Friday, 27th May 2022

ಬೊಮ್ಮಾಯಿ ಶುದ್ದ ನಡೆ ನುಡಿಯ ವ್ಯಕ್ತಿ: ತರಳಬಾಳು ಶ್ರೀ

ಚಿತ್ರದುರ್ಗ: ಪ್ರಾಮಾಣಿಕತೆ, ತಾಳ್ಮೆ, ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡರೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ನೂತನ ಮುಖ್ಯಮಂತ್ರಿ ಗಳಾಗಿ ನೇಮಕಗೊಂಡಿರುವ ಬಸವರಾಜ ಬೊಮ್ಮಾಯಿಯವರು ನಮ್ಮ ಕಣ್ಣ ಮುಂದಿದ್ದಾರೆಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರ ಗ್ರಾಮದಲ್ಲಿ ಸರ್ವಶರಣರ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವರಾಜ ಬೊಮ್ಮಾಯಿ ಶುದ್ದ ನಡೆ ನುಡಿಯ ವ್ಯಕ್ತಿ, ನೀರಾವರಿ ಸಚಿವರಾಗಿ, ಗೃಹ ಸಚಿವರಾಗಿ, ಕಾರ್ಯ ನಿರ್ವಹಿಸಿರುವ ಅವರದ್ದು, ನಿಷ್ಕಳಂಕ ವ್ಯಕ್ತಿತ್ವ ಅವರ ಅಧಿಕಾರ ಅವಧಿಯಲ್ಲಿ ನಾಡು ಉನ್ನತಿಯತ್ತ ಸಾಗಲಿ ಅವರು ಉತ್ತಮವಾಗಿ ಕಾರ್ಯವಹಿಸಿದರೆ ಅವರಿಗೆ ಶ್ರೀಮಠದ ಬೆಂಬಲವಿರುತ್ತದೆ ಎಂದು ನುಡಿದರು.

ಬಿಜೆಪಿ ಪಕ್ಷದ ಕೆಲವು ಸಿದ್ದಾಂತಗಳು ನಮಗೆ ಒಪ್ಪಿಗೆ ಆಗುವುದಿಲ್ಲ. ಆದರೆ ಬಿ.ಎಸ್.ಯಡಿಯೂರಪ್ಪನವರ ವ್ಯಕ್ತಿತ್ವದ ಕೆಲವು ಅಂಶಗಳು ನಮಗೆ ಇಷ್ಟವಾಗುತ್ತವೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸ ದಂತೆ ನಾವು ಬಿಜೆಪಿ ಪಕ್ಷದ ನಾಯಕರಿಗೆ ಸೂಚಿಸಿದ್ದೇವು. ಆದರೆ ಅವರವರ ಆಲೋಚನೆ, ಲೆಕ್ಕಾಚಾರ ಗಳು ಏನೇನಾಗಿರುತ್ತದೆಯೋ ನಮಗೆ ಗೊತ್ತಿಲ್ಲ. ಯಾರೇ ಮುಖ್ಯಮಂತ್ರಿಗಳಾಗಲಿ ನಾಡು, ನುಡಿ, ನೆಲ-ಜಲ ಹಾಗು ಸರ್ವರ ಅಭ್ಯದಯವಾಗಲಿ ಎಂದು ನಾವು ಬಯಸುತ್ತೇವೆಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮನುಷ್ಯನಿಗೆ ಸಂಸ್ಕಾರಯುತ ಜೀವನ ಅತ್ಯಂತ ಮುಖ್ಯವಾಗುತ್ತದೆ. ಮೂಡನಂಬಿಕೆ ಕಂದಾಚಾರಗಳನ್ನು ಬದಿಗೊತ್ತಿ ಉತ್ತಮ ಜೀವನವನ್ನು ಹೊಂದಬೇಕು. ಹುಟ್ಟು, ಸಾವು ಪ್ರತಿಯೊಂದು ಜೀವರಾಶಿಯೂ ಅನಿವಾರ್ಯ. ಈ ನಡುವೆ ಸಮಾಜಕ್ಕೆ ನಾವೆಷ್ಟು ಉಪಕಾರಿಗಳಾಗಿ ಬದುಕಿದ್ದೇವೆ ಎನ್ನುವುದು ಪರಿಗಣಿಸಲ್ಪಡಿಸು ತ್ತದೆ. ಅದೇ ರೀತಿ ಗೋಣಿ ಬಸಪ್ಪನವರು ವೃತ್ತಿಯಿಂದ ಕೃಷಿಕರಾಗಿದ್ದರು. ಸಮಾಜಸೇವೆ, ಮಠ ಪೀಠಗಳ ಅಭ್ಯದಯಕ್ಕಾಗಿ ಶ್ರಮಿಸಿದರು. ಅದೇ ರೀತಿ ಪ್ರತಿ ಯೊಬ್ಬರೂ ಮಠದೊಂದಿಗೆ ಸಂಪರ್ಕದಿಂದಿರಿ. ತಮ್ಮ ತಮ್ಮ ಮಕ್ಖಳನ್ನು ಮಠಕ್ಕೆ ಕರೆ ತಂದು ಅವರಲ್ಲಿ ಸಂಸ್ಕಾರದ ಅರಿವು ಬಿತ್ತಿ. ಬಸವಾದಿ ಶರಣರ ಚಿಂತನೆ ಗಳಲ್ಲಿ ಮಕ್ಕಳ ಭಾವದಲ್ಲಿ ಮೂಡಿಸುವ ಕಾರ್ಯ ನಡೆಯಲಿ ಎಂದು ಆಶಿಸಿದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಕಾಯಕ ದಾಸೋಹ ಪ್ರಜ್ಞೆಯನ್ನು ಹಾಗೂ ಸಮಾನತೆ ಪ್ರತಿಪಾದಿಸಿದವರು ಬಸವಾದಿ ಪ್ರಮಥರು. ಅಂತಹ ಮಹನೀಯರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತಿದವರು ಸಿರಿಗೆರೆ ತರಳಬಾಳು ಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಅಂತಹ ಮಹನೀಯರು ಮುತ್ತುಗದ ಗ್ರಾಮದವರು ಎನ್ನುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಶರಣರ ಮಾರ್ಗದರ್ಶನದಲ್ಲಿ ನೆಡೆದು ಬಂದ ಸಾಧು ವೀರಶೈವ ಸಮಾಜ ಪರಿಶ್ರಮಕ್ಕೆ ಕಾರ್ಯದ ಮೂಲಕ ಬದುಕು ಕಟ್ಟಿಕೊಳ್ಳುವುದಕ್ಕೆ ಹೆಸರಾದ ಸಮಾಜ ಇಂತಹ ಸಮಾಜದಿಂದ ಬಂದ ವ್ಯಕ್ತಿಯೊಬ್ಬರು ನಾಡಿನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದು ಎಲ್ಲರೂ ಸಂತಸಪಡಬೇಕಾದ ವಿಷಯವಾಗಿದೆ ಎಂದು ಶ್ರೀಗಳು ನುಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಮುಖಂಡರಾದ ಮಾಧುರಿ ಗಿರೀಶ್, ಕಾಟೀಹಳ್ಳಿ ಶಿವಣ್ಣ, ನರೇಂದ್ರನಾಥ್, ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷ, ಕೆ.ಸಿ.ರಮೇಶ್, ಯುಗದರ್ಮ ರಾಮಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.