Wednesday, 1st February 2023

ವೈದ್ಯ ಬರಹಗಾರರ ಸಮ್ಮೇಳನದ ಆಜುಬಾಜು

ಸ್ವಾಸ್ಥ್ಯ ಸಂಪದ

yoganna55@gmail.com

ಮೈಸೂರಿನಲ್ಲಿ 1996ರಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಐಎಂಎ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಕನ್ನಡ ಕವಿಗೋಷ್ಠಿ ಏರ್ಪಡಿಸಿದ್ದು, ಐಎಂಎಯಲ್ಲಿ ಕನ್ನಡದ ಕಹಳೆ ಮೊಳಗಲು ನಾಂದಿಯಾಯಿತು. ಅಖಿಲ ಭಾರತ ಪ್ರಥಮ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನವೂ ಕನ್ನಡ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ಪೂರಕವಾಯಿತು.

ಕನ್ನಡ ವೈದ್ಯಕೀಯ ಸಾಹಿತ್ಯದ ಪಾಲಿಗೆ 2022ರ ಆಗಸ್ಟ್ 27 ಮತ್ತು 28 ಅವಿಸ್ಮರಣೀಯ ದಿನಗಳೆನ್ನಬೇಕು. ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ, ಧಾರವಾಡ ಮತ್ತು ಕರ್ನಾಟಕ ವಿದ್ಯಾ ವರ್ಧಕ ಸಂಘ, ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಕನ್ನಡ ವೈದ್ಯ ಬರಹಗಾರರ ೩ನೇ ಸಮ್ಮೇಳನ ಕರ್ನಾಟಕ ವಿದ್ಯಾ ವರ್ಧಕ ಸಂಘದ ಶ್ರೀರಾಹ ದೇಶಪಾಂಡೆ ಸಭಾಂಗಣದಲ್ಲಿ 2 ದಿನ ಜರುಗಿ ವೈದ್ಯಕೀಯ ಸಾಹಿತ್ಯದ ಸೃಷ್ಟಿಯ ವಿಸ್ತಾರಕ್ಕೆ ಮತ್ತೊಂದು ಮೈಲಿಗಲ್ಲಾ ಯಿತು.

೧೫೦ಕ್ಕೂ ಹೆಚ್ಚು ವೈದ್ಯ ಬರಹಗಾರರು ಮತ್ತು ೫೦ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಕನ್ನಡ ವೈದ್ಯ ಸಾಹಿತ್ಯದ ವಿವಿಧ ಪ್ರಕಾರಗಳ ರಸದೌತಣ ಸವಿದರು. ಈ ವಿಶಿಷ್ಟ ಸಮ್ಮೇಳನದ ಹಿನ್ನೆಲೆ, ಚಟುವಟಿಕೆಗಳು ಸೇರಿದಂತೆ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಭಾರತೀಯ ವೈದ್ಯಕೀಯ ಸಂಘ (ಐಎಂಎ): ಇದು ರಾಷ್ಟ್ರಮಟ್ಟದಲ್ಲಿ ಎಲ್ಲ ಅಲೋಪತಿ ವೈದ್ಯರುಗಳನ್ನು ಸದಸ್ಯರನ್ನಾಗಿಸಿ ಕೊಂಡಿರುವ (೩.೫ ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ) ಏಷ್ಯಾದಲ್ಲೇ ಅತ್ಯಂತ ದೊಡ್ಡ ಸರ್ಕಾರೇತರ ಸಂಘ (ಎನ್‌ಜಿಒ) ಎನಿಸಿಕೊಂಡಿದೆ. ಇದಕ್ಕೆ ಎಲ್ಲ ರಾಜ್ಯಗಳಲ್ಲೂ ರಾಜ್ಯಮಟ್ಟದ ಶಾಖೆಗಳಿದ್ದು, ಅದರಡಿಯಲ್ಲಿ ಹಲವಾರು ಕವಲುಗಳಿವೆ.

