Tuesday, 29th November 2022

ತೆರೆಗೆ ಬರಲು ಸಾಯಿ ಪಲ್ಲವಿ ಸಹೋದರಿ ರೆಡಿ

ಚೆನ್ನೈ: ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ದೊಡ್ಡದು. ಈಗಾಗಲೇ ಅವರು ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ.
ಟಾಲಿವುಡ್​, ಕಾಲಿವುಡ್​, ಮಲಯಾಳಂ ಸಿನಿಮಾಗಳಲ್ಲಿ ಸ್ಟಾರ್​ ನಟರಿಗೆ ಅವರು ಜೋಡಿಯಾಗಿ ನಟಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಅತಿಯಾದ ಗ್ಲಾಮರ್​ ಎಂದರೆ ಅವರಿಗೆ ಅಲರ್ಜಿ. ನಟನೆಯ ಮೂಲಕವೇ ಅವರು ಜನರ ಮನ ಗೆದ್ದಿದ್ದಾರೆ.
ಈಗ ಅವರ ಸಹೋದರಿ ಪೂಜಾ ಕಣ್ಣನ್​ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಚಿತ್ತಿರ ಚೆವ್ವಾನಂ’ ರಿಲೀಸ್​ಗೆ ಸಿದ್ಧವಾಗಿದೆ. ಅಕ್ಕ ಸಾಯಿ ಪಲ್ಲವಿ ರೀತಿಯೇ ಪೂಜಾ ಕೂಡ ಮಿಂಚುತ್ತಾರಾ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ.

ಸಾಯಿ ಪಲ್ಲವಿ ಮತ್ತು ಪೂಜಾ ಕಣ್ಣನ್​ ಅವರು ನೋಡಲು ಒಂದೇ ರೀತಿ ಇದ್ದಾರೆ. ತಕ್ಷಣಕ್ಕೆ ನೋಡಿದರೆ ಇವರಲ್ಲಿ ಸಾಯಿ ಪಲ್ಲವಿ ಯಾರು ಎಂಬ ಪ್ರಶ್ನೆ ಮೂಡುವಷ್ಟು ಸಾಮ್ಯತೆ ಅವರಿಬ್ಬರಲ್ಲಿ ಇದೆ. ಆ ಎಲ್ಲ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿಯೇ ಪೂಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿ ದ್ದಾರೆ.

‘ಚಿತ್ತಿರ ಚೆವ್ವಾನಂ’ ಸಿನಿಮಾದ ಫಸ್ಟ್​ ಲುಕ್ ಮೋಷನ್​ ಪೋಸ್ಟರ್​​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟ-ನಿರ್ದೇಶಕ ಸಮುದ್ರಖಣಿ ಅವರು ತೆರೆ ಹಂಚಿಕೊಂಡಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರು ಅಭಿನಯಿಸಿದ್ದಾರೆ. ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ ಮತ್ತು ಕಾಲಿವುಡ್​ ನಟ ಧನುಷ್​​​​ ಅವರು ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

ಸ್ಯಾಮ್​ ಸಿ.ಎಸ್​. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಟಿ ಅನುಪಮಾ ಪರಮೇಶ್ವರನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪೂಜಾ ಕಣ್ಣನ್​ಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.