Wednesday, 1st February 2023

ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿ ಆತ್ಮವಿಶ್ವಾಸದ ಗುಟ್ಟೇನು ?

ವರ್ತಮಾನ

maapala@gmail.com

40 ಪರ್ಸೆಂಟ್ ಕಮಿಷನ್ ಆರೋಪ, ಕಾಂಗ್ರೆಸ್‌ನ ಪೇ ಸಿಎಂ, ಸೇ ಸಿಎಂ ಅಭಿಯಾನಗಳಿಂದ ಆತಂಕಕ್ಕೆ ಒಳಗಾಗಿದ್ದ ಬಿಜೆಪಿ ಕಳೆದ ಕೆಲ ದಿನಗಳಿಂದ ಚೇತರಿಸಿಕೊಂಡಿದೆ. ಮತ್ತೆ ಅಧಿಕಾರಕ್ಕೆ ಬರುವ ಅತಿಯಾದ ಆತ್ಮವಿಶ್ವಾಸ ತೋರಿಸುತ್ತಾ, ಪ್ರತಿಪಕ್ಷ ದವರ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡುವ ಪ್ರಯತ್ನ ಮಾಡುತ್ತಿದೆ. ಅದರ ಜತೆಗೆ ಹಳೇ ಮೈಸೂರು ಭಾಗದಲ್ಲಿ ತಾನು ಗೆಲ್ಲುವುದಕ್ಕಿಂತ ಕಾಂಗ್ರೆಸ್ಸನ್ನು ಸೋಲಿಸಲು ಪ್ರಯತ್ನಿಸುತ್ತಿದೆ.

2025 ರ ಜನವರಿಯಲ್ಲಿ ಮುಂದಿನ ಜಾಗತಿಕ ಹೂಡಿಕೆದಾರರ ಸಮಾ ವೇಶ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅದರಲ್ಲೇನೂ ಮಹತ್ವವಿಲ್ಲ. ಆದರೆ, ಈ ಘೋಷಣೆ ವೇಳೆ ನಮ್ಮದೇ ಸರಕಾರ ಅಂದರೆ ಬಿಜೆಪಿ ಸರಕಾರವೇ ಈ ಸಮಾವೇಶ ಹಮ್ಮಿಕೊಳ್ಳಲಿದೆ ಎಂಬ ಆತ್ಮವಿಶ್ವಾಸ ಅವರ ಮಾತಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಮೂಲಕ 2023ರ ವಿಧಾನಸಭೆ ಚುನಾವಣೆ ಯಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂಬ ಪರೋಕ್ಷ
ಸಂದೇಶ ವನ್ನು ಇನ್ವೆಸ್ಟ್ ಕರ್ನಾಟಕದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರವಾನಿಸಿದ್ದಾರೆ.

ಬೊಮ್ಮಾಯಿ ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇದೆ, ಇದು ಆಗುವ ಮಾತಲ್ಲ ಎಂದು ಹೇಳಬಹುದಾದರೂ ಎಲ್ಲೋ ಒಂದು ಕಡೆ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ ಹೂಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ಸು ಸಾಧಿಸಿದರೂ ಬಿಜೆಪಿ ವರಿಷ್ಠರು ಈ ಬಗ್ಗೆ ವಹಿಸಿರುವ ಜಾಣ ಮೌನ. ಅದರ ಜತೆಗೆ ಅಧಿಕಾರ ಹಿಡಿಯಲು ಪ್ರತಿಪಕ್ಷಗಳು ಏನೇ ಕಸರತ್ತು ಮಾಡಿದರೂ ಕೊನೇ ಕ್ಷಣದಲ್ಲಿ ಅದಕ್ಕೆ ಪ್ರತಿತಂತ್ರ ಹೂಡಿ ಅದನ್ನು ವಿಫಲಗೊಳಿಸುತ್ತಿರುವ ಬಿಜೆಪಿಯ ನಿಗೂಢ ನಡೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಜಕೀಯ ದ್ರುವೀಕರಣದ ನೆಪದಲ್ಲಿ ಮಾಜಿ ಸಂಸದರಾದ ಮುದ್ದಹನುಮೇ ಗೌಡ ಸೇರಿದಂತೆ ಕಾಂಗ್ರೆಸ್ ನ ಕೆಲವು ಮುಖಂಡರು ಹಾಗೂ ನಟ, ಜೆಡಿಎಸ್‌ನ ಶಶಿಕುಮಾರ್ ಮತ್ತಿತರರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಇವರ ಜತೆಗೆ ಕಾಂಗ್ರೆಸ್‌ನ ಇನ್ನೂ ಕೆಲವು ಮುಖಂಡರು ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳನ್ನು ಬಿಜೆಪಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

ರಾಜ್ಯ ರಾಜಕೀಯದಲ್ಲಿ ಒಂದು ಮಾತಿದೆ. ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟವೇನೂ ಅಲ್ಲ ಎಂಬುದು. 2013 ಮತ್ತು 2018ರ ವಿಧಾನಸಭೆ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. 2023ರಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

ಆದರೆ, ಅದೇ ಭಾಗದಲ್ಲಿ 2018ರಲ್ಲಿ ಕಡಿಮೆ ಸ್ಥಾನಗಳನ್ನು ಗಳಿಸಿದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ
ಬೇಕಾಯಿತು. ರಾಜ್ಯದ ಇತರೆಡೆ ಕಾಂಗ್ರೆಸ್ ಮತ್ತು ಬಿಜೆಪಿ ತನ್ನದೇ ವೋಟ್ ಬ್ಯಾಂಕ್ ಹೊಂದಿದ್ದರೂ ಹಳೇ ಮೈಸೂರು
ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆಯೇ ನೇರ ಪೈಪೋಟಿ ಇರುವುದು. ಇಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದರೆ
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ.

ಈ ಕಾರಣಕ್ಕಾಗಿಯೇ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ಮುಖಂಡ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಸಾಕಷ್ಟು ಪ್ರಯತ್ನಿಸಿತ್ತು. ಒಂದು ಹಂತದಲ್ಲಿ ಜಿ.ಟಿ.ದೇವೇಗೌಡ ಪಕ್ಷ ತೊರೆಯುವುದು ಖಚಿತವಾಗಿತ್ತು. ಜಿ.ಟಿ.ದೇವೇಗೌಡ ಕಾಂಗ್ರೆಸ್ ಗೆ ಬಂದರೆ ಆ ಭಾಗದಲ್ಲಿ ಪಕ್ಷ ಬಲಗೊಳ್ಳಬಹುದು, ಒಕ್ಕಲಿಗರ ಮತಗಳು ಕ್ರೋಢೀಕೃತಗೊಳ್ಳಬಹುದು. ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಕಾಂಗ್ರೆಸ್ ಯೋಚನೆಯಾಗಿದ್ದರೆ, ಕಾಂಗ್ರೆಸ್ ನತ್ತ ಮುಖ ಮಾಡುತ್ತಿರುವ ಒಕ್ಕಲಿಗರ ಮತಗಳನ್ನು ಸೆಳೆದುಕೊಂಡರೆ ಆಗ ಮತ ವಿಭಜನೆಯಾಗಿ ಕಾಂಗ್ರೆಸ್ ಸೋಲಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು.

ಆದರೆ, ತಂದೆ-ಮಗನಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರು ಜೆಡಿಎಸ್ ನ ಉಳಿದುಕೊಂಡರು. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದ ಬಿಜೆಪಿಗೆ ಸಿಕ್ಕಿದ್ದು ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ. ಮುದ್ದಹನುಮೇಗೌಡ ತುಮಕೂರು ಜಿಲ್ಲೆ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದರು. ಜನಪರ ಧ್ವನಿ ಎತ್ತುವ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿದ್ದಾರೆ.

ಮೇಲ್ನೋಟಕ್ಕೆ ಅವರು ತುಮಕೂರು ಜಿಗೆ ಮಾತ್ರ ಸೀಮಿತ ಎಂಬಂತೆ ಕಂಡುಬರುತ್ತಿದ್ದರೂ ಒಕ್ಕಲಿಗರು ಎಂಬ ಟ್ರಂಪ್
ಕಾರ್ಡ್ ಬಿಜೆಪಿಗೆ ಸಹಾಯ ಮಾಡಬಹುದು. ಏಕೆಂದರೆ, ಈಗಾಗಲೇ ಮಂಡ್ಯ ಭಾಗದ ಕೆಲವು ಒಕ್ಕಲಿಗ ಮುಖಂಡರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ. ಹೀಗಾಗಿ ಮುದ್ದಹನುಮೇಗೌಡರಂಥವರು ಪಕ್ಷಕ್ಕೆ ಬಂದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಬಹುದು ಎಂಬುದು ಬಿಜೆಪಿಯ ಯೋಚನೆ.

ಇನ್ನೊಂದೆಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲೂ ಬಿಜೆಪಿ ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಈ ಪ್ರಯತ್ನಗಳಿಂದಾಗಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ನಿರೀಕ್ಷೆಯೇನೂ ಆ ಪಕ್ಷಕ್ಕೆ ಇಲ್ಲ. ಅದು ಸಾಧ್ಯವೂ ಇಲ್ಲ.
ಏಕೆಂದರೆ, ಈ ಭಾಗದಲ್ಲಿ ಕಾಂಗ್ರೆಸ್ ಬಲಿಹೀನವಾದಷ್ಟು ಲಾಭ ಗಳಿಸುವುದು ಜೆಡಿಎಸ್. ಮಾಜಿ ಪ್ರಧಾನಿ ಎಚ್ .ಡಿ.ದೇವೇ ಗೌಡರ ನೇತೃತ್ವದಲ್ಲಿ ಜೆಡಿಎಸ್ ಇಲ್ಲಿ ಗಟ್ಟಿಮುಟ್ಟಾಗಿದೆ.

ಮುಖಂಡರ ಕಾರಣಕ್ಕಾಗಿ ಇಲ್ಲಿ ಪಕ್ಷ ಸೋಲುತ್ತದೆಯೇ ಹೊರತು ಜಾತಿ ರಾಜಕಾರಣದ ವಿಚಾರ ಬಂದಾಗ ಬಹುತೇಕ ಒಕ್ಕಲಿಗರು ದೇವೇಗೌಡರ ಪರ ನಿಲ್ಲುತ್ತಾರೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆದ್ದಷ್ಟು ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತದೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ ಅದು ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯ ಎಂಬುದು ಬಿಜೆಪಿಗೆ ಸ್ಪಷ್ಟವಾಗಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್ ಮುಖಂಡರ ಮೇಲೆಯೇ ಅದು ಕಣ್ಣಿಟ್ಟಿದೆ.
ಇನ್ನು ನಟ ಶಶಿಕುಮಾರ್ ವಿಚಾರದಲ್ಲಿ ಬಿಜೆಪಿಯದ್ದು ಇನ್ನೊಂದು ರೀತಿಯ ಲೆಕ್ಕಾಚಾರ.

ಪರಿಶಿಷ್ಟ ಪಂಗಡಕ್ಕೆ ಸೇರಿರುವ ಶಿವಕುಮಾರ್ ಈ ಹಿಂದೆ ಬಿಜೆಪಿಯಲ್ಲಿದ್ದರು. ಕಳೆದ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಸೇರಿದ್ದರು. ಇದೀಗ ಮತ್ತೆ ಬಿಜೆಪಿಗೆ ಬಂದಿzರೆ. ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿರುವ ಪರಿಶಿಷ್ಟ ಪಂಗಡದ ಮತದಾರರು ಮೀಸಲಾತಿ ವಿಚಾರಕ್ಕಾಗಿ ಬಿಜೆಪಿಯಿಂದ ದೂರ ಸರಿದಿದ್ದರು.
ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೂಸಲು ಪ್ರಮಾಣವನ್ನು ಕ್ರಮವಾಗಿ ಶೇ. 15ರಿಂದ 17 ಮತ್ತು ಶೇ.3.5ರಿಂದ 7ಕ್ಕೆ ಹೆಚ್ಚಿಸುವ ಮೂಲಕ ಆ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ, ಈ ಸರಕಾರದಲ್ಲಿ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಎಂಬ ಕೊರಗು ಪರಿಶಿಷ್ಟ ಪಂಗಡ ದಲ್ಲಿ ಇದ್ದೇ ಇದೆ. ಇದು ಚುನಾವಣೆ ವೇಳೆ ಪರಿಣಾಮ ಬೀರದಂತೆ ಅದೇ ಸಮುದಾಯದ ನಟ ಶಶಿಕುಮಾರ್ ಅವರನ್ನು ಬಿಜೆಪಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಇಲ್ಲಿ ಜಾತಿಯ ಜತೆಗೆ ಸಿನಿಮಾ ರಂಗದ ಅವರ ಜನಪ್ರಿಯತೆಯನ್ನು ಪಕ್ಷಕ್ಕೆ ಲಾಭವಾಗಿ ಪರಿವರ್ತಿಸಿಕೊಳ್ಳುವ ಉದ್ದೇಶ ಬಿಜೆಪಿಯದ್ದು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಆತ್ಮವಿಶ್ವಾಸದಿಂದ ಹೇಳಿಕೊಳ್ಳಲು ಮತ್ತೊಂದು ಕಾರಣ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲು ಅನುಭವಿಸುತ್ತದೆ ಎಂಬ ನಂಬಿಕೆಯನ್ನು ಬಿಜೆಪಿ ಇಟ್ಟುಕೊಂಡಿದೆ. 2014ರ ಲೋಕಸಭೆ ಚುನಾವಣೆ ನಂತರದ ಬೆಳವಣಿಗೆಗಳು ಇದಕ್ಕೆ ಕಾರಣ. ಅಷ್ಟೇ ಅಲ್ಲ, ಇತ್ತೀಚೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆನ ಚಾಮರಾಜನಗರ ಜಿಲ್ಲೆ ಮೂಲಕ ರಾಜ್ಯ ಪ್ರವೇಶಿಸಿತ್ತು.

ಬಳಿಕ ಅದೇ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನಗಳನ್ನು ಗೆದ್ದಿತ್ತು. ಇದೀಗ ಈ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸೋಲುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸದ ಹಿಂದಿರುವ ಗುಟ್ಟು.

ಲಾಸ್ಟ್ ಸಿಪ್: ನಂಬಿಕೆ, ಅತಿಯಾದ ಆತ್ಮವಿಶ್ವಾಸಗಳು ಚುನಾವಣೆಯಲ್ಲಿ ಗೆಲುವು ತರುವುದಿಲ್ಲ. ಅದು ತಿರುಗುಬಾಣವಾಗುವ ಸಾಧ್ಯತೆಯೇ ಹೆಚ್ಚು.

error: Content is protected !!