Tuesday, 7th July 2020

ಕಾಶ್ಮೀರದ ಪುರಾತನ ದೇಗುಲಗಳು…

ಅನಾದಿ ಕಾಲದಿಂದಲೂ ಕಾಶ್ಮೀರವು ಅಧ್ಯಾತ್ಮದ ನೆಲೆವೀಡಾಗಿತ್ತು. ಭರತ ಖಂಡದ ಜಿಜ್ಞಾಸುಗಳು ಅಧ್ಯಯನಕ್ಕಾಗಿ, ಜ್ಞಾನಾರ್ಜನೆಗಾಗಿ ಮತ್ತು ತಮ್ಮ ಆಸ್ತಿಕ ಅಗತ್ಯಗಳ ಪೂರೈಕೆಗಾಗಿ ಕಾಶ್ಮೀರಕ್ಕೆ ಯಾತ್ರೆ ಕೈಗೊಳ್ಳುತ್ತಿದ್ದರು. ಇದಕ್ಕೆ ಅತ್ಯುತ್ತಮ ನಿದರ್ಶನ ಎಂದರೆ ಆದಿ ಶಂಕರರ ಕಾಶ್ಮೀರ ದಿಗ್ವಿಜಯ. ಸುಮಾರು ಆರನೆಯ ಶತಮಾನದಲ್ಲಿ ಭಾರತದಾದ್ಯಂತ ಸಂಚರಿಸಿದ ಶಂಕರಾಚಾರ್ಯರು ಭರತಖಂಡದಲ್ಲಿ ನಾಲ್ಕು ಜ್ಯೋತಿರ್ಮಠಗಳನ್ನು ಸ್ಥಾಪಿಸಿದ್ದರ ಜತೆಯಲ್ಲೇ, ಕಾಶ್ಮೀರದಲ್ಲಿ ಅಕ್ಷರಶಃ ಅಧ್ಯಾತ್ಮಿಕ ದಿಗ್ವಿಜಯವನ್ನೇ ಸಾಧಿಸಿದರು. ಅಲ್ಲಿನ ಶಾರದಾ ದೇಗುಲದ ದಕ್ಷಿಣ ದ್ವಾರವನ್ನು ಮೊದಲ ಬಾರಿ ತೆರೆದವರೇ ಆದಿ ಶಂಕರರು. ಸರ್ವಜ್ಞ ಪೀಠ ಎಂದು ಇಂದಿಗೂ ಕರೆಯಲಾಗುವ ಆ ಸ್ಥಳದ ನೆನಪಿನಲ್ಲಿ, ಕರ್ನಾಟಕದ ಕೊಲ್ಲೂರಿನ ಕೊಡಚಾದ್ರಿ ಶಿಖರದಲ್ಲೂ ಸರ್ವಜ್ಞ ಪೀಠವನ್ನು ಸ್ಥಾಪಿಸಲಾಗಿದೆ.

ಕಾಶ್ಮೀರವು ದೇಗುಲ ನೆಲೆವೀಡಾಗಲು ಅಲ್ಲಿದ್ದ ಪುರಾತನ ಪರಂಪರೆ, ರಾಜಮನೆತನಗಳು, ಚಿಂತಕರು, ಕವಿಗಳು ಮುಖ್ಯ ಕಾರಣ. ಸಿಂಧು ಸಂಸ್ಕøತಿಯ ಕಾಲದಿಂದಲೇ ಕಾಶ್ಮೀರದ ತಪ್ಪಲುಗಳಲ್ಲಿ ನಾಗರಿಕತೆ ನೆಲೆಮಾಡಿತ್ತು. ಬಿಲ್ಹಣ, ಕಲ್ಹಣ ಮೊದಲಾದ ಕವಿಗಳು ತಮ್ಮ ಗ್ರಂಥಗಳಲ್ಲಿ ಕಾವ್ಯ ರಚನೆಯ ಜತೆ, ಈ ದೇಗುಲಗಳ ವಿವರಗಳನ್ನೂ ಬರೆದಿಟ್ಟಿದ್ದಾರೆ. ಗುಪ್ತರ ಕಾಲದಿಂದಲೇ ಅಲ್ಲಿ ದೇಗುಲಗಳ ನಿರ್ಮಾಣ ಆರಂಭವಾಗಿತ್ತು ಎನ್ನುತ್ತಾರೆ ಪುರಾತತ್ವ ತಜ್ಞರು. ಕೆಲವು ದೇಗುಲಗಳು ಅದಕ್ಕೂ ಹಿಂದೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದವು. ಕಾಶ್ಮೀರದ ಪುರಾತನ ದೇಗುಲಗಳು ಎಲ್ಲಿವೆ? ಇಂದು ಅವುಗಳ ಸ್ಥಿತಿ ಏನು? ಒಂದು ಕಿರುನೋಟ.


