Friday, 7th August 2020

ಜನತೆಯೊಂದಿಗೆ ಮತ್ತಷ್ಟು ನಿಕಟವಾಗುವುದೇ ಗ್ರಾಮವಾಸ್ತವ್ಯದ ಉದ್ದೇಶ: ಮುಖ್ಯಮಂತ್ರಿ

ರಾಜ್ಯದ ಜನತೆಯ ವಾಸ್ತವಿಕ ಸಮಸ್ಯೆಗಳನ್ನು ತಳಮಟ್ಟದಿಂದಲೇ ಅರಿಯಲು ಗ್ರಾಮ ವಾಸ್ತವ್ಯ ನೆರವಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

“ಗ್ರಾಮವಾಸ್ತವ್ಯ ಎಂಬುದು ಕೇವಲ ಸಾಂಕೇತಿಕ ಅಷ್ಟೇ. ಅದು ಜನಪ್ರಿಯತೆಗಾಗಿ ಮಾಡಿದ ಕಾರ್ಯಕ್ರಮವಲ್ಲ. ಸರಕಾರ ಮತ್ತು ಜನತೆ ನಡುವೆ ನಿಕಟ ಸಂಪರ್ಕ ಸಾಧಿಸುವುದೇ ಕಾರ್ಯಕ್ರಮದ ನೈಜ ಉದ್ದೇಶ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವುದು ಈ ನಡೆಯ ಧ್ಯೇಯವಾಗಿದೆ,” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ತಿಂಗಳಾಂತ್ಯಕ್ಕೆ ಆಯೋಜಿಸಲಾಗಿರುವ ಸರಣಿ ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಪೂರ್ವಭಾವಿ ತಯಾರಿಯ ಭಾಗವಾಗಿ ಕುಮಾರಸ್ವಾಮಿ ಸಭೆಯೊಂದರಲ್ಲಿ ಮಾತನಾಡಿದ್ದು, “ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ನನ್ನ ವಾಸ್ತವ್ಯಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಸರಳ ಸಿದ್ಧತೆಗಳಾದರೆ ಸಾಕು. ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನ ಗುರಿಯಾಗಿದೆ. ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳಂಥ ಮೂಲ ಸೌಕರ್ಯಗಳ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ನನ್ನ ಧ್ಯೇಯ,” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಸಂದರ್ಭ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ ಖರ್ಗೆ, ಬಂಡೆಪ್ಪ ಕಾಶೆಂಪೂರ, ರಾಜಶೇಖರ್ ಪಾಟೀಲ್ ಅವರುಗಳು ಭಾಗವಹಿಸಿದ್ದ ಸಭೆಯಲ್ಲಿ ಸಚಿವರುಗಳಾದ ಹೆಚ್.ಡಿ. ರೇವಣ್ಣ, ಸಾ.ರಾ ಮಹೇಶ್ ಅಲ್ಲದೇ ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.

21.06.2019 ರಂದು ಯಾದಗಿರಿ ಜಿಲ್ಲೆಯ ಗುರುಮಿಟ್‍ಕಲ್ ತಾಲೂಕಿನ ಚಂದರಕಿ, 22.06.2019ರಂದು ಅಫ್ಜಲ್‍ಪುರ ತಾಲ್ಲೂಕಿನ ಹೆರೂರು-ಬಿ ಗ್ರಾಮಗಳಲ್ಲಿ ಮತ್ತು 26.06.2019ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರಿಗುಡ್ಡ ಗ್ರಾಮ, 27.06.2019ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *