Tuesday, 18th January 2022

ಕಾಮರಹಿತ ಕಾಮ ಸಾಧ್ಯವೇ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಕಾಮವನ್ನು ಕಾಮದ ನೆಲೆಗಟ್ಟಿನಲ್ಲಿ ನೋಡದೆ ಚಿತ್ರವನ್ನುಚಿತ್ರದಲ್ಲಿನ ಭರಪೂರ ಮುಗ್ಧತೆಯ ಕಣ್ಣುಗಳಿಂದಲೇ ನೋಡಿದರೆ ಸಮ್ಮರ್ ಆಫ್ 42 ಅದ್ಭುತ ಚಿತ್ರ. ಯುದ್ಧದ ಛಾಯೆ ವಿಶ್ವದ ಬಹು ಭಾಗಗಳನ್ನು ಕವಿದಿತ್ತು.

‘ಕಾಮರಹಿತ ಕಾಮ ಸಾಧ್ಯವೇ?’ ಈ ಲೇಖನವನ್ನು ಓದಿ ಮುಗಿಸುವವರೆಗೂ ನಿಮ್ಮ ತೀರ್ಮಾನವನ್ನು ಕಾಯ್ದಿರಿಸಲು ಕೋರಿಕೆ. ಸಮ್ಮರ್ ಆಫ್ 42 ಎಂಬ ಹಾಲಿವುಡ್ ಚಿತ್ರ ಅಮೆರಿಕದಲ್ಲಿ ಬಿಡುಗಡೆ ಆಗಿದ್ದು 1971ರಲ್ಲಿ. ಹರ್ಮನ್ ರಾಚರ್ ಎಂಬ ವ್ಯಕ್ತಿಯ ತಾರುಣ್ಯದಲ್ಲಿ ನಡೆದ ಘಟನೆಯನ್ನಾಧರಿಸಿದ ಚಿತ್ರವದು. ಅದೇ ವರ್ಷ, ತನ್ನ ಆ ಒಂದು ಅನುಭವದ ಆಧಾರದ ಮೇಲೆ ಆತನೇ ಬರೆದ ಪುಸ್ತಕ ಕೂಡ ಬಿಡುಗಡೆಯಾಯಿತು.

ಚಿತ್ರದಲ್ಲಿ, ನೈಜವಲ್ಲದ ಕೆಲವು ಮುಖ್ಯ ಮಾರ್ಪಾಡುಗಳನ್ನು ಮಾಡಲಾಗಿತ್ತು. ಚಿತ್ರ-ಪುಸ್ತಕಗಳೆರಡೂ ಅಪಾರ ಜನಪ್ರಿಯತೆ ಗಳಿಸಿದವು. ಸುಪ್ರಸಿದ್ಧ ವಾರ್ನರ್ ಬ್ರದರ್ಸ್ ನಿರ್ಮಿಸಿದ ಈ ಚಿತ್ರ ’ಕ್ಲಾಸಿಕ್’ ಪಟ್ಟಕ್ಕೇರಿತ್ತು. ನಾನೀ ಚಿತ್ರವನ್ನು ವೀಕ್ಷಿಸಿ ಮೂರು ದಶಕಗಳೇ ಆಯಿತು. ಎರಡನೇ ಮಹಾಯುದ್ಧ ಚಿತ್ರದ ಕಾಲಘಟ್ಟ. ಬೇಸಿಗೆಯ ರಜೆಗೆಂದು ಹರ್ಮನ್ ದ್ವೀಪವೊಂದಕ್ಕೆ ಹೋಗುತ್ತಾನೆ. ಅಲ್ಲಿ ಅವನಿಗಿಂತ ದೊಡ್ಡವಳಾದ ಡೊರೊತಿ ಎಂಬ ಯುವತಿ ಪರಿಚಯವಾಗು ತ್ತಾಳೆ. ಅಂಗಡಿ ಯಿಂದ ಖರೀದಿಸಿದ ಸಾಮಾನುಗಳನ್ನು ಕೊಂಡೊಯ್ಯುವಾಗ ಹರ್ಮನ್ (ಹರ್ಮಿ) ಆಕೆಗೆ ಸಹಾಯ ಹಸ್ತ ನೀಡುವುದರ ಮೂಲಕ ಅವರು ಪರಸ್ಪರ ಹತ್ತಿರ ವಾಗುತ್ತಾರೆ.

ಅವನಿಗೆ ಆಸಿ ಮತ್ತು ಬೆಂಜಿ ಎಂಬ ಹೆಚ್ಚು ಕಡಿಮೆ ಅವನದ್ದೇ ವಯಸ್ಸಿನ ಸ್ನೇಹಿತರು. ಮೈಮನಗಳನ್ನಾವರಿಸಿದ ತಾರುಣ್ಯದ ಕಾಮನೆಗಳು. ಸಾಹಸಕ್ಕಾಗಿ ಹಾತೊರೆಯುತ್ತಿರುವ ವಯಸ್ಸು. ಅಮೆರಿಕವೂ ಸಂಪ್ರದಾಯಸ್ಥವಾಗಿದ್ದ ದಿನಗಳು. ಅದು ಹೇಗೆ ತಮ್ಮ ಶರೀರ ಅವನ(ಳ) ದೇಹರಚನೆಗಿಂತ ವಿಭಿನ್ನವೆಂಬ ಕುತೂ ಹಲ ತಣಿಸಿಕೊಳ್ಳಲು ವೈದ್ಯಕೀಯ ಗ್ರಂಥಗಳೇ ಗತಿ. ಅಮೆರಿಕದಲ್ಲೂ (ಮೊದಲು) ಕಾಂಡೊಮ್ ಕೊಳ್ಳಲು ಸುತ್ತಮುತ್ತ ನೋಡಿ ಪರಿಚಯವಿರುವವರಾರೂ ಇಲ್ಲವೆಂದು ಖಾತರಿ ಮಾಡಿಕೊಂಡು ಖರೀದಿಸಬೇಕಾಗಿದ್ದ ದಿನಗಳವು. ಹರ್ಮಿಯ ತಂದೆ ತಾಯಂದಿರಿಗೆ ಬೇರೆ ಸ್ಥಳೀಯ ಕೆಮಿ ಪರಿಚಯ.

ಇಷ್ಟು ಅಡೆತಡೆಗಳ ನಡುವೆ ಕೊನೆಗೂ ಕೊಂಡುಕೊಳ್ಳಲಾದ ಕಾಂಡೊಮನ್ನು ಡೊರೊತಿಯ ಮನೆಯೊಳಗೆ ಹೋಗುವ ಮುನ್ನ ಹರ್ಮಿ ಎಸೆಯುತ್ತಾನೆ. (ಈ ಪ್ರಸಂಗ ಚಿತ್ರದಲ್ಲಿಲ್ಲ. ಹರ್ಮಿ ರಜೆಗಾಗಿ ಹೋದದ್ದು ಅವನ ತಂದೆತಾಯಿ ಮತ್ತು ಸಹೋದರಿಯೊಂದಿಗೆ ಆದರೆ ಚಿತ್ರದಲ್ಲಿ ಅವರು ಕಂಡಿಲ್ಲ.) ಡೊರೊತಿ ಮತ್ತು ಹರ್ಮಿಯ ಹತ್ತಿರವಾಗುತ್ತದೆ. ಚಿತ್ರದಲ್ಲಿ ಢಾಳಾಗಿ ಕಾಣುವುದು ಮುಗ್ಧತೆ ಮತ್ತು ಮುಗ್ಧತೆಯಿಂದ ಮೂಡುವ ಸೌಂದರ್ಯ.

ಒಂದು ಇಳಿ ಸಂಜೆ ಹರ್ಮಿ ಅವಳ ಮನೆಗೆ ಹೋದಾಗ ಡೊರೊತಿ ಕುಡಿದಿರುತ್ತಾಳೆ. ದುಃಖಿತಳಾದ ಅವಳ ಟೇಬಲ್ ಮೇಲೆ ಯುರೋಪ್‌ಗೆ ಯುದ್ಧಕ್ಕಾಗಿ ತೆರಳಿದ ಅವಳ ಗಂಡ ಪೇಟ್ ರಣರಂಗದಲ್ಲಿ ಗತಿಸಿದ ಸುದ್ದಿ ಹೊತ್ತ ಟೆಲಿಗ್ರಾಮ್ ಕಾಣುತ್ತದೆ. ಮುಂದಿನ ದೃಶ್ಯದಲ್ಲಿ ಡೊರೊತಿ ಮತ್ತು ಹರ್ಮಿ ಆಕೆಯ ಬೆಡ್‌ರೂಮ್‌ ನಲ್ಲಿರು ತ್ತಾರೆ. ಅದನ್ನು ಕಂಡ ಪ್ರೇಕ್ಷಕನೊಬ್ಬ ಏಕೈಕ ಕೀಳುಪದವೊಂದನ್ನು ಇಡೀ ಸಿನಿಮಾ ಹಾಲ್ ಕೇಳುವಂತೆ ಕೂಗಿದ್ದ. ಆ ಪದವನ್ನು ಹರ್ಮಿಯತ್ತ ಎಸೆಯ ಲಾಗಿತ್ತೆಂದುಕೊಂಡಿದ್ದೆ.

ಆ ದೃಶ್ಯದಲ್ಲಿ ಅಶ್ಲೀಲತೆಯ ಸೋಂಕಿರಲಿಲ್ಲ. ನಗ್ನತೆ ಯಿಲ್ಲದೆಯೂ ಅಸಹ್ಯ ಹುಟ್ಟಿಸಬಲ್ಲ ನಮ್ಮ ಮಸಾಲೆ ಚಿತ್ರಗಳಲ್ಲಿ ಕಂಡುಬರುವ ಚೇಷ್ಟೆಗಳಿಲ್ಲ. ಆದರೂ ಪರದೆಯ ಮೇಲೆ ಕಂಡದ್ದನ್ನು ಸಮ್ಮತಿಸದ ಆ ಪ್ರೇಕ್ಷಕ ಕೂಗಿದ್ದು ನಮ್ಮ ಪತ್ರಿಕೆಗಳು ಕೀಳಾಗಿ ಕಾಣುವ ಮುಂಬೆಂಚಿನಿಂದ. ಸೂಕ್ಷ್ಮಸಂವೇದನೆ ಒಪ್ಪದ ಡೊರೊತಿ-ಹರ್ಮಿ ನಡುವಿನ ಆ ರಾತ್ರಿಯ ಏರ್ಪಾಡು ಆ ಪ್ರೇಕ್ಷಕನ ಅಸಮ್ಮತಿಗೆ ಕಾರಣ. ಒಂದು ಸುಂದರ ಪ್ರೇಮಕತೆ ಯಾಗಿ ರೂಪುಗೊಂಡಿದ್ದ ಈ ಚಿತ್ರ ಮತ್ತು ಹರ್ಮಿಯ ಆ ಒಂದು ದೃಶ್ಯವನ್ನು ಒಪ್ಪಿಕೊಳ್ಳದ ಆ ಪ್ರೇಕ್ಷಕನ ಕೂಗುಗಳೆರಡೂ ನನ್ನ ಮನಸ್ಸಿನಲ್ಲಿ ಮಾಸದೆ ಉಳಿದಿವೆ. ಇತ್ತೀಚೆಗೆ, ಎಷ್ಟೋ ವರ್ಷಗಳ ನಂತರ, ಅವನ ಬೈಗುಳ ಡೊರೊತಿಯ ವರ್ತನೆಯನ್ನು ಒಪ್ಪಿಕೊಳ್ಳದೆ ಬಳಸಿದ್ದಿರಬಹುದೇನೊ ಎಂಬ ಸಂಶಯ ಕಾಡಲಾ ರಂಭಿಸಿತು.

ಕಾಮವನ್ನು ಕಾಮದ ನೆಲೆಗಟ್ಟಿನಲ್ಲಿ ನೋಡದೆ ಚಿತ್ರವನ್ನು ಚಿತ್ರದಲ್ಲಿನ ಭರಪೂರ ಮುಗ್ಧತೆಯ ಕಣ್ಣುಗಳಿಂದಲೇ ನೋಡಿದರೆ ಇದೊಂದು ಅದ್ಭುತ ಚಿತ್ರ. ಯುದ್ಧದ ಛಾಯೆ ವಿಶ್ವದ ಬಹು ಭಾಗಗಳನ್ನು ಕವಿದಿತ್ತು. ಪರ್ಲ್ ಹಾರ್ಬರ್‌ನ ನೌಕಾ ಪಡೆಯ ಮೇಲೆ ಜಪಾನ್ ದಾಳಿ ನಡೆಸಿಯಾಗಿತ್ತು. ಅಮೆರಿಕ ಆತಂಕದಲ್ಲಿತ್ತು. ಜನ ಸಂದಣಿಯಿಲ್ಲದ ಪುಟ್ಟ ದ್ವೀಪವೊಂದರಲ್ಲಿನ ವಿಶಾಲವಾದ ಮನೆಯಲ್ಲಿ ಏಕಾಂಗಿ ನವವಿವಾಹಿತೆ. ದಾಂಪತ್ಯ ಕುದುರುವ ಮುನ್ನವೇ ಯುದ್ಧಕ್ಕೆ ತೆರಳಿದ್ದ ಪತಿ. ಬರಸಿಡಿಲಿನಂತೆ ಬಡಿದ ಪತಿಯ ಮರಣದ ಸುದ್ದಿ. ಆಘಾತಕ್ಕೊಳಗಾಗಿ ದಿಕ್ಕೇ ತೋಚದ ಡೊರೊತಿ ಮದಿರೆಗೆ ಶರಣಾಗುತ್ತಾಳೆ. ಆ ಸಮಯಕ್ಕೆ ಆಗಮಿಸಿದ ಹರ್ಮಿ ಊರುಗೋಲಾಗಿ ಕಾಣುತ್ತಾನೆ. ಶೋಕತಪ್ತಳಾದ ಅವಳನ್ನು ಸಂತೈಸಲು ಅವನು ಹೆಣಗಾಡುತ್ತಾನೆ.

ಸಂಗೀತ-ನೃತ್ಯದ ಮೂಲಕ ದುಗುಡದಿಂದ ಹೊರಬರಲು ತವಕಿಸುತ್ತಾರೆ. ಪರಸ್ಪರ ಆಕರ್ಷಿತರಾದ ಹೆಣ್ಣು-ಗಂಡುಗಳ ನಡುವೆ ದೈಹಿಕ ಸಂಪರ್ಕವಿಲ್ಲದೆಯೂ ದಟ್ಟಪ್ರೇಮವಿರಬಹುದಾದ ನಿಷ್ಕಾಮ ಪ್ರೇಮವನ್ನು ಪ್ಲೆಟಾನಿಕ್ ಲವ್ ಎಂದು ಕರೆಯುತ್ತಾರೆ. ಆದರೆ, ಡೊರೊತಿ-ಹರ್ಮಿ ನಡುವಿನ ಆ ಕ್ಷಣದ ದೈಹಿಕ ಸಾಮೀಪ್ಯತೆಯನ್ನು ವಿಶ್ಲೇಷಿಸಲು ಹೊಸತೊಂದೇ ವಿವರಣೆ ಬೇಕು. ಅದು ಕಾಮವನ್ನು ಮೀರಿದ್ದು. ನಿಜಾರ್ಥದಲ್ಲಿ ಅಲ್ಲಿ, ದೈಹಿಕ ಸಂಪರ್ಕವೇರ್ಪಟ್ಟೂ,
ಕಾಮದ ಸೋಂಕೇ ಕಾಣದು. ಆಪ್ತ ಆತ್ಮಗಳ ಬೆಸುಗೆಗೆ ದೈಹಿಕ ಸಾಮೀಪ್ಯ ಒಂದು ಪುಟ್ಟ ನೆಪವಷ್ಟೆ.

