Thursday, 11th August 2022

ಮರಳು: ಮುಂದೇನು ಗತಿ ? ಚಿಂತಾಜನಕ ಸ್ಥಿತಿ !

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ವಿಶ್ವದಾದ್ಯಂತ ಬಳಕೆಯಾಗುವ ಮರಳಿನಲ್ಲಿ ಶೇಕಡಾ ಎಪ್ಪತ್ತು ಏಷ್ಯಾ ಖಂಡದಲ್ಲಿ ಬಳಕೆಯಾಗುತ್ತದೆ. ಸಿಮೆಂಟ್ ಉತ್ಪಾದನೆಯಲ್ಲಿ ಇಂದು ಚೀನಾ ಮೊದಲನೆಯ ಸ್ಥಾನದಲ್ಲಿದೆ. ಕಳೆದ ವರ್ಷ ವಿಶ್ವದಾದ್ಯಂತ ಉತ್ಪಾದನೆಯಾದ ಸಿಮೆಂಟಿನಲ್ಲಿ, ಅರ್ಧಕ್ಕಿಂತ ಹೆಚ್ಚು ಚೀನಾ ಉತ್ಪಾದಿಸಿದೆ. ಭಾರತ ಎರಡನೆಯ ಸ್ಥಾನದಲ್ಲಿದೆ.

ಏಪ್ರಿಲ್ 22, ವಿಶ್ವ ಭೂಮಿಯ ದಿನ (ವರ್ಲ್ಡ್ ಅರ್ಥ್ ಡೇ). ಅದರ ಮರುದಿನವೇ ವಿಶ್ವ ಪುಸ್ತಕ ದಿನ. ಯಾವುದನ್ನು ಆಚರಿಸುವುದು? ಎರಡೂ ಒಂದಕ್ಕೊಂದು ವಿರೋಧ. ಭೂಮಿ ಉಳಿಯಬೇಕಾದರೆ ವೃಕ್ಷ ವಂಶ ಉಳಿಯಬೇಕು, ಬೆಳೆಯಬೇಕು. ಗ್ರಂಥ ವಂಶ ಬೆಳೆಯ ಬೇಕಾದರೆ ಮರ ಕಡಿಯಬೇಕು.

ಮರವಿಲ್ಲದೆ ಕಾಗದವಿಲ್ಲ, ಕಾಗದ ಇಲ್ಲದೆ ಪುಸ್ತಕವಿಲ್ಲ! ಹಾಗಂತ ಎರಡೂ ಒಳ್ಳೆಯದೇ ಆದದ್ದರಿಂದ ಎರಡನ್ನೂ ಬಿಡುವಂತಿಲ್ಲ. ನಮ್ಮನ್ನು ಹೊತ್ತ ಧರಿತ್ರಿ ಮಾತೆಯಾದರೆ, ಬದುಕಿಗೆ ದಾರಿದೀಪವಾಗುವ ಪುಸ್ತಕ, ಗುರು. ಸದ್ಯ ಅದಕ್ಕಿರುವ ಒಂದೇ ಪರಿಹಾರ ಎಂದರೆ, ಎಷ್ಟು ಕಡಿಯುತ್ತೇವೆಯೋ ಅಷ್ಟನ್ನು ನೆಟ್ಟು ಬೆಳೆಸುವುದು ಮಾತ್ರ. ಮರ ಇದ್ದರೆ ಶುದ್ಧ ಗಾಳಿ, ನೀರು, ವಿಹಗ ಸಂಕುಲ ಎಲ್ಲವೂ.

ಸರಿ ಅದನ್ನು ಹೇಗೋ ನಿಭಾಯಿಸಬಹುದು ಅನ್ನಿ. ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಮುಂದೆ ಇನ್ನೊಂದು ದೊಡ್ಡ ಸಮಸ್ಯೆ ಎದು ರಾಗಲಿದೆ. ಏನು ಗೊತ್ತೇ? ಮರಳು ಅಲಿಯಾಸ್ ಉಸುಕು, ಯಾನೆ ಸಿಕತ, ಉರುಫ್ ರೇತಿ! ಮಾನವ ಗಾಳಿ ಮತ್ತು ನೀರಿನ ನಂತರ ಅತಿ ಹೆಚ್ಚು ಬಳಸುವುದು ಏನನ್ನು? ಆಹಾರ… ಬಟ್ಟೆ… ವಾಹನ… ತೈಲ…ಊಹೂ. ಅದ್ಯಾವುದೂ ಅಲ್ಲ. ಮೂರನೆಯ ಸ್ಥಾನದಲ್ಲಿ ಮನುಷ್ಯ ಬಳಸುವುದು ಮರಳು. ಪರಿಸ್ಥಿತಿ ಹೀಗೆ ಮುಂದುವರಿದರೆ, ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಿರುವ ಮರಳು, ಮುಂದೊಂದು ದಿನ ಮರೀಚಿಕೆಯಾದರೂ ಆಶ್ಚರ್ಯಪಡಬೇಕಾಗಿಲ್ಲ.

ನಮಗೆಲ್ಲ ತಿಳಿದಿರುವಂತೆ ಪೂರ್ವ ಏಷ್ಯಾದ ದೇಶಗಳ ಆರ್ಥಿಕವಾಗಿ ಬಲಿಷ್ಟವಾದ ದೇಶ ಎಂದರೆ ಸಿಂಗಪುರ್. ಕಳೆದ ಕೆಲವು ದಶಕಗಳಲ್ಲಿ ಸಿಂಗಪುರ್ ಬೆಳೆದಷ್ಟು ಅದರ ಸುತ್ತಮುತ್ತಲಿನ ಯಾವ ದೇಶವೂ ಬೆಳೆದಿಲ್ಲ. ಆರ್ಥಿಕವಾಗಿಯೂ ಹೌದು, ಭೌಗೋಳಿಕವಾಗಿಯೂ ಹೌದು. ಎರಡು ನೂರು ವರ್ಷಗಳ ಹಿಂದೆ ಐದುನೂರ ಎಪ್ಪತ್ತೆಂಟು ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದ ದೇಶ ಇಂದು ಏಳು ನೂರ ಇಪ್ಪತ್ತು ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ ಅಂದರೆ, ಭೂಮಿಯಲ್ಲಿ ಸುಮಾರು ಇಪ್ಪತ್ತೈದು ಪ್ರತಿಶತ ವೃದ್ಧಿಸಿದೆ. ಇದು ಸಮುದ್ರ ವನ್ನು ತುಂಬಿ ಸೃಷ್ಟಿಸಿದ ಕೃತಕ ಭೂಮಿ. ಅಷ್ಟು ತುಂಬಲು ಆ ದೇಶದ ಬಳಿ ಸರಕು ಇತ್ತೇ? ಖಂಡಿತ ಇಲ್ಲ!

ಬರೇ ಸಮುದ್ರವನ್ನು ಹಿಮ್ಮೆಟ್ಟಿಸಿದರೆ ಏನು ಪ್ರಯೋಜನ? ಸಮುದ್ರ ತಟದಲ್ಲಿ ಉಳಿಯುವ ಹುಚ್ಚಿರುವ ಜನರಿಗೆ ಉಳಿಯಲು ಮನೆ, ಸಂಚಾರಕ್ಕೆ ರಸ್ತೆ, ಇತರ ಸೌಲಭ್ಯಗಳೂ ಆಗಬೇಕು. ಅದಕ್ಕೆ ಕಾಂಕ್ರೀಟ್, ಗ್ಲಾಸ್, ಪೇಂಟ್ ಇತ್ಯಾದಿಗಳೂ ಬೇಕು. ಅದಕ್ಕೆಲ್ಲ ಪ್ರಮುಖ ವಾಗಿ ಬೇಕಾದದ್ದು ಮರಳು. ಪ್ರತಿನಿತ್ಯ ಎದ್ದೇಳುವ ಗಗನಚುಂಬಿ ಕಟ್ಟಡಗಳಿಗೆ ಪೂರೈಸುವಷ್ಟು ಮರಳು ಆ ದೇಶದಲ್ಲಿಲ್ಲ. ನಿಮಗೆ ತಿಳಿದಿರಲಿ, ವಿಸ್ತೀರ್ಣದಲ್ಲಿ ಬೆಂಗಳೂರು ನಗರಕ್ಕಿಂತಲೂ ಚಿಕ್ಕದಾದ ಸಿಂಗಪುರ್ ದೇಶ ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋ ನೇಷ್ಯಾದಿಂದ ಮರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆ ದೇಶಗಳಿಗೆ ಅದ್ಯಾವ ಅನಿವಾರ್ಯವೋ, ಅವಶ್ಯಕತೆಯೋ ಗೊತ್ತಿಲ್ಲ, ಮುಂದೆ ಆಗಬಹುದಾದ ಅನಾಹುತವನ್ನು ಲೆಕ್ಕಿಸದೇ ಪೂರೈಸುತ್ತಿವೆ.

ಇದ್ದದ್ದರಲ್ಲಿ ಇಂಡೋನೇಷ್ಯಾ ಸ್ವಲ್ಪ ಎಚ್ಚೆತ್ತುಕೊಂಡು ನದಿ ಮೂಲದ ಮರಳಿನ ರಫ್ತನ್ನು ನಿಲ್ಲಿಸಿದೆ. ಇದು ಒಂದು ದೇಶದ ಕಥೆಯಲ್ಲ. ಮರಳಿನ ರಾಶಿಯನ್ನೇ ಮೈತುಂಬ ಹೊದ್ದುಕೊಂಡಿರುವ ಕೊಲ್ಲಿ ರಾಷ್ಟ್ರಗಳೂ ಕೂಡ ಮರಳನ್ನು ಆಮದು ಮಾಡಿಕೊಳ್ಳುತ್ತವೆ ಎಂದರೆ ನಂಬಲೇಬೇಕು. ನಮ್ಮ ಭೂಮಿಯ ಶೇಕಡಾ ಮೂವತ್ತೈದರಷ್ಟು ಭಾಗ ಮರುಭೂಮಿ ಅಥವಾ ಮರಳಿನಿಂದ ಆವರಿಸಿಕೊಂಡಿದೆ. ಸಹಾರಾ ಮರುಭೂಮಿಯೊಂದೇ ಸುಮಾರು ತೊಂಬತ್ತೆರಡು ಲಕ್ಷ ಚದರ ಕಿಲೋಮೀಟರ್‌ನಷ್ಟು ಹರಡಿಕೊಂಡಿದೆ. ಕೊಲ್ಲಿ ರಾಷ್ಟ್ರಗಳ ಶೇಕಡಾ
ತೊಂಬತ್ತಕ್ಕೂ ಹೆಚ್ಚು ಭಾಗ ಮರುಭೂಮಿ. ಆದರೂ ಆ ದೇಶಗಳು ಮರಳನ್ನು ಆಮದು ಮಾಡೊಕೊಳ್ಳುವುದು ಸುಮಾರು ಹತ್ತು ಸಾವಿರ ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೇಲಿಯಾದಿಂದ.

ಬಿಟ್ಟರೆ ಅಷ್ಟೇ ದೂರದಲ್ಲಿರುವ ಕೆನಡಾದಿಂದ. ಉದಾಹರಣೆಯಾಗಿ ದುಬೈನಲ್ಲಿರುವ ಎಂಟುನೂರಾ ಮೂವತ್ತು ಮೀಟರ್ ಎತ್ತರದ ಬುರ್ಜ್ ಖಲೀಫಾ ನೋಡಿ. ಆ ಕಟ್ಟಡ ನಿರ್ಮಾಣಕ್ಕೆ ಬಳಸಿದ ಸಂಪೂರ್ಣ ಮರಳು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡದ್ದು! ಮರುಭೂಮಿ ಯಲ್ಲಿ ಅಷ್ಟೊಂದು ಮರಳು ಇದ್ದಾಗ ಅದನ್ನೇ ಬಳಸಿಕೊಳ್ಳಬಹುದಲ್ಲ, ಆಮದು ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಸ್ವಾಭಾವಿಕ.

ನಾನು ರಜೆಯಲ್ಲಿ ಭಾರತಕ್ಕೆ ಬಂದಾಗ, ಸಂಬಂಧಿಗಳು, ಮಿತ್ರರು ಸಾಮಾನ್ಯವಾಗಿ ಮೂರು ಪ್ರಶ್ನೆ ಕೇಳುತ್ತಾರೆ. ಮೊದಲನೆಯದು, ಕೊಲ್ಲಿ ರಾಷ್ಟ್ರಗಳಲ್ಲಿ ಯಾವೆಲ್ಲ ತರಕಾರಿ, ಹಣ್ಣುಗಳು ಸಿಗುತ್ತವೆ ಎಂಬುದು. ಎರಡನೆಯದು, ಅಲ್ಲಿ ಪೆಟ್ರೊಲ್ ಬೆಲೆ ಎಷ್ಟು ಎಂದು. ಮೂರನೆಯದು, ಮರಳೇ ತುಂಬಿರುವ ದೇಶದಲ್ಲಿ ಮರಳು ಪುಕ್ಕಟೆಯೇ ಅಥವಾ ಅದಕ್ಕೂ ಹಣ ಕೊಡಬೇಕೆ ಎನ್ನುವುದು. ದುರಂತ ಎಂದರೆ, ಈ ದೇಶಗಳಲ್ಲಿ ತುಂಬಿ ಚೆಲ್ಲುವಷ್ಟು ಮರಳಿದ್ದರೂ ಅದು ಯಾವುದೇ ನಿರ್ಮಾಣ ಕಾರ್ಯಕ್ಕೆ ಬಳಸಲು ಯೋಗ್ಯವಾದುದಲ್ಲ. ಮರುಭೂಮಿಯ ಮರಳಿನ ಕಣಗಳು ಹೆಚ್ಚಾಗಿ ವೃತ್ತಾಕಾರದಲ್ಲಿರುತ್ತವೆ.

ಗಾತ್ರದಲ್ಲಿ ತೀರಾ ಚಿಕ್ಕದಾಗಿರುತ್ತದೆ. ಜತೆಗೆ, ಸದಾ ಬೀಸುವ ಗಾಳಿಯಿಂದಾಗಿ ಕಣಗಳು ಸವೆದು, ಮೇಲ್ಮೈ ನುಣುಪಾಗಿರುತ್ತದೆ, ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಮಿಶ್ರಿತವಾಗಿರುತ್ತದೆ. ಕಟ್ಟಡ ಅಥವಾ ರಸ್ತೆ ನಿರ್ಮಾಣ ಕಾರ್ಯದಲ್ಲಿ ಉಪಯೋಗಿಸುವ ಮರಳು ಕೋನಾಕಾರ ದಲ್ಲಿದ್ದು, ಒರಟಾಗಿರಬೇಕು. ಗಾತ್ರದಲ್ಲಿ ಕಾಲು ಮಿಲಿಮೀಟರ್‌ನಿಂದ ಒಂದೂವರೆ ಮಿಲಿಮೀಟರ್‌ನಷ್ಟಿರಬೇಕು. ಅದಕ್ಕಿಂತ ಸಣ್ಣದಾದರೆ
ಅದು ಹೂಳು ಅಥವಾ ಧೂಳಿನ ಕಣವೆಂದೂ, ದೊಡ್ಡದಾದರೆ ಜೆಲ್ಲಿ ಕಲ್ಲು ಎಂದೂ ಪರಿಗಣಿಸಲ್ಪಡುತ್ತದೆ. ಮರಳು ಉಪ್ಪಿನ ಅಂಶವಿಲ್ಲದೆ (ಉಪ್ಪಿನ ಅಂಶ ಕಾಂಕ್ರೀಟಿನಲ್ಲಿರುವ ಕಬ್ಬಿಣ ತುಕ್ಕು ಹಿಡಿಯುವಂತೆ ಮಾಡುತ್ತದೆ) ಶುದ್ಧವಾಗಿರಬೇಕು.

ಆಗ ಎಲ್ಲ ಕಣಗಳೂ ಒಂದಕ್ಕೊಂದು ಬಂಧಿಸಿ, ಕಾಂಕ್ರೀಟಿಗೆ ಬಲ ಬರುತ್ತದೆ. ಸದ್ಯ, ಮರುಭೂಮಿಯ ಮರಳನ್ನು ಶೋಧಿಸಿ, ತೊಳೆದು, ಸೋಸಿ ಉಪಯೋಗಿಸಲು ಯೋಗ್ಯವಾಗಿಸುವ ಬದಲು ಆಮದು ಮಾಡಿಕೊಳ್ಳುವುದು ಸುಲಭವೂ ಹೌದು, ಸೋವಿಯೂ ಹೌದು. ಅದಕ್ಕಾಗಿ ನದಿ ಅಥವಾ ಸಮುದ್ರದ ಮರಳಿಗೆ ಎಲ್ಲರೂ ಮೊರೆಹೋಗುತ್ತಿದಾರೆ. ಸಮುದ್ರದ ಮರಳಿಗಿಂತ ನದಿಯ ಮರಳು ಉತ್ತಮ ಏಕೆಂದರೆ ಅದರಲ್ಲಿ ಉಪ್ಪಿನ ಅಂಶ ಇರುವುದಿಲ್ಲ. ಸಮುದ್ರದ ಮರಳಿನಲ್ಲಿ ಚಿಪ್ಪು, ಜಲಚರಗಳ ತ್ಯಾಜ್ಯದ ಜತೆಗೆ ಇತರ ತ್ಯಾಜ್ಯಗಳೂ ಸೇರಿರುವುದರಿಂದ ಕೆಮಿಕಲ್ ರಿಯಾಕ್ಷನ್ ಆಗುವ ಸಾಧ್ಯತೆ ಇದ್ದದ್ದೇ.

ಅದನ್ನು ಶುದ್ಧೀಕರಿಸದೇ ಉಪಯೋಗಿಸುವಂತಿಲ್ಲ. ಎಲ್ಲ ಕಾರಣಗಳಿಂದಲೂ ನದಿಯ ಬುಡದ ಮರಳಿನಷ್ಟು ಯೋಗ್ಯ ಇನ್ಯಾವುದೂ ಅಲ್ಲ. ಆ ಕಾರಣಕ್ಕಾಗಿಯೇ ನದಿಯಿಂದ ಮರಳು ಎತ್ತುವುದಕ್ಕೆ ಎಲ್ಲಿಲ್ಲದ ಪೈಪೋಟಿ, ಮಾಫಿಯಾ, ಹೊಡೆದಾಟ, ಬಡಿದಾಟ ಕೊನೆಗೆ ಕೊಲೆ ಯವರೆಗೂ ಹೋಗುವುದಿದೆ. ನದಿಯಿಂದಲೇ ಆಗಲಿ ಅಥವಾ ಸಮುದ್ರದಿಂದಲೇ ಆಗಲಿ, ಮರಳು ಎತ್ತುವುದರಿಂದ ಪರಿಸರಕ್ಕೆ
ಸಾಕಷ್ಟು ನಷ್ಟವಾಗುತ್ತದೆ. ಹೂಳೆತ್ತುವ ಕ್ರಿಯೆ ಅಥವಾ ಡ್ರೆಜಿಂಜ್ ಮಾಡುವಾಗ ನೀರು ಮಲಿನವಾಗುತ್ತದೆ.

ಸ್ಥಳೀಯ ಮೀನುಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹತ್ತಿರದ ಕೃಷಿಗೆ ತೊಡಕಾಗುತ್ತದೆ. ಜಲಾನಯನ ಪ್ರದೇಶದಲ್ಲಿರುವ ನೈಸರ್ಗಿಕ ಆವಾಸಸ್ಥಾನ ನಾಶವಾಗುತ್ತದೆ. ಇದರ ಜತೆಗೆ, ಸರಿಯಾದ ಮಾದರಿಯಲ್ಲಿ ಡ್ರೆಜಿಂಗ್ ಮಾಡದಿದ್ದರೆ ಸ್ಥಳದಲ್ಲಿರುವವರು
ಕಿವುಡರಾಗುವುದರಿಂದ ಹಿಡಿದು ಸಾಯುವ ಸಾಧ್ಯತೆಯೂ ಇದೆ. ಭಾರತ ಒಂದರ ಪ್ರತಿ ವರ್ಷ ಸುಮಾರು ನೂರು ಜನ ಇದರಲ್ಲಿ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ನೀರಿನ ತಳದಲ್ಲಿ ಕೊರೆದಷ್ಟೂ ನೀರಿನ ತಟ ಕುಸಿಯುತ್ತದೆ.

ಬಾಲ್ಯದಲ್ಲಿ ನಾವು ಮಾಡಿದ ಪ್ರಯೋಗ(!)ವೇ ಇದಕ್ಕೆ ಸಾಕ್ಷಿ. ಸಮುದ್ರ ತಟದ ಮರಳಿನಲ್ಲಿ ಒಂದು ಅಡಿ ಹೊಂಡ ತೋಡಿದರೂ ಎರಡೋ
ಮೂರೋ ಅಲೆ ಬಂದು, ಅಕ್ಕ ಪಕ್ಕದ ಮರಳನ್ನು ಕೊರೆದು ಆ ಹೊಂಡ ತುಂಬಿಸುವುದನ್ನು ನಾವು ನೋಡಿದ್ದೇವೆ. ಆ ನಿಯಮ ಇಂದಿಗೂ ಬದಲಾಗಲಿಲ್ಲ. ಹಾಗಾದರೆ ಮರಳನ್ನು ಎಲ್ಲಿಂದ ಪಡೆಯಬೇಕು? ನದಿಯ ಬುಡದಿಂದಲೇ ಪಡೆಯಬೇಕು. ಏಕೆಂದರೆ, ನೂರಾರು ಕಿಲೋಮೀಟರ್ ದೂರದಲ್ಲಿರುವ ಗುಡ್ಡ ಅಥವಾ ಕಲ್ಲು, ಗಾಳಿ-ಮಳೆ, ಬಿಸಿಲಿನ ವಾತಾವರಣಕ್ಕೆ ಸಿಲುಕಿ ಸಣ್ಣ ಸಣ್ಣ ಚೂರಾಗಿ, ಮಳೆಯ
ನೀರಿನೊಂದಿಗೆ ಬೆರೆತು ನದಿಯ ಬುಡಕ್ಕೇ ಬರುತ್ತದೆ.

ಮುಂದೊಂದು ದಿನ ಸಮುದ್ರವನ್ನು ಸೇರುತ್ತದೆ. ಆದರೆ ಎಷ್ಟು ಎಂಬುದು ದೊಡ್ಡ ಪ್ರಶ್ನೆ. ಸಮಸ್ಯೆ ಆದದ್ದೇ ಅಲ್ಲಿ. ಈಗ ನಾವು ಇರುವು ದಕ್ಕಿಂತ ಅಥವಾ ಬರುವುದಕ್ಕಿಂತ ಹೆಚ್ಚು ಮರಳನ್ನು ತೆಗೆಯುತ್ತಿದ್ದೇವೆ. ಒಬ್ಬ ಮನುಷ್ಯ ಪ್ರತಿನಿತ್ಯ ಅಬ್ಬಬ್ಬಾ ಎಂದರೆ ನಾಲ್ಕು ಕಿಲೋ ಆಹಾರ ಸೇವಿಸುತ್ತಾನಂತೆ, ಅದೂ ಕುಡಿಯುವ ನೀರನ್ನೂ ಸೇರಿ. ಅಂದರೆ ವರ್ಷಕ್ಕೆ ಒಂದೂವರೆ ಸಾವಿರ ಕಿಲೋ ಅಥವಾ ಒಂದೂವರೆ
ಟನ್. ಇಂದು ವಿಶ್ವದಾದ್ಯಂತ ಮಕ್ಕಳೂ ಸೇರಿದಂತೆ ಎಂಟುನೂರು ಕೋಟಿ ಜನರಿದ್ದಾರೆ.

ಲೆಕ್ಕದಲ್ಲಿ ಕಂಜೂಸಿತನ ಬೇಡ, ಎಂಟು ಶತಕೋಟಿ ಜನರೂ ವರ್ಷಕ್ಕೆ ಒಂದೂವರೆ ಟನ್ ಆಹಾರ ಸೇವಿಸಿದರೆ ಹನ್ನೆರಡು ಶತಕೋಟಿ ಟನ್ ಆಯಿತು. ಆದರೆ ಮನುಷ್ಯ ಪ್ರತಿ ವರ್ಷ ಬಳಸುತ್ತಿರುವ ಮರಳು ಎಷ್ಟು ಗೊತ್ತೆ? ಬಳಸುವ ಆಹಾರಕ್ಕಿಂತ ನಾಲ್ಕು ಪಟ್ಟು ಅಧಿಕ, ಸುಮಾರು ಐವತ್ತು ಶತಕೋಟಿ ಟನ್! ಅದರಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಕಾಂಕ್ರೀಟಿಗೆ. ಉಳಿದದ್ದು ಗಾಜು ತಯಾರಿಸಲು, ಮನೆಗೆ ಬಳಿಯುವ ಬಣ್ಣ ತಯಾರಿಸಲು, ಆಶಾಲ್ಟ ರಸ್ತೆ ನಿರ್ಮಾಣಕ್ಕೆ ಇತ್ಯಾದಿ ಬಳಕೆಯಾಗುತ್ತದೆ. ಸಿಮೆಂಟಿನಲ್ಲಿರುವ ಪ್ರಮುಖ ವಸ್ತು ಮರಳು. ನಾವು ಬಳಸುವ ಟೂತ್ಪೇಸ್ಟ್, ಸೌಂದರ್ಯ ವರ್ಧಕ ಸಾಮಗ್ರಿಗಳು, ಕುಡಿಯುವ ವೈನ್, ಕಂಪ್ಯೂಟರ್ ಚಿಪ್, ಮೊಬೈಲ್ ಸ್ಕ್ರೀನ್ ತಯಾರಿಸಲು ಮರಳನ್ನು ಬಳಸುತ್ತಾರೆ. ಎಲ್ಲಿಯವರೆಗೆ ಎಂದರೆ, ಮರಳು ಇಲ್ಲದಿದ್ದರೆ ಇಂದು ನಾವು ಧರಿಸುವ ಒಳ ಉಡುಪು ಕೂಡ ನಮ್ಮ ಸೊಂಟದ ಮೇಲೆ ನಿಲ್ಲುವುದಿಲ್ಲ!

ನಿಜ, ಒಳ ಉಡುಪಿನಲ್ಲಿ ಬಳಸುವ ಇಲ್ಯಾಸ್ಟಿಕ್ ತಯಾರಿಕೆಗೂ ಮರಳು ಬೇಕು. ಸುಲಭವಾಗಿ ಅರ್ಥವಾಗುವಂತೆ ಹೇಳುವುದಾದರೆ, ಹತ್ತು ಮೀಟರ್ ಅಗಲ, ಒಂದು ಮೀಟರ್ ಎತ್ತರದ ಮರಳಿನ ರಸ್ತೆ ನಿರ್ಮಿಸಿದರೆ, ನಮ್ಮ ಭೂಮಿಯ ಎಪ್ಪತ್ತು ಸುತ್ತು ಬರುತ್ತದಂತೆ! ಇದು
ಒಂದು ವರ್ಷದ ಮರಳಿನ ಬಳಕೆಯ ಲೆಕ್ಕ! ಇಲ್ಲಿ ಇನ್ನೂ ಒಂದು ವಿಷಯ ಹೇಳಬೇಕು. ವಿಶ್ವದಾದ್ಯಂತ ಬಳಕೆಯಾಗುವ ಮರಳಿನಲ್ಲಿ ಶೇಕಡಾ ಎಪ್ಪತ್ತು ಏಷ್ಯಾ ಖಂಡದಲ್ಲಿ ಬಳಕೆಯಾಗುತ್ತದೆ. ಸಿಮೆಂಟ್ ಉತ್ಪಾದನೆಯಲ್ಲಿ ಇಂದು ಚೀನಾ ಮೊದಲನೆಯ ಸ್ಥಾನದಲ್ಲಿದೆ. ಕಳೆದ ವರ್ಷ ವಿಶ್ವದಾದ್ಯಂತ ಉತ್ಪಾದನೆಯಾದ ಸಿಮೆಂಟಿನಲ್ಲಿ, ಅರ್ಧಕ್ಕಿಂತ ಹೆಚ್ಚು ಚೀನಾ ಉತ್ಪಾದಿಸಿದೆ. ಭಾರತ ಎರಡನೆಯ ಸ್ಥಾನದಲ್ಲಿದೆ.

ಕಳೆದ ಎರಡು ಮೂರು ವರ್ಷದಲ್ಲಿ ಚೀನಾ ದೇಶ ಒಂದೇ ಅಮೆರಿಕ ಒಂದು ಶತಮಾನದಲ್ಲಿ ಬಳಸಿದಷ್ಟು ಮರಳನ್ನು ಬಳಸಿದೆ. ಮತ್ತೆ,
ದೊಡ್ಡ ದೇಶ, ದೊಡ್ಡ ಜನಸಂಖ್ಯೆಗೆ ಬೆಲೆ ಇಲ್ಲವೇ!? ಇರಲಿ, ಕಳೆದ ಎರಡು ದಶಕದಲ್ಲಿ ವಿಶ್ವದಾದ್ಯಂತ ಮರಳಿನ ಬಳಕೆ ಮೂರು ಪಟ್ಟು ಹೆಚ್ಚಿದೆ. ನಿಜಕ್ಕೂ ಚಿಂತಾಜನಕ ಸ್ಥಿತಿ ಎಂದರೆ ಇದು. ಏಕೆಂದರೆ, ಇದು ಪ್ರಕೃತಿ ತಾನಾಗಿಯೇ ಒದಗಿಸುವ ಪ್ರಮಾಣಕ್ಕಿಂತಲೂ ಎರಡ ರಿಂದ ಮೂರು ಪಟ್ಟು ಹೆಚ್ಚು! ಹೀಗೇ ಮುಂದುವರಿದರೆ, ಮುಂದೊಂದು ದಿನ ಮರಳಿಗೆ ಹಾಹಾಕಾರ ಏಳುವುದು ಖಂಡಿತ!

ಈಗ ಪರ್ಯಾಯ ಉಪಾಯಕ್ಕೆ ಸಂಶೋಧನೆಗಳು ನಡೆಯುತ್ತಿವೆ. ಕಲ್ಲನ್ನು ಪುಡಿ ಮಡುವುದು ಸುಲಭವಾದರೂ, ದುಬಾರಿ. ಜತೆಗೆ, ಅದನ್ನು ಬಳಸುವಾಗ ನೀರು ಹೆಚ್ಚು ಬೇಕಾಗುತ್ತದೆ. ಅದು ಸಾಮಾನ್ಯ ಮರಳಿಗಿಂತ ಹೆಚ್ಚು ತೂಕದ್ದಾಗಿರುತ್ತದೆ. ಇದರ ಪರಿಣಾಮವಾಗಿ ರವಾನೆಯ ಬೆಲೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಪರಿಸರಕ್ಕೆ ಎಲ್ಲಿಲ್ಲದ ಹಾನಿ ಉಂಟುಮಾಡುತ್ತದೆ. ಇನ್ನೊಂದು, ಕಲ್ಲಿದ್ದಲ್ಲಿನ ಗಣಿಯಲ್ಲಿ ಉಳಿಯುವ ಸಣ್ಣ ಕಣಗಳನ್ನು ಮರಳಿನ ಬದಲು ಕಾಂಕ್ರೀಟಿನಲ್ಲಿ ಬಳಸುವುದು. ಮತ್ತೊಂದು, ಪ್ಲಾಸ್ಟಿಕ್
ತ್ಯಾಜ್ಯವನ್ನು ಮರಳಿನ ಜಾಗದಲ್ಲಿ ಉಪಯೋಗಿಸುವುದು. ಇವೆಲ್ಲ ಇನ್ನೂ ಪ್ರಯೋಗದ ಹಂತದಲ್ಲಿಯೇ ಇವೆ ಎನ್ನಬಹುದು.

ಇದ್ಯಾವುದೂ ಬಳಕೆಯ ವೇಗಕ್ಕೆ ಸಮವಲ್ಲ. ಸದ್ಯ ನಮ್ಮ ಮುಂದಿರುವ ಉಪಾಯಗಳು ಎರಡು. ಮೊದಲನೆಯದು, ಒಡೆದು ಹಾಕಿದ ಕಟ್ಟಡದ ವಸ್ತುಗಳ ಮರು ಬಳಕೆ. ಕಾಂಕ್ರೀಟನ್ನು ಪುನಃ ಪುಡಿ ಮಾಡಿ ಮರಳಿನಂತೆ ಬಳಸುವುದು. ಜರ್ಮನಿಯಲ್ಲಿ ಶೇಕಡಾ ಅರವತ್ತೈದ ರಷ್ಟು ಇಂತಹ ವಸ್ತುಗಳು ಮರುಬಳಕೆಯಾಗುತ್ತಿದೆ.

ಭಾರತವೂ ಸೇರಿದಂತೆ ಇತರ ದಕ್ಷಿಣ ಏಷ್ಯಾ ದೇಶಗಳಲ್ಲಿ ಈ ಮರುಬಳಕೆ ಶೇಕಡಾ ಹತ್ತಕ್ಕಿಂತಲೂ ಕಮ್ಮಿ ಇದೆ. ಇನ್ನು ಎರಡನೆಯದು, ಮರಳಿನ ಬಳಕೆಯನ್ನೇ ಕಮ್ಮಿ ಮಾಡುವುದು. ವಿಶ್ವದಾದ್ಯಂತ ಕಟ್ಟಿದ ಕಟ್ಟಡಗಳಲ್ಲಿ ಶೇಕಡಾ ಹತ್ತರಷ್ಟು ಖಾಲಿ ಇರುತ್ತವಂತೆ. ನಿಜವೂ ಇರಬಹುದು. ಒಂದಕ್ಕಿಂತ ಹೆಚ್ಚು ಮನೆ ಕಟ್ಟಿಕೊಂಡು, ಬಾಡಿಗೆಗೂ ಕೊಡದೆ ಖಾಲಿ ಇಟ್ಟಿರುವ ಮನೆಗಳು, ಆಫೀಸ್‌ಗಳು, ಹೊಟೇಲಿನಲ್ಲಿ ಖಾಲಿ ಇರುವ ರೂಮ್‌ಗಳು ಎಲ್ಲವನ್ನೂ ಸೇರಿಸಿದರೆ ಇದು ಸರಿ ಎನಿಸುತ್ತದೆ. ಅದು ಕಡಿಮೆಯಾಗಬೇಗು. ಇನ್ನೊಂದು, ಅಗತ್ಯಕ್ಕಿಂತ
ದೊಡ್ಡದಾದ ಮನೆ, ಗ್ಯಾರೇಜು ಇತ್ಯಾದಿಗಳನ್ನು ಕಟ್ಟುವುದು. ಇಂಥ ವಿಷಯಗಳ ಕಡೆ ಗಮನ ಕೊಡಬೇಕು. ಆಗ ಮರಗಳನ್ನೂ, ಮರಗಳನ್ನೂ ಉಳಿಸಲು ಸಾಧ್ಯ.