Wednesday, 1st February 2023

ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ…

ತಿಳಿರು ತೋರಣ

srivathsajoshi@yahoo.com

ಧ್ಯಾನವು ಬೇರೆ ಬೇರೆ ಸಂಪ್ರದಾಯಗಳಲ್ಲಿ ಬೇರೆಬೇರೆ ರೂಪಗಳನ್ನೂ ಪಡೆಯಬಹುದು. ಧ್ಯಾನವನ್ನು ಬೋಧಿಸುವ ಗುರು, ಧ್ಯಾನಸಿದ್ಧಿಯನ್ನು ಕೋರುವ ಶಿಷ್ಯರಿಗೆ ಕಾಡು ಬೆಟ್ಟಗುಡ್ಡಗಳ ಅಲೆತದಲ್ಲಿ ಪ್ರಕೃತಿಯ ದರ್ಶನ ಮಾಡಿಸಿ ತನ್ಮೂಲಕ ಪರಮಾತ್ಮನ ದರ್ಶನ ಮಾಡಿಸುವುದೂ ಇರಬಹುದು. ಒಟ್ಟಿನಲ್ಲಿ ಧ್ಯಾನ ಎಂದರೆ ಒಂದೇ ವಿಷಯದ ಕಡೆಗೆ ಮನಸ್ಸನ್ನು ನಿರಂತರವಾಗಿ ಹರಿಸುವುದು, ಅಥವಾ ಒಂದೇ ವಿಷಯದ ಕುರಿತಾಗಿ ತದೇಕಚಿತ್ತದಿಂದ ಚಿಂತಿಸುವುದು.

ಅದೊಂದು ಸ್ವಲ್ಪ ಆಶ್ಚರ್ಯಕರವಾದ, ಒಗಟಿನಂತೆ ಕಂಡುಬರುವ ಸಾಲು. ಪಂಡಿತ್ ಭೀಮಸೇನ ಜೋಶಿಯವರ ಕಂಚಿನ ಕಂಠದಿಂದ ‘ಕೈಲಾಸವಾಸ ಗೌರೀಶ ಈಶ….’ ದಾಸ ವಾಣಿ ಕೇಳುವಾಗಲೆಲ್ಲ ನನ್ನ ಮನಸ್ಸಿನಲ್ಲೊಮ್ಮೆ ಆ ಪ್ರಶ್ನೆ ಮೂಡುತ್ತದೆ.  ಹರಿ’ಯಲ್ಲಿಯೇ ನಮ್ಮ ಮನಸ್ಸು ನೆಲೆನಿಲ್ಲುವಂತೆ ಮಾಡಲು ‘ಹರ’ನಲ್ಲೇಕೆ ಪ್ರಾರ್ಥಿಸುವುದು? ಈ ಕೀರ್ತನೆ ಯನ್ನು ರಚಿಸಿದ ವಿಜಯವಿಠ್ಠಲ ದಾಸರು ಹರಿದಾಸ ಪರಂಪರೆಯವರೇ.

ಆದರೂ ಇದನ್ನೊಂದು ಶಿವಭಕ್ತಿಗೀತೆಯಂತೆ ರಚಿಸಿದ್ದಾರೆ. ಕೈಲಾಸವಾಸ, ಗೌರೀಶ, ಈಶ, ಶಂಭು ಮುಂತಾಗಿ ಶಿವನ ನಾಮಸ್ಮರಣೆ ಪಲ್ಲವಿಯಲ್ಲಿ ಮಾತ್ರವಲ್ಲ, ಚರಣಗಳಲ್ಲೂ ಮಹದೇವ, ಅಹಿಭೂಷಣ, ಅನಲಾಕ್ಷ, ಭಾಗೀರಥೀಧರ ಮುಂತಾಗಿ ಶಿವನದೇ ವರ್ಣನೆ. ಆದರೆ ಅಲ್ಲಿಯೂ ಬೇಡಿಕೊಳ್ಳುವುದು ಮಾತ್ರ ‘ಅಹಿಭೂಷಣನೆ ಎನ್ನ ಅವಗುಣ ಗಳೆಣಿಸದಲೇ ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡೋ ಶಂಭೋ…’ ಎಂದೇ! ಪಲ್ಲವಿಯಲ್ಲಿಟ್ಟ ಬೇಡಿಕೆಯನ್ನೇ ಚರಣದಲ್ಲೂ ಪುನರುಚ್ಚರಿಸಿದ್ದಾರೆ.

ಬಹುಶಃ ಹರಿ-ಹರ ಎಂದು ನಾವು ಹುಲುಮಾನವರು ಸಂಕುಚಿತ ದೃಷ್ಟಿಯಿಂದ ಪ್ರತ್ಯೇಕತೆ ಮಾಡಿಕೊಂಡಿದ್ದೇವೆ. ದಾಸಶ್ರೇಷ್ಠರಿಗೆ,ಅನುಭಾವಿಗಳಿಗೆ, ಪಾರಮಾರ್ಥಿಕ ಜ್ಞಾನಿಗಳಿಗೆ ಆ ಭೇದಭಾವವಿಲ್ಲ. ದೇವನೊಬ್ಬ ನಾಮ ಹಲವು ಎಂದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವೂ ‘ಹರಿಯಲ್ಲಿ ಮನಸು ಕೊಡುವಂತೆ ಹರನಲ್ಲೇಕೆ ಪ್ರಾರ್ಥನೆ?’ ಎಂಬಂಥ ಕ್ಷುಲ್ಲಕ ತರ್ಲೆ ಪ್ರಶ್ನೆಯೆತ್ತು \ವುದು ತರವಲ್ಲ. ಅದಕ್ಕಿಂತ, ಕೀರ್ತನೆಯಲ್ಲಿ ದಾಸರು ಕೇಳಿಕೊಂಡಿದ್ದೇನು ಎನ್ನುವು ದರತ್ತ ಗಮನ ಹರಿಸೋಣ.

ದಾಸರು ಕೇಳಿಕೊಂಡಿದ್ದು ತನ್ನ ಮನಸ್ಸು ಹರಿಯಲ್ಲಿ ನಿಲ್ಲುವಂತೆ ಆಗಬೇಕು ಎಂದು. ಅದೂ ಹೇಗೆ, ಒಮ್ಮೆ ಕ್ಷಣಹೊತ್ತು
ಮನಸ್ಸಾಗಿ ಆಮೇಲೆ ಮರೆಯುವಂತಹದಲ್ಲ; ತೈಲಧಾರೆಯಂತೆ ನಿರಂತರ ಮನಸ್ಸು. ನೀರಿನ ಧಾರೆಗೂ ತೈಲಧಾರೆಗೂ
ವ್ಯತ್ಯಾಸವಿರುವುದು ನಮಗೆ ಗೊತ್ತಿದೆ. ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ನೀರು ಸುರಿಯುವಾಗ ಅದು ಹನಿಹನಿಯಾಗಿ ಬೀಳುತ್ತದೆ. ನಿರಂತರ ಸುರಿಯುವಂತೆ ಕಂಡರೂ ನಿಜವಾಗಿ ಅಲ್ಲಿ ನಿರಂತರತೆ ಇರುವುದಿಲ್ಲ. ತೈಲದ ಧಾರೆಯಾದರೆ ಹಾಗಲ್ಲ, ಅದು ಅಖಂಡವಾಗಿಯೇ ಇರುತ್ತದೆ.

ವಿಜ್ಞಾನದ ಭೌತಶಾಸ್ತ್ರ ಶಾಖೆಯು ಇದನ್ನು ದ್ರವಗಳ qಜಿoಟoಜಿಠಿqs (ಹರಿವುತನ ಅಥವಾ ಜಿಗುಟುತನ) ಸೂತ್ರಗಳ ಮೂಲಕ ವಿವರಿಸಬಹುದು. ಅದಕ್ಕಿಂತ, ಅಡುಗೆಭಟ್ಟರು ಸಕ್ಕರೆಪಾಕದ ಹದ ನೋಡುವ ವಿಧಾನದಿಂದಲೂ ಇದನ್ನು ನಾವು ಸುಲಭವಾಗಿ
ಅರ್ಥ ಮಾಡಿಕೊಳ್ಳಬಹುದು. ಜಿಲೇಬಿ, ಲಡ್ಡು ಮುಂತಾಗಿ ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಸಕ್ಕರೆ ಪಾಕ ಹದವಾಗಿದೆಯೇ ಎಂದು ನೋಡಲು ಬಾಣಸಿಗರು ತೋರುಬೆರಳು ಮತ್ತು ಹೆಬ್ಬೆರಳನ್ನು ಜೋಡಿಸಿ ಪಾಕದಲ್ಲದ್ದುತ್ತಾರೆ, ತತ್‌ಕ್ಷಣ ಹೊರತೆಗೆ
ಯುತ್ತಾರೆ.

ಪಾಕದ ‘ಎಳೆ’ಯು ಎರಡೂ ಬೆರಳುಗಳನ್ನು ಅಖಂಡ ಸೂತ್ರದಿಂದ ಜೋಡಿಸುತ್ತಿದ್ದರೆ ಪಾಕ ಹದವಾಗಿದೆ ಎಂದು ಅರ್ಥ. ಅಂತಹ ನಿರಂತರತೆಯೇ ತೈಲಧಾರೆಯದು. ಮಂಕುತಿಮ್ಮನ ಕಗ್ಗದ ಒಂದು ಮುಕ್ತಕದಲ್ಲಿ ಡಿವಿಜಿಯವರು ಕಾಲನ ನಿರಂತರತೆಯನ್ನು ತೈಲಧಾರೆಗೆ ಹೋಲಿಸಿದ್ದಾರೆ.

‘ಕಾಲವಕ್ಷಯದೀಪವದರ ಪಾತ್ರೆಯಪಾರ| ಬಾಳ್ ಅದರಿನಾ
ದೊಂದು ಕಿರುಹಣತೆ ಮಿಣುಕು| ಗಾಳಿಯಾರಿಪುದೊಂದ
ನಿನ್ನೊಂದ ಹೊತ್ತಿಪುದು| ತೈಲಧಾರೆಯಖಂಡ ಮಂಕುತಿಮ್ಮ||’

ಎಂದು ಆ ಮುಕ್ತಕ ಇರುವುದು. ಜೀವಿಯ ದೃಷ್ಟಿಯಿಂದ ಕಾಲದೇಶಗಳು ಪರಿಮಿತಗಳು, ವಿಭಾಜ್ಯಗಳು. ಬೃಹ್ಮದೃಷ್ಟಿಯಿಂದ ಕಾಲದೇಶಗಳು ಅಪರಿಮಿತಗಳು, ಅಪರಿಮೇಯಗಳು, ಅಖಂಡ್ಯಗಳು. ಬ್ರಹ್ಮದೃಷ್ಟಿಯಿಂದ ನೋಡಿದಾಗ ಕಾಲವೆಂಬುದು ಅಕ್ಷಯವಾದ ಒಂದು ದೀಪ. ಅದರ ಪಾತ್ರೆಯೂ ಅಪಾರ, ಅದರಲ್ಲಿರುವ ತೈಲವೂ ಅಖಂಡವಾದ ಧಾರೆಯಾಗಿ ಬರುತ್ತಿದೆ.

ಜೀವವಾದರೋ, ಅದರ ಬಾಳಾದರೋ ಆ ಬ್ರಹ್ಮದೀಪದಿಂದ ಆದ, ಅದರಿಂದಲೇ ಹೊತ್ತಿಸಲ್ಪಟ್ಟ ಒಂದು ಕಿರು ಹಣತೆ, ಮಿಣುಕು ದೀಪ. ಗಾಳಿಯು ಒಂದು ಮಿಣುಕು ದೀಪವನ್ನು ಆರಿಸಿದರೆ ಇನ್ನೊಂದು ಮಿಣುಕು ದೀಪವನ್ನು ಆ ಅಕ್ಷಯವಾದ ದೀಪದಿಂದ ಹೊತ್ತಿಸಬಹುದು. ದೀಪಕ್ಕೆ ಕೊನೆಯಿಲ್ಲ. ಅದು ಎಂದೆಂದೂ ಎಲ್ಲೆಲ್ಲೂ ಪ್ರಕಾಶಮಾನವಾಗಿಯೇ ಇರತಕ್ಕದ್ದು- ಎಂದು ಕಗ್ಗಕ್ಕೊಂದು ಕೈಪಿಡಿಯಲ್ಲಿ ಡಿ.ಆರ್. ವೆಂಕಟರಮಣನ್ ಅವರ ವ್ಯಾಖ್ಯಾನ.

ಅಂತಹ ನಿರಂತರತೆ ಬೇಕು ಹರಿಯಲ್ಲಿ ತೊಡಗಿಸಿಕೊಳ್ಳುವ ನಮ್ಮ ಧ್ಯಾನಸ್ಥ ಮನಸ್ಸಿಗೂ. ಅದು ಸಿದ್ಧಿಸುವಂತೆ ದಾಸರು
ಕೈಲಾಸವಾಸ ಗೌರೀಶ ಈಶನನ್ನು ಪ್ರಾರ್ಥಿಸಿದ್ದು. ಹಾಗೆ ಪ್ರಾರ್ಥಿಸಿದರೆ ಧ್ಯಾನ ಸಿದ್ಧಿಸುತ್ತದೆಂದು ಅಚಲ ನಂಬಿಕೆ ಅವರಿಗಿದೆ.
ಏಕೆಂದರೆ ಧ್ಯಾನ, ಪ್ರಾರ್ಥನೆ ಮತ್ತು ನಂಬಿಕೆ- ಇವೇ ಅಡಿಗಲ್ಲುಗಳು ಸನಾತನ ಸಂಸ್ಕೃತಿಯಲ್ಲಿ ಪ್ರತಿಪಾದಿಸಿರುವ ಆತ್ಮ
ಸಾಕ್ಷಾತ್ಕಾರಕ್ಕೆ.

ಸೂಕ್ಷ್ಮವಾಗಿ ಗಮನಿಸಿದರೆ ಇವೇ ಅಡಿಗಲ್ಲುಗಳು ಮಾಡರ್ನ್ ಮೆನೇಜ್‌ಮೆಂಟ್‌ನಲ್ಲಿ ಪ್ರತಿಪಾದಿಸುವ ಪರ್ಸನಾಲಿಟಿ ಡೆವಲಪ್‌ ಮೆಂಟ್ ಅಥವಾ ವ್ಯಕ್ತಿತ್ವವಿಕಸನಕ್ಕೂ. ಧ್ಯಾನ ಎಂದರೇನು? ಒಂದು ನಿರ್ದಿಷ್ಟ ವಸ್ತು ಅಥವಾ ವಿಷಯದ ಅರಿವಿನ ಏಕಾಗ್ರತೆ. ಕೇಂದ್ರೀಕೃತ ಮನಸ್ಸಿನ ಶುದ್ಧರೂಪ. ಏಕಾಗ್ರತೆ ಯಾವುದರ ಮೇಲಾದರೂ ಇರಬಹುದು. ಉಸಿರಾಟ, ನಡಿಗೆ ಇತ್ಯಾದಿ ಮನುಷ್ಯಸಹಜ ಕ್ರಿಯೆಗಳ ಮೇಲಿರಬಹುದು; ದೀಪಜ್ವಾಲೆ, ಜಲಧಾರೆಮುಂತಾದ ಬಾಹ್ಯ ವಸ್ತುಗಳ ಮೇಲಿರಬಹುದು; ಅಥವಾ
ಕರುಣೆ, ಪ್ರೀತಿಯಂತಹ ಭಾವನೆಗಳ ಬಗ್ಗೆಯೂ ಇರಬಹುದು.

ಧ್ಯಾನವು ಬೇರೆಬೇರೆ ಸಂಪ್ರದಾಯಗಳಲ್ಲಿ ಬೇರೆಬೇರೆ ರೂಪಗಳನ್ನೂ ಪಡೆಯಬಹುದು. ಧ್ಯಾನವನ್ನು ಬೋಧಿಸುವ ಗುರು, ಧ್ಯಾನಸಿದ್ಧಿಯನ್ನು ಕೋರುವ ಶಿಷ್ಯರಿಗೆ ಕಾಡು ಬೆಟ್ಟಗುಡ್ಡಗಳ ಅಲೆತದಲ್ಲಿ ಪ್ರಕೃತಿಯ ದರ್ಶನ ಮಾಡಿಸಿ ತನ್ಮೂಲಕ ಪರಮಾ ತ್ಮನ ದರ್ಶನ ಮಾಡಿಸುವುದೂ ಇರಬಹುದು. ಒಟ್ಟಿನಲ್ಲಿ ಧ್ಯಾನ ಎಂದರೆ ಒಂದೇ ವಿಷಯದ ಕಡೆಗೆ ಮನಸ್ಸನ್ನು ನಿರಂತರವಾಗಿ ಹರಿಸುವುದು, ಅಥವಾ ಒಂದೇ ವಿಷಯದ ಕುರಿತಾಗಿ ತದೇಕಚಿತ್ತದಿಂದ ಚಿಂತಿಸುವುದು. ತೈಲಧಾರೆ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಹೇಗೆ ಅಖಂಡವಾಗಿ ಹರಿಯುತ್ತದೆಯೋ ಹಾಗೆ ನಮ್ಮ ಮನಸ್ಸು ಒಂದೇ ವಿಷಯದ ಕಡೆಗೆ, ಅಂದರೆ, ಭಗವಂತನ ಕಡೆಗೆ ಅಖಂಡವಾಗಿ ಹರಿಯುತ್ತಿದ್ದರೆ ಅದು ಧ್ಯಾನ ಎನಿಸಿಕೊಳ್ಳುತ್ತದೆ.

‘ನಮ್ಮ ಮನಸ್ಸು ಚಿತ್ರವಿಚಿತ್ರವಾಗಿ ವರ್ತಿಸುತ್ತಿರುತ್ತದೆ. ಮರ್ಕಟದಂತೆ ಒಂದು ಆಲೋಚನೆಯಿಂದ ಇನ್ನೊಂದರೆಡೆಗೆ ಹಾರು ತ್ತಿರುತ್ತದೆ. ಇಂತಹ ವಿಶ್ರಾಂತಿಯಿಲ್ಲದ ಮನಸ್ಸು ಬಹುಬೇಗ ಆಯಾಸಗೊಳ್ಳುತ್ತದೆ. ಪ್ರತಿದಿನ ನಿಯಮಿತವಾಗಿ ಧ್ಯಾನದ ಅಭ್ಯಾಸ ಮಾಡುವುದರಿಂದ ಗೊತ್ತುಗುರಿಯಿಲ್ಲದ ಆಲೋಚನೆಗಳು ನಿಯಂತ್ರಣಗೊಂಡು ಮನಸ್ಸು ಏಕಾಗ್ರಗೊಳ್ಳುತ್ತದೆ. ಪ್ರತಿದಿನ ಧ್ಯಾನಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳದೇ ಹೋದರೆ ಮನಸ್ಸಿನಲ್ಲೇಳುವ ಆಲೋಚನೆಗಳಿಗೆಲ್ಲ ನಾವು ತ್ವರಿತವಾಗಿ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ.

ತಾಳ್ಮೆ ವಿವೇಚನೆಗಳಿಲ್ಲದ ಅಂತಹ ಪ್ರತಿಕ್ರಿಯೆಗಳ ಅಂತಿಮ ಪರಿಣಾಮ ಅಶಾಂತಿಯೇ ಆಗಿರುತ್ತದೆ. ನಾವು ಪ್ರತಿದಿನ ಧ್ಯಾನದ ಅಭ್ಯಾಸ ಮಾಡುವುದರಿಂದ ಅಂತಹ ಆಲೋಚನೆಗಳು ಮನಸ್ಸಿಗೆ ಬಂದರೂ ಅವುಗಳು ತಾವೇತಾವಾಗಿ ಶಮನಗೊಳ್ಳುತ್ತವೆ.
ಯಾವುದೇ ವಿಧವಾದ ಮಾನಸಿಕ ಒತ್ತಡವಿಲ್ಲದಂತೆ ಶಾಂತಿ ಯಿಂದ ಇರಬೇಕಾದರೆ ಪ್ರತಿನಿತ್ಯ ಧ್ಯಾನದ ಅಭ್ಯಾಸ ಇಟ್ಟುಕೊಳ್ಳು ವುದು ಒಂದು ಉತ್ತಮ ಉಪಾಯ. ಧ್ಯಾನವು ಮನಸ್ಸಿನ ಇಚ್ಛಾಶಕ್ತಿಯನ್ನು ಬಲಗೊಳಿಸುತ್ತದೆ.

ಅದರಿಂದಾಗಿ ಜೀವನದ ಯಾವುದೇ ಸವಾಲುಗಳನ್ನು ಎದುರಿಸಲು ಸದಾ ಸರ್ವಸನ್ನದ್ಧರಾಗಿ ಇರುತ್ತೇವೆ’ ಎಂದು ಧ್ಯಾನದ ಮಹತ್ತ್ವವನ್ನು ವಿವರಿಸುತ್ತಾರೆ ದಾರ್ಶನಿಕರು. ಅಷ್ಟಾಂಗ ಯೋಗದಲ್ಲಿ ಅದು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇವುಗಳಾದ ಮೇಲಿನ ಸ್ಥಿತಿ. ಧ್ಯಾನದ ಬಳಿಕ ಧಾರಣ, ಆಮೇಲೆ ಸಮಾಧಿ.

ಗೀತೆಯಲ್ಲಿ ಕೃಷ್ಣಪರಮಾತ್ಮ ಇದನ್ನು ವಿಶದೀಕರಿಸಿದ್ದಾನೆ. ಧ್ಯಾನಕ್ಕೂ ಮಂತ್ರಕ್ಕೂ ಅವಿನಾಭಾವ ಸಂಬಂಧ. ಮಂತ್ರದ
ಮನನ (ಅಥವಾ ಜಪ) ಧ್ಯಾನಕ್ಕೆ ಪೂರಕ. ಅಯಸ್ಕಾಂತದಿಂದ ಒಂದೇ ಸವನೆ ಉಜ್ಜುತ್ತಿದ್ದರೆ ಕಬ್ಬಿಣಕ್ಕೂ ಕಾಂತತ್ವ ಬರುತ್ತದಂತೆ!
ಹಾಗೆ ನಿರಂತರ ಮಂತ್ರಪಠಣದಿಂದ ಮನಸ್ಸಿಗೆ ಧ್ಯಾನ ಸಿದ್ಧಿಸುತ್ತದೆ. ಧ್ಯಾನದಿಂದ ಮನಸ್ಸಿಗಷ್ಟೇ ಅಲ್ಲ, ದೇಹಕ್ಕೂ ಒಳ್ಳೆಯ ಪರಿಣಾಮವಾಗುತ್ತದೆ. ರಕ್ತದೊತ್ತಡ, ನಾಡಿಮಿಡಿತ ಗಳು ಆರೋಗ್ಯಕರ ಲಯವನ್ನು ಕಂಡುಕೊಳ್ಳುತ್ತವೆ. ಹೆಚ್ಚುಹೆಚ್ಚು ಧ್ಯಾನ ಮಾಡಿದಂತೆಲ್ಲ ಹೆಚ್ಚುಹೆಚ್ಚು ವಿಶ್ವಶಕ್ತಿ ನಮ್ಮೊಳಗೆ ಪ್ರವಹಿಸುತ್ತದೆ.

ದಾಸರೆನ್ನುತ್ತಾರೆ, ‘ನಾ ನಿನ್ನ ಧ್ಯಾನದೊಳಿರಲು… ಮಿಕ್ಕ ಹೀನ ಮಾನವರೇನು ಮಾಡಬಲ್ಲರೊ ರಂಗಾ…’ ಎಂದು. ಇದು ಹಿಂದೂ
ಧರ್ಮದಿಂದ ಆರಂಭಗೊಂಡು ಇತರ ಧರ್ಮಗಳವರೆಗೂ ಎಲ್ಲರೂ ಕಂಡುಕೊಂಡ ಸತ್ಯ. ಮಂತ್ರ ಬೇರೆಬೇರೆಯದಿರಬಹುದು, ಆದರೆ ಪ್ರಕ್ರಿಯೆ ಮತ್ತು ಪ್ರತಿಕ್ರಿಯೆ ಇಡೀ ಮನುಷ್ಯಜಾತಿಗೆ ಅನ್ವಯ.

ಪ್ರಾರ್ಥನೆ ಎಂದರೆ, ದೇವರೊಡನೆ ನಮ್ಮ ಸಂಭಾಷಣೆ. ಬಹುತೇಕವಾಗಿ ಬೇಡಿಕೆಗಳ ಮಂಡನೆ. ‘ನಿನ್ನೊಲುಮೆ ನಮಗಿರಲಿ ತಂದೆ ಕೈ ಹಿಡಿದು ನೀ ನಡೆಸು ಮುಂದೆ…’ ಎಂಬ ಶಾಲಾಗೀತೆ, ‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು…’ ಎಂಬ ಕವಿವಾಣಿ, ‘ಶ್ರದ್ಧಾಂ ಮೇಧಾಂ ಯಶಃ ಪ್ರeಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂ ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ…’ ಎಂದು ಬೇಡುವ ಸಂಸ್ಕೃತ ಸೂಕ್ತ – ಎಲ್ಲವೂ ಪ್ರಾರ್ಥನೆಗಳೇ.

ಅದು ಸ್ತೋತ್ರ ರೂಪದಲ್ಲಿರಬಹುದು, ಭಜನೆಯಂತೆ ಸುಶ್ರಾವ್ಯ ಗಾನವಿರಬಹುದು, ಲಿಖಿತ ರೂಪವೂ ಇರಬಹುದು. ಜನ ಸಾಮಾನ್ಯರ ಪರವಾಗಿ ಪೂಜಾರಿಗಳು, ಪಾದ್ರಿಗಳು, ಮುಲ್ಲಾಗಳು ಪ್ರಾರ್ಥನೆ ಮಾಡುವುದಿರಬಹುದು. ಅದೇನಿದ್ದರೂ ಪ್ರಾರ್ಥನೆ ಯಾವಾಗಲೂ ಉದ್ದೇಶವುಳ್ಳದ್ದು. ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಹಾಲ್‌ಟಿಕೇಟನ್ನೂ ದೇವಸ್ಥಾನಕ್ಕೊಯ್ದು ಪೂಜೆ ಮಾಡಿಸಿ ಪ್ರಾರ್ಥನೆ, ಮಳೆ ಬರುವಂತೆ ರೈತರಿಂದ ಪ್ರಾರ್ಥನೆ, ಮಳೆ ಬರದಂತೆ ಕ್ರಿಕೆಟ್ ಪ್ರೇಮಿಗಳಿಂದ ಪ್ರಾರ್ಥನೆ, ನೆಚ್ಚಿನ ಬ್ಯಾಟ್ಸ್‌ಮನ್ ಇನ್ನೊಂದು ಸೆಂಚುರಿ ಹೊಡೆಯಲೆಂಬ ಪ್ರಾರ್ಥನೆ, ಗೆಲ್ಲುವುದಿಲ್ಲವೆಂದು ಗೊತ್ತಿದ್ದರೂ ಆರ್‌ಸಿಬಿ ತಂಡ ಗೆಲ್ಲಲಿ ಎಂದು ಪ್ರಾರ್ಥನೆ, ಶೇರು ಮಾರುಕಟ್ಟೆ ಚೇತರಿಸಿಕೊಳ್ಳಲಿ ಎಂಬ ಪ್ರಾರ್ಥನೆ… ಬಹುಶಃ ಪ್ರಾರ್ಥನೆಗಳ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ.

ಆದರೆ ನೆನಪಿನಲ್ಲಿಡಬೇಕಾದ ಅಂಶವೆಂದರೆ ಧ್ಯಾನವಾಗಲೀ, ಪ್ರಾರ್ಥನೆಯಾಗಲೀ ಆ ಪ್ರಕ್ರಿಯೆ ನಡೆಯುವುದು ‘ನಂಬಿಕೆ’ ಎನ್ನುವ ಇಂಧನದಿಂದಲೇ. ನಂಬಿಕೆಯಿಲ್ಲದಿದ್ದರೆ ಏನೂ ಇಲ್ಲ. ಇದಿಷ್ಟು ಧ್ಯಾನ-ಪ್ರಾರ್ಥನೆ-ನಂಬಿಕೆಗಳ ಧಾರ್ಮಿಕ, ಆಧ್ಯಾತ್ಮಿಕ, ಲೌಕಿಕ ದೃಷ್ಟಿಕೋನದ ವ್ಯಾಖ್ಯಾನವಾಯಿತು. ಇನ್ನು ಇಪ್ಪತ್ತನೆಯ ಶತಮಾನದಿಂದೀಚೆಗೆ ಅತ್ಯಂತ ಜನಪ್ರಿಯವಾಗಿರುವ ‘ವ್ಯಕ್ತಿತ್ವ ವಿಕಸನ’ eನಶಾಖೆಯನ್ನು ಗಮನಿಸಿದರೆ ಅಲ್ಲಿನ ತತ್ತ್ವಸಿದ್ಧಾಂತಗಳಿಗೂ ಧ್ಯಾನ, ಪ್ರಾರ್ಥನೆ ಮತ್ತು ನಂಬಿಕೆಗಳೇ ತಳಹದಿಯಾಗಿರುವುದು ನಮ್ಮ ಅನುಭವಕ್ಕೆ ಬರುತ್ತದೆ.

ಡೇಲ್ ಕಾರ್ನಗಿ, ಸ್ಟೀಫನ್ ಕೋವ್‌ರಿಂದ ಹಿಡಿದು ರಾಬಿನ್ ಶರ್ಮಾ, ಯಂಡಮೂರಿ ವೀರೇಂದ್ರನಾಥ್‌ವರೆಗೆ ಎಲ್ಲ ಸ್ವ-ಸಹಾಯ
ಗುರುಗಳ ಪ್ರತಿಪಾದನೆಯಲ್ಲಿ ಈ ಅಂಶವಿದೆ. ಹಾಗೆ ನೋಡಿದರೆ ಷಡಕ್ಷರಿಯವರು ವಿಜಯಕರ್ನಾಟಕದಲ್ಲಿ ಬಹುಕಾಲ ಬರೆಯು
ತ್ತಿದ್ದ ‘ಕ್ಷಣಹೊತ್ತು ಆಣಿಮುತ್ತು…’, ಗುರುರಾಜ ಕರ್ಜಗಿ ಯವರು ಪ್ರಜಾವಾಣಿಯಲ್ಲಿ ಬರೆಯುವ ‘ಕರುಣಾಳು ಬಾ ಬೆಳಕೆ’, ಮತ್ತು ವಿಶ್ವವಾಣಿಯಲ್ಲಿ ರೂಪಾ ಗುರುರಾಜ್ ಬರೆಯುವ ‘ಒಂದೊಳ್ಳೆ ಮಾತು’ ದೈನಂದಿನ ಅಂಕಣಗಳ ವಿಚಾರವೂ ಅಂತಿಮವಾಗಿ ಅದೇ: affirmation ಮತ್ತು visualisation. ಇವೇ ವ್ಯಕ್ತಿತ್ವ ವಿಕಸನದ ಮೂಲಭೂತ ತತ್ತ್ವಗಳು. ವ್ಯಕ್ತಿತ್ವ ವಿಕಸನವೆಂಬ ಆರೋಗ್ಯದ ಟಾನಿಕ್ ಕೊಡುವ ಅಶ್ವಿನೀದೇವತೆಗಳು.

Affirmation ಅಂದರೆ ದೃಢೀಕರಣ ಅಥವಾ ಸತ್ಯಪ್ರತಿಜ್ಞೆ ಎನ್ನಬಹುದು. ಇದು ಹೊರಗಿನ ಸಂಗತಿಗಳಿಗಿಂತಲೂ ಅಂತರಂಗದ ಮೇಲೆ ನಿಯಂತ್ರಣ ಸಾಽಸಲು ಉಪಯೋಗವಾಗುವಂತಹದು. ಉದಾಹರಣೆಯ ಮೂಲಕ ವಿವರಿಸುವುದಾದರೆ ‘ನನ್ನ ಕೈತೋಟ ದಲ್ಲಿ ಚಂದದ ಹೂಗಿಡ ಬೆಳೆಸುತ್ತೇನೆ… ನನ್ನ ಕೈತೋಟದಲ್ಲಿ ಚಂದದ ಹೂಗಿಡ ಬೆಳೆಸುತ್ತೇನೆ…’ ಎಂದು ಹೇಳುತ್ತ ಕುಳಿತರೆ ಹೂಗಿಡ ತಂತಾನೇ ಬೆಳೆಯಲಿಕ್ಕಿಲ್ಲ, ಬೆಳೆಯುವುದೂ ಇಲ್ಲ. ಆದರೆ ‘ನನ್ನ ಮನದಲ್ಲಿ ಎಲ್ಲರ ಬಗ್ಗೆ ಸ್ನೇಹಭಾವ ಬೆಳೆಸಿ ಕೊಳ್ಳುತ್ತೇನೆ… ನನ್ನ ಮನದಲ್ಲಿ ಎಲ್ಲರ ಬಗ್ಗೆ ಸ್ನೇಹಭಾವ ಬೆಳೆಸಿಕೊಳ್ಳುತ್ತೇನೆ…’ ಎಂದು ಪದೇ ಪದೇ ಮನನ ಮಾಡುತ್ತಿದ್ದರೆ, ಸದ್ವಿಚಾರದ ಚಿಂತನೆ ಮಾಡುತ್ತಿದ್ದರೆ ತಾನಾಗಿಯೇ ಆ ಭಾವನೆ ಹುಟ್ಟಿ ಬೆಳೆಯಬಹುದು; ದೇಹ ಮತ್ತು ಮನಸ್ಸುಗಳ ಹೊಂದಾಣಿಕೆಯಿಂದ ದೃಢೀಕರಣ ಮಂತ್ರ ಅತ್ಯದ್ಭುತ ಪರಿಣಾಮಗಳನ್ನು ತರಬಹುದು!

ಏಕೆಂದರೆ ಇದರಲ್ಲಿ  ಧ್ಯಾನದಲ್ಲಿರುವಂತೆ ಏಕಾಗ್ರತೆಯಿದೆ, ಮಂತ್ರಪಠಣದಂತೆ ಪುನರುಚ್ಚಾರವಿದೆ, ಪ್ರಾರ್ಥನೆಗಿರುವಂತೆ ಒಳ್ಳೆಯ ಉದ್ದೇಶ ಇದೆ. ಅವೆಲ್ಲವನ್ನೂ ಭದ್ರವಾಗಿ ಪೋಣಿಸಲು ನಂಬಿಕೆಯೆಂಬ ದಾರವೂ ಇದೆ! ಅಮೆರಿಕಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ
ಮೊತ್ತಮೊದಲ ‘ಸವರ್ಣೀಯ’ ಬರಾಕ್ ಒಬಾಮ, ಶಿಕಾಗೊದ ಗ್ರಾಂಟ್‌ಪಾರ್ಕ್‌ನಲ್ಲಿ ಅಂದು ರಾತ್ರೆ ನೆರೆದಿದ್ದ ಜನಸ್ತೋಮವನ್ನು ದ್ದೇಶಿಸಿ ತನ್ನ ಜೈತ್ರಭಾಷಣದಲ್ಲಿ “Yes we can!’ ಎಂಬ ಹೊಸ ಸ್ಲೋಗನ್ ಹುಟ್ಟುಹಾಕಿದ್ದನಲ್ಲ, ಅದು affirmation! ಜಾಗತಿಕ ಏರುಪೇರುಗಳ ನಡುವೆಯೂ ಒಬಾಮ ಒಳ್ಳೆಯ ಆಡಳಿತವನ್ನೇ ನೀಡಿದ, ಜನಸಾಮಾನ್ಯರು ಈಗಲೂ ಆತನನ್ನು ನೆನೆಯುವಂತೆ ಆತ ನಡೆದುಕೊಂಡ ವಿಚಾರ ಜಗತ್ತಿಗೆಲ್ಲ ಗೊತ್ತಿದೆ.

ಇನ್ನು, visualisation ಎಂದರೆ ಚಿತ್ರಕಲ್ಪನೆ ಎನ್ನಬಹುದು. ಸಾಕ್ಷಾತ್ಕಾರ ಎಂದೂ ತಿಳಿಯಬಹುದು. ಭೌತಿಕ ಮತ್ತು ಬೌದ್ಧಿಕ
ಸಾಧನೆಗೆ ಬಹಳ ಮುಖ್ಯವಾದ ಪರಿಕರವಿದು ಎಂದು ಸ್ವ-ಸಹಾಯ ಪ್ರತಿಪಾದಕರ ಅಂಬೋಣ. ಬಿದ್ದು ಮೂಳೆ ಮುರಿದುಕೊಂಡ ವ್ಯಕ್ತಿ ತಾನು ಗುಣವಾಗಿ ಎಲ್ಲರಂತೆ ಓಡಾಡಿಕೊಂಡಿರುವುದನ್ನು ಊಹಿಸುವುದೇ ಅವನು ತ್ವರಿತವಾಗಿ ಗುಣಮುಖನಾಗುವುದಕ್ಕೆ ಸಹಾಯವಾಗುತ್ತದಂತೆ! ಕ್ರೀಡಾಳುಗಳು ವಿಜಯದ ಗುರಿಯನ್ನು, ಗುರಿ ತಲುಪಲು ತಗಲಬಹುದಾದ ಸಮಯವನ್ನು ಮನದಲ್ಲೇ ಚಿತ್ರಣ ಮಾಡಿಕೊಂಡರೆ ಅವರ ಸಾಧನೆ ಗಣನೀಯವಾಗಿ ಸುಧಾರಿಸುತ್ತದೆಯಂತೆ!