ಕರ್ನಾಟಕದಲ್ಲಿ ಸುಮಾರು ೧೮೦ ಶಾಖೆಗಳಿದ್ದು, ೨೭ ಸಾವಿರಕ್ಕೂ ಹೆಚ್ಚು ವೈದ್ಯ-ಸದಸ್ಯರುಗಳನ್ನು ಅವು ಒಳಗೊಂಡಿವೆ.
ವೈದ್ಯರ ಸಂಘಟನೆ, ನೀತಿ ಸಂಹಿತೆಗಳ ನಿಯಂತ್ರಣ, ಆರೋಗ್ಯ ಸಂಬಂಧಿತ ಸೇವೆ ಮತ್ತು ಶಿಕ್ಷಣಗಳ ರೀತಿನೀತಿಗಳ ಬಗ್ಗೆ ಸರಕಾರ ಹಾಗೂ ಆರೋಗ್ಯ ವಿಶ್ವದ್ಯಾಲಯಗಳಿಗೆ ಸಲಹೆ ನೀಡುವುದು, ಸಮ್ಮೇಳನಗಳನ್ನು ನಡೆಸಿ ಆಧುನಿಕ ವೈದ್ಯವಿಜ್ಞಾನದ ಅರಿವಿನೊಂದಿಗೆ ಉತ್ಕೃಷ್ಟ ಸೇವೆಮಾಡಲು ವೈದ್ಯರನ್ನು ಸಜ್ಜುಗೊಳಿಸುವುದು ಈ ಸಂಘದ ಪ್ರಮುಖ ಕಾರ್ಯಗಳಾಗಿವೆ.

೧೯೨೮ರಲ್ಲಿ ಪ್ರಾರಂಭವಾದ ಐಎಂಎಗೆ ಪ್ರಥಮ ಅಧ್ಯಕ್ಷರಾಗಿದ್ದು ಡಾ. ಜಿ.ದೇಶ್‌ಮುಖ್. ತದನಂತರ ಈ ಸ್ಥಾನ ಅಲಂಕ ರಿಸಿದ ಡಾ. ಬಿ.ಸಿ. ರಾಯ್ ಅವರ ಪರಿಶ್ರಮದಿಂದಾಗಿ ಈ ಸಂಘಟನೆ ಜನಪ್ರಿಯವಾಗಿ ಗಣನೀಯ ಸೇವೆ ಮುಂದುವರಿಸಿ ಕೊಂಡು ಬರುತ್ತಿದೆ.

ಕನ್ನಡ ವೈದ್ಯ ಬರಹಗಾರರ ಸಮಿತಿ: ಭಾರತೀಯ ವೈದ್ಯಕೀಯ ಸಂಘ ಆಂಗ್ಲಮಯವಾಗಿತ್ತು. ನಾನು ಸಂಘಟನಾ ಕಾರ್ಯದರ್ಶಿಯಾಗಿದ್ದಾಗ ಮೈಸೂರಿನಲ್ಲಿ ೧೯೯೬ರಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಐಎಂಎ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಕನ್ನಡ ಕವಿಗೋಷ್ಠಿ ಏರ್ಪಡಿಸಿದ್ದು, ಐಎಂಎಯಲ್ಲಿ ಕನ್ನಡದ ಕಹಳೆ ಮೊಳಗಲು ನಾಂದಿಯಾಯಿತು. ಅದೇ ರೀತಿಯಲ್ಲಿ ನಾನು ಸಂಘಟಿಸಿದ ಅಖಿಲ ಭಾರತ ಪ್ರಥಮ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನವೂ ಕನ್ನಡ ವೈದ್ಯಕೀಯ ಸಾಹಿತ್ಯದ
ಬೆಳವಣಿಗೆಗೆ ಪೂರಕವಾಯಿತು.

ಕನ್ನಡದಲ್ಲಿ ವೈದ್ಯ ಬರಹಗಾರರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಅವರೆಲ್ಲರನ್ನೂ ಸಂಘದ ರಾಜ್ಯಶಾಖೆಯಡಿ ಸಂಘಟಿಸಿ, ವೈದ್ಯಕೀಯ ಸಾಹಿತ್ಯಸೃಷ್ಟಿಯ ರೂಪರೇಷೆಗಳನ್ನು ರೂಪಿಸುವ ದೃಷ್ಟಿಯಿಂದ ಡಾ. ರವೀಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆ ಕಾನೂನಾತ್ಮಕ ಕನ್ನಡ ವೈದ್ಯ ಬರಹಗಾರರ ಸಮಿತಿ ರಚಿಸಲು ಮತ್ತು ಈ ಸಮಿತಿಯ ವತಿಯಿಂದ ಪ್ರತಿವರ್ಷ ರಾಜ್ಯಮಟ್ಟದ ವೈದ್ಯ ಬರಹಗಾರರ ಸಮ್ಮೇಳನ ನಡೆಸಲು ಹಾಗೂ ಇಬ್ಬರಿಗೆ ಶ್ರೇಷ್ಠ ವೈದ್ಯಸಾಹಿತಿ ಪ್ರಶಸ್ತಿ ನೀಡಲು
ತೀರ್ಮಾನಿಸಲಾಯಿತು.

೨೦೧೭ರಲ್ಲಿ ಗದಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮೈಸೂರಿನ ಡಾ. ಎಸ್.ಪಿ.ಯೋಗಣ್ಣ ಮತ್ತು ಶಿವಮೊಗ್ಗದ ಡಾ. ವೀಣಾ ಭಟ್
ಅವರಿಗೆ ಪ್ರಥಮ ‘ಶ್ರೇಷ್ಠ ವೈದ್ಯಸಾಹಿತಿ’ ಪ್ರಶಸ್ತಿ ಗಳನ್ನು ನೀಡಿ ಗೌರವಿಸಲಾಯಿತು. ಮಕ್ಕಳ ತಜ್ಞ ಹಾಗೂ ರಾಜ್ಯಶಾಖೆಯ ಮಾಜಿ ಅಧ್ಯಕ್ಷರಾದ ಡಾ.ಯೋಗಾನಂದ ರೆಡ್ಡಿ ಮತ್ತು ಡಾ. ಅಣ್ಣಯ್ಯ ಕುಲಾಲ್ ಅವರ ಪ್ರಾಯೋಜಕತ್ವದಲ್ಲಿ ಈ ಪ್ರಶಸ್ತಿ
ಯನ್ನು ಸ್ಥಾಪಿಸಲಾಯಿತು ಎಂಬುದಿಲ್ಲಿ ಉಲ್ಲೇಖನೀಯ.

ಪ್ರಥಮ ಹಾಗೂ ದ್ವಿತೀಯ ಸಮ್ಮೇಳನ: ಮಂಗಳೂರಿನ ಐಎಂಎ ಮತ್ತು ಕನ್ನಡ ವೈದ್ಯ ಬರಹಗಾರರ ಸಮಿತಿಗಳ ಸಂಯುಕ್ತಾ ಶ್ರಯದಲ್ಲಿ ಮಂಗಳೂರಿನಲ್ಲಿ ೨೦೧೯ರಲ್ಲಿ ರಾಜ್ಯಮಟ್ಟದ ವೈದ್ಯ ಬರಹಗಾರರ ಪ್ರಥಮ ಸಮ್ಮೇಳನ ಜರುಗಿತು. ಈ ಹಿಂದೆ ಕೆಲವು ವೈದ್ಯಕೀಯ ಸಾಹಿತ್ಯ ಸಮ್ಮೇಳನಗಳು ಜರುಗಿದ್ದರೂ ಭಾರತೀಯ ವೈದ್ಯಕೀಯ ಸಂಘದಂಥ ಅಧಿಕೃತ, ಪ್ರತಿಷ್ಠಿತ ವೈದ್ಯ ಸಂಘಟನೆ ಯಡಿಯಲ್ಲಿ ಈ ಸಮ್ಮೇಳನ ಜರುಗಿದ್ದುದು ವಿಶೇಷ.

ಈ ಕಾರಣದಿಂದಾಗಿ ಇದು ಕನ್ನಡ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ನಾಂದಿಯಾದ, ಸುವರ್ಣಾಕ್ಷರಗಳಲ್ಲಿ
ಬರೆದಿಡ ಬೇಕಾದ ಸಂಗತಿ. ಈ ಐತಿಹಾಸಿಕ ಸಮ್ಮೇಳನದ ಮೊದಲನೇ ಸರ್ವಾಧ್ಯಕ್ಷನಾಗಿದ್ದು ನನ್ನ ಪುಣ್ಯ. 2021ರಲ್ಲಿ
ಬೆಂಗಳೂರಿನ ರಾಜ್ಯಶಾಖೆಯಲ್ಲಿ ಕ್ಷ- ಕಿರಣ ತಜ್ಞೆ ಡಾ. ಸರೋಜಾ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಿತು. ಈ ವೇಳೆ, ಅಂದಿನ ಐಎಂಎ ರಾಜ್ಯಶಾಖೆಯ ಅಧ್ಯಕ್ಷರಾಗಿದ್ದ ಡಾ.ಅನ್ನದಾನಿ ಮೇಟಿ ಅವರಿತ್ತ ಕೊಡುಗೆ ಮತ್ತು ಅವರ ಪರಿಶ್ರಮವನ್ನು ಮರೆಯುವಂತಿಲ್ಲ.

ತೃತೀಯ ಸಮ್ಮೇಳನ: ಧಾರವಾಡದಲ್ಲಿ ಜರುಗಿದ ೩ನೆಯ ಸಮ್ಮೇಳನ ಮತ್ತೊಂದು ಮೈಲಿಗಲ್ಲಾಯಿತು. ವೈದ್ಯಶಾಸ ಪ್ರಾಧ್ಯಾಪಕರಾಗಿ, ೨೪೦ಕ್ಕೂ ಹೆಚ್ಚು ವೈದ್ಯಕೀಯ ಕೃತಿಗಳ ಲೇಖಕರಾಗಿ, ರಾಷ್ಟ್ರಮಟ್ಟದ ಬಿ.ಸಿ. ರಾಯ್ ಪ್ರಶಸ್ತಿಗೆ ೨ ಬಾರಿ ಭಾಜನರಾಗಿ, ವಿಶ್ವೇಶ್ವರಯ್ಯ ವಿಜ್ಞಾನ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗಮನಾರ್ಹ ಪುರಸ್ಕಾರಗಳಿಗೆ ಪಾತ್ರರಾದ ನಾಡೋಜ ಡಾ. ಪಿ.ಎಸ್. ಶಂಕರ್ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದುದು ವಿಶೇಷವೆನ್ನಬೇಕು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ರಮೇಶ್ ಎಂ.ಕೆ.ಅವರು ಸಮ್ಮೇಳನ ಉದ್ಘಾಟಿಸಿ, ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಸೃಷ್ಟಿಯ ಅವಶ್ಯಕತೆಗಳ ಬಗ್ಗೆ ಒತ್ತಿಹೇಳಿದ್ದರ ಜತೆಗೆ, ‘ಎಲ್ಲರೂ ಕನ್ನಡಾಭಿಮಾನ ಬೆಳೆಸಿಕೊಂಡಲ್ಲಿ ಕನ್ನಡದಲ್ಲೇ ವೈದ್ಯಕೀಯ ಶಿಕ್ಷಣ ನೀಡುವುದು ಕಷ್ಟವೇನಲ್ಲ’ ಎಂದರು. ಡಾ. ಪಿ.
ಎಸ್. ಶಂಕರ್ ಅವರು ಮಾತನಾಡಿ, ‘ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಿದ್ದರೂ, ಸಮಾಜ ಮತ್ತು ಸರಕಾರ ಮನಸ್ಸು ಮಾಡದಿದ್ದರೆ ಅದು ಅಸಾಧ್ಯ; ವೈದ್ಯಕೀಯ ಶಿಕ್ಷಣದ ಕೋಸ್ ಗಳನ್ನು ಕನ್ನಡದಲ್ಲಿ ಬೋಧಿಸಲು ಯಾವ
ತೊಂದರೆಯೂ ಇಲ್ಲ’ ಎಂದರು.

ರಾಜ್ಯಾಧ್ಯಕ್ಷ ಡಾ.ಸುರೇಶ್ ಕುಟೀಲ್ ಕುಡ್ವ ಅವರು ಮಾತನಾಡಿ, ‘ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ
ಭಾರತೀಯ ವೈದ್ಯ ಸಂಘ ಕಟಿಬದ್ಧವಾಗಿದೆ’ ಎಂದರು. ಶಿವಮೊಗ್ಗದ ಮನೋರೋಗ ತಜ್ಞೆ ಡಾ.ಪವಿತ್ರಾ ಮತ್ತು ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರಿಗೆ ಈ ಸಂದರ್ಭದಲ್ಲಿ ‘ಶ್ರೇಷ್ಠ ವೈದ್ಯಸಾಹಿತಿ’
ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿಶೇಷಾಂಕ ಮತ್ತು ವೈದ್ಯಸಂಪದ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಸಮ್ಮೇಳನದ ಮೊದಲ ದಿನ ಜೀವನಶೈಲಿ, ಕಥಾ ಕಾರ್ಯಾಗಾರ, ಕಾವ್ಯ ಕಾರ್ಯಾಗಾರ, ಕವಿಗೋಷ್ಠಿಗಳನ್ನೂ, ಎರಡನೇ ದಿನ ವೈದ್ಯಕೀಯ ಶಿಕ್ಷಣ ಮಾತೃಭಾಷೆಯಲ್ಲಿ ಪರ ಮತ್ತು ವಿರೋಧ, ವೈದ್ಯಕೀಯ ಕ್ಷೇತ್ರ ಮತ್ತು ಪತ್ರಿಕೋದ್ಯಮ, ವೈದ್ಯಕೀಯ ವಿಷಯ ಮತ್ತು ಮಕ್ಕಳ ಸಾಹಿತ್ಯ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ವಿದ್ಯಾರ್ಥಿಗಳಲ್ಲಿ ಕನ್ನಡ ವೈದ್ಯಸಾಹಿತ್ಯದ ಬೆಳವಣಿಗೆಗೆ ಕ್ರಮಗಳು, ಕನ್ನಡ ವೈದ್ಯಕೀಯ ಸಾಹಿತ್ಯದ ನಿರೀಕ್ಷೆ ಮತ್ತು ಅನಿಸಿಕೆಗಳು ಇವೇ ಮೊದಲಾದ ವಿಷಯಗಳ ಕುರಿತು ಗೋಷ್ಠಿಗಳನ್ನೂ ಆಯೋಜಿಸಲಾಗಿತ್ತು.

ಪ್ರತಿಯೊಂದು ಗೋಷ್ಠಿಯಲ್ಲೂ ನುರಿತ ವೈದ್ಯರು ಮತ್ತು ವೈದ್ಯೇತರ ಸಾಹಿತಿಗಳು ಭಾಗವಹಿಸಿ, ವಿಚಾರಗಳನ್ನು ಸೊಗಸಾಗಿ ಮತ್ತು ವೈವಿಧ್ಯಮಯವಾಗಿ ಮಂಡಿಸಿದ್ದು ವಿಶೇಷವಾಗಿತ್ತು. ಜೀವನಶೈಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಪಿ. ಯೋಗಣ್ಣನವರು ಮಾತನಾಡಿ, ‘ಇಂದು ವ್ಯಾಪಕವಾಗಿರುವ ಸಕ್ಕರೆ ಕಾಯಿಲೆ, ಏರು ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ಮತ್ತು ಮಾನಸಿಕ ಕಾಯಿಲೆಗಳಿಗೆ, ನಮ್ಮ ಪ್ರಾಚೀನ ನೆಮ್ಮದಿಯ ಆಧ್ಯಾತ್ಮಿಕ ಜೀವನಶೈಲಿಯಿಂದ, ನೆಮ್ಮದಿಯಿಲ್ಲದ ಸ್ಪರ್ಧಾತ್ಮಕ ಆಧುನಿಕ ಪಾಶ್ಚಿಮಾತ್ಯ ಜೀವನಶೈಲಿಗೆ ಬದಲಾಗಿರುವುದೇ ಪ್ರಮುಖ ಕಾರಣ’ ಎಂದು ಹೇಳಿ, ‘ಆಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರವಷ್ಟೇ ಆರೋಗ್ಯ ಸಾಧ್ಯ’ ಎಂದರು.

