Tuesday, 26th October 2021

ಸೆ.17ರಿಂದ ಸೇವೆ, ಸಮರ್ಪಣೆ ಅಭಿಯಾನಕ್ಕೆ ಚಾಲನೆ

– ಬಿಜೆಪಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಿಗೇರಿ
– ಮೋದಿ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 20 ವರ್ಷ ಪೂರೈಸಿದ ಹಿನ್ನಲೆಯಲ್ಲಿ 20 ದಿನಗಳ ಸೇವೆ, ಸಮರ್ಪಣಾ ಕಾರ್ಯಕ್ರಮ
– ಜಿಲ್ಲೆಯ 1307 ಬೂತ್ ಗಳಲ್ಲಿ ಹಲವಾರು ವಿಭಿನ್ನ ಸೇವಾ ಕಾರ್ಯಕ್ರಮ

ಕೊಪ್ಪಳ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಆಶಯದಂತೆ ದೇಶಾದ್ಯಂತ ಸೆ.17ರಿಂದ ಅಕ್ಟೋಬರ್ 7ರ ವರೆಗೆ ಇಪ್ಪತ್ತು ದಿನಗಳನ್ನು ಸೇವೆ ಮತ್ತು ಸಮರ್ಪಣೆ ಅಭಿಯಾನವನ್ನಾಗಿ ಆಚರಿಸಲಾಗುತ್ತದೆ ಎಂದು ಬಳ್ಳಾರಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರಗೌಡ ಪಾಟೀಲ್ ಹಲಿಗೇರಿ ಹೇಳಿದರು.

ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವಾದ ಅಕ್ಟೋಬರ್ 7ಕ್ಕೆ 20 ವರ್ಷವಾಗಲಿದೆ. ಇದರ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ನಿರಂತರ ಇಪ್ಪತ್ತು ವರ್ಷಗಳನ್ನು ಪೂರೈಸಲಿದ್ದಾರೆ.

2001ರಿಂದ 2014ರ ವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು 2014ರಿಂದ ಪ್ರಧಾನಮಂತ್ರಿಯಾಗಿ ಮುಂದುವರಿದಿದ್ದು, ಇದು ದೇಶದ ಪ್ರಜಾಪ್ರಭುತ್ವದ ಇತಿಹಾಸ ದಲ್ಲಿ ಬೆರಳೆಣಿಕೆಯ ನಾಯಕರುಗಳಷ್ಟೆ ಗಳಿಸಲು ಸಾಧ್ಯವಾದ ಜನತೆಯ ಅನನ್ಯ ಆಶೀರ್ವಾದ. ಇದು ನರೇಂದ್ರ ಮೋದಿಯವರ ನಿರಂತರ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೂಜಪ್ಪ ಹಡಗಲಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸೆ. 17ರ ಸಂದರ್ಭದಲ್ಲಿ ಪ್ರತಿವರ್ಷ ನಮ್ಮ ಪಕ್ಷವು ಸೇವಾ ಸಪ್ತಾಹವನ್ನು ಆಚರಿಸುತ್ತದೆ. ಆದರೆ ಈ ವರ್ಷ ಎರಡು ಪ್ರಮುಖ ದಿನಾಂಕಗಳ ವಿಶಿಷ್ಟ ಸಂಗಮ ವಿರುವುದರಿಂದ ಪ್ರಧಾನಮಂತ್ರಿಗಳ ಹುಟ್ಟುಹಬ್ಬವೂ ನಮಗೆ ಸೇವೆಯ ಪ್ರಾಮುಖ್ಯತೆಯನ್ನು ನೆನಪಿಸಿದರೆ, ಅಕ್ಟೋಬರ್ 7 ನಮಗೆ ಸುದೀರ್ಘ ಇಪ್ಪತ್ತು ವರ್ಷಗಳ ನರೇಂದ್ರ ಮೋದಿಯವರ ದೇಶ ಹಾಗೂ ದೇಶದ ಜನರಿಗಾಗಿ ಸಂಪೂರ್ಣ ಸಮರ್ಪಣೆಯನ್ನು ನೆನಪಿಸುತ್ತದೆ.

ಆದ್ದರಿಂದ ಇದನ್ನು ಸೇವೆ ಮತ್ತು ಸಮರ್ಪಣಾ ಅಭಿಯಾನವನ್ನಾಗಿ ಜಿಲ್ಲೆಯ 1307 ಬೂತ್ ಗಳಲ್ಲಿ ಹಲವಾರು ವಿಭಿನ್ನ ಸೇವಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಾದ ದಿವ್ಯಾಂಗರಿಗೆ ನೆರವು ಮತ್ತು ಉಪಯುಕ್ತ ಸಲಕರಣೆಗಳ ವಿತರಣೆ, ಜಿಲ್ಲಾ ಮಟ್ಟದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಸ್ಲಂಗಳಲ್ಲಿ ಅನಾಥಾಶ್ರಮಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ವೃದ್ಧಾಶ್ರಮಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವುದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಬೂತ್ ನಲ್ಲಿ ಉಚಿತ ಪಡಿತರ ಚೀಲಗಳ ವಿತರಣೆ ಮಾಡುವುದು, ಪ್ರತಿ ಜಿಲ್ಲೆಯಲ್ಲಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ಪಕ್ಷದ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು ಹಾಗೂ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವುದು, ಸೆ.25ರಂದು ಪಂ. ದೀನದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ಬಡವರು, ಹಿಂದುಳಿದ ವರ್ಗದವರು, ಹಾಗೂ ದಲಿತರ ಕಲ್ಯಾಣಕ್ಕಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮ, ಸಣ್ಣ ಕುಶಲಕರ್ಮಿಗಳಿಗೆ ಪ್ರೋತ್ಸಾಹ, ಖಾದಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವುದು ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಎಲ್ಲಾ ಚಟುವಟಿಕೆಗಳನ್ನು ಆಯೋಜಿಸುವಾಗ ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಕೋವಿಡ್-19 ಪ್ರೋಟೋಕಾಲ್ ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ನರಸಿಂಗರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ವಿಜಯ ತಾಳಕೇರಿ ಸ್ವಾಗತಿಸಿದರು, ರಮೇಶ ನಾಡಿಗೇರ್ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಕೆ. ಮಹೇಶ, ಜಿಲ್ಲಾ ಕಾರ್ಯದರ್ಶಿ ಜಿ. ಸುಬ್ಬಾರಡ್ಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಗಿರೀಶಾನಂದ ಜ್ಞಾನಸುಂದರ ಹಾಗೂ ಎಲ್ಲಾ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *