Friday, 5th March 2021

ಸಂದೇಶ್ ಸಂವಾದ್‌ ವಾಟ್ಸಾಪ್‌ಗೆ ಭಾರತದ ಉತ್ತರ

ಟೆಕ್‌ ಟಾಕ್‌

ಬಡೆಕ್ಕಿಲ ಪ್ರದೀಪ

ವಾಟ್ಸಾಪ್ ಹೋಲುವಂತಹ ಎರಡು ಆ್ಯಪ್‌ಗಳನ್ನು ಭಾರತ ಸರಕಾರ ಬಿಡುಗಡೆ ಮಾಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವಾಟ್ಸಾಪ್‌ಗೆ ಭಾರತ ಹಾಕುತ್ತಿರುವ ಸವಾಲು ಇದು.

ಭಾರತದ ಮೆಸೆಜಿಂಗ್ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳು, ಜೊತೆಗೆ ವಿಶ್ವದೆಲ್ಲೆಡೆ ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿ ಗಳಿಗೆ ವಿರೋಧ ವ್ಯಕ್ತವಾಗುತ್ತಿರುವುದರ ಬೆನ್ನಲ್ಲೇ ಭಾರತ ಸರಕಾರ ರೂಪಿಸಿರುವ ಎರಡೆರಡು ಮೆಸೆಜಿಂಗ್ ಆ್ಯಪ್‌ಗಳು ಸುದ್ದಿ ಯಲ್ಲಿದೆ.

ಮೊದಲನೆಯದು ‘ಸಂದೇಸ್’ (ಸಂದೇಶ್). ಇನ್ನೊಂದು ‘ಸಂವಾದ್’. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಡಿಯಲ್ಲಿರುವ ನ್ಯಾಶನಲ್ ಇನ್ಫೋಮಾಟಿಕ್ಸ್‌ ಸೆಂಟರ್ ಅಭಿವೃದ್ಧಿಪಡಿಸಿದ ಸಂದೇಶ್ ಇದೀಗ ಎಲ್ಲರಿಗೂ ಡೌನ್ ಲೋಡ್ ಮಾಡಲು ಲಭ್ಯವಿದ್ದು, ಸಂವಾದ್ ಅನ್ನು ಅಭಿವೃದ್ಧಿ ಪಡಿಸುತ್ತಿರುವ ಡಿಓಟಿ ಅಂದರೆ ಡಿಪಾರ್ಟ್‌ಮೆಂಟ್ ಆ್ಯಪ್ ಟೆಲೆಮ್ಯಾಟಿಕ್ಸ್‌ ಮಾತ್ರ ಇನ್ನೂ ಅದನ್ನು ಬಳಕೆಗೆ ತಂದಿಲ್ಲ.

ಸಂವಾದ್ ಹಾಗೂ ಸಂದೇಶ್ ಆ್ಯಪ್‌ಗಳನ್ನು ಭಾರತ ಸರಕಾರ ತನ್ನ ನೌಕರರು ಮತ್ತು ಅಧಿಕಾರಿಗಳು ಬಳಸುವಂತಾಗಲು ಅಭಿವೃದ್ಧಿಪಡಿಸುತ್ತಿದ್ದು, ಇದೀಗ ಬಳಕೆಯಲ್ಲಿರುವ ಭಾರತೀಯೇತರ ಸಂದೇಶ ಸೇವೆಗಳಲ್ಲಿರುವ ಗೌಪ್ಯತೆಯ ಭಯವನ್ನು ಹೋಗಲಾಡಿಸಿ, ನಮ್ಮದೇ ದೇಶದಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್‌ಗಳ ಮೂಲಕ ಚ್ಯಾಟ್ ಹಾಗೂ ಮಾಹಿತಿ ಸಂವಹನ ಮಾಡುವು ದರಿಂದ ಹೆಚ್ಚು ಗೌಪ್ಯತೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯ ಸರಕಾರದ್ದು.

ಇದೆಲ್ಲದರ ನಡುವೆ ಸಂದೇಶ್ ಆ್ಯಪ್ ಅನ್ನು ಕೇವಲ ಸರಕಾರಿ ನೌಕರರಲ್ಲದೇ ಉಳಿದವರೂ ಬಳಸುವುದಕ್ಕೆ ಅವಕಾಶವಿದ್ದು, ಕೆಲವು ದಿನಗಳ ಕಾಲ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದರೂ ಇದೀಗ ಅಲ್ಲಿಂದ ಅದನ್ನು ತೆಗೆಯಲಾಗಿದೆ. ಆ್ಯಪ್ ಸ್ಟೋರ್‌ನಲ್ಲಿ ಈಗಲೂ ಈ ಆ್ಯಪ್ ಡೌನ್‌ಲೋಡ್‌ಗೆ ಲಭ್ಯವಿದೆ. ಆದರೆ ಆಂಡ್ರಾಯ್ಡ್‌ ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಲು  gims.gov.inಗೆ ಲಾಗಿನ್ ಆಗಿ ಅಲ್ಲಿಂದ ಡೌನ್‌ಲೋಡ್ ಮಾಡಿ ಕೊಳ್ಳಬಹುದಾಗಿದೆ.

ಮೊಬೈಲ್ ನಂಬರ್ ಬೇಕಿಲ್ಲ
ಈ ಆ್ಯಪ್‌ನ ವಿಶೇಷ ಎಂದರೆ ಇದನ್ನು ವಾಟ್ಸಾಪ್ ರೀತಿಯಲ್ಲಿ ಕೇವಲ ಮೊಬೈಲ್ ನಂಬರ್ ಮಾತ್ರ ಬಳಸಿ ರಿಜಿಸ್ಟರ್ ಆಗಬೇಕಿಲ್ಲ. ಮೊಬೈಲ್ ನಂಬರ್‌ನ ಆಪ್ಶನ್ ಜೊತೆಗೆ ಈಮೇಲ್ ಐಡಿಯ ಆಯ್ಕೆಯನ್ನೂ ಇದರಲ್ಲಿ ನೀಡಲಾಗಿದ್ದು, ಒಂದು ವೇಳೆ ಮುಂದಿನ ದಿನಗಳಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಿದರೂ ಚಿಂತೆಯಿಲ್ಲದೇ ಇದೇ ಅಕೌಂಟನ್ನು ಉಳಿಸಿಕೊಂಡು ನಂಬರ್ ಮಾತ್ರ ಆ್ಯಪ್
ನಲ್ಲಿ ಬದಲಾಯಿಸಿಕೊಳ್ಳುವ ಸಾಧ್ಯತೆಯನ್ನು ನೀಡಲಾಗಿದೆ.

ಭಾರತೀಯ ಸಂಖ್ಯೆಗಳಿಗೆ ಮಾತ್ರ ಮೊಬೈಲ್ ರೆಜಿಸ್ಟರ್ ಮಾಡುವ ಆಯ್ಕೆಯನ್ನು ನೀಡಲಾಗಿದ್ದು, ಕೆಲವು ಮಾಹಿತಿಯ ಪ್ರಕಾರ ಅಧಿಕೃತ ಸರಕಾರದ ಈಮೇಲ್ ಐಡಿ ಬಳಸಿ ಮಾತ್ರ ರಿಜಿಸ್ಟರ್ ಮಾಡಬಹುದು. ನಾನು ನನ್ನ ಮೊಬೈಲ್ ನಂಬರ್ ಅನ್ನು ಬಳಸಿ ರಿಜಿಸ್ಟರ್ ಮಾಡುವ ಕೆಲಸ ಕ್ಷಣದಲ್ಲೇ ಆಗಿ ಹೋಯ್ತು, ಮತ್ತಿದು ತುಂಬಾ ವೇಗವಾಗಿ ಪ್ರಕ್ರಿಯೆಯನ್ನು ಮುಗಿಸಿಕೊಡುವಂತೆ, ತುಂಬಾ ಸರಳವಾಗಿ ಡಿಸೈನ್ ಮಾಡಲಾಗಿದೆ. ಆದರೆ ಪ್ರೊಫೈಲ್‌ನಲ್ಲಿ ಈಮೇಲ್ ಐಡಿ ಅಪ್‌ಡೇಟ್ ಮಾಡಲು ಹೊರಟಾಗ ಜೀಮೇಲ್, ಯಾಹೂ ಇತ್ಯಾದಿ ಈಮೇಲ್ ಸರ್ವಿಸ್ ನೀಡುವ ವ್ಯವಸ್ಥೆಗಳನ್ನು ಬಳಸಲು ಅವಕಾಶ ನೀಡುವುದಿಲ್ಲ ಅನ್ನುವ
ಸಂದೇಶ ಬಂತು.

ನೋಡಲು, ಬಳಕೆ ಮಾಡಲು ವಾಟ್ಸಾಪ್ ಮತ್ತು ಸಿಗ್ನಲ್ ರೀತಿಯದೇ ಸರಳ ಆ್ಯಪ್ ಆಗಿದ್ದು, ಸಂದೇಶ್‌ನಲ್ಲಿ ಗ್ರೂಪ್ ಅನ್ನು ಮಾಡುವ, ಅದರೊಳಗೆ ಸಂವಹನ ನಡೆಸುವ ಸಾಧ್ಯತೆಗಳು ಸುಲಭದ್ದಿದೆ. ಸಂದೇಶ್ ಎಂದು ಕರೆಯಲಾಗಿದ್ದರೂ, ಈ ಆ್ಯಪ್‌ನ ಹೆಸರು ಜಿಐಎಮ್‌ಎಸ್ ಅಂದರೆ ಭಾರತ ಸರಕಾರದ ಸಂದೇಶ ಸೇವೆ ಎನ್ನುವ ಹೆಸರಿನಿಂದಲೇ ಕಾಣಸಿಗುವುದು ವಿಚಿತ್ರ. ಮುಂದಿನ ದಿನಗಳ ಅಪ್‌ಡೇಟ್ ಗಳಲ್ಲಿ ಹೆಸರನ್ನು ಸರಳವಾಗಿ ‘ಸಂದೇಶ್’ ಎಂದು ಬದಲಿಸಲಿದೆಯೋ ಅನ್ನುವುದನ್ನು ಕಾದು ನೋಡ ಬೇಕಿದೆ. ಸರಕಾರದ ಕೆಲಸಕ್ಕಾಶ ಸುಭದ್ರ ಆ್ಯಪ್ ಸಂಪೂರ್ಣವಾಗಿ ಭಾರತ ಸರಕಾರದ ಕೆಲಸಗಳಿಗೆ ಅನುಕೂಲವಾಗುವಂತೇ ಇದನ್ನು ಡಿಸೈನ್ ಮಾಡಿರುವುದು ಮೊದಲ ನೋಟಕ್ಕೆ ಕಂಡುಬರುತ್ತದೆ. ಸರಕಾರಿ ಕೆಲಸಗಳಲ್ಲಿ ಉಪಯೋಗವಾಗುವ ಹಲ ವಾರು ಫೀಚರ್‌ಗಳು ಇಲ್ಲಿವೆ.

ಸಿಂಪಲ್ ಆಗಿ ಡಿಸೈನ್ ಮಾಡಿರುವುದರಿಂದ ಎಲ್ಲರೂ ಸುಲಭವಾಗಿ ಬಳಸುವುದಕ್ಕೆ ಅನುಕೂಲವಾಗಲಿದೆ. ಸಂದೇಶಗಳನ್ನು ಪ್ರಯಾರಿಟಿ, ಕಾನ್ಫಿಡೆನ್ಶಿಯಲ್ ಅಥವಾ ಆಟೋ ಡಿಲೀಟ್ ಅನ್ನುವ ಟ್ಯಾಗ್‌ಗಳ ಜೊತೆ ಕಳುಹಿಸುವ ಸಾಧ್ಯತೆಯಿದ್ದು, ಇದು ಸರಕಾರಿ ಕೆಲಸಗಳಲ್ಲಿ ಸಹಾಯಕ ಖಂಡಿತ. ವಾಟ್ಸಾಪ್‌ನ ರೀತಿಯಲ್ಲೇ ಇಲ್ಲೂ ಇಮೋಜಿಗಳಿವೆ, ಆದರೆ ಇಲ್ಲಿರುವ ಇಮೋಜಿಗಳು ಮಾತ್ರ ಅಪ್ರೂವ್ಡ್‌‌, ಇಶ್ಯುಟುಡೇ, ಅಗ್ರೀಡ್, ಫಾರ್ ಡಿಸ್ಕಶನ್, ಹೀಗೆ ಹಲವು ಸರಕಾರಿ ಕಾರ್ಯಗಳಿಗೆ ಸಹಾಯಕವಾಗುವಂಥವಿವೆ. ಮತ್ತಿವುಗಳನ್ನು ಸಂದೇಸ್ ಗಿಮೋಜಿ ಅಂತ ಕರೆಯುತ್ತದೆ.

ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಸಂದೇಶಗಳನ್ನು ಕಳುಹಿಸುವಂತೆಯೇ ವಿಡಿಯೋ, ಫೋಟೋ, ಫೈಲ್‌ಗಳು, ಕಾಂಟ್ಯಾಕ್ಟ್‌,
ಆಡಿಯೋ, ಹೀಗೆ ಹಲವನ್ನು ಕಳುಹಿಸುವ ವ್ಯವಸ್ಥೆಯನ್ನೂ ನೀಡಲಾಗಿದೆ. ಅಲ್ಲದೇ ಆಡಿಯೋ ಮತ್ತು ವಿಡಿಯೋ ಕಾಲ್ ‌ಗಳನ್ನೂ ಮಾಡಬಹುದು. ಸರಕಾರಿ ಅಧಿಕಾರಿಗಳು, ನೌಕರರನ್ನು ಗಮನದಲ್ಲಿರಿಸಿಕೊಂಡೇ ಮಾಡಿದರೂ, ಸಂಪೂರ್ಣ ಭಾರತೀಯ ನಿರ್ಮಿತ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ ಚ್ಯಾಟ್ ಮಾಡುವ ಅವಕಾಶವನ್ನು ಜನ ಸಾಮಾನ್ಯರಿಗೂ ನೀಡಿದ್ದರೂ, ಇದರಲ್ಲಿರುವ ಸದ್ಯದ ಇತಿ ಮಿತಿಗಳು ಹಾಗೂ ಉಳಿದವರಿಗೆ ಇದನ್ನು ಬಳಸಲು ತೊಡಕಾಗಲು ಇರುವ ಕಾರಣಗಳು
ಹಲವು. ಮುಂದಿನ ದಿನಗಳಲ್ಲಿ ಇದನ್ನು ಯಾವ ರೀತಿ ಬದಲಾಯಿಸಲಾಗುತ್ತದೆ ಅನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಕಳೆದ ತಿಂಗಳು ವಾಟ್ಸಾಪ್ ವಿಚಾರವಾಗಿ ಮೂಡಿ ಬಂದ ಚಿಂತೆ-ಚಿಂತನೆಗಳ ಕಾರಣದಿಂದಾಗಿಯೋ ಏನೋ ಭಾರತ ಸರಕಾರದ ಈ ಹೊಸ ಆ್ಯಪ್‌ಅನ್ನು ಬಳಕೆಗೆ ತರುವುದಕ್ಕೆ ಸ್ವಲ್ಪ ವೇಗವನ್ನು ನೀಡಿದಂತೆ ಕಾಣುತ್ತಿದೆ. ಆದರೂ ಯಾವುದೇ ದೊಡ್ಡ ಮಟ್ಟಿನ ಬಗ್‌ಗಳು ಅಥವಾ ಕಿರಿಕಿರಿಗಳು ಈ ಆ್ಯಪ್ ನಲ್ಲಿ ಇದ್ದಂತಿಲ್ಲ. ಒಂದು ವೇಳೆ ಸರಕಾರೇತರ ವ್ಯಕ್ತಿಗಳಿಗೆ ಇದನ್ನು ಬಳಸಲು ಕೊಡುವು ದಾದರೆ ಇಲ್ಲಿ ಕೆಲವೊಂದು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡುವ ಅಗತ್ಯವಿದೆ. ಆದರೆ ಅದು ಈ ಆ್ಯಪ್ ಅನ್ನು ಡೆವಲಪ್ ಮಾಡಲು ಇದ್ದ ಮೂಲ ಕಾರಣದಿಂದ ದೂರ ಹೋದಂತಾದೀತು.

ಏನೇ ಅಂದರೂ ಸರಕಾರಿ ಸಂದೇಶಗಳನ್ನು ಸಂದೇಶ್ -ಸಂವಾದ್ ನಂತಹ ಸಂಪೂರ್ಣ ಸ್ವಾಯತ್ತ ಆ್ಯಪ್‌ಗಳ ಮೂಲಕವೇ ಕಳುಹಿಸುವಂತೆ ತಾಕೀತು ಮಾಡುವ ಮೂಲಕ ಯಾವುದೇ ಗೌಪ್ಯತೆಯ ಚಿಂತೆಯಿದ್ದರೂ ಅದನ್ನು ಸರಕಾರ ದೂರ ಮಾಡಿ ಕೊಂಡರೆ ಅದರ ಮೂಲ ಉದ್ದೇಶ ಸಾರ್ಥಕವಾದಂತೆ ಅನ್ನಬಹುದು.

Leave a Reply

Your email address will not be published. Required fields are marked *