ಪ್ರೊ. ಕೃಷ್ಣಮೂರ್ತಿ, ಡಾ. ಪ್ರಕಾಶ ಭಟ್, ಡಾ. ಸ್ವಾಮಿನಾಥ ಜಿ. ಮುಂತಾದವರು ಜೀವನಶೈಲಿಯ ವಿವಿಧ ಪ್ರಕಾರಗಳ ಬಗ್ಗೆ ಮಾತನಾಡಿದರು. ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಎಂಬ ವಿಷಯದ ಕುರಿತಾದ ಗೋಷ್ಠಿಯಲ್ಲಿ ಡಾ. ಲಕ್ಷ್ಮಣ, ಡಾ. ಎಂ.ಜೆ. ಹಿರೇಮಠ್ ಮತ್ತು ಡಾ. ಜಿ. ಕುಲಕರ್ಣಿ ಮಾತನಾಡಿದರು. ನಮ್ಮ ದೇಶದ ವೈದ್ಯಕೀಯ ಬೋಧನಾ ವ್ಯವಸ್ಥೆ ಮತ್ತು ವಿದೇಶಗಳಲ್ಲಿನ ಬೋಧನಾ ವ್ಯವಸ್ಥೆಗಳನ್ನು ಇವರೆಲ್ಲ ತುಲನಾತ್ಮಕವಾಗಿ ವಿಮರ್ಶೆ ಮಾಡಿ, ದೇಶದ ಬೋಧಕರುಗಳು ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಪರಿಗಣಿಸಿ ಮನನವಾಗುವ ಹಾಗೆ ಬೋಧನೆ ಮಾಡಬೇಕಾದ್ದು ಅಪೇಕ್ಷಣೀಯ ಎಂದರು. ಕಥಾ ಕಾರ್ಯಾಗಾರದ ಗೋಷ್ಠಿಯಲ್ಲಿ ಡಾ.ಸಲೀಮ್ ನದಾಫ್, ನಾಗೇಶ ಹೆಗ್ಡೆ, ಕೃಷ್ಣಪ್ರಸಾದ್, ಡಾ. ಕುಶವಂತ್ ಕೋಳಿಬೈಲು ಇವರುಗಳು ಮಾತನಾಡಿ, ಕಥೆಗಳ ವಿಷಯಗಳ ಆಯ್ಕೆ, ನಿರೂಪಣೆ ಮತ್ತು ವೈದ್ಯಕೀಯ ವಿಚಾರಗಳನ್ನು ಕಥೆಗಳ ರೂಪದಲ್ಲಿ ರಚಿಸುವ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಿ, ವೈದ್ಯರುಗಳಿಗೆ ರೋಗಿಗಳ ನೇರಸಂಪರ್ಕ ಇರುವುದರಿಂದ ಹಾಗೂ
ಪ್ರತಿಯೊಬ್ಬ ರೋಗಿಯ ಹಿಂದೆಯೂ ಒಂದೊಂದು ಕಥೆಯಿರುತ್ತದೆಯಾದ್ದರಿಂದ ವೈದ್ಯರುಗಳಿಗೆ ಅಸಂಖ್ಯಾತ ವಾಸ್ತವ ಕಥಾವಸ್ತುಗಳು ಲಭ್ಯವಾಗುತ್ತವೆ ಎಂದರು.

ಕಾವ್ಯ ಕಾರ್ಯಾಗಾರ ಗೋಷ್ಠಿಯಲ್ಲಿ ಕನ್ನಡ ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಬದ್ರನ್, ಘಜಲ್‌ಕಾರ ಡಾ. ಗೋವಿಂದ ಹೆಗ್ಗಡೆ ಮತ್ತು ಡಾ. ಅಣ್ಣಯ್ಯ ಕುಲಾಲ್ ಭಾಗವಹಿಸಿ, ಕಾವ್ಯಸೃಷ್ಟಿಯ ರೂಪರೇಷೆಗಳನ್ನು ವಿವರಿಸಿ, ವೈದ್ಯಕೀಯ ವಿಚಾರಗಳನ್ನು ಕಾವ್ಯರೂಪದಲ್ಲಿ ಪ್ರಸ್ತುತಪಡಿಸುವ ಅವಶ್ಯಕತೆಯನ್ನು ಒತ್ತಿಹೇಳಿದರು. ಕವಿಗೋಷ್ಠಿಯಲ್ಲಿ ಸುಮಾರು ೩೦ ವೈದ್ಯರು
ಭಾಗವಹಿಸಿ ತಮ್ಮ ವೃತ್ತಿಜೀವನದ ಪ್ರಸಂಗಗಳನ್ನು ಕಾವ್ಯಗಳನ್ನಾಗಿಸಿ ಪ್ರಚುರಪಡಿಸಿ, ತಾವು ಇನ್ನಿತರ ಯಾವ ಸಾಹಿತಿಗಳಿಗೂ ಕಡಿಮೆಯಿಲ್ಲ ಎಂಬಂತೆ ತಮ್ಮ ಕಾವ್ಯಹೃದಯವನ್ನು ಬಿಚ್ಚಿಟ್ಟರು.

‘ಮಾತೃ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ’ ಎಂಬ ಗೋಷ್ಠಿ ಯಲ್ಲಿ ಡಾ. ಸಂಜೀವ ಕುಲಕರ್ಣಿ, ಡಾ. ಎಸ್.ಎಸ್. ಸೊಪ್ಪಿನ ಮಠ ಮತ್ತು ಡಾ. ಎಸ್.ಬಿ. ಲಕ್ಕೋಳ್ ಅವರುಗಳು ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಸಾಧಕ-ಬಾಧಕಗಳ ಬಗ್ಗೆ ಪ್ರಬಂಧ ಮಂಡಿಸಿ, ಹಲವಾರು ದೇಶಗಳಲ್ಲಿ ಈಗಾಗಲೆ ಆಂಗ್ಲೇತರ ಮಾತೃಭಾಷೆಗಳಲ್ಲಿ ಹಲವಾರು ವರ್ಷಗಳಿಂದ ವೈದ್ಯಶಿಕ್ಷಣವನ್ನು ಯಶಸ್ವಿಯಾಗಿ ನೀಡುತ್ತಿರುವಾಗ, ಕನ್ನಡ ಭಾಷೆಯಲ್ಲೂ ಇದು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನ ಸಾಮಾನ್ಯರಲ್ಲಿ ಕನ್ನಡದ ಪ್ರೀತಿ ಮತ್ತು ಅವಶ್ಯಕತೆಯ ಅರಿವು ಉಂಟಾದಲ್ಲಿ ಮಾತ್ರ ಇದು ಸಾಧ್ಯ ಎಂಬುದು ಅವರ
ಗಟ್ಟಿನಿಲುವಾಗಿತ್ತು.

ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಡಾ. ರಾಜನ್ ದೇಶಪಾಂಡೆ, ಡಾ. ಆನಂದ ಪಾಟೀಲ್ ಅವರುಗಳು ಮಾತನಾಡಿ, ಮಕ್ಕಳಿಗಾಗಿ ಸೃಷ್ಟಿಸುವ ಸಾಹಿತ್ಯ, ಮಕ್ಕಳಿಂದ ಸೃಷ್ಟಿಯಾಗುವ ಸಾಹಿತ್ಯದ ರೂಪರೇಷೆಗಳ ಬಗ್ಗೆ ವಿಚಾರಗಳನ್ನು ಮಂಡಿಸಿ,
‘ಮಕ್ಕಳ ಮನಸ್ಸನ್ನು ಸಕಾರಾತ್ಮಕವಾಗಿ ಮತ್ತು ಸದೃಢವಾಗಿ ಬೆಳೆಸುವ ಸಾಹಿತ್ಯ ಅತ್ಯವಶ್ಯಕ’ ಎಂದರು. ವೈದ್ಯಕೀಯ ಕ್ಷೇತ್ರ ಮತ್ತು ಪತ್ರಿಕೋದ್ಯಮ ಎಂಬ ವಿಷಯದ ಕುರಿತಾದ ಗೋಷ್ಠಿಯಲ್ಲಿ ಮಾತನಾಡಿದ ಡಾ. ಎಸ್.ವೈ.ಮುಲ್ಕಿ ಪಾಟೀಲ್, ಸಂಗಮೇಶ ಮೆಣಸಿನಕಾಯಿ ಇವರುಗಳು, ಮುದ್ರಣ, ದೃಶ್ಯ ಮತ್ತು ಶ್ರವಣ ಮಾಧ್ಯಮಗಳಲ್ಲಿ ವೈದ್ಯಕೀಯ ಸಾಹಿತ್ಯವನ್ನು
ಪಸರಿಸುವ ಅವಶ್ಯಕತೆ ಮತ್ತು ಸವಾಲುಗಳ ಬಗ್ಗೆ ವಿವರಿಸಿದರು.

ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯರುಗಳ ಆತ್ಮವಿಶ್ವಾಸವನ್ನು ಕುಂದಿಸುವ ಹಾಗೂ ವೈದ್ಯ-ರೋಗಿಯ ಸಂಬಂಧವನ್ನು ಹಾಳು ಮಾಡುವ ರೋಚಕ ಸುದ್ದಿಗಳನ್ನು ಬಿತ್ತರಿಸುವಾಗ ಮಾಧ್ಯಮಗಳು ಎಚ್ಚರದಿಂದಿರಬೇಕು ಎಂದೂ ಅವರು ಅಭಿಪ್ರಾಯಪಟ್ಟರು.

(ಮುಂದುವರಿಯುವುದು)

error: Content is protected !!