ನಟನೆ, ಭಾಷಣಕಲೆ ಇತ್ಯಾದಿಯನ್ನು ಕಲಿಯುವಾಗಲೂ ಇಂತಹ ಚಿತ್ರಕಲ್ಪನೆ ತುಂಬ ನೆರವಾಗುತ್ತದೆ ಎಂದು ಆಯಾ ಕ್ಷೇತ್ರಗಳ ಪರಿಣತರ ಅಭಿಮತ. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಸಾಧನೆಗೂ ಒಂದು ರೀತಿಯ ಚಿತ್ರಕಲ್ಪನೆ ಇರಲೇಬೇಕಾಗುತ್ತದೆ. ಇಲ್ಲದಿದ್ದರೆ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ ಆಗುವ ಪರಿಸ್ಥಿತಿ. ಮತ್ತೆ ಬರಾಕ್ ಒಬಾಮನ ಉದಾಹರಣೆಯನ್ನೇ ಕೊಡುವುದಾದರೆ, ಚುನಾವಣಾಪೂರ್ವ ವರ್ಷಗಳಲ್ಲಿ ನಡೆದ ಪ್ರಚಾರ ಕಾರ್ಯದುದ್ದಕ್ಕೂ ಒಬಾಮನಿಗೆ ತನ್ನ ಗುರಿಯ ಸ್ಪಷ್ಟ ಚಿತ್ರಕಲ್ಪನೆ ಇತ್ತು; ಅಷ್ಟು ಸ್ಪಷ್ಟವಿದ್ದುದರಿಂದ ಅದನ್ನು ಸಾಕಾರಗೊಳಿಸುವ ಛಲ ಇತ್ತು.

ಈ ಚಿತ್ರಕಲ್ಪನೆ ಮತ್ತು ಇದನ್ನು ಸಾಕಾರಗೊಳಿಸುವ ಪ್ರಯತ್ನ ಎನ್ನುವುದೂ ಮನಸ್ಸಿನ ಕೇಂದ್ರೀಕರಣ ಮತ್ತು ಗುರಿಯ ಕಡೆ
ಏಕಾಗ್ರತೆಯೇ ಅಲ್ಲವೆ? ಅಂದರೆ ಇದೂ ಒಂದು ರೀತಿಯ ಧ್ಯಾನವೇ. ದೃಢೀಕರಣ ಮತ್ತು ಚಿತ್ರಕಲ್ಪನೆ ಇವೆರಡಕ್ಕೂ ಸಾಮಾನ್ಯ ವಾದ ಮತ್ತೊಂದು ಅಂಶವೆಂದರೆ ತಾದಾತ್ಮ್ಯಭಾವ ಮತ್ತು ಅದಕ್ಕಿಂತ ಹೆಚ್ಚಾಗಿ ಇತ್ಯಾತ್ಮಕ (ಪಾಸಿಟಿವ್) ಚಿಂತನೆ.

ಗುರಿ ತಲುಪುವ ಛಲ, ಧೈರ್ಯ ಮತ್ತು ಆತ್ಮವಿಶ್ವಾಸ, ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸುವ ತಾಕತ್ತು, ವ್ಯಕ್ತಿಗತ ನಡವಳಿಕೆ, ಇತರರೊಂದಿಗೆ ಸಂವಹನದ ರೀತಿನೀತಿ- ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಲಕ್ಷ್ಯದತ್ತ ಲಗ್ಗೆಯಿಡಲು ನೆರವಾಗುತ್ತವೆ. ಇದು ಹೇಗೆ ಮತ್ತು ಏಕೆ ಸಾಧ್ಯವಾಗುತ್ತದೆಂದರೆ ವ್ಯಕ್ತಿ ತನ್ನ ಮೇಲೆ, ತಾನು ಮಾಡುತ್ತಿರುವ ಪ್ರಯತ್ನದ ಮೇಲೆ, ಅಚಲ ನಂಬಿಕೆಯಿಟ್ಟಿರುವುದರಿಂದ. ಇದೊಂದು ರೀತಿಯ ದೈವಿಕ ನಂಬಿಕೆ. ಏಕೆಂದರೆ ದೇವರಲ್ಲಿ ನಂಬಿಕೆಯಿಟ್ಟವನು, ದೇವರ ಪ್ರೀತಿಗೆ ಪಾತ್ರನಾಗಬೇಕೆಂದವನು, ತನಗೆ ಒಳ್ಳೆಯದನ್ನು ಮಾಡುವ ದೇವರು ಒಳ್ಳೆಯವನಾಗಿರುತ್ತಾನೆ ಎಂದುಕೊಳ್ಳುವವನು, ಆ ಒಳ್ಳೆಯತನವನ್ನು ಮೊದಲು ತನ್ನಲ್ಲೇ ಕಂಡುಕೊಳ್ಳುತ್ತಾನೆ.

ಒಮ್ಮೆ ಕಂಡುಕೊಂಡರೆ ಅದು ನಿರಂತರವಾಗಿರುವಂತೆ ನಿಗಾ ವಹಿಸುತ್ತಾನೆ. ತೈಲಧಾರೆಯಂತೆ ಮನಸ್ಸು ಕೊಡುವುದು ಎಂದರೆ ಬಹುಶಃ ಇದೇ ಇರಬಹುದೆಂದು ನನಗನಿಸುತ್ತದೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತವಿದೆ.

error: Content is protected !!