ಹಾರ್ಮೋನುಗಳ ವ್ಯತ್ಯಯದಿಂದ ಉಕ್ಕಿದ ಕಾಮನೆಗಳ ಅಭಿವ್ಯಕ್ತಿ ಅದಲ್ಲ. ಆ ಕಾರಣಕ್ಕಾಗಿಯೇ ಅಲ್ಲಿ ಮಾಮೂಲಿ ಅಮೆರಿಕನ್ ಚಿತ್ರಗಳಲ್ಲಿ ತೋರಿಸುವ ಪ್ರಚೋ ದನಕಾರಿ ದೃಶ್ಯಗಳಿಲ್ಲ. (ಅಥವಾ, ಭಾರತೀಯ ಪ್ರೇಕ್ಷಕರಿಗೆ ದೃಶ್ಯಕ್ಕೆ ಕತ್ತರಿ ಪ್ರಯೋಗವಾಯಿತೋ ಕಾಣೆ. ಹಾಗೇನಾದರೂ ಮಾಡಿದ್ದಲ್ಲಿ, ನಮ್ಮ ಸೆನ್ಸಾರ್ ಮಂಡಳಿಯ ಅನುದ್ದೇಶಿತ ಸತ್ಕಾರ್ಯವೂ ಅಭಿನಂದನಾರ್ಹ!) ಗಂಡನ ಸಾವಿನ ಸುದ್ದಿ ಕೇಳಿದ ಹೆಣ್ಣು ಸಾವರಿಸಿಕೊಳ್ಳುವ ಮೊದಲೇ ಅನ್ಯ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದೇ? ಎಂಬ ನೈತಿಕತೆಯಾಧಾರಿತ ಪ್ರಶ್ನೆಯೇ ಇಲ್ಲಿ ಅಪ್ರಸ್ತುತ.

ಹರ್ಮಿಯಾದರೂ, ಸಾಂತ್ವನಗೈಯುವ ಸಂದರ್ಭವನ್ನು ತನ್ನದೇ ಅರಿವಿನ ಮಟ್ಟವನ್ನು ಏರಿಸಿಕೊಳ್ಳಲು ದುರ್ಬಳಕೆ ಮಾಡಿಕೊಂಡ ಎಂಬ ವಾದವೂ ಸಮಂಜಸ ವಲ್ಲ. ಆಘಾತದಿಂದ ಚೇತರಿಸಿಕೊಳ್ಳಲಿಕ್ಕೆ ಡೊರೊತಿಗೆ ಬೇಕಿದ್ದುದು ಆಘಾತವನ್ನು ಹೀರಿಕೊಳ್ಳುವ ಶಾಕ್ ಅಬ್ಸಾರ್ಬರ್. ಬೇರಾರು ಇಲ್ಲದ ಆ ಕ್ಷಣದಲ್ಲಿ ಆಕೆಗೆ
ಅದು ಹರ್ಮಿಯ ತೋಳ್ತೆಕ್ಕೆಯಲ್ಲಿ ಸಿಕ್ಕಿತು. ಅನನುಭವಿ ಹರ್ಮಿಗೆ ಶೋಕತಪ್ತಳಾದ ತನ್ನ ಸ್ನೇಹಿತೆಯ ಸಂಕಟವನ್ನು ಶಮನಮಾಡಲು ತನ್ನ ಭುಜವನ್ನು ನೀಡು ವುದು ಬಿಟ್ಟು ಬೇರೇನೂ ತಿಳಿದಿರಲಿಲ್ಲ.

ಈ ಸಂದರ್ಭದ ಅತಿ ಸೂಕ್ಷ್ಮತೆಯನ್ನರಿತು, ನೈತಿಕತೆಯ ಮಾನದಂಡದಲ್ಲಿ ಅವರಿಬ್ಬರನ್ನೂ ಅಳೆಯದಿರಲು ಮತ್ತೊಂದು ಅಂಶ ಸಹಾಯಕವಾಗಬಲ್ಲದು. ದಿಗ್ಭ್ರಾಂತಳಾಗಿದ್ದ ಡೊರೊತಿ ಹರ್ಮಿಯಲ್ಲಿ ತನ್ನ ಯೋಧ-ಪತಿ ಪೇಟ್ನನ್ನು ಕಾಣುತ್ತಾಳೆ. ಹರ್ಮಿಯನ್ನು ಪೇಟ್ ಎಂದೇ ಮತ್ತೆ ಮತ್ತೆ ಸಂಬೋಧಿಸುತ್ತಾಳೆ.
ಈ ಘಟನೆಯ ಮರು ಬೆಳಗ್ಗೆಯೇ ಡೊರೊತಿ ಆ ದ್ವೀಪದಿಂದಲೇ ನಿರ್ಗಮಿಸುತ್ತಾಳೆ. ವಾಸ್ತವದಲ್ಲಿ ಅವಳ ಹೆಸರು ಡೊರೊತಿ ಯೇ ಅಲ್ಲ. ತನ್ನ ಪುಸ್ತಕದಲ್ಲಿ ಹರ್ಮಿ
ಅದನ್ನು ಹೇಳಿಕೊಂಡಿzನೆ. ಅಂದಿನ ರಾತ್ರಿ ನಡೆದದ್ದನ್ನು ನೆನೆದು ಹರ್ಮಿ ಕ್ಲೇಶಕ್ಕೊಳಗಾಗುತ್ತಾನೆ. ಅವಳ ಶೋಧನೆಯಲ್ಲಿ ತೊಡಗುತ್ತಾನೆ. ಹಲ ವರ್ಷಗಳ ನಂತರ, ತಾರುಣ್ಯದ ಗೆಳೆಯ ‘ಸಹ-ಸಾಹಸಿ’ ಆಸಿ ಉತ್ತರ ಕೊರಿಯಾದಲ್ಲಿ ನಡೆದ ಘರ್ಷಣೆಯಲ್ಲಿ ಅಸುನೀಗುತ್ತಾನೆ.

ಅವನು ಸತ್ತದ್ದು ಹರ್ಮಿಯ ಜನ್ಮ ದಿನದಂದು. ದಟ್ಟ ವ್ಯಾಕುಲತೆ ಹರ್ಮಿಯನ್ನು ಕಾಡುತ್ತದೆ. ಅದರಿಂದ ಹೊರಬರಲು ಅವನು ಡೊರೊತಿ ಜತೆಗೆ ಕಳೆದ ಆ ರಾತ್ರಿಯ ಅನುಭವವಕ್ಕೆ ಚಿತ್ರಕಥೆಯ ರೂಪ ಕೊಡುತ್ತಾನೆ. ಅದು ಪ್ಲೆಟಾನಿಕ್ ಪ್ರೇಮವಷ್ಟೆ ಎಂದು ಅದರಲ್ಲಿ ಹೇಳಿಕೊಂಡಿದ್ದಾನೆ. (ನಾನು ಪುಸ್ತಕವನ್ನು ಓದಿಲ್ಲ, ಅದರ ಬಗ್ಗೆ ಇತ್ತೀಚಿಗೆ ಓದಿದೆ.) ಡೊರೊತಿ, ಆ ನತದೃಷ್ಟ ವಿಧವೆಗೆ, ಹರ್ಮಿ ನೀಡಿದ ಹೆಸರು. ಅದೇ ಹೆಸರಿನ ನಕಲಿ ಡೊರೊತಿಗಳಿಂದ ಹರ್ಮಿಗೆ ಪತ್ರಗಳು ಹರಿದುಬರುತ್ತವೆ.

ಕೊನೆಗೊಂದು ದಿನ ಡೊರೊತಿಯೇ ಪತ್ರ ಬರೆಯುತ್ತಾಳೆ. ಮರುವಿವಾಹವಾಗಿದ್ದೇನೆಂದು ತಿಳಿಸಲು ಬರೆದ ಪತ್ರ. ಹರ್ಮಿಯ ಪಾಲಿಗೆ ಅಂದು ನಡೆದದ್ದು ಅನಪೇಕ್ಷಣೀಯ ಘಟನೆ. ಅವನಿಗೆ ಅಪಾರ ನೋವು ತಂದಿದ್ದು ಆಸಿಯ ಅಕಾಲಿಕ ಸಾವು. ಅದರಿಂದಾದ ನೋವನ್ನು ಮರೆಯಲು ಬರೆದ ಕಥೆ ಪ್ರಣಯಕಥೆಯಾಗಿ ಪರಿಗಣಿಸಲ್ಪಟ್ಟು ಜನಪ್ರಿಯತೆ ಗಳಿಸಿಕೊಂಡದ್ದು ವಿಸ್ಮಯವೇ ಸರಿ. ಸೂಕ್ಷ್ಮ ಚಿತ್ರವೊಂದರ ಮೂಲಕ ಅದಕ್ಕೆ ಆಧಾರವೊದಗಿಸಿದ ನೈಜ ಘಟನೆಯನ್ನು ನಾನು ಅರ್ಥೈಸುವುದು ಅದೊಂದು ಅಪೂರ್ವ ಕಾಮರಾಹಿತ್ಯ ಕಥನವೆಂದು. ನೀವು ಆ ಚಿತ್ರವನ್ನು ನೋಡಿರಲಿ, ನೋಡಿರದಿರಲಿ, ರಜತಪರದೆಯ ಮೇಲೆ ಮೂಡಿಬಂದ ಆ ಚಿತ್ರಕಾವ್ಯದ ಬಗ್ಗೆ ನಿಮ್ಮ ಸೂಕ್ಷ್ಮ ಅನಿಸಿಕೆಗಳೂ ನನ್ನ ಅಭಿಪ್ರಾಯದ ಜತೆ ತಾಳೆಯಾಗುವುದಾದರೆ ನನ್ನ ಈ ಲೇಖನ ಸಾರ್ಥಕತೆ ಪಡೆದುಕೊಂಡಂತೆ.
ಹಾಗಂತ ನಿಮ್ಮ ವ್ಯತಿರಿಕ್ತ ಅಭಿಪ್ರಾಯವನ್ನು ತಿರಸ್ಕರಿಸುವೆನೆಂತಲ್ಲ.

ಕಣ್ಣಿಗೆ ಕಾಣುವಂತೆ ನಡೆದ ಕಾಮ ಸನ್ನಿವೇಶವೂ ನಿಷ್ಕಾಮ ಕರ್ಮದಿಂದ ಕೂಡಿರಬಹುದೆಂಬ ಅಪರೂಪದ ಹೊಳಹನ್ನು ಈ ಚಿತ್ರ ನಮ್ಮ ಮುಂದಿಡುತ್ತದೆ. ಮತ್ತೊಂದು ರೀತಿ ಹೇಳುವುದಾದರೆ, ಅಂತಹ ಉದಾತ್ತ ಸಾಧ್ಯತೆಯನ್ನು ಕಂಡುಕೊಳ್ಳುವ ಆಯ್ಕೆ ಪ್ರೇಕ್ಷಕನದ್ದು. ಅಂತಹ ಔದಾರ್ಯಕ್ಕೆ ಒಡ್ಡಿಕೊಂಡ ಮನಸ್ಸೂ ಅದೇಕೋ ಚಾಚಾ ನೆಹರೂವಿನ ಪ್ರಣಯವನ್ನು ಅಷ್ಟೇ ಉದಾತ್ತವಾಗಿ ಪರಿಗಣಿಸಲು ಅವಕಾಶ ನೀಡುವುದಿಲ್ಲ. ಅದೇ ರೀತಿ ಮೋಹನ್ ದಾಸ್ ಕರಮ್ ಚಂದ್ ಗಾಂಧಿಯ ಬ್ರಹ್ಮ ಚರ್ಯದ ಪ್ರಯೋಗಗಳಲ್ಲಿ ಅವರು ಸಾಫಲ್ಯವನ್ನೇ ಕಂಡು ಕೊಂಡಿದ್ದರೂ ಆ ಪ್ರಯೋಗಗಳ ಸಮಂಜಸತೆಯ ಬಗ್ಗೆಯೇ ಅನುಮಾನಗಳು ಮೂಡುತ್ತವೆ. ಅದನ್ನೂ ಈ ಮುಂಚೆ ಬರೆದಿದ್ದೇನೆ.

ಇದು ನೆಹರೂ, ಗಾಂಧಿಗಳ ಬಗ್ಗೆ ಇರುವ ಪೂರ್ವಗ್ರಹವಲ್ಲ. ಅಂದು ಅವರಿದ್ದ ಸಂದರ್ಭಗಳೇ ಅಂತಹ ಔದಾರ್ಯದ ಅಳತೆಗೋಲನ್ನು ಅವರ ವ್ಯಕ್ತಿತ್ವ ವನ್ನಳೆ ಯಲು ಬಳಸುವುದಕ್ಕೆ ಅನುವುಮಾಡಿ ಕೊಡುವುದಿಲ್ಲ. ಒಂದು ವೇಳೆ, ಅದೇ ಅಳತೆಗೋಲನ್ನು ಬಳಸಬೇಕಾದಲ್ಲಿ ನನ್ನ ತೀರ್ಮಾನವನ್ನು ಅಮಾನತು ಗೊಳಿಸುತ್ತೇನೆ.