Thursday, 28th January 2021

ಅಭಿವೃದ್ಧಿ ನಿಗಮ ಸ್ಥಾಪಿಸಲು ತಿಗಳರ ಸಂಘ ಆಗ್ರಹ

ತುಮಕೂರು: ಶ್ರಮಿಕ ವರ್ಗವಾಗಿರುವ ತಿಗಳ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕನಿಷ್ಠ 100 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಬೇಕು ಎಂದು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ತಿಗಳ ಜನಾಂಗವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮೇಲೆತ್ತಲು ಹಾಲಿ ಇರುವ ಪ್ರವರ್ಗ-2ಎ ಯಿಂದ ಪ್ರವರ್ಗ-1ಕ್ಕೆ ಬದಲಾಯಿಸಬೇಕು ಎಂದು ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮುದಾಯದ ಪ್ರಗತಿಗಾಗಿ 80 ಕೋಟಿ ರೂ. ಅನುದಾನ ನೀಡಿ ದ್ದರು. ಆದರೆ ನಂತರ ಬಂದ ಸರಕಾರವನ್ನು ಸಮುದಾಯದ ಪ್ರಗತಿಗಾಗಿ ಯಾವುದೇ ಅನುದಾನ ನೀಡಲಿಲ್ಲ ಎಂದು ದೂರಿದರು.

ಮಡಿವಾಳ, ಕುಂಬಾರ, ಸವಿತಾ ಸಮಾಜ, ತಿಗಳ ಸಮುದಾಯದ ಅಭಿವೃದ್ಧಿಗೆ 2018ರಲ್ಲಿ 60 ಕೋಟಿ ಪ್ಯಾಕೇಜ್ ನೀಡಲಾಗಿತ್ತು. ಸಾಮಾಜಿಕ, ಆರ್ಥಿಕ, ಸಾಮಾಜಿಕ ಗಣತಿ ಪ್ರಕಟಿಸಿದರೆ ಯೋಜನಾ ಬದ್ಧವಾಗಿ ಅಭಿವೃದ್ಧಿಗೆ ಶ್ರಮಿಸಬಹುದು. ಆದರೆ ಸರಕಾರ ಅದನ್ನು ಸಹ ಪ್ರಕಟಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸಮುದಾಯಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 152 ಕೋಟಿ ರೂ. ವೆಚ್ಚ ಮಾಡಿದೆ. ತಿಗಳ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಬೇಕು, ನಿಗಮ ಮಂಡಳಿ ಸ್ಥಾಪಿಸಬೇಕು ಹಾಗೂ ಸಮುದಾಯದ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವುದು ಸಂವಿಧಾನ ಬಾಹಿರವಾಗಿದೆ. ಹಿಂದುಳಿದ ವರ್ಗಗಳ ಪಟ್ಟಿ ಯಲ್ಲಿ ಇಲ್ಲದ ಸಮುದಾಯಕ್ಕೆ ನಿಗಮ ರಚಿಸಿರುವುದಕ್ಕೆ ಸಂವಿಧಾನದ ಮಾನ್ಯತೆ ಇಲ್ಲ., ಜನರ ಕಣ್ಣೊರೆಸಲು ಈ ರೀತಿ ಮೋಸ ವನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ತಿಗಳ ಮಹಾಸಭಾ ಅಧ್ಯಕ್ಷ ಹೆಚ್. ಸುಬ್ಬಣ್ಣ ಮಾತನಾಡಿ, ತಿಗಳ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡಲಿ, ಹಿಂದು ಳಿದ ವರ್ಗಗಳ ಪಟ್ಟಿಯಲ್ಲಿ ಇಲ್ಲದ ಜಾತಿಗೆ ಇಲಾಖಾ ವತಿಯಿಂದ ಅನುದಾನ ನೀಡಿರುವುದು ಸಂವಿಧಾನ ಬಾಹಿರ. ಸರ್ಕಾರ ಮೊದಲು ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಿ ಎಂದರು.

ರಾಜ್ಯದಲ್ಲಿ 40 ಲಕ್ಷ ತಿಗಳ ಸಮುದಾಯವಿದ್ದರೂ ಶಾಸಕರು, ಸಂಸದರು ಮಾತ್ರ ಇಲ್ಲ. ನಮ್ಮ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮುದಾಯದಲ್ಲಿ ಶೇ.2 ರಷ್ಟು ಮಾತ್ರ ವಿದ್ಯಾವಂತರಾಗಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ತಿಗಳ ಸಮುದಾಯಕ್ಕೆ ಪ್ರಾಧಿಕಾರ ರಚಿಸುವುದು ಅವಶ್ಯಕವಾಗಿದೆ ಎಂದರು.

ತಿಗಳ ಜನಾಂಗಕ್ಕೆ ಪ್ರಾತಿನಿಧ್ಯಕ್ಕಾಗಿ ಕನಿಷ್ಠ 2 ನಿಗಮ ಮಂಡಳಿಗಳಿಗೆ ಜನಾಂಗದ ಅರ್ಹರನ್ನು ಅಧ್ಯಕ್ಷರನ್ನಾಗಿ ಹಾಗೂ 10 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೂ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಿಗಳ ಸಮುದಾಯದ ಮುಖಂಡರಾದ ಎ.ಹೆಚ್. ಬಸವರಾಜು, ಕೃಷ್ಣಮೂರ್ತಿ, ರೇವಣ್ಣಸಿದ್ದಯ್ಯ, ನಾಗರಾಜಯ್ಯ, ಹನುಮದಾಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *