ಪುತ್ತೂರು: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು, ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಯೋಗೀಶ್ ಕುಮಾರ್ ರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಡಿಕೆ ಉದ್ಯಮಿಯೋರ್ವರ ದರೋಡೆ ಪ್ರಕರಣದಲ್ಲಿ ಡೀಲ್ ನಡೆಸಿ ಎಸ್.ಐ.ಯವರಿಂದ ಆರು ಲಕ್ಷ ರೂ ಲಂಚ ಪಡೆದ ಆರೋಪದಡಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಯೋಗೀಶ್ ರವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಯೋಗೀಶ್ ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಯುತ್ತಿದೆ. ಮಡಿಕೇರಿಯವರಾದ ಯೋಗೀಶ್ ರವರು ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಹಳೆ ವಿದ್ಯಾರ್ಥಿ ಆಗಿದ್ದರು.
ಭ್ರಷ್ಟಾಚಾರ ನಿಗ್ರಹದಳದ ಮಂಗಳೂರು ಘಟಕದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಯೋಗೀಶ್ ಕುಮಾರ್, ಪುತ್ತೂರಿನಲ್ಲಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್ ಸಹಿತ ಹಲವರನ್ನು ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಕೆಡವಿದ್ದ ಎ.ಸಿ.ಬಿ. ತಂಡದಲ್ಲಿದ್ದರು. ಪ್ರಸ್ತುತ ಬೆಂಗಳೂರಿನ ಎಸ್.ಜೆ.ಪಾರ್ಕ್ ಠಾಣಾ ವೃತ್ತ ನಿರೀಕ್ಷಕರಾಗಿದ್ದರು.
ಮೂಲಗಳ ಪ್ರಕಾರ, ಯೋಗೀಶ್ ರವರು ನೇರವಾಗಿ ಲಂಚ ಪಡೆಯದಿದ್ದರೂ, ಅಡಿಕೆ ವ್ಯಾಪಾರಿಯ ದರೋಡೆ ನಡೆಸಿದವರ ಜತೆ ಶಾಮೀಲಾದ ಎಸ್.ಐ.ವಿರುದ್ಧ ಇವರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಯೋಗೀಶ್ ರವರು ಮಡಿಕೇರಿಯ ಮನೆಯಲ್ಲಿದ್ದಾರೆ ಎಂದು ಅವರ ಆಪ್ತರು ಪ್ರತಿಕ್ರಿಯಿಸಿದ್ದಾರೆ