Sunday, 14th August 2022

ಪ್ರವಾಸಿಗರಿಗೆ ಹೊಸ ಅನುಭವ

ಪ್ರದೀಪ್ ಅವಧಾನಿ

ಪ್ರವಾಸಿ ತಾಣದ ವಿವರಗಳನ್ನು ಎಲ್ಲಾ ಪ್ರವಾಸಿಗರಿಗೆ ಆಕರ್ಷಕವಾಗಿ ನೀಡಿದಾಗ, ಪ್ರವಾಸದ ಅನುಭವವು ಇನ್ನಷ್ಟು ಸ್ಮರಣೀಯ ಎನಿಸುತ್ತದೆ.

ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು ಯಾವುದು ಎಂದರೆ ಎಷ್ಟೊಂದು ಸ್ಥಳಗಳನ್ನು ಹೆಸರಿಸಬಹುದು ಅಲ್ಲವೇ? ಹಂಪೆ, ಬೇಲೂರು, ಹಳೇಬೀಡು, ಜೋಗ ಇತ್ಯಾದಿ. ಎಷ್ಟೊಂದು ಸ್ಥಳಗಳಿವೆ! ಯಾರಾದರೂ ಬೇಲೂರಿಗೆ ಹೋದರೆ, ಅವರ ಪ್ರೇಕ್ಷಣೀಯ ಅನುಭವ ಹೇಗಿರುತ್ತದೆ? ಅದು ಪ್ರವಾಸಿಗರಿಗೆ ಬೇಲೂರಿನ ಬಗ್ಗೆ, ಇತಿಹಾಸದ ಬಗ್ಗೆ, ಶಿಲ್ಪಕಲೆ, ವಾಸ್ತು ಶಿಲ್ಪದ ಬಗ್ಗೆ ಏನು ತಿಳಿದಿದೆ ಅಥವಾ ತಿಳಿಯಲು ಎಷ್ಟು ಕುತೂಹಲವಿದೆ ಎಂಬುದರ ಮೇಲೆ ಆಧರಿಸಿರುತ್ತದೆ. ಅಲ್ಲವೇ?
ಬೇಲೂರಿನ ದೇವಾಲಯದ ಮುಂದೆ ನಿಂತಾಗ ಅದರ ಭವ್ಯತೆ, ಸೌಂದರ್ಯ ಕಣ್ಸೆಳೆಯುವುದು ಖಂಡಿತಾ.

ಆದರೆ, ಆ ಭವ್ಯತೆಯ ಅನುಭವ ಪೂರ್ಣವಾಗುವುದು ಅದರ ಬಗ್ಗೆ ಹೆಚ್ಚಿನ ವಿವರ, ಅದರಲ್ಲೂ ಮನ ಮುಟ್ಟುವ ಕಥಾನಕವನ್ನು ಅಲ್ಲಿನ ಗೈಡ್ ಯಾರಾದರೂ ಸೊಗಸಾಗಿ ಬಣ್ಣಿಸಿದಾಗಲೇ. ಆದರೆ, ಬಹುತೇಕ ಮಂದಿ ಗೈಡ್‌ಗೆ ಏಕೆ ದುಡ್ಡು ತೆರಬೇಕು ಎಂದು ಆ ವಿಶಿಷ್ಟ ಅನುಭವದಿಂದ ವಂಚಿತರಾಗುತ್ತಾರೆ. ಅಷ್ಟೇಕೆ, ಬೆಂಗಳೂರಿನ ವಿಧಾನಸೌಧವನ್ನೇ ತೆಗೆದುಕೊಳ್ಳಿ. ಅದನ್ನು ನೋಡಬಯಸುವ ಪ್ರವಾಸಿಗರಿಗೆ, ನನಗೆ ತಿಳಿದ ಮಟ್ಟಿಗೆ, ಗೈಡ್ ಸೌಲಭ್ಯ ಇಲ್ಲ. ಹಾಗಿರುವಾಗ ಅದರ ಇತಿಹಾಸ, ವೈಶಿಷ್ಟ್ಯ ಇನ್ನಾವುದೇ ವಿವರಗಳನ್ನು ಹೇಗೆ ತಿಳಿಯುವುದು? ಕಲ್ಲು ತಾನೇ ತಾನಾಗಿ ಕತೆ ಹೇಳಲು ಸಾಧ್ಯವೇ? ಪ್ರವಾಸಿಗರ ಅನುಭವ ಅಪೂರ್ಣವಾಗಿ ಉಳಿಯುತ್ತದೆ. ಈಗ ಫ್ಯಾನಿನ ಮೂಲಕ ಆಡಿಯೋ ಗೈಡ್ ವ್ಯವಸ್ಥೆ ಕೆಲವು ಕಡೆ ಇರುವುದು ನಿಜ. ಆದರೆ ನಮ್ಮ ಅಮೋಘ ಸಾಂಸ್ಕೃ ತಿಕ, ಚಾರಿತ್ರಿಕ ಕಥನಗಳಲ್ಲಿ ಮಿಂದೇಳುವ ಅನುಭವವನ್ನು ಈಗಿನ ಪೀಳಿಗೆಗೆ ದೊರಕಿಸಿಕೊಡುವಲ್ಲಿ ನಾವು ಎಡವುತ್ತಿದ್ದೇವೆ.

ಸ್ಮರಣಿಕೆ ವಿಶೇಷ ಮಾಹಿತಿ
ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಪ್ರವಾಸದ ಅನುಭವವನ್ನು ಗಮನಿಸಿ. ಪ್ರವಾಸಿ ತಾಣದಲ್ಲೇ ಒಂದು ಮಾಹಿತಿ ಕೇಂದ್ರ ಇರುತ್ತದೆ. ಈ ಕೇಂದ್ರದಲ್ಲಿ, ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲ ಬಗೆಯ ಪೂರಕ ಮಾಹಿತಿ ದೊರೆಯುತ್ತದೆ. ಕೆಲವು ಕಡೆ ವಿಶೇಷ ಡಾಕ್ಯುಮೆಂಟರಿ ರೂಪದ ಚಲನಚಿತ್ರಗಳನ್ನೂ ಪ್ರದರ್ಶಿಸುತ್ತಾರೆ. ಪ್ರವಾಸಿ ತಾಣ ಹಾಗು ಸುತ್ತ ಮುತ್ತಲಿನ ಪ್ರದೇಶಗಳ ಬಗ್ಗೆ ಹೆಚ್ಚಿನ ವಿವರ ನೀಡಲು ಮಾಹಿತಿ ಸಲಹೆಗಾರರು ಕೂಡ ಇರುತ್ತಾರೆ. ಅಂದು ಗಿಫ್ಟ್ ಶಾಪ್ ಕೂಡ ಇದ್ದೇ ಇರುತ್ತದೆ. ಆ ಸ್ಥಳಕ್ಕೆ ಸಂಬಂಧಿಸಿದ ಚಿತ್ರಗಳು, ಪುಸ್ತಕಗಳು, ಕರಕುಶಲ ವಸ್ತುಗಳು, ಸ್ಮರಣಿಕೆ ವಸ್ತುಗಳು ಅಲ್ಲಿ ದೊರೆಯುತ್ತವೆ. ಈ ಬಗೆಯ ಭೇಟಿ ಅನುಭವವನ್ನು ಅರ್ಥಪೂರ್ಣವಾಗಿಸುತ್ತದೆ, ಪ್ರವಾಸ ತೃಪ್ತಿ ತರುತ್ತದೆ. ಹಲವಾರು ಜನರಿಗೆ ಉದ್ಯೋಗ ಅವಕಾಶ, ಸ್ಥಳೀಯ ಕರಕುಶಲ ಕರ್ಮಿಗಳಿಗೆ ಆರ್ಥಿಕ ನೆರವು, ಅನೇಕ ಬಗೆಯ ಅವಕಾಶಗಳು – ಇವೆಲ್ಲ ಸಾಧ್ಯ.

ಅಷ್ಟೇ ಅಲ್ಲ, ನಿವೃತ್ತಿ ಹೊಂದಿದ ಹಾಗು ಪ್ರವಾಸಿ ತಾಣದ ಅಭಿಮಾನ ಇರುವ ಸ್ಥಳೀಯರು ಸ್ವಯಂಸೇವಕರಾಗಿ ಕೂಡ ಕೆಲಸ ಮಾಡುತ್ತಾರೆ. ಹೆಚ್ಚಿನ ಇತಿಹಾಸ ವಿಲ್ಲದ ಪಾಶ್ಚಾತ್ಯ ದೇಶಗಳು ಪ್ರವಾಸಿಗರ ಅನುಭವವನ್ನು ವಿಶೇಷವಾಗಿಸಬಹುದಾದರೆ, ಪ್ರಾಚೀನ ನಾಗರಿಕತೆಯು ಇಂದಿಗೂ ಜೀವಂತವಾಗಿರುವ ನಮ್ಮ ದೇಶದಲ್ಲಿ ಚರಿತ್ರೆ, ಸಾಮ್ರಾಜ್ಯ, ಸ್ಮಾರಕ, ವಾಸ್ತು ಅದ್ಭುತಗಳು, ಅಚ್ಚಳಿಯದ ವ್ಯಕ್ತಿಗಳು, ಸಾಧನೆಗಳು, ಇವುಗಳೆಲ್ಲದರ ಕಥೆಗಳನ್ನು ಪ್ರವಾಸಿಗರಿಗೆ ವಿವರವಾಗಿ ತಿಳಿಸಿದರೆ ಆ ಅನುಭವ ಇನ್ನೆಷ್ಟು ವಿಶೇಷವಾಗಿಸಬಹುದು! ಊಹಿಸಿ ನೋಡಿ.

ಇದರ ಸಾಧ್ಯತೆಗಳನ್ನು ನಮ್ಮ ಪ್ರವಾಸೋದ್ಯಮ ಇಲಾಖೆಗೆ, ನಿರ್ವಾಹಕರಿಗೆ, ಮಂತ್ರಿಗಳಿಗೆ ಮನದಟ್ಟು ಮಾಡಿಸಬೇಕಷ್ಟೆ. ಇದು ಕೇವಲ ಸರಕಾರದ ಕೆಲಸವೇ
ಆಗಬೇಕಿಲ್ಲ, ಖಾಸಗಿಯಾಗಿ ಸಹ ಜನ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಆರ್ಥಿಕ ಲಾಭದ ಯೋಜನೆಯೊಂದಿಗೆ ಅನುಷ್ಠಾನಗೊಳಿಸಬಹುದು. ಆಗ ನಮ್ಮ
ದೇಶದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರಕುವುದಂತೂ ನಿಜ.