Tuesday, 9th August 2022

ಮೌನ ಮಾತಾದಾಗ

ವಿದ್ಯಾ ಶಂಕರ್ ಶರ್ಮ

ಪ್ರೀತಿಯಲ್ಲೂ ಮೌನಕ್ಕೆ ತನ್ನದೇ ಆತ ಸ್ಥಾನವಿದೆ. ಮೌನವನ್ನು ಪರಿಣಾಮಕಾರಿಯಾಗಿ ಬಳಸಿದಾಗ, ಪ್ರೀತಿಗೆ ಹೊಸ ಅರ್ಥ ಬರುತ್ತದೆ.

ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತು ಮುಖ್ಯವಾಗುತ್ತದೆ. ಸಂಬಧಗಳ ಗಟ್ಟಿತನಕ್ಕೆ ಸಂಭಾಷಣೆಯೇ ದಾರಿ. ಎಲ್ಲ ರೀತಿಯ ವಾದ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಲು ಸಾಧ್ಯವಿದೆ. ‘ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ಮಾತು ಬಹಳ ಪರಿಣಾಮಕಾರಿ.

ಆದರೆ ಜೀವನದಲ್ಲಿ ನಾವು ಎದುರಿಸುವ ಸನ್ನಿವೇಶಗಳು, ಸವಾಲುಗಳು ಅನೇಕ ಬಾರಿ ಮಾತಿಗಿಂತ ಮೀರಿದ ಪ್ರತಿಕ್ರಿಯೆಯನ್ನು ಬಯಸುತ್ತವೆ. ಇಂತಹ ಪರಿಸ್ಥಿತಿಯಲ್ಲ ನಮ್ಮನ್ನು ಕಾಪಾಡುವ ಅಸವೆಂದರೆ ‘ಮೌನ’. ಚರ್ಚೆ, ವಾದ, ವಿಚಾರ ವಿನಿಮಯ
ಇವೆಲ್ಲವುಗಳಿಂದ ಸಮಸ್ಯೆ ಬಗೆಹರಿಯದಿದ್ದಾಗ ನಮ್ಮ ಮೌನವೇ ನಮಗೆ ದಾರಿ ತೋರಿ ಸುತ್ತದೆ. ಮಾತೇ ಕಡಿಮೆಯಾಗಿ, ಮಾತಿನಂದಲೇ ಕಲಹಗಳು ಉಂಟಾಗುತ್ತಿರುವ ಇಂದಿನ ದಿನಗಳಲ್ಲಿ ಮೌನವೇ ಪರಿಣಾಮಕಾರಿಯಾಗಿದೆ. ಒಂದು ಸುದೀರ್ಘ ಮಾತುಕತೆಯ ನಂತರವೂ ನಮಗೆ ಪರಿಹಾರ ಕಾಣುವುದಿಲ್ಲ ಎನಿಸಿದಾಗ ಮೌನಕ್ಕೆ ಶರಣುಹೋಗ ಬೇಕಾಗುವ ಅನಿವಾರ್ಯತೆ ಇದೆ.

ಮೌನದಲ್ಲಿ ಒಂದು ಅದ್ಭುತ ಅನುಭೂತಿ ಇದೆ, ಅನುಭವ ಇದೆ. ಎಲ್ಲ ಗಲಿಬಿಲಿಗಳಿಂದ ದೂರವಾಗಿ ಮೌನದಲ್ಲಿ ಕುಳಿತಾಗ
ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೂ ಉತ್ತರ ತಾನಾಗಿಯೇ ಹೊರ ಹೊಮ್ಮುತ್ತದೆ. ನಡೆದು ಹೋದ ಯಾವುದೋ ಘಟನೆ, ಮನಸ್ತಾಪ, ಗೊಂದಲ, ಸಂಬಂಧಗಳ ನಡುವಿನ ಜಟಾಪಟಿ ಎಲ್ಲವುಗಳ ಅವಲೋಕನಕ್ಕೆ ಮೌನ ಅವಕಾಶ ನೀಡುತ್ತದೆ. ಮೌನ ನಮ್ಮನ್ನು ಆತ್ಮ ವಿಮರ್ಶೆಗೆ ದೂಡುತ್ತದೆ. ಕದಡಿದ ನೀರು ಸಲ್ಪ ಹೊತ್ತಿನ ನಂತರ ತಿಳಿಯಾಗಿ ಕಾಣುವಂತೆ ಮೌನ ಗೊಂದಲಗೊಂಡ ಮನಸ್ಸನ್ನು ಶುಭ್ರಗೊಳಿಸುತ್ತದೆ. ನಮ್ಮಿಂದಾದ ತಪ್ಪನ್ನು ಅರಿತುಕೊಳ್ಳಲು ಮೌನಕ್ಕಿಂತ ಮಿಗಿಲಾದ ಔಷಧವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೌನ ಪ್ರತಿಕ್ರಿಯೆ ನಮ್ಮನ್ನು ಎಷ್ಟೋ ಅಭಾಸಗಳಿಂದ ಪಾರುಮಾಡಬಲ್ಲದು.

ಅನೇಕ ಬಾರಿ ಹೀಗಾಗುತ್ತದೆ, ಒಬ್ಬ ವ್ಯಕ್ತಿಯ ಮೇಲೆ ನಿರಂತರ ಮಾತಿನ ದಾಳಿ ನಡೆಯುತ್ತದೆ, ಎಷ್ಟು ಬಾರಿ ಸ್ಪಷ್ಟೀಕರಣ
ನೀಡಿದರೂ ಸಂದರ್ಭ ತಿಳಿಯಾಗುವ ಲಕ್ಷಣ ಕಾಣಿಸದಿದ್ದಾಗ ಮೌನವೇ ತಕ್ಕುದಾದ ಉತ್ತರವಾಗುತ್ತದೆ. ‘ಮಾತು ಬೆಳ್ಳಿ ಮೌನ
ಬಂಗಾರ’ ಎಂಬ ನಾಣ್ಣುಡಿ ಸುಖಾ ಸುಮ್ಮನೆ ಬಂದಿದ್ದಲ್ಲ. ನಾವು ಮಾತನಾಡಿ ಕೆಟ್ಟವರೆನಿಸಿಕೊಳ್ಳುವದಕ್ಕಿಂತ ಮೌನವಾಗಿ
ಇದ್ದು ಅರ್ಥವಾಗದೆ ಇರುವುದೇ ಮೇಲು. ನಮ್ಮ ಮೌನವನ್ನು ಅರ್ಥಮಾಡಿಕೊಳ್ಳಲು ಆಗದವರು ಬಹುಶಃ ನಮ್ಮ ಮಾತನ್ನೂ
ಅರ್ಥ ಮಾಡಿಕೊಳ್ಳಲಾರರು.

ನಮ್ಮ ಮಾತಿಗಿಂತ ನಮ್ಮ ಮೌನ ನಮ್ಮಿಂದ ಪ್ರತಿಕ್ರಿಯೆ ಬಯಸಿದವರನ್ನು ಬಹುವಾಗಿ ಕಾಡುತ್ತದೆ. ಭಗವಾನ್ ಬುದ್ಧರು ಹೇಳಿರು ವಂತೆ ‘ನಮ್ಮ ಮಾತುಗಳು ನಮ್ಮ ಮೌನಕ್ಕಿಂತ ಗೌರವಿಸಲ್ಪಟ್ಟರೆ ಮಾತ್ರ ನಾವು ಮಾತನಾಡಬೇಕು’. ಮನಸ್ಸು ತುಂಬಾ ನೊಂದಾಗ, ಅಂದುಕೊಂಡ್ಡಿದ್ದು ನೆಡೆಯದಿದ್ದಾಗ, ತುಂಬ ಆಪ್ತರಾಗಿದ್ದವರ ಜೊತೆ ಸಂಘರ್ಷವಾದಾಗ ಒಂದು ದಿವ್ಯ ಮೌನ ಮನಕ್ಕೆ ಸಾಂತ್ವನ ಹೇಳುತ್ತದೆ. ಮುಂದಿನ ನಮ್ಮ ನಡೆಯ ಬಗ್ಗೆ ಬೆಳಕು ಚೆಲ್ಲಿ ನಮಗೆ ಧೈರ್ಯ ತುಂಬುತ್ತದೆ.

ಮಾತನಾಡುವವರು ಎಲ್ಲಡೆ ಕಾಣಸಿಗುತ್ತವೆ, ಆದರೆ ಮೌನವಾಗಿದ್ದು ಕೇಳುವವರ ಸಂಖ್ಯೆ ವಿರಳ, ಕೇಳುಗರ ಸಂಖ್ಯೆ ಹೆಚ್ಚಾದರೆ ಜಗತ್ತಿನ ಅನೇಕ ಸಂಕೀರ್ಣ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗುತ್ತವೆ. ಪ್ರೀತಿಯಲ್ಲೂ ಮೌನಕ್ಕೆ ತನ್ನದೇ ಆತ ಸ್ಥಾನವಿದೆ. ಮೌನವನ್ನು ಪರಿಣಾಮಕಾರಿಯಾಗಿ ಬಳಸಿದಾಗ, ಪ್ರೀತಿಗೆ ಹೊಸ ಅರ್ಥ ಬರುತ್ತದೆ.