Tuesday, 18th January 2022

ಬಸವರಾಜು ಸಂಸದರಾಗಿರುವುದು ದುರಾದೃಷ್ಟ: ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು: ಮೋದಿ ಅಲೆಯಲ್ಲಿ ಬಸವರಾಜು ನಮ್ಮ ಜಿಲ್ಲೆಯ ಸಂಸದರಾಗಿರುವುದು ದುರಾದೃಷ್ಟ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜು ಅವಕಾಶವಾದಿ, ಇಂದಿರಾ ಕಾಂಗ್ರೆಸ್, ಹೆಚ್.ಕೆ. ಪಾಟೀಲ್ ಕಾಂಗ್ರೆಸ್, ಈಗಿನ ಕಾಂಗ್ರೆಸ್, ಬಿಜೆಪಿ ನಂತರ ಕೆಜೆಪಿ ನಂತರ ಬಿಜೆಪಿ ಸಂಘ ಪರಿವಾರದ ಶ್ರಮ, ಮೋದಿ ಅಲೆ, ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ಸೇವೆ ಇವುಗಳಿಂದ ಇವರು ಎಂಪಿಯಾಗಿ ಆರಿಸಿ ಬಂದರು ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಎಮರ್ಜೆನ್ಸಿ ಕಾಲದಲ್ಲಿ ಹೋರಾಡಿದ್ದ ರಾಷ್ಟçಭಕ್ತರನ್ನು ನಮ್ಮನ್ನು ಜೈಲ್‌ಗೆ ಹಾಕಿಸಿದ ವ್ಯಕ್ತಿ ಇವರೇ ನಮ್ಮ ಎಂಪಿ ದುರದೃಷ್ಟ. ಈ ವ್ಯಕ್ತಿ ಶ್ರೀ ಅದ್ವಾನಿ, ಬಿ.ಎಲ್. ಸಂತೋಷ್ ಅವರನ್ನು ಸಹ ಬಿಟ್ಟಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಕರೆ ತಂದ ಯಡಿಯೂರಪ್ಪ, ಸೋಮಣ್ಣರವರನ್ನು ಪ್ರತಿನಿತ್ಯ ಪೂಜೆ ಮಾಡಬೇಕು ಎಂದರು.

ಈ ವರ್ಷ ಜಿಲ್ಲೆಯಲ್ಲಿ ಹೇಮಾವತಿ ನೀರಿನಿಂದ ತುಂಬಬಹುದಾಗಿದ್ದ ಎಲ್ಲಾ ಕೆರೆಗಳಿಗೆ ಕುಡಿಯುವ ನೀರನ್ನು ತುಂಬಿಸಲಾಗಿದೆ. ಕುಡಿಯುವ ನೀರಿನ ಯೋಜನೆ ಜನಸಂಗ್ರಹಾಗಾರಗಳಿಗೆ ನೀರು ಹರಿಸಲಾಗಿದೆ. (ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕುಣಿಗಲ್, ಕೊರಟಗೆರೆ, ಮಧುಗಿರಿ ಶಿರಾ) ಎತ್ತಿನಹೊಳೆ ನೀರಾವರಿ ಯೋಜನಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ ಹಾಗೂ ಕಾಲುವೆಯ ಅಕ್ಕಪಕ್ಕದ ಕೆರೆಗಳಿಗೆ ನೀರು ಹರಿಸಲಾಗಿದೆ.

ತುಮಕೂರು ಗ್ರಾಮಾಂತರ ಪ್ರದೇಶದ ಬೆಳ್ಳಾವಿ ಹೋಬಳಿ, ಕೋರಾ ಹೋಬಳಿ ಇಲ್ಲಿನ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಿ ಡಿ.ಪಿ.ಆರ್. ಮಾಡಲಾಗಿದೆ. ಸಣ್ಣ ನೀರಾವರಿ ಸಚಿವರಾಗಿ ಮಾಧುಸ್ವಾಮಿ ತುಮಕೂರು ಜಿಲ್ಲೆಗೆ ನೀರು, ವಿದ್ಯುತ್, ಕೈಗಾರಿಕೆ ಕ್ಷೇತ್ರದಲ್ಲಿ ಸಕ್ರಿಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಜನತೆಗೆ, ರೈತರಲ್ಲಿ ಖುಷಿ ತಂದಿರುತ್ತಾರೆ. ಇಂತಹ ವ್ಯಕ್ತಿಯ ಬಗ್ಗೆ ಜಿ.ಎಸ್.ಬಸವರಾಜು, ಏಕವಚನದಲ್ಲಿ ಆರೋಪ ಮಾಡಿರುವುದು ಅವರ ಬಾಲಿಷ ವ್ಯಕ್ತಿತ್ವಕ್ಕೆ ಉದಾಹರಣೆ ಎಂದು ಎಂದರು.