ತುಮಕೂರು: ಪೊಲೀಸ್ ಇಲಾಖೆ ಎಂದರೆ ಬಹುತೇಕ ಭ್ರಷ್ಟ ಅಧಿಕಾರಿಗಳಿಂದ ತುಂಬಿರುತ್ತದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಅದರಲ್ಲೂ ಮೇಲಧಿ ಕಾರಿಗಳೂ ಭ್ರಷ್ಟರಾಗಿ ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ ಆದರೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳ ಜನಸ್ನೇಹಿ ನಡೆಯಿಂದ ಭ್ರಷ್ಟ ಅಧಿಕಾರಿಯಲ್ಲಿ ನಡುಕ ಉಂಟಾಗಿದ್ದು, ಸರಕಾರಿ ವಾಹನ ಕೇವಲ ಅಧಿಕಾರಿಗಳ ಸ್ವತ್ತಲ್ಲ ಜನಸಾಮಾನ್ಯರ ಸೇವೆಗೂ ಬಳಸಬಹುದೆಂಬ ಉತ್ತಮ ಸಂದೇಶ ರವಾನೆಯಾಗಿದೆ.
ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣೆಯ ಸರಹದ್ದು ಕೋಡಿಹಳ್ಳಿಯಲ್ಲಿ ನಾಗೇಂದ್ರಪ್ಪ ಮತ್ತು ಶಿವಪ್ರಕಾಶ್ ಎಂಬುವವರ ನಡುವೆ ಗಲಾಟೆ ನಡೆದಿತ್ತು.ಇದರಲ್ಲಿ ನಾಗೇಂದ್ರಪ್ಪ ಎಂಬವರ ಮೇಲೆ ಶಿವಕು ಮಾರ್, ಚಂದನ್ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಇದರ ಸಂಬಂಧ ನಾಗೇಂದ್ರಪ್ಪನವರು ದಂಡಿನಶಿವರ ಠಾಣೆಗೆ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದೆ ಸಬೂಬು ಹೇಳಿ ಎಸ್.ಐ ಶಿವಲಿಂಗಯ್ಯ ದೂರುದಾರ ನಾಗೇಂದ್ರಪ್ಪನವರನ್ನು ಕಳುಹಿಸುತ್ತಿದ್ದರು. ಇದರ ಸಂಬಂಧ ಸಾಕಷ್ಟು ಬಾರಿ ಆರೋಪಿಗಳನ್ನು ಬಂಧಿಸುವಂತೆ ಎಸ್.ಐಗೆ ನಾಗೇಂದ್ರಪ್ಪ ಮನವಿ ಮಾಡಿದ್ದಾರೆ. ಮರುದಿನ ನಾಗೇಂದ್ರಪ್ಪನಿಗೆ ‘ಆರೋಪಿ ಹಿಡಿಯಲು ಹೋಗೋಣ ಕಾರು ಬಾಡಿಗೆ ಮಾಡಿ ಕೊಂಡು ಬಾ…’ ಎಂದು ಎಸ್.ಐ ಶಿವಲಿಂಗಯ್ಯ ಹೇಳಿದ್ದಾರೆ.
ಎಸ್.ಐ ಮಾತಿನಿಂದ ನೊಂದ ದೂರುದಾರ ನಾಗೇಂದ್ರಪ್ಪ ನೇರವಾಗಿ ತುಮಕೂರಿನ ಎಸ್ಪಿ ಕಚೇರಿಗೆ ಬಂದು ಎಸ್ಪಿ ರಾಹುಲ್ ಕುಮಾರ್ ರವರಿಗೆ ದೂರು ನೀಡಿದ್ದಾರೆ. ನಾಗೇಂದ್ರಪ್ಪನವರ ದೂರು ಆಲಿಸಿದ ಎಸ್ಪಿ ತಮ್ಮದೆ ಕಾರಿನಲ್ಲಿ ದೂರುದಾರರನ್ನು ದಂಡಿನಶಿವರದ ಠಾಣೆಗೆ ಕಳುಹಿಸಿದ್ದಾರೆ.ಎಸ್ಪಿ ಕಾರಿನಲ್ಲಿ ಠಾಣೆಗೆ ಬಂದ ದೂರುದಾರ ಹಾಗೂ ಮೇಲಧಿಕಾರಿಯ ಕಾರು ನೋಡಿ ಪೊಲೀಸರು ನಡುಗಿ ಹೋಗಿದ್ದಾರೆ.
ದೂರುದಾರನನ್ನು ತಮ್ಮದೆ ಕಾರಿನಲ್ಲಿ ಕಳುಹಿಸಿಕೊಟ್ಟ ಎಸ್ಪಿ ರಾಹುಲ್ ಕುಮಾರ್ ಅವರ ನಡೆಗೆ ಎಸ್ಐ ಶಿವಲಿಂಗಯ್ಯ ಶಾಕ್ ಆಗಿದ್ದಾರೆ. ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಅವರ ಜನಸ್ನೇಹಿ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.