1 .`ನಮಸ್ತೇ ಶಾರದಾ ದೇವಿ, ಕಾಶ್ಮೀರ ಪುರ ವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ’ ಎಂದು ವಿದ್ಯೆಯ ದೇವತೆಯಾಗಿ ಶಾರದಾ ದೇವಿಯನ್ನು ಸ್ತುತಿಸುವ ಪದ್ಧತಿ ನಮ್ಮ ನಾಡಿನಲ್ಲಿದೆ. ಈ ದೇವತೆಯ ಮೂಲ ದೇಗುಲ ಕಾಶ್ಮೀರದ ಕಿಶನ್‍ಗಂಗಾ ನದಿ ದಂಡೆಯ ಮೇಲೆ, ಹಿಮಾಲಯದ ತಪ್ಪಲಲ್ಲಿದೆ. ಕ್ರಿ.ಶ. ಒಂದನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿದ್ದ ಈ ದೇಗುಲವನ್ನು ನಂತರ ಲಲಿತಾದಿತ್ಯ ಎಂಬ ರಾಜನು ಬೃಹತ್ ಪ್ರಮಾಣದಲ್ಲಿ ಜೀರ್ಣೋದ್ಧಾರ ಮಾಡಿಸಿದ. ನಂತರದ ಶತಮಾನಗಳಲ್ಲಿ, ಈ ದೇಗುಲವು ವೈರಿ ಸೈನಿಕರ ದಾಳಿಗೊಳಗಾಗಿ, ಇಂದು ಭಗ್ನ ಸ್ಥಿತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ.

2. ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಮಾರ್ತಾಂಡ ಸೂರ್ಯ ದೇಗುಲವಿದೆ. ಎಂಟನೆಯ ಶತಮಾನದಲ್ಲಿ ಲಲಿತಾದಿತ್ಯ ನಿರ್ಮಿಸಿದ ಈ ದೇಗುಲವು ಬೃಹತ್ ಮತ್ತು ಮಹತ್ ವಾಸ್ತು ವಿನ್ಯಾಸಕ್ಕೆ ಹೆಸರುವಾಸಿಯಾಗಿತ್ತು. 220 ಅಡಿ ಉದ್ದ, 142 ಅಡಿ ಅಗಲವಿದ್ದು, ಈ ದೇಗುಲದ ಸುತ್ತಲೂ 84 ಪುಟ್ಟ ದೇಗುಲಗಳಿದ್ದವು. 15ನೆಯ ಶತಮಾನದಲ್ಲಿ ಒಂದು ವರ್ಷದ ಕಾಲ ಈ ದೇಗುಲವನ್ನು ಲೂಟಿ ಮಾಡಿದ್ದರಿಂದಾಗಿ, ಇಂದು ಅವಶೇಷಗಳು ಮಾತ್ರ ಕಂಡು ಬರುತ್ತವೆ.
3. ಕ್ರಿಸ್ತ ಶಕಾರಂಭದಲ್ಲೇ ನಿರ್ಮಾಣಗೊಂಡದ್ದು ಎನ್ನಲಾಗಿರುವ ಶಂಕರಾಚಾರ್ಯ ದೇಗುಲವು ಶ್ರೀನಗರ ಪಟ್ಟಣದಲ್ಲಿದೆ. ಮೊದಲು ಇದನ್ನು ಜೋತೇಶ್ವರ ದೇಗುಲ ಎಂದು ಕರೆಯಲಾಗುತ್ತಿದ್ದು, ಶಂಕರರ ಭೇಟಿಯ ನಂತರ ಅವರ ಹೆಸರು ಈ ದೇಗುಲಕ್ಕೆ ಅಂಟಿಕೊಮಡಿತು. ಆದಿ ಶಂಕರರು ಸೌಂದರ್ಯ ಲಹರಿಯನ್ನು ಇಲ್ಲೇ ರಚಿಸಿದ್ದೆಂದು ಹೇಳಲಾಗಿದ್ದು, ಈ ದೇಗುಲವನ್ನು ಕಾಲದಿಂದ ಕಾಲಕ್ಕೆ ಇತರರು ಜೀರ್ಣೋದ್ಧಾರಗೊಳಿಸಿದ್ದಾರೆ.

 

4.ಕಾಶ್ಮೀರದ ಅವಂತಿಪುರದಲ್ಲಿ ಲಲಿತಾದಿತ್ಯನ ಕಾಲದಲ್ಲಿ, ಇಂದಿಗೆ ಸುಮಾರು 1100 ವರ್ಷಗಳ ಹಿಂದೆ ಹಲವು ದೇಗುಲಗಳ ನಿರ್ಮಾಣವಾಗಿದ್ದು, ಅವುಗಳಲ್ಲಿ ಅವಂತೀಶ್ವರ ದೇಗುಲ ಮತ್ತು ವಿಷ್ಣು ದೇಗುಲ ಪ್ರಮುಖ ಎನಿಸಿವೆ. ಈ ದೇಗುಲದ ಅಳಿದುಳಿದ ಬೃಹತ್ ಪ್ರಾಕಾರ, ಶಿಲಾ ವಿನ್ಯಾಸ, ಕಂಬಗಳು ಇಂದು ಪ್ರವಾಸಿ ಆಕರ್ಷಣೆ ಎನಿಸಿದ್ದು, ಪುರಾತತ್ವ ಇಲಾಖೆಯ ವಶದಲ್ಲಿದೆ. ಅವಂತಿಪುರದ ಹಲವು ದೇಗುಲಗಳು ವೈರಿ ದಾಳಿಯಲ್ಲಿ ನಾಶಗೊಂಡಿದ್ದು, ಎಲ್ಲವೂ ಅವಶೇಷಗಳ ರೂಪದಲ್ಲಿವೆ.

5. ಹತ್ತನೆಯ ಶತಮಾನದಲ್ಲಿ ನಿರ್ಮಾಣಗೊಂಡ ಬಾಬೋರ್ ದೇಗುಲಗಳ ಸಂಕೀರ್ಣ ಕುತೂಹಲಕಾರಿ. ಇಲ್ಲಿ ಐದು ದೇಗುಲಗಳ ಸಂಕೀರ್ಣವಿದ್ದು, ಇವೆಲ್ಲವೂ ಅರ್ಧನಾಶಗೊಂಡ ಸ್ಥಿತಿಯಲ್ಲಿವೆ. ಗಂಗಾ ಮಾತೆ, ಶಿವ, ಪಾರ್ವತಿ ಮೊದಲಾದ ದೇಗುಲಗಳು ಇಲ್ಲಿನ ವಿಶೇಷ. ದೇಗುಲಗಳ ನಿರ್ಮಾಣಕ್ಕೆ ಬಳಸಿದ ಕಲ್ಲುಗಳ ಮೇಲಿರುವ ಕೆತ್ತನೆಗಳು ಇಂದಿಗೂ ಗಮನ ಸೆಳೆಯುತ್ತವೆ.
ಇವಲ್ಲದೇ, ಕಾಶ್ಮೀರದ ಹಲವು ಸ್ಥಳಗಳಲ್ಲಿರುವ ಪುರಾತನ ದೇಗುಲಗಳ ಅವಶೇಷಗಳು, ಅಲ್ಲಿನ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮತ್ತು ವಾಸ್ತುಶೈಲಿಯ ಪ್ರತೀಕವಾಗಿ ಹರಡಿಕೊಂಡಿವೆ, ಕಾಲನ ಹೊಡೆತದ ತೀವ್ರತೆಗೆ ಸಾಕ್ಷಿಯಾಗಿವೆ.

Leave a Reply

Your email address will not be published. Required fields are marked *