ಆರ್‌ಎಸ್‌ಎಸ್‌ನಿಂದ ಬಂದು ದೇಶ, ರಾಜ್ಯಕ್ಕೆ ಸೇವೆ ಸಲ್ಲಿಸಿದವರ ಪಟ್ಟಿಯನ್ನೇ ಕೊಡಬಹುದು. ಆದರೆ, ನಿಷೇಧಕ್ಕೊಳ ಗಾಗಿರುವ ಪಿಎಫ್ಐ ಅಥವಾ ಅದರ ಅಂಗ ಸಂಸ್ಥೆಗಳಿಂದ ದೇಶಕ್ಕಾಗಿ, ದೇಶದ ಸಾರ್ವಭೌಮತೆಗಾಗಿ ದುಡಿದ ಒಂದಾದರೂ ಹೆಸರನ್ನು ಆರ್‌ಎಸ್‌ಎಸ್ ನಿಷೇಧಿಸುವಂತೆ ಒತ್ತಾಯಿಸುವವರು ಹೇಳಬಲ್ಲರೇ?

error: Content is protected !!