Friday, 30th September 2022

ದಿ ಕಾಶ್ಮೀರ ಫೈಲ್ಸ್ ಪ್ರದರ್ಶನ ಹಿನ್ನೆಲೆ: ಒಂದು ತಿಂಗಳು ನಿಷೇಧಾಜ್ಞೆ ಜಾರಿ

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲಾಡಳಿತವು ಮುಂಬರುವ ಧಾರ್ಮಿಕ ಹಬ್ಬಗಳ ದೃಷ್ಟಿಯಿಂದ ʼದಿ ಕಾಶ್ಮೀರ ಫೈಲ್ಸ್ʼ ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಒಂದು ತಿಂಗಳ ಅವಧಿಯ ನಿಷೇಧಾಜ್ಞೆ ವಿಧಿಸಿದೆ.

ಸೆಕ್ಷನ್ 144 ಮಂಗಳವಾರ ಜಾರಿಗೆ ಬಂದಿದ್ದು, ಏಪ್ರಿಲ್ 21 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ವರದಿಯಾಗಿದೆ.

ಈ ಅವಧಿಯಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರು ವಂತಿಲ್ಲ. ಶಾಂತಿ ಭಂಗ ತರುವಂತಹ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸ್ಥಳೀಯ ನಿವಾಸಿ ಗಳಿಗೆ ಸೂಚನೆ ನೀಡಲಾಗಿದೆ.

ಚೇತಿ ಚಂದ್, ಶ್ರೀ ಮಹಾವೀರ್ ಜಯಂತಿ, ಗುಡ್‌ ಫ್ರೈಡೆ, ಬೈಸಾಖಿ ಮತ್ತು ಜುಮುಅತುಲ್ ವಿದಾ ಮೊದಲಾದ ಹಬ್ಬಗಳು ಸನ್ನಿಹಿತ ವಾಗಿರುವುದರಿಂದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕೋಟಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹಂಗಾಮಿ ಜಿಲ್ಲಾಧಿಕಾರಿಗಳು ಮಾರ್ಚ್ 21 ರಂದು ಆದೇಶ ಹೊರಡಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಪ್ರದರ್ಶನ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜನಸಂದಣಿ, ಪ್ರತಿಭಟನೆಗಳು, ಸಭೆಗಳು ಮತ್ತು ಮೆರವಣಿಗೆಗಳನ್ನು ಸ್ಥಗಿತಗೊಳಿಸುವ ಅವಶ್ಯಕತೆಯಿದೆ ಎಂದು ಆದೇಶದಲ್ಲಿ ತಿಳಿಸ ಲಾಗಿದೆ.